ಆಂಧ್ರಪ್ರದೇಶದ ಕೋಡೂರು ಗ್ರಾಮದ ತೆರೆದ ಮೈದಾನದಲ್ಲಿ ಎರಡು ಲಕ್ಷ ಕೆ.ಜಿ. ಗಾಂಜಾವನ್ನು ಸುಟ್ಟು ಹಾಕುವ ಮೂಲಕ ಆಂಧ್ರ ಪ್ರದೇಶ ಸರ್ಕಾರ ಗಮನ ಸೆಳೆದಿದೆ.
ರಾಜ್ಯದಲ್ಲಿ ಡ್ರಗ್ಸ್ ಹಾವಳಿಯನ್ನು ನಿರ್ಮೂಲನೆ ಮಾಡುವುದಕ್ಕೆ ಸರ್ಕಾರ ಮುಂದಾಗಿದ್ದು ‘ಆಪರೇಷನ್ ಪರಿವರ್ತನಾ’ದ ಭಾಗವಾಗಿ ಎರಡು ಲಕ್ಷ ಕೆ.ಜಿ. ಗಾಂಜಾವನ್ನು ಸುಡಲಾಗಿದೆ. ನಾಶಪಡಿಸಿದ ನಿಷೇಧಿತ ವಸ್ತುವಿನ ಮೌಲ್ಯ ಸುಮಾರು 500 ಕೋಟಿ ರೂಪಾಯಿ ಎಂದು ಪೊಲೀಸರು ತಿಳಿಸಿದ್ದಾರೆ. ಇಷ್ಟು ದೊಡ್ಡ ಪ್ರಮಾಣದ ಡ್ರಗ್ಸ್ ನಾಶಪಡಿಸಿರುವುದು ದೇಶದಲ್ಲೇ ಇದೇ ಮೊದಲು ಎಂದು ಪೊಲೀಸರು ಹೇಳಿದ್ದಾರೆ.
ವಿಶಾಖಪಟ್ಟಣದ ಅನಕಪಲ್ಲಿ ಮಂಡಲದಲ್ಲಿರುವ ಕೋಡೂರಿನ ಮೈದಾನದಲ್ಲಿ ಬೃಹತ್ ಮಟ್ಟದ ರಾಶಿಗಳನ್ನು ನಿರ್ಮಿಸಿ ಬೆಂಕಿ ಹಂಚಲಾಯಿತು. ಈ ಘಟನೆಯನ್ನು ಹಲವರು ಕುತೂಹಲ ಹಾಗೂ ಹಲವು ನಿರೀಕ್ಷೆಯಿಂದ ವೀಕ್ಷಿಸಿದರು.
ಸ್ಥಳದಲ್ಲಿದ್ದ ಪೋಲಿಸರು, ಪತ್ರಕರ್ತರು ಹಾಗೂ ಇತರರಿಗೆ ಏನಾದರೂ ಸಮಸ್ಯೆಯಾಗಬಹುದೇ ಎಂದು ಕುತೂಹಲಭರಿತರಾಗಿದ್ದರು. ಬೃಹತ್ ಹೊಗೆಯು ಅನೇಕರಿಗೆ ತಲೆನೋವನ್ನು ತಂದಿತು. ಆದರೆ ಅಂತಹ ಪರಿಣಾಮಗಳೇನೂ ಆಗಿಲ್ಲ ಎಂದು ‘ನ್ಯೂಸ್ ಮಿನಿಟ್’ ವರದಿ ಮಾಡಿದೆ.
Aerial shot of the massive haul of Ganja being burnt by AP police. Police destroyed 200 lac kgs of Ganja, estimated to be valued at Rs 500 crores! pic.twitter.com/984wIO0TYr
— Bala (@Bala__G) February 12, 2022
ಗಾಂಜಾ ಸುಟ್ಟಿದ್ದರ ಪರಿಣಾಮಗಳು ನಮಗೆ ಕಂಡುಬರಲಿಲ್ಲ. ಆದರೆ ಕೆಲವರಿಗೆ ಸ್ವಲ್ಪ ತಲೆ ನೋವು ಕಾಣಿಸಿಕೊಂಡಿದ್ದು, ಇದಕ್ಕೆ ಉರಿಯುತ್ತಿದ್ದ ಬೆಂಕಿ ಮತ್ತು ದಟ್ಟ ಹೊಗೆ ಕಾರಣ ಎನ್ನಬಹುದು ಎಂದು ಘಟನೆಯನ್ನು ವರದಿ ಮಾಡಿದ ವರದಿಗಾರರು ತಿಳಿಸಿದ್ದಾರೆ. ಗಾಂಜಾ ಹೊಗೆಯ ಪರಿಣಾಮವನ್ನು ಕಡಿಮೆ ಮಾಡಲು ಸಕ್ಕರೆ ಮತ್ತು ಕರ್ಪೂರವನ್ನು ಬಳಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
4 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಜನವಾಸವಿಲ್ಲದ ಕಾರಣ ಪೊಲೀಸರು ಕೋಡೂರ್ ಅನ್ನು ಆಯ್ಕೆ ಮಾಡಿದರು. ಸುಟ್ಟಾಗ ಬರುವ ಹೊಗೆಯಿಂದಾಗಿ ತಲೆನೋವು ಅಥವಾ ಮಾದಕತೆ ಉಂಟಾಗಬಹುದು ಎಂಬ ಕಾರಣದಿಂದ ಸುತ್ತಮುತ್ತಲಿನ ನಿವಾಸಿಗಳಿಗೆ ಮುನ್ನೆಚ್ಚರಿಕೆ ನೀಡಿ ಮನೆಯೊಳಗೆಯೇ ಇರುವಂತೆ ಸೂಚಿಸಲಾಗಿತ್ತು.
Some more videos of the ganja being burnt in AP pic.twitter.com/ytjycQD6Hr
— Bala (@Bala__G) February 12, 2022
ಆಪರೇಷನ್ ಪರಿವರ್ತನಾ ಕಾರ್ಯಾಚರಣೆಯನ್ನು ನವೆಂಬರ್ 1, 2021ರಂದು ಪ್ರಾರಂಭಿಸಲಾಯಿತು. ಈ ಕಾರ್ಯಾಚರಣೆಯ ಭಾಗವಾಗಿ ಇದುವರೆಗೆ, 47,986.934 ಕೆಜಿ ಗಾಂಜಾ ಮತ್ತು 46.41 ಲೀಟರ್ ಹಶಿಶ್ ಎಣ್ಣೆಯನ್ನು 314 ವಾಹನಗಳೊಂದಿಗೆ ವಶಪಡಿಸಿಕೊಳ್ಳಲಾಗಿದೆ. 577 ಪ್ರಕರಣಗಳನ್ನು ದಾಖಲಿಸಲಾಗಿದೆ ಮತ್ತು 1500 ಜನರನ್ನು ಬಂಧಿಸಲಾಗಿದೆ. 1985ರ ನಾರ್ಕೋಟಿಕ್ಸ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಆಕ್ಟ್ ಅಡಿಯಲ್ಲಿ ಗಾಂಜಾವನ್ನು ನಿಷೇಧಿಸಲಾಗಿದೆ. ಈ ಕಾಯಿದೆಯು ಗಾಂಜಾ ಮಾರಾಟ ಮತ್ತು ಖರೀದಿಯನ್ನು ನಿಷೇಧಿಸುತ್ತದೆ. 406 ತಂಡಗಳು ಆಪರೇಷನ್ ಪರಿವರ್ತನಾ ಭಾಗವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಒಡಿಶಾದ ಗಡಿಭಾಗದ ಜಿಲ್ಲೆಗಳಾದ ಶ್ರೀಕಾಕುಳಂ, ವಿಜಯನಗರ, ವಿಶಾಖಪಟ್ಟಣ ಮತ್ತು ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಗಾಂಜಾ ಬೆಳೆಯಲಾಗುತ್ತಿದೆ. ಒಡಿಶಾದ 23 ಜಿಲ್ಲೆಗಳು ಮತ್ತು ವಿಶಾಖಪಟ್ಟಣಂನ 11 ಮಂಡಲಗಳಲ್ಲಿ ನಿಷೇಧಿತ ಬೆಳೆ ಬೆಳೆಯುತ್ತಿರುವುದನ್ನು ಉಪಗ್ರಹ ಚಿತ್ರಗಳನ್ನು ಬಳಸಿ ಪೊಲೀಸರು ಪತ್ತೆ ಮಾಡಿದ್ದಾರೆ. ಆಪರೇಷನ್ ಪರಿವರ್ತನೆಯ ಭಾಗವಾಗಿ ಅಧಿಕಾರಿಗಳು 7,552 ಎಕರೆ ಗಾಂಜಾವನ್ನು ನಾಶಪಡಿಸಿದ್ದಾರೆ. ಇದರಲ್ಲಿ 400 ಎಕರೆ ಬೆಳೆಯನ್ನು ರೈತರೇ ನಾಶಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೆಚ್ಚಾಗಿ ಬುಡಕಟ್ಟು ಸಮುದಾಯಗಳು ಗಾಂಜಾವನ್ನು ಬೆಳೆಸುತ್ತಿರುವುದರಿಂದ, ಪೊಲೀಸರು ಸಾರ್ವಜನಿಕ ಜಾಗೃತಿ ಅಭಿಯಾನವನ್ನೂ ಮಾಡುತ್ತಿದ್ದಾರೆ. ಕಾರ್ಯಕ್ರಮದ ಆರಂಭದಿಂದಲೂ, 1,963 ಜಾಗೃತಿ ಅಭಿಯಾನಗಳನ್ನು ನಡೆಸಲಾಗಿದ್ದು, ಇದರಲ್ಲಿ 70,000 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದಾರೆ. ಗಾಂಜಾ ಹಾವಳಿ ತಡೆಯಲು ಪೊಲೀಸರು 120 ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿದ್ದಾರೆ.
ತೆಲಂಗಾಣ ಮತ್ತು ಕರ್ನಾಟಕದಂತಹ ನೆರೆಯ ರಾಜ್ಯಗಳು ಗಾಂಜಾವನ್ನು ನಿಯಂತ್ರಿಸದಿದ್ದಕ್ಕಾಗಿ ಅವರತ್ತ ಬೆರಳು ತೋರಿಸಿದ ನಂತರ ಆಂಧ್ರಪ್ರದೇಶವು ಡ್ರಗ್ಸ್ ವಿರುದ್ಧದ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ತೆಲಂಗಾಣ ಪೊಲೀಸರು ಡ್ರಗ್ಸ್ ವಿರುದ್ಧದ ಅಭಿಯಾನದ ಭಾಗವಾಗಿ ತಮ್ಮ ವ್ಯಾಪ್ತಿಯಲ್ಲಿ ಕೆಲವರನ್ನು ಬಂಧಿಸಿ ಆಂಧ್ರಪ್ರದೇಶ ಪೊಲೀಸರಿಗೆ ಮುಜುಗರ ಉಂಟು ಮಾಡಿದ್ದರು. ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದಲ್ಲಿ ರಾಜ್ಯವು ಡ್ರಗ್ ಹಬ್ ಆಗಿ ಬದಲಾಗುತ್ತಿದೆ ಎಂದು ರಾಜ್ಯದ ವಿರೋಧ ಪಕ್ಷದ ನಾಯಕ ಎನ್ ಚಂದ್ರಬಾಬು ನಾಯ್ಡು ಆರೋಪಿಸಿದ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ಅದರ ಭಾಗಿ ಎರಡು ಲಕ್ಷ ಕೆ.ಜಿ. ಗಾಂಜಾವನ್ನು ಸುಡಲಾಗಿದೆ.
ಇದನ್ನೂ ಓದಿರಿ: ವಿಶಾಖಪಟ್ಟಣಂ ಉಕ್ಕು ಕಾರ್ಖಾನೆ ಖಾಸಗೀಕರಣದ ವಿರುದ್ದ ಜೈಲ್ ಭರೋ ಚಳವಳಿ


