Homeಕರ್ನಾಟಕಬಡವರನ್ನು ಕಾಯುವ ಕಲ್ಯಾಣ ಯೋಜನೆಗಳಿಗೆ ಮುಳುವಾಗುತ್ತಿರುವ ಸರ್ಕಾರ!

ಬಡವರನ್ನು ಕಾಯುವ ಕಲ್ಯಾಣ ಯೋಜನೆಗಳಿಗೆ ಮುಳುವಾಗುತ್ತಿರುವ ಸರ್ಕಾರ!

- Advertisement -
- Advertisement -

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದ 5 ವರ್ಷದ ಅಧಿಕಾರಾವಧಿಯಲ್ಲಿ ಹತ್ತಾರು ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿತ್ತು. ಆದರೆ, ಈ ಪೈಕಿ ಅತಿಹೆಚ್ಚು ಜನಪ್ರಿಯತೆ ತಂದುಕೊಟ್ಟ ಹಾಗೂ ಚರ್ಚೆಗೂ ಗ್ರಾಸವಾದ ಯೋಜನೆಗಳೆಂದರೆ ಅನ್ನಭಾಗ್ಯ ಮತ್ತು ಇಂದಿರಾ ಕ್ಯಾಂಟೀನ್. ಈ ಯೋಜನೆಗಳ ವಿರುದ್ಧ ಹತ್ತಾರು ವಿಮರ್ಶೆಗಳು ಇದ್ದಾಗ್ಯೂ ಅನ್ನಭಾಗ್ಯ ಗ್ರಾಮೀಣ ಕರ್ನಾಟಕದ ಬಡ ಮತ್ತು ಶ್ರಮಿಕ ವರ್ಗದ ಜೀವನಾಧಾರವಾದರೆ, ಇಂದಿರಾ ಕ್ಯಾಂಟೀನ್ ನಗರ ಭಾಗದ ಕಾರ್ಮಿಕ ವರ್ಗದ ಪಾಲಿಗೆ ವರದಾನವಾಗಿತ್ತು ಎಂಬುದರಲ್ಲಿ ಎರಡು ಮಾತಿಲ್ಲ.

ಬೆಂಗಳೂರಿನಂತಹ ಮಹಾನಗರಗಳಲ್ಲಿ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆ ಸರ್ವೇಸಾಮಾನ್ಯ. ಬೇಳೆಕಾಳುಗಳನ್ನು ಕೊಳ್ಳಲಾಗದ ಮತ್ತು ಹೋಟೆಲ್‌ಗಳಲ್ಲಿ ದುಬಾರಿ ಬೆಲೆ ತೆತ್ತು ಹೊಟ್ಟೆ ತುಂಬಿಸಲಾಗದ ಕಾರ್ಮಿಕರು, ದಿನಗೂಲಿಗಳು, ಆಟೋ-ಟ್ಯಾಕ್ಸಿ ಚಾಲಕರು ಮತ್ತು ಚಿಕಿತ್ಸೆಗೆಂದು ರಾಜ್ಯದ ನಾನಾ ಮೂಲೆಯಿಂದ ಬೆಂಗಳೂರಿಗೆ ಆಗಮಿಸುವವರ ತುತ್ತಿನ ಚೀಲ ತುಂಬಿಸಲೆಂದೆ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಒಟ್ಟಾರೆ ಈ ಯೋಜನೆಯ ಮೂಲ ಆಶಯ ದುರ್ಬಲ ವರ್ಗದ ಶ್ರಮ ಜೀವಿಗಳನ್ನು ಹಸಿವಿನಿಂದ ಪಾರು ಮಾಡುವುದೇ ಆಗಿತ್ತು.

2017 ಆಗಸ್ಟ್ 16ರಂದು ಇಂದಿರಾ ಕ್ಯಾಂಟೀನ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅಂದಿನ ಸಿಎಂ ಸಿದ್ದರಾಮಯ್ಯ, “ನಗರದಲ್ಲಿ ಶೇ.28ರಷ್ಟು 5 ವರ್ಷದ ಒಳಗಿನ ಮಕ್ಕಳು, ಶೇ.13 ರಷ್ಟು ಮಹಿಳೆಯರು ಹಾಗೂ ಶೇ.10 ರಷ್ಟು ಪುರುಷರು ಸರಾಸರಿಗಿಂತ ಕಡಿಮೆ ತೂಕ ಹೊಂದಿದ್ದಾರೆ. ದಕ್ಷಿಣ ಭಾರತದ ಅನ್ಯ ರಾಜ್ಯಗಳ ನಗರಗಳಿಗೆ ಹೋಲಿಸಿದರೆ, ಎರಡು ಹೊತ್ತು ಊಟ ಸಿಗದೆ ಇರುವ ಜನರ ಸಂಖ್ಯೆ ಬೆಂಗಳೂರಿನಲ್ಲಿಯೇ ಅಧಿಕ” ಎಂದಿದ್ದರು. ಇದೇ ಕಾರಣಕ್ಕೆ ಬಡಜನರ ಹೊಟ್ಟೆ ತುಂಬಿಸಲಿಕ್ಕಾಗಿಯೇ ಈ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಹೇಳಿದ್ದರು.

ಯೋಜನೆಯ ಆಶಯದಂತೆ ಬೆಂಗಳೂರಿನ ಸ್ಲಂ ಪ್ರದೇಶಗಳು, ಸರ್ಕಾರಿ ಆಸ್ಪತ್ರೆಗಳ ಸಮುಚ್ಚಯಗಳು ಸೇರಿದಂತೆ ಹೆಚ್ಚಾಗಿ ಬಡ ಮತ್ತು ಶ್ರಮಿಕ ವರ್ಗದ ಜನ ಇರುವ ಜಾಗಗಳನ್ನು ಗುರುತಿಸಿ ಇಂದಿರಾ ಕ್ಯಾಂಟೀನ್ ಸ್ಥಾಪಿಸಲಾಗಿತ್ತು. ಬೆಂಗಳೂರಿನ 191 ವಾರ್ಡ್ ಮತ್ತು 173 ತಾಲೂಕುಗಳಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲಾಗಿತ್ತು. 18 ಸಂಚಾರಿ ಇಂದಿರಾ ಕ್ಯಾಂಟೀನ್‌ಗಳು ಸಹ ಕಾರ್ಯ ನಿರ್ವಹಿಸುತ್ತಿದ್ದವು. ಆದರೆ, ಇದೀಗ ನಿರ್ವಹಣೆ ಕೊರತೆಯಿಂದಾಗಿ ಬಡಜನರ ತುತ್ತಿನ ಚೀಲವಾಗಿದ್ದ ಇಂದಿರಾ ಕ್ಯಾಂಟೀನ್ ಯೋಜನೆ ಕೊನೆಯುಸಿರೆಳೆಯುತ್ತಿದೆ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ಪ್ರತಿ ಬಜೆಟ್‌ನಲ್ಲೂ ಸಮಾಜ ಕಲ್ಯಾಣ ಕಾರ್ಯಕ್ರಮದ ಅಡಿಯಲ್ಲಿ ಇಂದಿರಾ ಕ್ಯಾಂಟೀನ್‌ಗೆ ಹಣವನ್ನು ತೆಗೆದಿರಿಸಲಾಗಿತ್ತು. ಆದರೆ, ಪ್ರಸ್ತುತ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಕಳೆದ ಎರಡು ವರ್ಷಗಳಿಂದ ಇಂದಿರ ಕ್ಯಾಂಟೀನ್‌ಗಾಗಿ ಬಿಡಿಗಾಸನ್ನೂ ಬಿಡುಗಡೆ ಮಾಡಿಲ್ಲ. ಪರಿಣಾಮ ಬಹುತೇಕ ಕ್ಯಾಂಟೀನ್‌ಗಳು ಈಗಾಗಲೇ ಬಾಗಿಲು ಎಳೆದುಕೊಂಡಿದ್ದರೆ, ಮತ್ತೆ ಕೆಲವು ಶೀಘ್ರದಲ್ಲೇ ಮುಚ್ಚಲಿವೆ.

ಇದು ಇಂದಿರಾ ಗಾಂಧಿ ಅವರ ಹೆಸರಿನಲ್ಲಿ ಬಡವರಿಗಾಗಿ ತಂದ ಯೋಜನೆ ಎಂಬ ಕಾರಣಕ್ಕೆ ಬಿಜೆಪಿ ಸರ್ಕಾರ ಈ ಯೋಜನೆಗೆ ಹಣ ನೀಡುತ್ತಿಲ್ಲ ಎಂಬುದು ಕಾಂಗ್ರೆಸ್ ಆರೋಪ. ಅಸಲಿಗೆ ಇತಿಹಾಸದ ಒಳಹೊಕ್ಕು ನೋಡಿದರೆ ಬಲಪಂಥೀಯ ಬಂಡವಾಳಶಾಹಿ ಆರ್ಥಿಕತೆಗೆ ಅಂಟಿಕೊಂಡಿರುವ ಬಿಜೆಪಿ ಸರ್ಕಾರ ಇಂದಿರಾ ಕ್ಯಾಂಟೀನ್ ಮಾತ್ರವಲ್ಲ ಬಡವರಿಗೆ ಅನುಕೂಲವಾಗುವ ಎಲ್ಲಾ ರೀತಿಯ ಸಮಾಜ ಕಲ್ಯಾಣ ಯೋಜನೆಗಳಿಗೆ ಕತ್ತರಿ ಹಾಕಿರುವುದು ಕಣ್ಣಿಗೆ ರಾಚುತ್ತದೆ.

ಬಡವರ ಅನ್ನಭಾಗ್ಯ ಕಸಿದ ಕಮಲ

ಸಿದ್ದರಾಮಯ್ಯ 2013ರಲ್ಲಿ ಈ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ತಕ್ಷಣ ಮಾಡಿದ ಮೊದಲ ಮುಖ್ಯ ಕೆಲಸ ಎಂದರೆ ಬಡವರಿಗಾಗಿ 1ರೂ.ಗೆ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದದ್ದು. ಗ್ರಾಮೀಣ ಭಾಗದಲ್ಲಿ ’ಅರೆ ನಿರುದ್ಯೋಗ’ದ ಪ್ರಮಾಣ ಅಧಿಕ. ಮಳೆಗಾಲದ ಹೊರತು ಉಳಿದ ಸಮಯಗಳಲ್ಲಿ ಕೃಷಿ ಕೂಲಿಗಳಿಗೆ ಕೆಲಸ ಸಿಗುವುದು ಸುಲಭದ ಮಾತಲ್ಲ. ಹೀಗಾಗಿ ವರ್ಷದ ಹಲವು ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಕೂಲಿ ಕಾರ್ಮಿಕರು ಒಂದೊತ್ತು ಊಟಕ್ಕೂ ಪರದಾಡುವ ಸ್ಥಿತಿ ಇದೆ. ಇದೇ ಕಾರಣಕ್ಕೆ ನಗರ ಭಾಗಕ್ಕೆ ಗುಳೆ ಹೋಗುವವರೂ ಇದ್ದಾರೆ. ಹೀಗಾಗಿ ಈ ಗುಳೆ ಪದ್ಧತಿಯನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಜಾರಿಗೆ ತಂದ ಮಹತ್ವಾಕಾಂಕ್ಷೆಯ ಯೋಜನೆಯೇ ಅನ್ನಭಾಗ್ಯ ಯೋಜನೆ.

ಈ ಯೋಜನೆಯ ಅಡಿಯಲ್ಲಿ 3 ಜನರಿರುವ ಕುಟುಂಬಕ್ಕೆ ಮಾಸಿಕ ಕೆಜಿ ಗೆ 1 ರೂ ದರದಲ್ಲಿ 30 ಕೆ.ಜಿ, ಇಬ್ಬರಿರುವ ಕುಟುಂಬಕ್ಕೆ 20 ಕೆಜಿ ಅಕ್ಕಿ ನೀಡಲಾಗಿತ್ತು. ಕರ್ನಾಟಕದ 87 ಲಕ್ಷ ಬಿಪಿಎಲ್ ಮತ್ತು 11 ಲಕ್ಷ ಅಂತ್ಯೋದಯ ಕುಟುಂಬಗಳು ಇದರ ಲಾಭವನ್ನು ನೇರವಾಗಿ ಪಡೆದಿದ್ದವು. ಆದರೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ತಿಂಗಳಿಗೆ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಓರ್ವ ವ್ಯಕ್ತಿಗೆ ತಿಂಗಳಿಗೆ 5 ಕೆಜಿ ಅಕ್ಕಿ ಮಾತ್ರ ನೀಡಲು ಸಾಧ್ಯ ಎಂದು ಬಹಿರಂಗವಾಗಿಯೇ ಹೇಳಿತ್ತು. ವಿರೋಧ ಪಕ್ಷಗಳು ಪ್ರಶ್ನೆ ಮಾಡಿದ್ದಕ್ಕೆ ಆರ್ಥಿಕ ಕುಸಿತದ ನೆಪವನ್ನು ಮುಂದಿಟ್ಟಿತ್ತು. ಆದರೆ, ಬಡ ಜನರ ಹೊಟ್ಟೆ ತುಂಬಿಸಲಾಗದಷ್ಟು ರಾಜ್ಯದ ಆರ್ಥಿಕತೆ ಕುಸಿದಿದೆಯೇ? ಎಂಬುದು ತಜ್ಞರ ಪ್ರಶ್ನೆ.

ಮಕ್ಕಳ ಬಿಸಿಯೂಟಕ್ಕೂ ಬಂತು ಕುತ್ತು

ಭಾರತದ ಮತ್ತು ಕರ್ನಾಟಕದಲ್ಲಿ 6 ರಿಂದ 14 ವರ್ಷದ ಮಕ್ಕಳಿಗೆ ಶಾಲೆಯಲ್ಲಿ ನೀಡುವ ಬಿಸಿಯೂಟದ ಯೋಜನೆಗೆ ದೊಡ್ಡ ಇತಿಹಾಸವಿದೆ. ಬಡ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಮೂಲಕ ದೇಶದ ಸಾಕ್ಷರತಾ ಪ್ರಮಾಣವನ್ನು ಅಭಿವೃದ್ಧಿಪಡಿಸಿದ್ದು ಸಾಧನೆಯೇ ಸರಿ. ಆದರೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಬಿಸಿಯೂಟ ಯೋಜನೆಯನ್ನು ಸ್ಥಗಿತಗೊಳಿಸಲು ಮುಂದಾಗಿತ್ತು.

ಆದರೆ, ರಾಜ್ಯ ಸರ್ಕಾರದ ಈ ನಿರ್ಧಾರವನ್ನು ವಿರೋಧಿಸಿ ವಕೀಲ ಕ್ಲಿಫ್ಟನ್ ರೊಸಾರಿಯೊ, “ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಮತ್ತು ಮಧ್ಯಾಹ್ನದ ಬಿಸಿಯೂಟ ಯೋಜನೆಯ ನಿಯಮಗಳ ಪ್ರಕಾರ ರಾಜ್ಯ ಸರ್ಕಾರ ಫಲಾನುಭವಿ ಮಕ್ಕಳಿಗೆ ಪರಿಹಾರ ನೀಡಬೇಕು” ಎಂದು ಒತ್ತಾಯಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

PC : Prajavani

ಕಳೆದ ವರ್ಷ ನವೆಂಬರ್ 11 ರಂದು ಈ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್, “ಶಾಲಾಮಕ್ಕಳ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಸರಿಯಾಗಿ ಅನುಷ್ಠಾನ ಮಾಡುವಲ್ಲಿ ರಾಜ್ಯ ಸರ್ಕಾರದ ವೈಫಲ್ಯವು, ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಲಭ್ಯವಾಗಿರುವ ಜೀವಿಸುವ ಹಕ್ಕು ಮತ್ತು ಆಹಾರ ಭದ್ರತಾ ಕಾಯ್ದೆಯ ಹಾಗೂ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಹೀಗಾಗಿ ಸರ್ಕಾರ ಈ ಯೋಜನೆಯನ್ನು ಮುಂದುವರೆಸಬೇಕು” ಎಂದು ಚಾಟಿ ಬೀಸಿತ್ತು.

ಜನರಿಗೆ ಉತ್ತರದಾಯಿಯಾಗಿರಬೇಕಾದ ರಾಜ್ಯ ಸರ್ಕಾರವೊಂದು ಅಕ್ಷರಶಃ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ನೀಡಲೂ ಸಹ ಈ ಮಟ್ಟಿಗೆ ಯೋಚಿಸುತ್ತದೆ, ನ್ಯಾಯಾಲಯದಿಂದ ಕಿವಿ ಹಿಂಡಿಸಿಕೊಳ್ಳುತ್ತದೆ ಎಂದರೆ ಅದಕ್ಕೆ ಏನೆನ್ನುವುದು?

ಬಿಜೆಪಿ ಸರ್ಕಾರ ಅನ್ನಭಾಗ್ಯ, ಮಧ್ಯಾಹ್ನದ ಬಿಸಿಯೂಟಕ್ಕೆ ಕತ್ತರಿ ಹಾಕಿದ್ದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದೇ ಇದೆ. ಆದರೆ, ಸದ್ದೇ ಇಲ್ಲದೆ ಹಿಂದುಳಿದ ವರ್ಗದ ಮಕ್ಕಳ ವಿದ್ಯಾರ್ಥಿವೇತನ ಕಡಿತ, ಮಕ್ಕಳ ಹಾಲು ಭಾಗ್ಯ, ಹಿಂದುಳಿದ ಜನಾಂಗದ ಶಾದಿ ಭಾಗ್ಯ ಸೇರಿದಂತೆ ಹತ್ತಾರು ಸಮಾಜ ಕಲ್ಯಾಣ ಯೋಜನೆಗಳನ್ನು ಬಿಜೆಪಿ ಮೊಟಕುಗೊಳಿಸಿಯಾಗಿದೆ.

ಸಮಾಜ ಕಲ್ಯಾಣ ಯೋಜನೆಯ ಇತಿಹಾಸ ಏನು?

ಸಂವಿಧಾನದಲ್ಲಿ ಉಲ್ಲೇಖಿಸಿರುವಂತೆ ಭಾರತ ಸಮಾಜವಾದಿ, ಜಾತ್ಯತೀತ, ಪ್ರಜಾಪ್ರಭುತ್ವ ಗಣತಂತ್ರ ದೇಶ. ಆದರೆ, ಸಮಾನತೆಯನ್ನು ಸಾಧಿಸದೆ ಪ್ರಜಾಪ್ರಭುತ್ವವನ್ನು ಯಶಸ್ವಿಗೊಳಿಸುವುದು ಸಾಧ್ಯವಿಲ್ಲ ಎಂಬುದು ಡಾ.ಬಿ.ಆರ್ ಅಂಬೇಡ್ಕರ್ ಅವರ ಬಲವಾದ ನಂಬಿಕೆಯಾಗಿತ್ತು.

ಇದೇ ಕಾರಣಕ್ಕೆ ಸಂವಿಧಾನದ 21ನೇ ವಿಧಿಯ ಪ್ರಕಾರ ಜನರಿಗೆ ಗೌರವಯುತವಾಗಿ ಬದುಕುವ ಮತ್ತು ಜೀವಿಸುವ ಹಕ್ಕುಗಳನ್ನು ನೀಡಲಾಯಿತು. ಈ ವಿಧಿ ನಂತರದ ದಿನಗಳಲ್ಲಿ ಸಮಾಜ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನಕ್ಕೂ ಕಾರಣವಾದದ್ದು ಇಂದು ಇತಿಹಾಸ.ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಗೌರವಯುತವಾದ ಜೀವನವನ್ನು ಕಟ್ಟಿಕೊಡುವುದು ಸರ್ಕಾರವೊಂದರ ಆದ್ಯ ಕರ್ತವ್ಯ. ಇದೇ ಕಾರಣಕ್ಕೆ ಶಿಕ್ಷಣದಿಂದ ಉದ್ಯೋಗದವರೆಗೆ ಸಮಾಜದಲ್ಲಿ ತುಳಿತಕ್ಕೆ ಒಳಗಾದ ಜನರಿಗೆ ವಿಶೇಷ ಅವಕಾಶಗಳನ್ನು ಮಾಡಿಕೊಡಲಾಯಿತು. ಬಡ ಮಕ್ಕಳನ್ನು ಶಾಲೆಯತ್ತ ಸೆಳೆಯಲು, ಬಡವರ ಹೊಟ್ಟೆ ತುಂಬಿಸಲು ಎಂದು ಹತ್ತಾರು ಯೋಜನೆಗಳನ್ನು ಜಾರಿಗೆ ತರಲಾಯಿತು. ಮಹಿಳೆಯರ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸ್ಥಾಪಿಸಿ ಅಪೌಷ್ಠಿಕ ಮಕ್ಕಳ ಮತ್ತು ತಾಯಿಂದಿರ ಆರೋಗ್ಯಕ್ಕೆ ಆಸರೆಯಾಯಿತು. ಲಾಭ-ನಷ್ಟ ಆರ್ಥಿಕ ಮುಗ್ಗಟ್ಟು ಎಂಬ ಅಂಶಗಳನ್ನೆಲ್ಲಾ ದಾಟಿ ಜನರ ಶ್ರೇಯೋಭಿವೃದ್ಧಿಯೇ ಸಮಾಜದ ಲಾಭ ಎಂದು ಪರಿಗಣಿಸಲಾಗಿದ್ದ ಈ ಯೋಜನೆಗಳಿಗೆ ಈವರೆಗಿನ ಹಲವು ಸರ್ಕಾರಗಳೂ ನೀರೆರೆದು ಪೋಷಿಸಿದ್ದು ಸುಳ್ಳಲ್ಲ.

ಆದರೆ, ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್‌ಗಳ ಮೂಲಕ ಜನರನ್ನು ಸರ್ಕಾರ ಸೋಮಾರಿಗಳನ್ನಾಗಿ ಮಾಡುತ್ತಿದೆ, ಮಕ್ಕಳ ಮಧ್ಯಾಹ್ನದ ಬಿಸಿಯೂಟ, ವಿದ್ಯಾರ್ಥಿವೇತನ ಸರ್ಕಾರಕ್ಕೆ ಆರ್ಥಿಕ ಹೊರೆ ಎಂದು ಹೊಸ ವ್ಯಾಖ್ಯಾನ ಮಾಡುವ ಬಿಜೆಪಿ ಸರ್ಕಾರಗಳ ಮತ್ತು ಅವುಗಳನ್ನು ಬೆಂಬಲಿಸುವ ಆರ್ಥಿಕ ತಜ್ಞರ ನಿಲುವು ಬಡವರ ಬಗೆಗಿನ ಕುಹಕ ಎಂದರೆ ತಪ್ಪಾಗಲಾರದು.

ಮಧ್ಯಾಹ್ನ ಬಿಸಿಯೂಟದ ಇತಿಹಾಸವೇನು ಸಣ್ಣದೆ?

ಸಮಾಜ ಕಲ್ಯಾಣ ಕಾರ್ಯಕ್ರಮಗಳಲ್ಲಿ ಪ್ರಮುಖವಾದ ಮಧ್ಯಾಹ್ನ ಬಿಸಿಯೂಟ ಭಾರತದ ಮಟ್ಟಿಗೆ ಒಂದು ಕ್ರಾಂತಿಕಾರಿ ಚಳುವಳಿ ಎಂದರೆ ತಪ್ಪಾಗಲಾರದು. ಬಿಸಿಯೂಟ ನೋಡುವವರಿಗೆ ಬಿಸಿಯೂಟ ಅಷ್ಟೆ. ಆದರೆ ಮಕ್ಕಳಿಗೆ ಅದೇ ಮೃಷ್ಟಾನ್ನ. ಬರಗಾಲ ಪ್ರದೇಶದಲ್ಲಿ ಹೊಲಕ್ಕೆ ಹೋಗುವ ಎಷ್ಟೊ ಬಡ ಪಾಲಕರು ಮಕ್ಕಳನ್ನು ಓದಿನ ಜೊತೆಗೆ ಒಂದು ಹೊತ್ತಿನ ಊಟವೂ ಸಿಗುತ್ತದೆ ಎಂದು ಶಾಲೆಗೆ ಕಳಿಸಿದ ದೃಷ್ಟಾಂತಗಳು ಈ ದೇಶದಲ್ಲಿ ಸಾಕಷ್ಟಿವೆ. ತುತ್ತು ಅನ್ನಕ್ಕಾಗಿ ಪರದಾಡುವ ಬಡಜನರ ಮಕ್ಕಳಿಗೆ ಬಿಸಿಯೂಟವೇ ಬದುಕಾಗಿದ್ದು ಈ ದೇಶದಲ್ಲಿ ಮಾತ್ರ.

ಈ ಬಿಸಿಯೂಟದ ಇತಿಹಾಸ ಕೂಡ ಬಲು ಸೊಗಸು. ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಕೊಡುವ ಯೋಚನೆ ಹೊಳೆದದ್ದು ಅಂದಿನ ದೂರದೃಷ್ಟಿಯ ನಾಯಕರಾದ ಮದ್ರಾಸ್ ಪ್ರಾಂತ್ಯದ ಮುಖ್ಯಮಂತ್ರಿ ಕೆ. ಕಾಮರಾಜ್ ಮತ್ತು ಪ್ರಧಾನಿ ನೆಹರು ಅವರಿಗೆ.

1962ನೇ ಇಸವಿಯಂದು ಮದ್ರಾಸ್ ಪ್ರಾಂತ್ಯಕ್ಕೆ ಸೇರಿದ್ದ ರಾಯಲ್ ಸೀಮಾಗೆ ನೆಹರೂ ಭೇಟಿ ನೀಡಿದ್ದರು. ಆಗ ಆ ಪ್ರದೇಶದಲ್ಲಿ ಭೀಕರ ಬರಗಾಲ ಉಂಟಾಗಿತ್ತು. 5 ಲಕ್ಷದಷ್ಟಿದ್ದ ಅಲ್ಲಿನ ಜನರಲ್ಲಿ ಬಹುತೇಕರು ತಮ್ಮ ಮಕ್ಕಳನ್ನು ಆಹಾರಕ್ಕಾಗಿ ಬರಗಾಲ ಶಿಬಿರಕ್ಕೆ ಸೇರಿಸಿದ್ದರು. ಇದನ್ನು ಕಂಡ ನೆಹರೂ ಎಲ್ಲಾ ಮಕ್ಕಳನ್ನು ಶಾಲೆಗೆ ಸೇರಿಸಿ ಅಲ್ಲಿಯೆ ಮಧ್ಯಾಹ್ನದ ಬಿಸಿಯೂಟ ನೀಡುವಂತೆ 1962 ಅಕ್ಟೋಬರ್ 17ರಂದು ಮದ್ರಾಸ್ ಪ್ರಾಂತ್ಯಕ್ಕೆ ಪತ್ರ ಬರೆದಿದ್ದರು.

ಅಂದಿನ ಮುಖ್ಯಮಂತ್ರಿ ’ದಕ್ಷಿಣ ಭಾರತದ ಗಾಂಧಿ’ ಎಂದು ಪ್ರಸಿದ್ಧರಾದ ಕೆ. ಕಾಮರಾಜ್ ಅವರು ಆ ಯೋಜನೆಯನ್ನು ತಕ್ಷಣ ಜಾರಿಗೊಳಿಸಿದರು. (ಮುಖ್ಯಮಂತ್ರಿಗಳಿಗೆ ಬರೆದ ಪತ್ರಗಳ ಸಂಪುಟ 3ರಲ್ಲಿ ಇದು ದೊರೆಯುತ್ತದೆ) ಹೀಗೆ ತಮಿಳುನಾಡಿನ ಚೆನ್ನೈನಲ್ಲಿ ಮೊಟ್ಟ ಮೊದಲ ಬಾರಿಗೆ 1962ರಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ ಆರಂಭವಾಯಿತು. ಆ ಯೋಜನೆಯ ಬೀಜ ಬಿತ್ತಿದವರು ಜವಾಹರ್ ಲಾಲ್ ನೆಹರೂ ಮತ್ತು ಕೆ. ಕಾಮರಾಜ್.

ನಂತರ ಬಂದ ತಮಿಳುನಾಡಿನ ಮುಖ್ಯಮಂತ್ರಿಗಳಾದ ಕರುಣಾನಿಧಿ, ಎಂ.ಜಿ. ರಾಮಚಂದ್ರನ್ ಅವರು ಈ ಯೋಜನೆಯನ್ನು ರಾಜ್ಯದ ಮೂಲೆಮೂಲೆಗೂ ತಲುಪಿಸಿದರು. ಇದರ ಜೊತೆಗೆ ಮಕ್ಕಳಿಗೆ ಊಟದ ಜೊತೆಗೆ ಉಚಿತ ಹಾಲು, ಮೊಟ್ಟೆ, ಹಣ್ಣು, ಚಪ್ಪಲಿ, ಸಮವಸ್ತ್ರ, ಪುಸ್ತಕ ಹೀಗೆ ಎಲ್ಲವನ್ನೂ ನೀಡಿದ್ದರು. ಪ್ರತಿ ಹಳ್ಳಿಗೆ ಒಂದು ಸರ್ಕಾರಿ ಪ್ರಾಥಮಿಕ ಶಾಲೆ, ಪ್ರತಿ ಗ್ರಾಮ ಪಂಚಾಯತಿಗೆ ಒಂದು ಪ್ರೌಢಶಾಲೆ ಕಡ್ಡಾಯವಾಗಿ ಇರುವಂತೆ ಕಾನೂನನ್ನೇ ಜಾರಿ ಮಾಡಿದ್ದರು.

ಮುಂದೆ ಗುಜರಾತ್ ರಾಜ್ಯ 1984ರಲ್ಲಿ ಮಧ್ಯಾಹ್ನದ ಬಿಸಿಯೂಟ ಪ್ರಾರಂಭಿಸಿತು. ಕೇರಳ 1984ರಲ್ಲಿ ಈ ಯೋಜನೆಯನ್ನು ಆರಂಭಿಸಿತು. 1991-92ರ ಹೊತ್ತಿಗೆ ಗೋವಾ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರಾ, ಉತ್ತರ ಪ್ರದೇಶ, ಕರ್ನಾಟಕ, ಒರಿಸ್ಸಾ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಎಲ್ಲಾ ರಾಜ್ಯಗಳು ಈ ಯೋಜನೆಯನ್ನು ಆರಂಭಿಸಿದ್ದವು.

PC : ಸಂಸ್ಕೃತಿ ಸಲ್ಲಾಪ

ಭಾರತದ ಸಾಕ್ಷರತಾ ಪ್ರಮಾಣ ಅಧಿಕವಾಗಲು ಈ ಮಧ್ಯಾಹ್ನ ಬಿಸಿಯೂಟ ಯೋಜನೆ ಮಹತ್ವದ ಪಾತ್ರ ವಹಿಸಿದೆ ಎಂಬುದನ್ನು ಅಲ್ಲಗಳೆಯಲಾಗದು. ಇಂದು ಭಾರತದ ಸುಮಾರು 12,65,000 ಶಾಲೆಯ 12 ಕೋಟಿ ಮಕ್ಕಳು ಈ ಯೋಜನೆಯಡಿಯಲ್ಲಿ ಬಿಸಿಯೂಟ ಮಾಡುತ್ತಿದ್ದಾರೆ. ಸರ್ಕಾರಿ, ಅನುದಾನಿತ, ರಾಷ್ಟ್ರೀಯ ಬಾಲಕಾರ್ಮಿಕರ ಶಾಲೆ ಮತ್ತು ಸರ್ವ ಶಿಕ್ಷಣ ಅಭಿಯಾನದಡಿಯಲ್ಲಿ ಬರುವ ಎಲ್ಲ ಶಾಲೆಗಳು, ಮದರಸಾಗಳಲ್ಲಿಯೂ ಈ ಯೋಜನೆ ಜಾರಿಯಲ್ಲಿದೆ.

ಜಗತ್ತಿನಲ್ಲಿಯೇ ಅತೀ ದೊಡ್ಡ ಸಮಾಜ ಕಲ್ಯಾಣ ಯೋಜನೆ ಎಂದರೆ ಅದು ಭಾರತ ಸರ್ಕಾರದ ಮಧ್ಯಾಹ್ನದ ಬಿಸಿಯೂಟ ಯೋಜನೆ. ದಿನದಲ್ಲಿ ಏಕಕಾಲಕ್ಕೆ 12 ಕೋಟಿ ಮಕ್ಕಳು ಊಟ ಮಾಡುತ್ತಾರೆ ಎಂದರೆ ಇದು ಒಂದು ಜಗತ್ತಿನ ಅದ್ಭುತವೇ ಸರಿ. ಭಾರತದ ಸಂವಿಧಾನದ ಪ್ರಕಾರ ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯುವುದು ಮಕ್ಕಳ ಮೂಲಭೂತ ಹಕ್ಕಾಗಿದೆ. ಅದೇರೀತಿ ಸಂವಿಧಾನದ ಆರ್ಟಿಕಲ್ 24ರ 2ಸಿ ಪ್ಯಾರಾ ಪ್ರಕಾರ “ಸಾಕಷ್ಟು ಪ್ರಮಾಣದ ಪೌಷ್ಠಿಕ ಆಹಾರ ಪಡೆಯುವುದು” ಕೂಡ ಮಕ್ಕಳ ಹಕ್ಕು ಮತ್ತು ನೀಡುವುದು ಸರ್ಕಾರದ ಕರ್ತವ್ಯ.

ಆದರೆ, ಬಿಜೆಪಿ ಆಡಳಿತದಲ್ಲಿ ಸರ್ಕಾರದ ಕರ್ತವ್ಯ ಏನು ಎಂಬುದಕ್ಕೆ ಹೊಸ ಹೊಸ ವ್ಯಾಖ್ಯಾನಗಳು ಚಿಗಿತುಕೊಳ್ಳುತ್ತಿವೆ. ಬಡವರ ಸಣ್ಣಪುಟ್ಟ ಯೋಜನೆಗಳಿಗೂ ಕತ್ತರಿಹಾಕಿ, ಬಂಡವಾಳಶಾಹಿಗಳಿಗೆ ಕೆಂಪು ಕಂಬಳ ಹಾಸುವುದೇ ರಾಜ್ಯದ-ದೇಶದ ಅಭಿವೃದ್ಧಿ ಎಂದು ನಂಬಿಸಲಾಗುತ್ತಿದೆ. ಇಂತಹ ಹೀನಾಯ ಪರಿಸ್ಥಿತಿಯಲ್ಲಿ, ಬಲಪಂಥೀಯ ಬಂಡವಾಳಶಾಹಿ ಆರ್ಥಿಕತೆ ಬಡವನ ಕೊರಳಿಗೆ ಉರುಳಾಗುತ್ತಿರುವುದರಲ್ಲಿ ಹೆಚ್ಚುಗಾರಿಕೆ ಏನಿಲ್ಲ ಬಿಡಿ!


ಇದನ್ನೂ ಓದಿ: ಇಂದಿರಾ ಕ್ಯಾಂಟೀನ್‌ಗೆ ಜೀವ ಕೊಡಿ; ಇದು ಜೀವನ್ಮರಣದ ಪ್ರಶ್ನೆ: ಬಿ ಶ್ರೀಪಾದ್ ಭಟ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...