ರಾಜ್ಯದಲ್ಲಿ ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ತಯಾರಾಗುವ ಎಲ್ಲಾ ಕೈಗಾರಿಕೆ ಮತ್ತು ಗ್ರಾಹಕ ಉತ್ಪನ್ನಗಳ ಮೇಲೆ ಹೆಸರು ಮತ್ತು ಅವುಗಳ ಬಳಕೆಯ ಕುರಿತಾದ ನಿರ್ದೇಶನಗಳನ್ನು ಇತರೆ ಭಾಷೆಗಳ ಜೊತೆಗೆ ಕನ್ನಡದಲ್ಲಿಯೂ ಕಡ್ಡಾಯವಾಗಿ ಮುದ್ರಿಸುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ.
ಕನ್ನಡ ಭಾಷಾ ಸಮಗ್ರ ಅಭಿವೃದ್ದಿ ಅಧಿನಿಯಮ-2022ರ ಕಲಂ 17 (7) ರಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ರಾಜ್ಯದೊಳಗೆ ತಯಾರಿಸಿದ ಮತ್ತು ಮಾರಾಟವಾಗುವ ಎಲ್ಲಾ ಕೈಗಾರಿಕಾ ಮತ್ತು ಇತರೆ ಗ್ರಾಹಕ ಉತ್ಪನ್ನಗಳ ಹೆಸರು ಮತ್ತು ಅವುಗಳ ಬಳಕೆಯ ಕುರಿತಾದ ನಿರ್ದೇಶನಗಳು ಯಾವುದಾದರೂ ಇದ್ದಲ್ಲಿ ಯಾವುದೇ ಭಾಷೆಯ ಜೊತೆಗೆ ಕನ್ನಡದಲ್ಲಿ ಇರಬೇಕೆಂದು ಹೇಳಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಕಂಪನಿಗಳ ಉತ್ಪನ್ನಗಳ ಮೇಲೆ ಹಿಂದಿ-ಇಂಗ್ಲಿಷ್ ಮೆರೆದಾಡುತ್ತಿದೆ, ಕನ್ನಡ ಕಡ್ಡಾಯ ಯಾವಾಗ? ಎಂದು ಮಾಧ್ಯಮವೊಂದು ಗುರುವಾರ (ಫೆ.27) ವರದಿ ಪ್ರಕಟಿಸಿತ್ತು.
ಕನ್ನಡ ಭಾಷಾ ಸಮಗ್ರ ಅಭಿವೃದ್ದಿ (ತಿದ್ದುಪಡಿ) ವಿಧೇಯಕ -2024 ಅನ್ನು ಫೆಬ್ರವರಿ 15, 2024ರಂದು ವಿಧಾನಸಭೆ ಅಂಗೀಕರಿಸಿದೆ. ಆ ಬಳಿಕ ನಾಮಫಲಕಗಳ ಒಟ್ಟಾರೆ ವಿಸ್ತೀರ್ಣದಲ್ಲಿ ಕನ್ನಡ ಭಾಷೆಯನ್ನು ಮೇಲ್ಭಾಗದಲ್ಲಿ ಶೇಖಡ 60ರಷ್ಟು (60 ಕನ್ನಡ-40 ಇತರೆ ಭಾಷೆ) ಪ್ರದರ್ಶಿಸುವುದು ರಾಜ್ಯದಲ್ಲಿ ಕಡ್ಡಾಯವಾಗಿದೆ. ಆದರೆ, ಉತ್ಪನ್ನಗಳ ಮೇಲೆ ಕನ್ನಡ ಕಡ್ಡಾಯವಾಗುವುದು ಯಾವಾಗ ಎಂದು ವರದಿ ಪ್ರಶ್ನಿಸಿತ್ತು. ಈ ಬೆನ್ನಲೇ ಸರ್ಕಾರ ಸುತ್ತೋಲೆ ಹೊರಡಿಸಿದೆ.
ಕನ್ನಡ ಭಾಷಾ ಸಮಗ್ರ ಅಭಿವೃದ್ದಿ ಅಧಿನಿಯಮ-2022ರ ಕಲಂ 9ರಡಿ ಗೊತ್ತುಪಡಿಸಿ ಜಾರಿ ಪ್ರಾಧಿಕಾರಗಳು ಈ ಸೂಚನೆಗಳನ್ನು ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದ ಎಲ್ಲಾ ಕೈಗಾರಿಕಾ ಮತ್ತು ಗ್ರಾಹಕ ವಸ್ತುಗಳ ಉತ್ಪನ್ನಾದರರು ಕಟ್ಟು ನಿಟ್ಟಾಗಿ ಅನುಷ್ಠಾನಗೊಳಿಸುವ ಬಗ್ಗೆ ಮೇಲ್ವಿಚಾರಣೆ ಮಾಡುವಂತೆಯೂ ಸರ್ಕಾರ ಸೂಚಿಸಿದೆ.
ಉದ್ಯೋಗಿಗಳ ಸಾಮೂಹಿಕ ವಜಾ : ಇನ್ಫೋಸಿಸ್‌ಗೆ ಕ್ಲೀನ್ ಚಿಟ್ ಕೊಟ್ಟ ಕರ್ನಾಟಕ ಸರ್ಕಾರ ; ವರದಿ


