Homeಮುಖಪುಟಇಂದಿರಾ ಕ್ಯಾಂಟೀನ್‌ಗೆ ಜೀವ ಕೊಡಿ; ಇದು ಜೀವನ್ಮರಣದ ಪ್ರಶ್ನೆ: ಬಿ ಶ್ರೀಪಾದ್ ಭಟ್

ಇಂದಿರಾ ಕ್ಯಾಂಟೀನ್‌ಗೆ ಜೀವ ಕೊಡಿ; ಇದು ಜೀವನ್ಮರಣದ ಪ್ರಶ್ನೆ: ಬಿ ಶ್ರೀಪಾದ್ ಭಟ್

- Advertisement -
- Advertisement -

(ಇದು ಹೊಸಬರಹದಲ್ಲಿದೆ. ಮಹಾಪ್ರಾಣಗಳ ಬಳಕೆಯನ್ನು ಕಡಿತಗೊಳಿಸಿ ಬರೆಯಲಾಗಿದೆ)

ಭಾರತದಲ್ಲಿ ಸರಾಸರಿಯಾಗಿ ಜಿಡಿಪಿಯ ಶೇ.2% ಪ್ರಮಾಣದಶ್ಟು, ಅಂದಾಜು 10 ಲಕ್ಷ ಕೋಟಿ ಮೊತ್ತವನ್ನು ಕಲ್ಯಾಣ ಯೋಜನೆಗಳಿಗೆ, ಸಾಮಾಜಿಕ ಸುರಕ್ಷತೆಗೆ ಹಂಚಿಕೆ ಮಾಡಲಾಗುತ್ತದೆ. ಸುಮಾರು 10,000 ಕಲ್ಯಾಣ ಯೋಜನೆಗಳಿವೆ ಎಂದು ಅಂದಾಜಿಸಲಾಗಿದೆ. ಮನರೇಗ, ಪಿಎಂ ಕಿಸಾನ್, ರಾಶ್ಟ್ರೀಯ ಸಾಮಾಜಿಕ ಸಹಾಯ ಯೋಜನೆ, ಪಿಎಂ ಗರೀಬ್ ಕಲ್ಯಾಣ್ ಯೋಜನಾ, ಹಿರಿಯ ನಾಗರಿಕರ ಉಳಿತಾಯ ಯೋಜನಾ ಮುಂತಾದವು ಕೇಂದ್ರದ ಕಲ್ಯಾಣ ಯೋಜನೆಗಳು. ಕರ್ನಾಟಕದಲ್ಲಿ ಅನ್ನ ಭಾಗ್ಯ ಯೋಜನೆ, ಕೃಶಿ ಯೋಜನೆ, ಕುರಿ ಪರಿಹಾರ ಯೋಜನೆ, ಇಂದಿರಾ ಕ್ಯಾಂಟೀನ್, ಮಾತೃಶ್ರೀ, ಸಾಂತ್ವಾನ ಇನ್ನೂ ಮುಂತಾದ ಜನಪರ ಕಲ್ಯಾಣ ಯೋಜನೆಗಳಿವೆ. ಈ ಯೋಜನೆಗಳು ಹಕ್ಕುದಾರರಿಗೆ ತಲಪುತ್ತದೆಯೆ ಎನ್ನುವ ಪ್ರಶ್ನೆಯನ್ನು ಕಳೆದ ಐವತ್ತು ವರ್ಶಗಳಿಂದಲೂ ಕೇಳುತ್ತಿದ್ದಾರೆ. ಉತ್ತರವೂ ಸಿಕ್ಕಿಲ್ಲ. ಏಕೆಂದರೆ ಕಾರ್ಯಾಂಗ, ಶಾಸಕಾಂಗದ ಬ್ರಶ್ಟಾಚಾರದ ಜೊತೆಗೆ ಕೆಲವನ್ನು ಹೊರತುಪಡಿಸಿದರೆ ಮಿಕ್ಕ ಯೋಜನೆಗಳು ಮಗುವನ್ನು ಚಿವುಟಿ (ಬಡತನವನ್ನು ಶಾಶ್ವತಗೊಳಿಸಿ) ತೊಟ್ಟಿಲನ್ನು ತೂಗುವ (ಘೋಶಣೆಗಳೆಂಬ ಕಣ್ಕಟ್ಟು) ಕಪಟ ನಾಟಕಗಳು. ಆಧಾರ್ ಕಾರ್ಡ್ ದಾಖಲಿಸಿಲ್ಲವೆಂದು ಬಡವರ 3 ಕೋಟಿ ಪಡಿತರ ಚೀಟಿಗಳನ್ನು ರದ್ದು ಮಾಡಿದ ಮೋದಿ ಸರಕಾರದಿಂದ ಯಾವ ಮಾನವೀಯತೆಯನ್ನು ನಿರೀಕ್ಷಿಸಲು ಸಾದ್ಯ?

ಅನೇಕ ಯೋಜನೆಗಳು ಸಾರ್ವತ್ರಿಕವಾಗಿಲ್ಲ. ಉದಾಹರಣೆಗೆ ಸಮೀಕ್ಷೆಯೊಂದರ ಅನುಸಾರ ಶೇ.55 ಪ್ರಮಾಣದ ಕುಟುಂಬಗಳಿಗೆ ಮಾತ್ರ ಪಡಿತರ ಯೋಜನೆಯ ಫಲ ದೊರಕುತ್ತಿದೆ. ಈ ಯೋಜನೆಯ ನೀಲನಕ್ಷೆ ಮತ್ತು ಜಾರಿಯ ನಡುವೆ ಶೇ.15ರಶ್ಟು ಅಂತರವಿದೆ. ಸಾಮಾಜಿಕ ಪಿಂಚಣಿಯು ಶೇ.34 ಪ್ರಮಾಣದ ಕುಟುಂಬಗಳಿಗೆ ಮಾತ್ರ ದೊರಕಿದೆ ಮತ್ತು ಈ ಯೋಜನೆಯ ನೀಲನಕ್ಷೆ ಮತ್ತು ಜಾರಿಯ ನಡುವೆ ಶೇ.56ರಶ್ಟು ಅಂತರವಿದೆ. ಶೇ.28 ಪ್ರಮಾಣದ ಕುಟುಂಬಗಳಿಗೆ ಮಾತ್ರ ಜನಧನ ಯೋಜನೆಯ ಫಲ ದೊರಕುತ್ತಿದೆ. ಈ ಯೋಜನೆಯ ನೀಲನಕ್ಷೆ ಮತ್ತು ಜಾರಿಯ ನಡುವೆ ಶೇ.66ರಶ್ಟು ಅಂತರವಿದೆ. ಪ್ರಜೆಗಳ ಕಲ್ಯಾಣಕ್ಕೋಸ್ಕರ ಘೋಶಿಸಲ್ಪಡುವ ಈ ಕಲ್ಯಾಣ ಯೋಜನೆಗಳ ಫಲಶ್ರುತಿಯ ಕುರಿತು ಯಾವುದೇ ಪಕ್ಷಗಳಿಗೂ ಆಸಕ್ತಿಯಿಲ್ಲ. ಎಲ್ಲಿಯವರೆಗೆ ಇವು ಮತಗಳಿಸುವ ಕಣ್ಕಟ್ಟುಗಳಾಗಿರುತ್ತವೆಯೋ ಅಲ್ಲಿಯವರೆಗೂ ಇವುಗಳನ್ನು ನಂಬಿ ವೋಟು ಹಾಕಿದ ಬಡಜನತೆ ಹಸಿವಿನ ಯಾತನೆಯಿಂದ ನರಳುವುದು ತಪ್ಪಿದ್ದಲ್ಲ

ಆದರಲ್ಲಿಯೂ ಕೇಂದ್ರದಲ್ಲಿ ನರೇಂದ್ರ ಮೋದಿ ಪ್ರಾರಂಬಿಸಿದ ಕೆಲವು ಕಲ್ಯಾಣ ಯೋಜನೆಗಳು ಚುನಾವಣಾ ಮತಗಳಿಕೆಗೋಸ್ಕರ ಮಾತ್ರ ಘೋಶಿಸಲಾಗಿವೆ. ನಾನು ಭಾರತದ ಪ್ರಜೆ ಎನ್ನುವ ಕುರಿಯು ಒಮ್ಮೆ ಕಮಲದ ಗುರುತಿಗೆ ಗುಂಡಿಯೊತ್ತಿದ ನಂತರ, ಅದರ ಫಲಿತಾಂಶ ಬಂದ ನಂತರ ಈ ಯೋಜನೆಗಳು ಅನಾಥವಾಗುತ್ತವೆ ಇಲ್ಲವೇ ಬಂಡವಾಳಶಾಹಿಗಳ ಜೇಬು ತುಂಬಿಸುತ್ತವೆ.

ಉದಾಹರಣೆಗೆ 2018ರಲ್ಲಿ ಅದ್ದೂರಿ ಪ್ರಚಾರದೊಂದಿಗೆ ಘೋಶಣೆಯಾದ ’ಆಯಶ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆಗೆ 6,556 ಕೋಟಿ ಬಜೆಟ್ ಹಂಚಿಕೆ ಮಾಡಲಾಗಿತ್ತು. ಆದರೆ ಚುನಾವಣೆ ಮುಗಿದ ನಂತರ 2019-20ರ ವರ್ಶದಲ್ಲಿ 3,314 ಕೋಟಿ ಮಾತ್ರ ವೆಚ್ಚ ಮಾಡಲಾಯಿತು. ಮತ್ತು ಈ ಮೊತ್ತವು ಬಡಜನರ ಆರೋಗ್ಯ ಸುದಾರಿಸುವುದರ ಬದಲಿಗೆ ವಿಮಾ ಪಾಲಿಸಿಯಡಿ ಖಾಸಗಿ ಕಾರ್ಪೋರೇಟ್ ಆಸ್ಪತ್ರೆಗಳಿಗೆ ಸಂದಾಯವಾಗಿದೆ. ಅತ್ತ ಸರಕಾರಿ ಆಸ್ಪತ್ರೆಗಳಿಗೆ ಬಿಡಿಗಾಸು ದೊರಕಿಲ್ಲ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿನ ಶೋಚನೀಯ ಸ್ಥತಿ ಮತ್ತಶ್ಟು ಹದಗೆಟ್ಟಿದೆ. ಅದೇ ರೀತಿ 2019ರ ಲೋಕಸಭಾ ಚುನಾವಣೆಗೂ ಮುನ್ನ ’ಪಿಎಂ ಕಿಸಾನ್ ಯೋಜನೆಯನ್ನು ಘೋಶಿಸಿ 75,000 ಕೋಟಿ ಭರವಸೆ ಕೊಡಲಾಯಿತು. ಆದರೆ ಚುನಾವಣೆ ಮುಗಿದ ನಂತರ 2019-20ರ ವರ್ಶದಲ್ಲಿ 54,000 ಕೋಟಿ ಮಾತ್ರ ವೆಚ್ಚ ಮಾಡಲಾಯಿತು. ಬಡತನದಲ್ಲಿರುವ ಅತಿ ಸಣ್ಣ ರೈತರು ಮತ್ತು ಕೂಲಿ ಕಾರ್ಮಿಕರಿಗೆ ಇದರ ಬಿಡಿಗಾಸು ದೊರಕಿಲ್ಲ.

ಹಾಗೆಯೆ ಸ್ವಚ್ಚ ಭಾರತ್ ಮಿಶನ್‌ಗೆ 12,644 ಕೋಟಿ ಕೊಡುವ ಭರವಸೆ ನೀಡಿ ಚುನಾವಣೆ ಮುಗಿದ ನಂತರ 2019 -20ರ ವರ್ಶದಲ್ಲಿ ಕೇವಲ 9000 ಕೋಟಿ ವೆಚ್ಚ ಮಾಡಲಾಯಿತು. ಆದರೆ ಭಾರತದಲ್ಲಿ ನೈರ್ಮಲ್ಯವು ಇಂದಿಗೂ ಮರೀಚಿಕೆಯಾಗಿದೆ ಮತ್ತು ಪೌರ ಕಾರ್ಮಿಕರು ಹೊಟ್ಟೆಪಾಡಿಗೋಸ್ಕರ ಮಲದ ಗುಂಡಿ ಸ್ವಚ್ಚಗೊಳಿಸುವ ಅಮಾನವೀಯ ವೃತ್ತಿಯನ್ನು ಮುಂದುವರೆಸುತ್ತಿದ್ದಾರೆ, ಆ ಗುಂಡಿಗಳಲ್ಲಿ ಉಸಿರುಗಟ್ಟಿ ಸಾಯುತ್ತಲೇ ಇದ್ದಾರೆ. ಸಫಾಯಿ ಕರ್ಮಚಾರಿಗಳ ರಾಶ್ಟ್ರೀಯ ಆಯೋಗದ (ಎನ್‌ಸಿಎಸ್‌ಕೆ) ಅನುಸಾರ ಪ್ರತಿ ಐದು ದಿನಕ್ಕೆ ಸರಾಸರಿ ಒಬ್ಬ ಸಫಾಯಿ ಕರ್ಮಚಾರಿ ಮೃತರಾಗುತ್ತಿದ್ದಾರೆ. ಮಲದ ಗುಂಡಿ ಸ್ವಚ್ಚಗೊಳಿಸುವ ಕಾರಣಕ್ಕಾಗಿ ದೇಶದ್ಯಾಂತ ಕಳೆದ ಹತ್ತು ವರ್ಶಗಳಲ್ಲಿ 1340 ಸಾವುಗಳು ಸಂಬವಿಸಿವೆ. 2014-16ರ ಅವಧಿಯಲ್ಲಿ 1500 ಪೌರ ಕಾರ್ಮಿಕರು, 2016-18ರ ಎರಡು ವರ್ಶಗಳ ಅವದಿಯಲ್ಲಿ ಸುಮಾರು 429 ಪೌರ ಕಾರ್ಮಿಕರು ಸಾವನ್ನಪ್ಪಿದ್ದಾರೆ.

ಪ್ರಬುತ್ವದ ಈ ಹತ್ಯಾಕಾಂಡ ಎಂದಿಗೂ ಮುಗಿಯದ ವ್ಯಥೆಯಾದರೆ ಮತ್ತೊಂದೆಡೆ ಸ್ವಚ್ಛ ಭಾರತ್ ಯೋಜನೆ ಮೋದಿಗೆ ವೋಟು ತಂದುಕೊಡುವ ಮತಯಂತ್ರ. ಕಲ್ಯಾಣ ಯೋಜನೆಗಳ ಹೆಸರಿನಲ್ಲಿ ಪಕ್ಷಗಳು ಚುನಾವಣೆಯಲ್ಲಿ ಗೆದ್ದು ಬರುತ್ತಿರುವುದು ನಿರಂತರ ಪ್ರಕ್ರಿಯೆಯಾಗಿದೆ. ಪ್ರತಿಯೊಂದು ಯೋಜನೆಯು ತಮಗೆ ಚುನಾವಣೆಯಲ್ಲಿ ಗೆಲುವು ತಂದುಕೊಡಬೇಕು ಎನ್ನುವ ಉದ್ದೇಶದಿಂದಲೇ ಅಂದಾದುಂದಿಯಲ್ಲಿ ಘೋಶಿಸುವ ಮೋದಿ ಸರಕಾರಕ್ಕೆ ಬಡಜನರ ಸಬಲೀಕರಣವು ಆದ್ಯತೆಯೂ ಅಲ್ಲ ಮತ್ತು ಅವರ ಪಕ್ಷದ ಕಾರ್ಯಕ್ರಮವೂ ಅಲ್ಲ. ಎಲ್ಲಕ್ಕಿಂತಲೂ ಮುಖ್ಯವಾಗಿ ಭಾರತೀಯರೂ ಸಹ ನಿಮ್ಮ ಯೋಜನೆಗಳು ನಮಗೆ ತಲುಪಿಲ್ಲ, ನಾವು ಅದರ ಫಲಾನುಬವಿಗಳಲ್ಲ ಎಂದು ಪ್ರತಿಭಟಿಸುವುದಿಲ್ಲ ಮತ್ತು ಬಿಜೆಪಿ ಪಕ್ಷವು ಏನೂ ಕೆಲಸ ಮಾಡದ ಕಾರಣಕ್ಕೆ ಮತ್ತಶ್ಟು ಅಬಿಮಾನದಿಂದ ಮೋದಿಯವರಿಗೆ ವೋಟು ಹಾಕುವುದರಿಂದ ಇಲ್ಲಿ ಎಲ್ಲವೂ ಕ್ಷೇಮ, ಎಲ್ಲರೂ ಕ್ಷೇಮ.

ಭಾರತದಲ್ಲಿ ದಾರಿದ್ರ್ಯ, ಹಸಿವು, ಬಡತನದ ಕುರಿತು ಲೆಕ್ಕವಿಲ್ಲದಶ್ಟು ಸಲ ಚರ್ಚೆಗಳು ನಡೆದಿವೆ. ಅಂಕಿಅಂಶಗಳು ಬಿಡುಗಡೆಯಾಗಿವೆ. ಅದಿಕಾರ ಸ್ಥಾನದಲ್ಲಿರುವವರು ಅಮಾನವೀಯವಾಗಿ ಬಡತನ ರೇಖೆಯನ್ನು ಗುರುತಿಸುತ್ತಾರೆ. ಕೂಲಿ ಕಾರ್ಮಿಕರಿಗೆ, ದುಡಿಯುವ ವರ್ಗಕ್ಕೆ ಉದ್ಯೋಗ ಮಾತ್ರವಲ್ಲ ಅವರಿಗೆ ಪೌಶ್ಟಿಕಾಂಶದ ಆಹಾರದ ಅಗತ್ಯವಿದೆ ಎನ್ನುವ ಸಂಗತಿಯನ್ನು ಮರೆಮಾಚಲಾಗುತ್ತದೆ. ಹರ್ಷ ಮಂದರ್ ಅವರ ಮತ್ತೊಂದು ಅಧ್ಯಯನದ ಪ್ರಕಾರ “ಕೂಲಿ ಕಾರ್ಮಿಕರು ತಮ್ಮ ಕಶ್ಟದ ದೈಹಿಕ ದುಡಿಮೆಗಾಗಿ ಅದಿಕ ಮಟ್ಟದ ಶಕ್ತಿಯನ್ನು ವ್ಯಯಿಸುತ್ತಾರೆ. ಈ ಶಕ್ತಿಗಾಗಿ ಈ ಕೂಲಿ ಕಾರ್ಮಿಕರಿಗೆ ಗರಿಶ್ಟ ಮಟ್ಟದ ಕ್ಯಾಲೋರಿಗಳ ಅವಶ್ಯಕತೆ ಇದೆ. ಈ ಅಪಾರ ದೈಹಿಕ ಶ್ರಮಕ್ಕೆ ಒಳಗಾಗುವ ಕೂಲಿ ಕಾರ್ಮಿಕರ ಅವಶ್ಯಕತೆಗೆ ಅನುಗುಣವಾಗಿಯೇ ಬಡತನ ರೇಖೆಯ ಮಟ್ಟವನ್ನು ನಿರ್ದರಿಸಬೇಕಾಗುತ್ತದೆ” ಎನ್ನುತ್ತಾರೆ.

ಅಂತರಾಷ್ಟ್ರೀಯ ಅರೋಗ್ಯ ಸಂಸ್ಥೆಯು 1985ರಲ್ಲಿ ತನ್ನ ಅಧ್ಯಯನದಲ್ಲಿ ವಿವರಿಸಿದ ಪ್ರಕಾರ “ಗಂಡು ಕೂಲಿ ಕಾರ್ಮಿಕನೊಬ್ಬ ಕಾರ್ಖಾನೆಗಳಲ್ಲಿ, ಹೊಲಗಳಲ್ಲಿ ಅತ್ಯಂತ ಕಶ್ಟಕರವಾದ ಕೆಲಸವನ್ನು ನಿಬಾಯಿಸುವುದರಿಂದ ಆತನಿಗೆ ಕನಿಶ್ಟ 2700 ಕ್ಯಾಲೋರಿಯಷ್ಟು ಆಹಾರ ಬೇಕಾಗುತ್ತದೆ. ಅದೇ ಬಗೆಯಲ್ಲಿ ಹೆಣ್ಣಾಳಿಗೆ ಕನಿಶ್ಟ 2235 ಕ್ಯಾಲೋರಿ ಆಹಾರ ಬೇಕಾಗುತ್ತದೆ. ಗಣಿಗಳಲ್ಲಿ ದುಡಿಯುವ ಕಾರ್ಮಿಕರಿಗೆ ಕನಿಶ್ಟ 3550 ಕ್ಯಾಲೋರಿ ಆಹಾರ ಬೇಕಾಗುತ್ತದೆ. ಮೇಲ್ಕಾಣಿಸಿದ ಕ್ಯಾಲೋರಿಯ ಮಟ್ಟವೇನಾದರೂ ಒಂದು ಅಂಕೆಯಷ್ಟು ಕಡಿಮೆಯಾದರೂ ಸಹ ಆ ವ್ಯಕ್ತಿಯು ಅನಾರೋಗ್ಯಕ್ಕೆ ತುತ್ತಾಗುತ್ತಾನೆ ಮತ್ತು ಶೀಘ್ರದಲ್ಲಿಯೇ ಸಾವಿಗೆ ಬಲಿಯಾಗುತ್ತಾನೆ” ಎಂದು ಮಾರ್ಮಿಕವಾಗಿ ವಿವರಿಸುತ್ತದೆ. ಆದರೆ ಭಾರತದಲ್ಲಿ ಶ್ರಮಿಕರು ಮೇಲೆ ವಿವರಿಸಿದ ಕ್ಯಾಲೋರಿಗಳ ಅರ್ದದಶ್ಟು ಸಹ ಸೇವಿಸುತ್ತಿಲ್ಲ. ಅಪೌಶ್ಟಿಕತೆಯಿಂದ ಬಳಲುತ್ತಿದ್ದಾರೆ. ಎಲ್ಲಾ ಬಗೆಯ ಪೋಷಕಾಂಶಗಳು, ಬಟ್ಟೆ, ಮನೆ ಮುಂತಾದ ಕನಿಶ್ಟ ಅವಶ್ಯಕತೆಗಳಿಗಾಗಿ ಪ್ರತಿ ವ್ಯಕ್ತಿಯ ಮಾಸಿಕ ಕನಿಶ್ಟ ಆದಾಯವೇನು ಎಂದು ಇಂದಿಗೂ ನಿರ್ದರಿಸಲು ಪ್ರಬುತ್ವವು ಸೋತಿದೆ. ಆದರೂ 10000 ಕಲ್ಯಾಣ ಯೋಜನೆಗಳಿವೆ!!

ಇಂದಿರಾ ಕ್ಯಾಂಟೀನ್ ಎಂಬ ಬಡವರ ಬಂಧು

ಆದರೆ ಈ ಎಲ್ಲಾ ವಂಚನೆ, ಕುತಂತ್ರದ ನಡುವೆ ನಿಜಕ್ಕೂ ಜನಪರವಾದ, ನಿಸ್ವಾರ್ಥ ಯೋಜನೆಯೆಂದರೆ ಅದು ಇಂದಿರಾ ಕ್ಯಾಂಟೀನ್. ದಿನಕ್ಕೆ 56-80 ರೂ ಗಳಿಸಲೂ ಸಹ ಆಶಕ್ತರಾದ ಬಡಜನರಿಗೋಸ್ಕರ ದಿನಕ್ಕೆ ಒಂದೊತ್ತು ಫಲಾಹಾರಕ್ಕೆ 5 ರೂ., ಎರಡೊತ್ತು ಊಟಕ್ಕೆ 20 ರೂನಂತೆ ಒಟ್ಟು 35 ರೂ. ಬೆಲೆ ನಿಗದಿಪಡಿಸಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು 15, ಆಗಸ್ಟ್ 2017ರಂದು ಸಬ್ಸಿಡಿ ರೂಪದ ’ಇಂದಿರಾ ಕ್ಯಾಂಟೀನ್ ‘ಎನ್ನುವ ಮಹತ್ವದ ಕಲ್ಯಾಣ ಯೋಜನೆ ಆರಂಬಿಸಿದರು. ಇಲ್ಲಿ ಆಹಾರ ತಯಾರಿಕೆ ಮತ್ತು ಪೂರೈಕೆಗೆ ಹೊರಗುತ್ತಿಗೆ ನೀಡಲಾಗಿದೆ. ಆರಂಬದಲ್ಲಿ ಇಂದಿರಾ ಕ್ಯಾಂಟೀನ್ ಕೇವಲ ನಗರಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಕ್ರಮೇಣ ಜನಪ್ರಿಯತೆ ಗಳಿಸತೊಡಗಿದ ನಂತರ ಇದನ್ನು ಜಿಲ್ಲೆಗಳಿಗೂ ವಿಸ್ತರಿಸಲಾಯಿತು.

ಇದೇ ಸಂದರ್ಬದಲ್ಲಿ ಬ್ರಶ್ಟಾಚಾರದ ಆರೋಪಗಳೂ ಸುದ್ದಿಯಾಯಿತು. ಆದರೆ ವಾಸ್ತವದಲ್ಲಿ ಇಂದಿರಾ ಕ್ಯಾಂಟೀನ್ ಯೋಜನೆಯು ಅತ್ಯಂತ ಕಡಿಮೆ ಖರ್ಚಿನಲ್ಲಿ ಬಡವರ ಹಸಿವು ತಣಿಸುತ್ತದೆ ಎನ್ನುವ ಸತ್ಯ ಮಾತ್ರ ಬೆಳಕಿನಂತೆ ಸ್ಪಶ್ಟವಾಗಿತ್ತು. ಬದುಕನ್ನು ಹುಡುಕಿಕೊಂಡು ಅಜ್ಞಾತ ನಗರಕ್ಕೆ ವಲಸೆ ಬಂದ ಲಕ್ಷಾಂತರ ಬಡ ಕೂಲಿ ಕಾರ್ಮಿಕರು ಅಸಂಘಟಿತರಾಗಿರುತ್ತಾರೆ. ಅವರಿಗೆ ಕನಿಶ್ಟ ವೇತನವೂ ದೊರಕುವುದಿಲ್ಲ. ಮುಖ್ಯವಾಗಿ ನಗರದಲ್ಲಿನ ಬಡತನಕ್ಕೆ ಅನೇಕ ಮಗ್ಗಲುಗಳಿವೆ. ಇಲ್ಲಿ ಕೇವಲ ಊಟ ಮಾತ್ರವಲ್ಲ, ಆರೋಗ್ಯ, ಶಿಕ್ಷಣ, ಜೀವನೋಪಾಯ, ಮನೆ, ನೀರು, ಶೌಚಾಲಯಗಳಿಗೂ ಕೊರತೆಯಿದೆ. ರಾಶ್ಟ್ರೀಯ ಮಟ್ಟದ ಸಮೀಕ್ಷೆಯ ಪ್ರಕಾರ ವಲಸೆ ಕುಟುಂಬಗಳಿಗೆ ಪಡಿತರ ವ್ಯವಸ್ಥೆಯ ಮೂಲಕ ಶೇ. 13 ಪ್ರಮಾಣದಲ್ಲಿ ಅಕ್ಕಿ, ಶೇ.6 ಪ್ರಮಾಣದಲ್ಲಿ ಗೋದಿಯ ಲಬ್ಯತೆಯಿದೆ. ಅಂದರೆ ಈ ಹಸಿವಿನ ಕರಾಳತೆಯನ್ನು ಊಹಿಸಿ. ಇಂತಹ ಬಿಕ್ಕಟ್ಟಿನಲ್ಲಿ ತಮ್ಮ ಹಸಿವಿಗೆ ಎರಡು ತುತ್ತು ಅನ್ನ ಕೊಡುವ ಇಂದಿರಾ ಕ್ಯಾಂಟೀನ್ ಎಂಬ ಸಂಜೀವಿನಿಯ ಬಗ್ಗೆ ವಲಸೆ ಕೂಲಿ ಕಾರ್ಮಿಕರಿಗೆ ಅಬಿಮಾನವಿತ್ತು.

ಅನೇಕ ದಿನಗಳ ಕಾಲ ಹಸಿವಿನಿಂದ ಮಲಗುತ್ತಿದ್ದ ದಿನಗಳು ಇನ್ನಿಲ್ಲ ಎನ್ನುವ ಸಮಾದಾನಪಟ್ಟಿದ್ದರು. ನಿರ್ಗತಿಕತೆಯ ಕರಾಳತೆಯನ್ನು ಅನುಬವಿಸಿದ ವಲಸಿಗರಿಗೆ ತಮ್ಮ ಮಕ್ಕಳು ಹಸಿವಿನಿಂದ ನರಳುವುದನ್ನು ತಪ್ಪಿಸಿದ ಇಂದಿರಾ ಕ್ಯಾಂಟೀನ್ ಯೋಜನೆಯ ಜೀವಪರತೆ, ಮಾನವೀಯತೆ ಕುರಿತು ಕೃತಜ್ಞತೆಯಿತ್ತು. ಈ ಕ್ಯಾಂಟೀನ್‌ಗಳು ಜೊತೆಗೆ ಆಟೋ ಚಾಲಕರು, ವಿದ್ಯಾರ್ಥಿಗಳು ಒಳಗೊಂಡಂತೆ ಲಕ್ಷಾಂತರ ಜನರ ಹಸಿವನ್ನು ನೀಗಿಸುತ್ತಿದ್ದವು. ಈ ಯೋಜನೆಯಲ್ಲಿ ಆಹಾರ ಮತ್ತು ಪೌಶ್ಟಿಕತೆಯ ನಡುವೆ ಅಂತರವಿದೆ. ಈ ಯೋಜನೆಗೆ ಅನುದಾನವನ್ನು ಹೆಚ್ಚಿಸುವುದರ ಮೂಲಕ ಪ್ರೊಟೀನ್, ವಿಟಮಿನ್‌ಯುಕ್ತ ಆಹಾರವನ್ನು ಕೊಡುವುದಕ್ಕೆ ರಾಜಕೀಯ ಇಚ್ಚಾಶಕ್ತಿಯ ಅಗತ್ಯವಿದೆ. ತಮ್ಮ ಸರಕಾರದ ಮಿತಿಗಳು ಮತ್ತು ಬ್ರಶ್ಟಾಚಾರದ ಆರೋಪಗಳ ನಡುವೆಯೂ ಸಿದ್ದರಾಮಯ್ಯನವರು ಇಂದಿರಾ ಕ್ಯಾಂಟೀನ್ ಎನ್ನುವ ಯೋಜನೆಯ ಮೂಲಕ ಇಲ್ಲಿ ಮಾನವೀಯತೆ ಮತ್ತು ಕಾರುಣ್ಯವು ಇನ್ನೂ ಉಸಿರಾಡುತ್ತಿದೆ ಎನ್ನುವ ನಂಬಿಕೆ ಮೂಡಿಸಿದರು. ಇಲ್ಲಿ ಸಿದ್ದರಾಮಯ್ಯನವರ ಪ್ರಾಮಾಣಿಕತೆ ಮತ್ತು ಬದ್ದತೆಯನ್ನು ಶಂಕಿಸಲು ಸಾದ್ಯವೇ ಇಲ್ಲ.

ಆದರೆ ಜುಲೈ 2019ರಂದು ವಂಚನೆ, ಪಕ್ಷಾಂತರ, ಆಪರೇಶನ್ (ಕ)ಮಲದ ಮೂಲಕ ಅದಿಕಾರಕ್ಕೆ ಬಂದ ಯಡಿಯೂರಪ್ಪನವರ ಸರಕಾರಕ್ಕೆ ಇಂದಿರಾ ಕ್ಯಾಂಟೀನ್‌ನ ಜನಪ್ರಿಯತೆ ನುಂಗಲಾರದ ತುತ್ತಾಗಿತ್ತು. ಈ ವಿಶಯದಲ್ಲಿ ಅಮಾನವಿಯತೆಯಿಂದ ವರ್ತಿಸಿದ ಬಿಜೆಪಿ ಶಾಸಕರು, ಮಂತ್ರಿಗಳು ಇಂದಿರಾ ಕ್ಯಾಂಟೀನ್ ಮುಚ್ಚುವ ಹೇಳಿಕೆಗಳನ್ನು ಕೊಡಲಾರಂಬಿಸಿದಾಗ ಸ್ವತಃ ಜನರೇ ಬಿಜೆಪಿ ಪಕ್ಷದ ದುಶ್ಟತನವನ್ನು ವಿರೋದಿಸಿದರು. ಆಗಸ್ಟ್ 2019ರಲ್ಲಿ ಬಿಬಿಎಂಪಿಯು 173 ಇಂದಿರಾ ಕ್ಯಾಂಟೀನ್ ಮತ್ತು 18 ಮೊಬೈಲ್ ಕ್ಯಾಂಟೀನ್‌ಗಳನ್ನು ಜೀವಂತವಾಗಿಡಲು 210 ಕೋಟಿಯ ಅನುದಾನದ ಬೇಡಿಕೆ ಮಂಡಿಸಿತು.

ಆದರೆ ಯಡಿಯೂರಪ್ಪ ಮತ್ತು ಇತರ ಸಚಿವರು ಇಂದಿರಾ ಕ್ಯಾಂಟೀನ್‌ನ ಆಡಳಿತದಲ್ಲಿ ಭಾರಿ ಬ್ರಶ್ಟಾಚಾರ ನಡೆದಿದೆ ಸಮಗ್ರ ತನಿಖೆಯಾಗಬೇಕು ಮತ್ತು ಅಲ್ಲಿಯವರೆಗೂ ಇದನ್ನು ನಡೆಸುವ ಬರವಸೆ ಕೊಡಲು ಸಾದ್ಯವಿಲ್ಲ ಎಂದು ಹೇಳಿಕೆ ಕೊಡಲಾರಂಬಿಸಿದರು. ತೂಕಡಿಸುವವನಿಗೆ ಹಾಸಿಗೆ ಹಾಸಿ ಕೊಟ್ಟಂತೆ, ಈ ಪೆಂಡಮಿಕ್‌ಗೆ ಕಾಯುತ್ತಿದ್ದರೋ ಎನೋ ಎಂಬಂತೆ, ಕೋವಿಡ್ ಕಾಯಿಲೆ ಸಂದರ್ಬದಲ್ಲಿ ಎಪ್ರಿಲ್ 2020ರಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನು ಸುರಕ್ಷತೆಯ ದೃಶ್ಟಿಯಿಂದ ಮುಚ್ಚಲಾಯಿತು. ಆದರೆ ಸಾರ್ವಜನಿಕರ ಮತ್ತು ಪ್ರಗತಿಪರ ಸಂಘಟನೆಗಳ ಒತ್ತಾಯದ ಮೇರೆಗೆ ಒಲ್ಲದ ಮನಸ್ಸಿನಿಂದ ಪುನಃ ಆರಂಬಿಸಿದರು. ಆದರೆ ಕೋವಿಡ್ ಸಂದರ್ಬದಲ್ಲಿ ಕ್ಯಾಂಟೀನ್ ನಿರ್ವಹಣೆಯು ಅವ್ಯವಸ್ಥೆಯಿಂದ ಕೂಡಿತ್ತು. ಸರಿಯಾದ ಊಟ ಸಿಗುತ್ತಿರಲಿಲ್ಲ. ಇದನ್ನು ನಡೆಸಬಾರದು ಎಂದು ಹಠ ತೊಟ್ಟಿರುವ ಬಿಜೆಪಿ ಪಕ್ಷವು ಕಳೆದ ಮೂರು ಬಜೆಟ್‌ನಲ್ಲಿ ಈ ಯೋಜನೆಗೆ ಅನುದಾನ ಒದಗಿಸಿಲ್ಲ.

ಬಿಜೆಪಿ ಪಕ್ಷದ ಈ ದ್ರೋಹದ ನಿಲುವನ್ನು ಸಿದ್ದರಾಮಯ್ಯ ವಿರೋದಿಸಿದರು. ಆಶ್ಚರ್ಯವೆಂದರೆ ಬೆರಳೆಣಿಕೆಯಶ್ಟು ಶಾಸಕರನ್ನು ಹೊರತುಪಡಿಸಿ ಕಾಂಗ್ರೆಸ್ಸಿಗರು ಇಂದಿರಾ ಕ್ಯಾಂಟೀನ್ ಮುಚ್ಚುವುದರ ವಿರುದ್ದ ಹೇಳಿಕೆ ಕೊಡಲಿಲ್ಲ. ಮುಗುಮ್ಮಾಗಿದ್ದರು. ಇವರ ಈ ವರ್ತನೆ ಬಿಜೆಪಿ ತನ್ನ ನಿಲುವಿಗೆ ಬದ್ದರಾಗಲು ಪರೋಕ್ಷವಾಗಿ ಸಹಕಾರ ದೊರಕಿಸಿದಂತಿತ್ತು. ಪ್ರೊ. ನರೇಂದ್ರ ಪಾಣಿಯವರು ’ಬಿಜೆಪಿ ಪಕ್ಷಕ್ಕೆ ಮೇಲ್ವರ್ಗ ಮತ್ತು ಮದ್ಯಮವರ್ಗದ ಬೆಂಬಲವಿದೆ. ಇವರು ಇಂದಿರಾ ಕ್ಯಾಂಟೀನ್ ಉಪಯೋಗಿಸುವುದಿಲ್ಲ. ಹೀಗಾಗಿ ಬಿಜೆಪಿ ಪಕ್ಷಕ್ಕೂ ಈ ಯೋಜನೆ ಕುರಿತು ಕಾಳಜಿಯಿಲ್ಲ. ಇದನ್ನು ಮುಚ್ಚಿದರೆ ಬಿಜೆಪಿ ತನ್ನ ಶಾಶ್ವತ ವೋಟು ಬ್ಯಾಂಕ್‌ನ್ನು ಕಳೆದುಕೊಳ್ಳುವುದಿಲ್ಲ. ಬದಲಿಗೆ ಈ ಯೋಜನೆಗೆ ಖರ್ಚು ಮಾಡುವ ಹಣವನ್ನು ತಮಗೆ ಲಾಭ ತಂದುಕೊಡುವ ಯೋಜನೆಗೆ ವಿನಿಯೋಗಿಸಲು ಬಯಸುತ್ತಾರೆ’ ಎಂದು ಹೇಳುತ್ತಾರೆ. ಬಿಜೆಪಿಯ ಹಠಮಾರಿತನವನ್ನು ಕಂಡಾಗ ಪಾಣಿಯವರ ಮಾತು ನಿಜವೆನಿಸುತ್ತದೆ. ಮಠಗಳಿಗೆ, ವಿವಿದ ಜಾತಿ ಪ್ರಾದಿಕಾರಗಳಿಗೆ ಒಂದೇ ಕಂತಿನಲ್ಲಿ 80.25 ಕೋಟಿ ಅನುದಾನ ಕೊಟ್ಟಿರುವ ಬಿಜೆಪಿ ಸರಕಾರಕ್ಕೆ ಬಡವರ ಹಸಿವು ನೀಗಿಸಲು ಹಣವಿಲ್ಲ ಎಂದರೆ ಇವರಿಗೆ ಯಾರು ಮುಖ್ಯ ಯಾರು ಅಮುಖ್ಯ ಎನ್ನುವುದು ಸ್ಪಶ್ಟವಾಗುತ್ತದೆ. ಆದರೆ ಮತದಾರರಿಗೆ?

ಬಡವರ ಹೆಸರಿನಲ್ಲಿ ಅದಿಕಾರಕ್ಕೆ ಬರುವ ಪಕ್ಷಗಳು ಅವರ ಒಂದೊತ್ತಿನ ಊಟಕ್ಕೂ ತಡೆ ಹಾಕುವಶ್ಟು ನೀಚತನ ಪ್ರದರ್ಶಿಸುತ್ತಿವೆ.

ಉಪಸಂಹಾರ

ನೈತಿಕವಾಗಿ ಬ್ರಶ್ಟಗೊಂಡ ಭಾರತದಂತಹ ಪ್ರಭುತ್ವಗಳಲ್ಲಿ, ಯೋಜನೆಗಳ ಅನುಶ್ಟಾನ ಪ್ರಕ್ರಿಯೆಯಲ್ಲಿ ಪ್ರಬುತ್ವದ ಪಾಲ್ಗೊಳ್ಳುವಿಕೆಯಲ್ಲಿನ ನಿರಾಸಕ್ತಿ, ಯೋಜನೆಗಳನ್ನು ಮೇಲ್ದರ್ಜೆಗೇರಿಸುವ ಬದ್ದತೆಯ ಕೊರತೆ, ಹಣಕಾಸಿನ ಅನುದಾನದ ಕೊರತೆ, ಬ್ರಶ್ಟಾಚಾರದ ಕಾರಣಗಳಿಂದ ಯಾವುದೇ ಕಲ್ಯಾಣ ಯೋಜನೆಯು ಸೊರಗುತ್ತದೆ. ಅದು ನಿರೀಕ್ಷಿತ ಫಲಿತಾಂಶ ನೀಡುವುದಿಲ್ಲ. ಇಂದಿರಾ ಕ್ಯಾಂಟೀನ್ ಯೋಜನೆಯ ವಿಫಲತೆಗೆ ಸಹ ಮೇಲಿನ ಈ ಎಲ್ಲಾ ಅಂಶಗಳು ಕಾರಣವಾಗಿವೆ. ಇಲ್ಲಿ ಪ್ರಗತಿಪರ ಸಂಘಟನೆಗಳು ಕೂಡಲೆ ಕಾರ್ಯಪ್ರವೃತ್ತರಾಗಬೇಕು. ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಸಕ್ರಿಯವಾಗಿ ಆರಂಬಿಸಲು ಚಳುವಳಿ ಪ್ರಾರಂಬಿಸಬೇಕು. ಇದು ಕೇವಲ ಒಂದು ಯೋಜನೆಯ ಪ್ರಶ್ನೆಯಲ್ಲ. ನೈತಿಕತೆ, ಮಾನವೀಯತೆಯ ಅಳಿವು ಉಳಿವಿನ ಪ್ರಶ್ನೆ. ಮುಶ್ಯತ್ವದ ಜೀವಂತಿಕೆಗೆ ’ಇಂದಿರಾ ಕ್ಯಾಂಟೀನ್‌ಗೆ ಜೀವ ಕೊಡಿ’ ಚಳುವಳಿ ಈ ಕ್ಷಣದ ತುರ್ತು ಅಗತ್ಯವಾಗಿದೆ.

ಬಿ. ಶ್ರೀಪಾದ ಭಟ್

ಬಿ. ಶ್ರೀಪಾದ ಭಟ್
ವೃತ್ತಿಯಲ್ಲಿ ಇಂಜಿನಿಯರ್ ಆದ ಬಿ.ಶ್ರೀಪಾದ್ ಭಟ್ ಹಿರಿಯ ಚಿಂತಕ, ಬರಹಗಾರ. ಹಲವು ಸಾಮಾಜಿಕ ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಸಮಾಜದ ಆಗುಹೋಗುಗಳಿಗೆ ನಿರಂತರ ಸ್ಪಂದಿಸುವ ಇವರು ಸಮಾನ ಶಿಕ್ಷಣಕ್ಕಾಗಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.


ಇದನ್ನೂ ಓದಿ: ಇಂದಿರಾ ಕ್ಯಾಂಟಿನ್ ಮುಚ್ಚದಂತೆ ಸಿಎಂಗೆ ಸಿದ್ದರಾಮಯ್ಯ ಆಗ್ರಹ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭಾ ಚುನಾವಣೆ: ಕರ್ನಾಟಕದ 14 ಕ್ಷೇತ್ರಗಳು ಸೇರಿದಂತೆ 13 ರಾಜ್ಯಗಳ 88 ಕ್ಷೇತ್ರಗಳಲ್ಲಿ ಇಂದು...

0
ಲೋಕಸಭಾ ಚುನಾವಣೆಯ ಹಿನ್ನೆಲೆ ಎರಡನೇ ಹಂತದಲ್ಲಿ ಕರ್ನಾಟಕ ಸೇರಿದಂತೆ ಒಟ್ಟು 13 ರಾಜ್ಯಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಎರಡನೇ ಹಂತದಲ್ಲಿ ಕರ್ನಾಟಕದ 14 ಕ್ಷೇತ್ರಗಳು ಸೇರಿದಂತೆ ದೇಶದ 88 ಕ್ಷೇತ್ರಗಳಿಗೆ ಬೆಳಿಗ್ಗೆ 7ರಿಂದ  ಮತದಾನ...