Homeಕರ್ನಾಟಕಎಕೆ-ಎಡಿ ಗೊಂದಲ ನಿವಾರಣೆ ಮುಂದಾದ ಸರ್ಕಾರ; ಜಾತಿ ಪ್ರಮಾಣ ಪತ್ರದಲ್ಲಿ 'ಪ್ರವರ್ಗ' ಉಲ್ಲೇಖಿಸುವಂತೆ ಆದೇಶ

ಎಕೆ-ಎಡಿ ಗೊಂದಲ ನಿವಾರಣೆ ಮುಂದಾದ ಸರ್ಕಾರ; ಜಾತಿ ಪ್ರಮಾಣ ಪತ್ರದಲ್ಲಿ ‘ಪ್ರವರ್ಗ’ ಉಲ್ಲೇಖಿಸುವಂತೆ ಆದೇಶ

- Advertisement -
- Advertisement -

ಒಳಮಿಸಲಾತಿ ಜಾರಿ ಸಂಬಂಧ ಜಸ್ಟೀಸ್ ಎಚ್‌.ಎನ್‌. ನಾಗಮೋಹನ್‌ ದಾಸ್ ಆಯೋಗಕ್ಕೆ ಸಮೀಕ್ಷೆ ಸಂದರ್ಭದಲ್ಲಿ ಮೂಲ ಜಾತಿ ತಿಳಿಸದೆ, ‘ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ’ ಎಂದು ಬರೆಸಿರುವವರು ಜಾತಿ ಪ್ರಮಾಣ ಪತ್ರ ಪಡೆಯುವಾಗ ‘ಪ್ರವರ್ಗ’ ನಮೂದಿಸಬೇಕು ಮತ್ತು ಒಮ್ಮೆ ಒಂದು ಗುಂಪಿನಲ್ಲಿ ಮೀಸಲಾತಿ ಸೌಲಭ್ಯ ಪಡೆದರೆ, ಅವರ ಇಡೀ ಕುಟುಂಬ ಮುಂದೆ ಅದೇ ಗುಂಪಿನಲ್ಲಿ ಮುಂದುವರಿಯಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ.

ಈ ಬಗ್ಗೆ ಸರ್ಕಾರ ಇಂದು ಆದೇಶ ಹೊರಡಿಸಿದ್ದು, “ರಾಜ್ಯದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿನ 101 ಜಾತಿಗಳನ್ನು ಒಳಮೀಸಲಾತಿಗಾಗಿ ಸಂವಿಧಾನದ ಅನುಚ್ಛೇಧ 15 ಮತ್ತು ಅನುಚ್ಛೇಧ 16 ರನ್ವಯ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಲು ಪ್ರವರ್ಗ- ಎ ರಲ್ಲಿ 16 ಜಾತಿಗಳು, ಪ್ರವರ್ಗ-ಬಿ ನಲ್ಲಿ 19 ಜಾತಿಗಳು ಮತ್ತು ಪ್ರವರ್ಗ-ಸಿ ನಲ್ಲಿ 63 ಜಾತಿಗಳನ್ನು ಸೇರಿಸಿ, ಮೂರು ಪ್ರವರ್ಗಗಳಾಗಿ ವರ್ಗೀಕರಿಸಿ, ಆದೇಶ ಹೊರಡಿಸಲಾಗಿದೆ. ಮುಂದುವರೆದು, ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಸಮುದಾಯಗಳನ್ನು ಪ್ರವರ್ಗ-ಎ ಮತ್ತು ಪ್ರವರ್ಗ-ಬಿ ನಲ್ಲಿ ಮೀಸಲಾತಿ ಸೌಲಭ್ಯವನ್ನು ಪಡೆಯಬಹುದೆಂದು ಆದೇಶಿಸಲಾಗಿದೆ. ಈ ಆದೇಶವನ್ನು ಅನುಷ್ಠಾನಗೊಳಿಸಲು ಕೆಲವೊಂದು ಸ್ಪಷ್ಟೀಕರಣ ನೀಡುವುದು ಅಗತ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿ ಅಭ್ಯರ್ಥಿಗಳು ಜಾತಿ ಪ್ರಮಾಣ ಪತ್ರ ಪಡೆಯುವುದಕ್ಕೆ ಕೆಲವು ವಿಧಾನ ಅನುಸರಿಸಬೇಕು” ಎಂದು ಹೇಳಿದೆ.

“ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಸಮುದಾಯಗಳನ್ನು ಹೊರತುಪಡಿಸಿ ಉಳಿದ 98 ಜಾತಿಗಳನ್ನು ಪ್ರವರ್ಗ- ಎ, ಪ್ರವರ್ಗ-ಬಿ ಮತ್ತು ಪ್ರವರ್ಗ -ಸಿ ಗಳಲ್ಲಿ ವರ್ಗೀಕರಿಸಲಾಗಿದೆ. ಈಗಾಗಲೇ 988 ಸಮುದಾಯದವರು ತಮ್ಮ ಜಾತಿ ಪ್ರಮಾಣ ಪತ್ರ ಪಡೆದಿರುತ್ತಾರೆ. ಈ 98 ಜಾತಿಗಳು ತಮ್ಮ ಜಾತಿಯನ್ನು ಸ್ಪಷ್ಟವಾಗಿ ತಿಳಿಸಿ, ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದಿರುವುದರಿಂದ  ಅವರುಅದೇ ಜಾತಿ ಪ್ರಮಾಣ ಪತ್ರವನ್ನು ಸಂಬಂಧಪಟ್ಟ ಪ್ರವರ್ಗದೊಂದಿಗೆ ಮೀಸಲಾತಿ ಸೌಲಭ್ಯ ಪಡೆಯಲು ಉಪಯೋಗಿಸಬಹುದು. ಆದ್ದರಿಂದ, ಸಂಬಂಧಪಟ್ಟ ಪ್ರಾಧಿಕಾರಿಗಳು ಈ ಜಾತಿ ಪ್ರಮಾಣ ಪತ್ರಗಳಿಗೆ ಉಲ್ಲೇಖ(1) ರ ಆದೇಶದಲ್ಲಿ ವರ್ಗೀಕರಿಸಿರುವಂತೆ ಆಯಾ ಜಾತಿಗಳಿಗೆ ಸಂಬಂಧಿಸಿದ ಪ್ರವರ್ಗವನ್ನು ಅಟಲ್‌ ಜೀ ಜನಸ್ನೇಹಿ ಕೇಂದ್ರದ ತಂತ್ರಾಂಶದಲ್ಲಿ ಅಳವಡಿಸಿಕೊಂಡು ಜಾತಿ. ಪ್ರಮಾಣ ಪತ್ರದಲ್ಲಿ ಜಾತಿ ನಮೂದಿಸುವ ಬಗ್ಗೆ ಅಗತ್ಯ ಕ್ರಮವಹಿಸಬೇಕು” ಎಂದು ಸರ್ಕಾರ ಆದೇಶ ಮಾಡಿದೆ.

“ಉದಾಹರಣೆಗೆ, ಅಭ್ಯರ್ಥಿಯು ಕೊರಚ ಎಂದು ಜಾತಿ ಪ್ರಮಾಣ ಪತ್ರ ಈಗಾಗಲೇ ಪಡೆದಿದ್ದು.ಅಟಲ್‌ ಜೀ ಜನಸ್ನೇಹಿ ಕೇಂದ್ರದವರು ಉಲ್ಲೇಖ(1)ರಲ್ಲಿನ ಆದೇಶದಂತೆ ಕೊರಚ ಸಮುದಾಯವನ್ನು ಪ್ರವರ್ಗ-ಸಿ ಯಲ್ಲಿ ವರ್ಗೀಕರಿಸಿರುವುದರಿಂದ ಜಾತಿ ಪ್ರಮಾಣ ಪತ್ರವನ್ನು ಕೊರಚ (ಪ್ರವರ್ಗ-ಸಿ) ಎಂದು ನೀಡಲು ತಂ೦ತ್ರಾಂಶದಲ್ಲಿ ಅಳವಡಿಸುವ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಅಭ್ಯರ್ಥಿಯು ಪರೆಯನ್‌, ಪರೆಯ ಎಂದು ಜಾತಿ ಪ್ರಮಾಣ ಪತ್ರ ಈಗಾಗಲೇ ಪಡೆದಿದ್ದು.ಅಟಲ್‌ ಜೀ ಜನಸ್ನೇಹಿ ಕೇಂದ್ರದವರು ಉಲ್ಲೆಖ(1)ರಲ್ಲಿನ ಆದೇಶದಂತೆ ಪರೆಯನ್‌, ಪರೆಯ ಸಮುದಾಯವನ್ನು ಪ್ರವರ್ಗ- ಬಿ ಯಲ್ಲಿ ವರ್ಗೀಕರಿಸಿರುವುದರಿಂದ ಜಾತಿ ಪ್ರಮಾಣ ಪತ್ರವನ್ನು ಪರೆಯನ್‌, ಪರೆಯ ಎಂದು ನೀಡಲು ತಂತ್ರಾಂಶದಲ್ಲಿ ಅಳವಡಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಹೇಳಲಾಗಿದೆ.

“ಈಗಾಗಲೇ ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಎಂದು ಜಾತಿ ಪ್ರಮಾಣ ಪತ್ರ ಪಡೆದವರು, ಸಂಬಂಧಿಸಿದ ಪ್ರವರ್ಗ-ಎ ಅಥವಾ ಪ್ರವರ್ಗ-ಬಿ ನಲ್ಲಿ ಮೀಸಲಾತಿ ಸೌಲಭ್ಯ ಪಡೆಯಬೇಕಾದಲ್ಲಿ ತಮ್ಮ ಮೂಲ ಜಾತಿ ಹಾಗೂ ಪ್ರವರ್ಗವನ್ನು ಸ್ಪಷ್ಟವಾಗಿ ನಮೂದಿಸಿ, ಅರ್ಜಿ ನಮೂನೆ -1 ರಲ್ಲಿ ಪ್ರಸ್ತುತ ಜಾರಿಯಲ್ಲಿರುವ ಪದ್ಧತಿಯಂತೆ ಆನ್‌ ಲೈನ್‌ ನಲ್ಲಿ ಅರ್ಜಿ ಸಲ್ಲಿಸಬೇಕು” ಎಂದು ಸರ್ಕಾರ ಸ್ಪಷ್ಟ ಸೂಚನೆ ನೀಡಿದೆ.

“ಅರ್ಜಿ ಸ್ವೀಕರಿಸಿದ ಪ್ರಾಧಿಕಾರಗಳು ಕರ್ನಾಟಕ ಅನುಸೂಚಿತ ಜಾತಿಗಳು ಹಾಗೂ ಅನುಸೂಚಿತ ಬುಡಕಟ್ಟುಗಳು ಮತ್ತು ಇತರೆ ಹಿ೦ದುಳಿದ ವರ್ಗಗಳ ಅಧಿನಿಯಮ 1990 ತಿದ್ದುಪಡಿ ಅಧಿನಿಯಮ 2024 ಮತ್ತು ನಿಯಮಗಳು 1992’ರ ಅನ್ವಯ ಪರಿಶೀಲಿಸಿ, ಅಭ್ಯರ್ಥಿಗಳ ಮೂಲ ಜಾತಿಯ ಬಗ್ಗೆ ಸ್ಮಳೀಯ ವಿಚಾರಣೆ ನಡೆಸಿ, ಮೂಲ ಜಾತಿಯನ್ನು ಖಾತರಿಪಡಿಸಿಕೊಂಡು ಜಾತಿ ಪ್ರಮಾಣ ಪತ್ರ ನೀಡಬೇಕು. ಉದಾಹರಣೆಗೆ, ಅಭ್ಯರ್ಥಿಯು ಆದಿ ಕರ್ನಾಟಕ ಎಂದು ಜಾತಿ ಪ್ರಮಾಣ ಪತ್ರ ಪಡೆದಿದ್ದು ಹಾಗೂ ಮೂಲ ಜಾತಿಯು ಹೊಲೆಯ ಎಂದು ಇದ್ದಲ್ಲಿ, ಜಾತಿ ಪ್ರಮಾಣ ಪತ್ರದಲ್ಲಿ ಆದಿ ಕರ್ನಾಟಕ (ಹೊಲೆಯ/ಪ್ರವರ್ಗ-ಬಿ) ಎಂದು ನಮೂದಿಸಿ ಜಾತಿ ಪ್ರಮಾಣ ಪತ್ರ ನೀಡಬೇಕು” ಎಂದು ಸರ್ಕಾರ ಸೂಚಿಸಿದೆ.

“ಅಭ್ಯರ್ಥಿಯು ಆದಿ ಕರ್ನಾಟಕ ಎಂದು ಜಾತಿ ಪ್ರಮಾಣ ಪತ್ರ ಪಡೆದಿದ್ದು ಹಾಗೂ ಮೂಲ ಜಾತಿಯು ಮಾದಿಗ ಎಂದು ಇದ್ದಲ್ಲಿ, ಜಾತಿ ಪ್ರಮಾಣ ಪತ್ರದಲ್ಲಿ ಆದಿ ಕರ್ನಾಟಕ (ಮಾದಿಗ/ಪ್ರವರ್ಗ- ಎ) ಎಂದು ನಮೂದಿಸಿ, ಜಾತಿ ಪ್ರಮಾಣ ಪತ್ರ ನೀಡಬೇಕು. ಉದಾಹರಣೆ, ಆದಿ ದ್ರಾವಿಡ ಮತ್ತು ಅದಿ ಆಮಧ್ರ ಅಭ್ಯರ್ಥಿಗಳು ಇದೇ ರೀತಿ ಜಾತಿ ಪ್ರಮಾಣ ಪತ್ರ ನೀಡಲು ಕ್ರಮವಹಿಸಬೇಕು. ಈ ಪ್ರಕ್ರಿಯೆಯು ಆದಿ ದ್ರಾವಿಡ, ಆದಿ ಆಂಧ್ರ ಮತ್ತು ಆದಿ ಕರ್ನಾಟಕ ಎಂದು ಜಾತಿ ಪ್ರಮಾಣ ಪತ್ರ ಪಡೆದವರಿಗೆ ಮಾತ್ರ ಅನ್ವಯಿಸುತ್ತದೆ” ಎಮದು ಸರ್ಕಾರ ಸ್ಪಷ್ಟನೆ ನೀಡಿದೆ.

“ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕಕ್ಕೆ ಸೇರಿದ ಇತರೆ ಮೂಲ ಜಾತಿಯನ್ನು ತಿಳಿಸದ ಅಭ್ಯರ್ಥಿಗಳು, ಪ್ರವರ್ಗ- ಎ ಅಥವಾ ಪ್ರವರ್ಗ- ಬಿ ಯನ್ನು ಆಯ್ಕೆ ಮಾಡಿಕೊಂಡು ಸ್ಪಷ್ಟವಾಗಿ ನಮೂದಿಸಿ, ಮುಚ್ಚಳಿಕೆ ಪತ್ರದೊಂದಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸ್ವೀಕರಿಸಿದ ಪ್ರಾಧಿಕಾರಗಳು ಕರ್ನಾಟಕ ಅನುಸೂಚಿತ ಜಾತಿಗಳು ಅನುಸೂಚಿತ ಬುಡಕಟ್ಟುಗಳು ಮತ್ತು ಇತರೆ ಹಿ೦ದುಳಿದ ವರ್ಗಗಳ ಅಧಿನಿಯಮದ ಅನ್ವಯ ಪರಿಶೀಲಿಸಿ, ಅಭ್ಯರ್ಥಿಗಳೂ ಪರಿಶಿಷ್ಟ ಜಾತಿಗೆ ಸೇರಿರುವ ಬಗ್ಗೆ ಖಾತರಿಪಡಿಸಿಕೊಮಡು ಅಭ್ಯರ್ಥಿ ಘೋಷಿಸಿರುವ ಪ್ರವರ್ಗವನ್ನು ನಮೂದಿಸಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡಬೇಕು” ಎಂದು ಹೇಳಿದೆ.

“ಉದಾಹರಣೆಗೆ ಅಭ್ಯರ್ಥಿಯು ಆದಿ ಕರ್ನಾಟಕ ಎ೦ದು ಜಾತಿ ಪ್ರಮಾಣ ಪತ್ರ ಪಡೆದಿದ್ದು ಅರ್ಜಿಯಲ್ಲಿ ಮೂಲ ಜಾತಿಯನ್ನು ತಿಳಿಸದೇ ಇದ್ದಲ್ಲಿ, ಜಾತಿ ಪ್ರಮಾಣ ಪತ್ರದಲ್ಲಿ ಆದಿ ಕರ್ನಾಟಕ (ಪ್ರವರ್ಗ-ಎ ಆಥವಾ ಪ್ರವರ್ಗ-ಬಿ) ಎಂದು ನಮೂದಿಸಿ ಜಾತಿ ಪ್ರಮಾಣ ಪತ್ರ ನೀಡುವುದು. ಆದಿ ದ್ರಾವಿಡ ಮತ್ತು ಅದಿ ಆಂಧ್ರ ಅಭ್ಯರ್ಥಿಗಳಿಗೆ ಇದೇ ರೀತಿ ಜಾತಿ ಪ್ರಮಾಣ ಪತ್ರ ನೀಡಲು ಕ್ರಮವಹಿಸುವುದು. ಈ ಪ್ರಕ್ರಿಯೆಯು ಆದಿ ದ್ರಾವಿಡ, ಆದಿ ಆಂಧ್ರ ಮತ್ತು ಆದಿ ಕರ್ನಾಟಕ ಎಂದು ಜಾತಿ ಪ್ರಮಾಣ ಪತ್ರ ಪಡೆದು ಮೂಲಜಾತಿಯನ್ನು ಅರ್ಜಿಯಲ್ಲಿ ತಿಳಿಸದೇ ಇರುವ ಅಭ್ಯರ್ಥಿಗಳಿಗೆ ಮಾತ್ರ ಅನಸ್ಪಯಿಸುತ್ತದೆ” ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

“ಅಭ್ಯರ್ಥಿಗಳು ಮೇಲಿನ ಕ್ರಮಸ೦ಖ್ಯೆಯಂತೆ ಆಯ್ಕೆ ಮಾಡಿಕೊಂಡು ಯಾವ ಪ್ರವರ್ಗದಲ್ಲಿ ಜಾತಿ ಪ್ರಮಾಣ ಪತ್ರ ಪಡೆದಿರುತ್ತಾರೆಯೋ ಅದೇ ಪ್ರವರ್ಗ ಅವರ ಕುಟುಂಬ ಶಾಶ್ವತವಾಗಿ ಮುಂದುವರೆಯುತ್ತದೆ. ಯಾವುದೇ ಕಾರಣಕ್ಕೂ ಬದಲಾವಣೆಗೆ ಅವಕಾಶವಿರುವುದಿಲ್ಲ” ಆದೇಶದಲ್ಲಿ ಖಚಿತಪಡಿಸಲಾಗಿದೆ.

ಒಳಮೀಸಲಾತಿ ಜಾರಿಗೆ ವಿಳಂಬ; ರಾಜಿನಾಮೆಗೆ ಆಗ್ರಹಿಸಿ ಸಮಾಜ ಕಲ್ಯಾಣ ಸಚಿವ ಮಹದೇವಪ್ಪ ಮನೆಗೆ ಮುತ್ತಿಗೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -