Homeಕರ್ನಾಟಕ"ಎಎಸ್‌ಐ ವಿರುದ್ಧ ವಿಕಲಾಂಗ ಚೇತನರ ಆಯೋಗ ಸ್ವಯಂಪ್ರೇರಿತ ಕೇಸ್ ದಾಖಲಿಸಲಿ"

“ಎಎಸ್‌ಐ ವಿರುದ್ಧ ವಿಕಲಾಂಗ ಚೇತನರ ಆಯೋಗ ಸ್ವಯಂಪ್ರೇರಿತ ಕೇಸ್ ದಾಖಲಿಸಲಿ”

ವಿಕಲಾಂಗ ಮಹಿಳೆಯ ಮೇಲೆ ಹಲ್ಲೆ ನಡೆಸಿರುವ ಟ್ರಾಫಿಕ್‌ ಪೊಲೀಸ್ ಅಧಿಕಾರಿಯ ವಿರುದ್ಧ ಸುಮೊಟೊ ಪ್ರಕರಣ ದಾಖಲಾಗಬೇಕು ಎಂದು ವಿಕಲಾಂಗ ಚೇತನರ ಪರ ಹೋರಾಡುತ್ತಿರುವ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.

- Advertisement -
- Advertisement -

ವಿಕಲಾಂಗ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಪೊಲೀಸ್ ಅಧಿಕಾರಿಯ ವಿರುದ್ಧ ಸುಮೊಟೊ (ಸ್ವಯಂಪ್ರೇರಿತ) ಪ್ರಕರಣ ದಾಖಲಿಸಿ ವಿಕಲಾಂಗ ಚೇತನರ ಮೇಲೆ ಆಗುತ್ತಿರುವ ಹಲ್ಲೆಗಳನ್ನು ತಡೆಯಬೇಕು ಎಂದು ವಿಕಲಾಂಗ ಚೇತನರ ಪರ ಹೋರಾಡುತ್ತಿರುವ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.

ಟೋಯಿಂಗ್‌ ವಾಹನದಲ್ಲಿ ಕುಳಿತ್ತಿದ್ದ ಎಎಸ್‌ಐಗೆ ಕಲ್ಲಿನಿಂದ ಹೊಡೆದ ಆರೋಪದ ಮೇಲೆ ವಿಕಲಾಂಗ ಮಹಿಳೆ ಮಂಜುಳಾ ವಿರುದ್ದ ಪ್ರಕರಣವನ್ನೂ ದಾಖಲಿಸಲಾಗಿದೆ. ಅಲ್ಲದೆ ಹಲಸೂರು ಗೇಟ್‌ ಟ್ರಾಫಿಕ್‌ ಪೊಲೀಸ್ ಠಾಣೆಯ ಎಎಸ್‌ಐ ನಾರಾಯಣ್‌  ವಿಕಲಾಂಗ ಮಹಿಳೆಗೆ ಸಾರ್ವಜನಿಕವಾಗಿ ಬೂಟು ಕಾಲಿನಿಂದ ಒದ್ದು ಅವ್ಯಾಚ್ಯ ಪದಗಳಿಂದ ನಿಂದಿಸಿರುವ ವಿಡಿಯೊ ವೈರಲ್ ಆಗಿತ್ತು.

ಎಎಸ್‌ಐ ನೀಡಿದ ದೂರಿನ ಆಧಾರದಲ್ಲಿ ಎಸ್.ಜೆ.ಪಾರ್ಕ್ ಪೊಲೀಸರು ವಿಕಲಾಂಗ ಮಹಿಳೆಯ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಎಎಸ್‌ಐ ನಾರಾಯಣ್‌ ಅವರು ಮಹಿಳೆಗೆ ಥಳಿಸಿರುವ ವಿಡಿಯೊ ವೈರಲ್‌ ಆದ ಬಳಿಕ ಸರ್ಕಾರ ಅವರನ್ನು ಅಮಾನತು ಮಾಡಲಾಗಿದೆ. ಆದರೆ ಅಮಾನತು ಆದ ಮಾತ್ರಕ್ಕೆ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಮುಖಂಡರು ಎಚ್ಚರಿಸಿದ್ದಾರೆ.

ನಾನುಗೌರಿ.ಕಾಂ ಜೊತೆ ಮಾತನಾಡಿದ ಕರ್ನಾಟಕ ರಾಜ್ಯ ವಿಕಲಚೇತನರ ರಕ್ಷಣಾ ಸಮಿತಿ ಕಾರ್ಯಾಧ್ಯಕ್ಷರಾದ  ಚಂದ್ರಶೇಖರ್ ಪುಟ್ಟಪ್ಪ, “ನಮ್ಮ ಅಂಗವಿಕಲರ ಆಯುಕ್ತಾಲಯದಲ್ಲಿ ದೂರು ದಾಖಲಿಸುತ್ತಿದ್ದೇನೆ. ಆ ಮಹಿಳೆ ಯಾರು ಎಂಬುದು ನನಗೆ ಪರಿಚಯವಿಲ್ಲ. ಆದರೆ ಮಾಧ್ಯಮಗಳಲ್ಲಿ ಬಂದ ವರದಿಯ ಪ್ರಕಾರ ಮಹಿಳೆ ಅಂಗವಿಕಲರಾಗಿದ್ದಾರೆ. ಇದರ ಪ್ರಕಾರ ಪ್ರಕರಣ ದಾಖಲಾಗಬೇಕು. ರಕ್ಷಕನ ವೇಶದಲ್ಲಿ ಮೃಗೀಯ ವರ್ತನೆ ತೋರಿದ ಅಧಿಕಾರಿಗೆ ಶಿಕ್ಷೆಯಾಗಬೇಕು” ಎಂದರು.

“ಬರೀ ಅಮಾನತು ಮಾಡಿದರೆ ಸಾಲದು, ಸೇವೆಯಿಂದ ವಜಾಗೊಳಿಸಬೇಕು. ಒಬ್ಬರಿಗೆ ಶಿಕ್ಷೆಯಾದರೆ ಹೀಗೆ ವರ್ತಿಸುವವರೆಲ್ಲಾ ಪಾಠ ಕಲಿಯುತ್ತಾರೆ. ಸಮಾಜಕ್ಕೆ ಒಂದು ಸಂದೇಶ ಹೋಗಬೇಕಾಗಿದೆ. ಆ ಮಹಿಳೆಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ. ಸೋಮವಾರ ವಿಕಲಾಂಗ ಚೇತನರ ಆಯುಕ್ತರನ್ನು ಭೇಟಿ ಮಾಡುತ್ತೇನೆ” ಎಂದು ಮಾಹಿತಿ ನೀಡಿದರು.

ಚಂದ್ರಶೇಖರ್ ಪುಟ್ಟಪ್ಪ

‘ಸ್ವಯಂ ಪ್ರೇರಿತ ದೂರು ದಾಖಲಿಸಲು ಒತ್ತಡ ಹಾಕುತ್ತೇವೆ’

ಕರ್ನಾಟಕ ಸರ್ಕಾರಿ, ಅರೆ ಸರ್ಕಾರಿ ಅಂಗವಿಕಲ ನೌಕರರ ಸಂಘದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಶಿವಪ್ಪ ರಾಥೋಡ್‌‌ ಪ್ರತಿಕ್ರಿಯಿಸಿ, “ಅಂಗವಿಕಲರನ್ನು ಪೊಲೀಸ್ ವಾಹನದಲ್ಲಿ ಕರೆದೊಯ್ಯುವಾಗ ಕೆಲವೊಂದು ನಿಯಮಗಳನ್ನು ಪೊಲೀಸರು ಪಾಲಿಸಬೇಕು. ಈ ಪ್ರಕರಣದಲ್ಲಿ ಅದು ಸಂಪೂರ್ಣ ಉಲ್ಲಂಘನೆಯಾಗಿದೆ. ಸಸ್ಪೆಂಡಾದರೆ ಸಾಲದು. ಅಂಗವಿಕಲರ ನ್ಯಾಯಾಲಯದಲ್ಲಿ ಸುಮೊಟೊ ಕೇಸ್ ದಾಖಲಿಸಲು ವಿಕಲಾಂಗ ಚೇತನರ ಆಯುಕ್ತರ ಮೇಲೆ ಒತ್ತಡ ಹಾಕುತ್ತೇವೆ. ಪೊಲೀಸ್ ಪೇದೆಯಿಂದ ಹಿಡಿದು ಉನ್ನತ ಅಧಿಕಾರಗಳವರೆಗೆ ಅಂಗವಿಕಲರ ಜೊತೆ ಸೌಹಾರ್ದಯುತವಾಗಿ ವರ್ತಿಸಬೇಕು. ಈ ಸಂಬಂಧ ಮೇಲಧಿಕಾರಿಗಳ ಮೂಲಕ ಆದೇಶ ಹೊರಡಿಸುತ್ತೇವೆ” ಎಂದು ತಿಳಿಸಿದರು.

ಶಿವಪ್ಪ ರಾಥೋಡ್‌‌

“ಈಗಾಗಲೆ ಈ ಕುರಿತು ಆದೇಶ ಬಂದಿದೆ. ಪೊಲೀಸ್‌ ಠಾಣೆಗೆ ಬರುವ ಅಂಗವಿಕಲರ ಜೊತೆ ನಮ್ರತೆಯಿಂದ ವರ್ತಿಸಬೇಕು ಎಂದು ಆದೇಶ ಹೇಳುತ್ತದೆ. ಸದರಿ ಪ್ರಕರಣದಲ್ಲಿನ ವಿಕಲಾಂಗ ಮಹಿಳೆ ಏಕೆ ಕಲ್ಲು ತಗೆದುಕೊಂಡು ಹೊಡೆದರು ಎಂಬ ಮಾಹಿತಿ ಇಲ್ಲ. ಕಲ್ಲಿನಲ್ಲಿ ಹೊಡೆಯಬಾರದಿತ್ತು, ಆದರೆ ಹೊಡೆದಿದ್ದಾರೆ. ತಾಳ್ಮೆ ತೆಗೆದುಕೊಳ್ಳಲಾಗದೆ ಹೊಡೆದಿದ್ದಾರೋ, ಮತ್ಯಾವ ಕಾರಣಕ್ಕೆ ಹೊಡೆದಿದ್ದಾರೋ ಗೊತ್ತಿಲ್ಲ. ಹಾಗೇನಾದರೂ ಕಲ್ಲಿನಲ್ಲಿ ಹೊಡೆದಿದ್ದರೆ ಕಾನೂನು ಪ್ರಕಾರ ಕ್ರಮ ಜರುಗಿಸಬಹುದಲ್ಲ. ಇನ್ನೊಬ್ಬರಿಗೆ ಹೊಡೆಯುವ ಅಧಿಕಾರ ಕೊಟ್ಟವರು ಯಾರು? ಅಂಗವಿಕಲ ಮಹಿಳೆಗೆ ತಿಳಿವಳಿಕೆ ಇಲ್ಲದಿರಬಹುದು. ಆದರೆ ತಿಳಿವಳಿಕೆ ಇರುವ ಎಎಸ್‌ಐ ಹೀಗೆ ಮಾಡಬಹುದೇ?” ಎಂದು ಬೇಸರ ವ್ಯಕ್ತಪಡಿಸಿದರು.

“ನಾವು ಪೊಲೀಸರ ವಿರುದ್ಧ ನಿಂತಿಲ್ಲ. ಆದರೆ ಆ ಮಹಿಳೆ ಕಲ್ಲು ತಗೆದುಕೊಂಡು ಹೊಡೆಯಲು ಕಾರಣ ಏನೆಂದು ತಿಳಿಯುತ್ತಿಲ್ಲ. ಇರುವೆ ಕಚ್ಚುವುದು ನಾವು ತುಳಿದಾಗ ಮಾತ್ರ. ಇಲ್ಲದಿದ್ದರೆ ತನ್ನಪಾಡಿಗೆ ತಾನು ಹೋಗುತ್ತಿರುತ್ತಿರುತ್ತದೆ. ಹೀಗಾಗಿ ಅಂಗವಿಕಲ ಮಹಿಳೆಯ ಮಾಹಿತಿಯನ್ನು ನಾವು ಟ್ರೇಸ್ ಮಾಡುತ್ತಿದ್ದೇವೆ. ಮಾನವ ಹಕ್ಕುಗಳ ಆಯೋಗ, ಮಹಿಳಾ ಆಯೋಗ, ಅಂಗವಿಕಲ ಆಯೋಗದವರು ಸುಮೊಟೊ ಪ್ರಕರಣವನ್ನು ಈಗಾಗಲೇ ದಾಖಲಿಸಬೇಕಿತ್ತು. ಆದರೆ ಅದರ ಕುರಿತು ಮಾಹಿತಿಯೇ ಇಲ್ಲ” ಎಂದು ವಿಷಾದಿಸಿದರು.

ಜಯಕರ್ನಾಟಕ ವಿಕಲ ಚೇತನರ ರಕ್ಷಣಾ ವೇದಿಕೆ ಅಧ್ಯಕ್ಷ ರವಿಕುಮಾರ್ ಗದಗಿನ್‌ ಮಾತನಾಡಿ, “ಅಂಗವಿಕಲರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿವೆ. ಕಲ್ಬುರ್ಗಿಯಲ್ಲಿ ಒಂದು ಪ್ರಕರಣ ನಡೆದಿತ್ತು. ತನಗಾದ ಅನ್ಯಾಯವನ್ನು ಹೇಳಿಕೊಂಡ ವಿಕಲಚೇತನ ವ್ಯಕ್ತಿಯನ್ನು ಪೊಲೀಸರು ಶೋಷಿಸಿದ್ದರು. ಆತನಿಂದ ದುಡ್ಡು ಕಿತ್ತುಕೊಂಡಿದ್ದರು. ಲೋಕಾಯುಕ್ತದಲ್ಲಿ ಈ ಕುರಿತು ಪ್ರಕರಣ ದಾಖಲಿಸಿದ್ದೇನೆ” ಎಂದು ತಿಳಿಸಿದರು. ಜೊತೆಗೆ ತಾವು ನೀಡಿದ ದೂರುಗಳ ಮಾಹಿತಿಯನ್ನೂ ‘ನಾನುಗೌರಿ.ಕಾಂ’ ಜೊತೆ ಹಂಚಿಕೊಂಡರು.

ರವಿಕುಮಾರ್‌ ಗದುಗಿನ್‌

“ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ. ಆ ಮಹಿಳೆಗೆ ನ್ಯಾಯ ದೊರಕಿಸಬೇಕು. ಅಸಹಾಯಕರ ಮೇಲೆ ನೀವೇಕೆ ಶಕ್ತಿ ಪ್ರದರ್ಶನ ಮಾಡುತ್ತಿದ್ದೀರಿ? ಕೂಡಲೇ ಕ್ರಮ ಜರುಗಿಸಬೇಕು. ಸಸ್ಪೆಂಡ್‌ ಮಾಡಿದ ಮಾತ್ರಕ್ಕೆ ಪ್ರಕರಣ ಮುಗಿಯುವುದಿಲ್ಲ” ಎನ್ನುತ್ತಾರೆ ರವಿಕುಮಾರ್‌ ಗದುಗಿನ್‌.


ಇದನ್ನೂ ಓದಿರಿ: ಬೆಂಗಳೂರು: ವಿಕಲಾಂಗ ಮಹಿಳೆಯ ಮೇಲೆ ಟ್ರಾಫಿಕ್‌ ಎಎಸ್‌ಐ ಹಲ್ಲೆ; ಮಹಿಳೆಯ ಮೇಲೆಯೇ ಪ್ರಕರಣ ದಾಖಲು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಶೀಲ್ಡ್ ಅಡ್ಡ ಪರಿಣಾಮ: ‘ಬಿಜೆಪಿ’ ದೇಣಿಗೆಗಾಗಿ ‘ಜನರ ಜೀವ’ವನ್ನು ಪಣಕ್ಕಿಟ್ಟಿದೆ; ಅಖಿಲೇಶ್ ಯಾದವ್

0
ಕೋವಿಶೀಲ್ಡ್ ಲಸಿಕೆಯ "ಅಡ್ಡಪರಿಣಾಮಗಳ" ವಿವಾದದ ಮಧ್ಯೆ ಲಸಿಕೆ ತಯಾರಕರಿಂದ "ರಾಜಕೀಯ ದೇಣಿಗೆಗಳನ್ನು" ಪಡೆಯಲು 'ಬಿಜೆಪಿ' ಜನರ ಜೀವನವನ್ನು ಪಣಕ್ಕಿಟ್ಟಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ. ಈ ಕುರಿತು ಉನ್ನತ ಮಟ್ಟದ...