ಟ್ವಿಟ್ಟರ್ ಮಾಜಿ ಭದ್ರತಾ ಮುಖ್ಯಸ್ಥ ಪೀಟರ್ ಝಟ್ಕೊ ಅವರು ಟ್ವಿಟರ್ ಸಂಸ್ಥೆ ವಿರುದ್ಧ ದೂರು ನೀಡಿದ್ದು, ಭಾರತದ ಸರ್ಕಾರದತ್ತಲೂ ಬೊಟ್ಟು ಮಾಡಿದ್ದಾರೆ. ‘ಸರ್ಕಾರಿ ಏಜೆಂಟ್’ ಆಗಿರುವ ಮತ್ತು ಸೂಕ್ಷ್ಮ ಬಳಕೆದಾರರ ಡೇಟಾಗೆ ಪ್ರವೇಶ ಪಡೆದಿರುವ ವ್ಯಕ್ತಿಯನ್ನು ಸಾಮಾಜಿಕ ಮಾಧ್ಯಮ ಕಂಪನಿ ಟ್ವಿಟರ್‌ಗೆ ನೇಮಿಸಿಕೊಳ್ಳಲು ಭಾರತ ಸರ್ಕಾರ ಒತ್ತಾಯಿಸಿತು ಎಂದು ಅವರು ಆರೋಪಿಸಿದ್ದಾರೆ.
ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಕಮಿಷನ್‌ಗೆ ಕಳುಹಿಸಲಾದ 84-ಪುಟಗಳ ಕಡತದ ಕುರಿತು ಮಂಗಳವಾರ ಮಧ್ಯಾಹ್ನ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಈ ಆರೋಪಕ್ಕೆ ಸಂಬಂಧಿಸಿದಂತೆ ಸಾಕ್ಷಿ ಮತ್ತು ದೃಢೀಕರಣದ ಮಾಹಿತಿಯನ್ನು ಝಟ್ಕೊ ಅವರ ವಕೀಲರು ಸಲ್ಲಿಸಿದ್ದಾರೆ. ಅಮೆರಿಕದ ನ್ಯಾಯಾಂಗ ಇಲಾಖೆಯ ರಾಷ್ಟ್ರೀಯ ಭದ್ರತಾ ವಿಭಾಗಕ್ಕೆ ಮತ್ತು ಅಮೆರಿಕದ ಗುಪ್ತಚರ ಸಮಿತಿಗೆ ದೂರು ರವಾನೆಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ತನ್ನ ಸಹೋದ್ಯೋಗಿಗಳ ನಡುವೆ ‘ಮುಡ್ಜ್’ ಎಂದೇ ವ್ಯಾಪಕವಾಗಿ ಮೆಚ್ಚುಗೆ ಪಡೆದ ಹ್ಯಾಕರ್ ಝಟ್ಕೊ, “238 ಮಿಲಿಯನ್‌ನಷ್ಟು ದೈನಂದಿನ ಬಳಕೆದಾರರನ್ನು ಸರಿಯಾಗಿ ರಕ್ಷಿಸಲು ಸಾಧ್ಯವಾಗದ, ಅಸ್ತವ್ಯಸ್ತವಾಗಿರುವ ಕಂಪನಿ ಟ್ವಿಟರ್” ಎಂಬುದಾಗಿ ತಮ್ಮ ದೂರಿನಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಈ ಎಲ್ಲ ವಿಷಯಗಳನ್ನು ತನ್ನ ದಾಖಲೆಯಲ್ಲಿ ಉಲ್ಲೇಖಿಸಿದ್ದಾರೆ.
ಸಲ್ಲಿಸಲಾಗಿರುವ ದಾಖಲೆಯಲ್ಲಿ ‘ವಿದೇಶಿ ಗುಪ್ತಚರದಿಂದ ಒಳಪ್ರವೇಶಿಕೆ ಮತ್ತು ಪ್ರಜಾಪ್ರಭುತ್ವಕ್ಕೆ ಅಪಾಯ’ ಎಂಬ ಶೀರ್ಷಿಕೆಯ ವಿಭಾಗವಿದ್ದು, ಟ್ವಿಟರ್ ಪ್ರಜಾಪ್ರಭುತ್ವಕ್ಕೆ ತೊಂದರೆ ನೀಡಿರುವ ಅನೇಕ ಸಂಚಿಕೆಗಳನ್ನು ಝಟ್ಕೊ ಅಲ್ಲಿ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.
“ಸರ್ಕಾರಿ ಏಜೆಂಟ್‌ಗಳಾಗಿರುವ ನಿರ್ದಿಷ್ಟ ವ್ಯಕ್ತಿ(ಗಳನ್ನು) ಟ್ವಿಟರ್‌ಗೆ ನೇಮಿಸಿಕೊಳ್ಳುವಂತೆ ಭಾರತೀಯ ಸರ್ಕಾರವು ಒತ್ತಾಯಿಸಿತು. ಆ ನಿರ್ದಿಷ್ಟ ವ್ಯಕ್ತಿಗಳು (ಟ್ವಿಟರ್‌ನ ಮೂಲಭೂತ ದೋಷಗಳ ಕಾರಣದಿಂದಾಗಿ) ಅಪಾರ ಪ್ರಮಾಣದ ಟ್ವಿಟರ್ ಬಳಕೆದಾರರ ಸೂಕ್ಷ್ಮ ಡೇಟಾಗೆ ಪ್ರವೇಶ ಪಡೆದಿರುತ್ತಾರೆ” ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
“ಯಾವುದೇ ನಿರ್ಬಂಧವಿಲ್ಲದೆ ಭಾರತೀಯ ಸರ್ಕಾರಿ ಏಜೆಂಟ್, ಕಂಪನಿಯ ಬಳಕೆದಾರರ ಡೇಟಾಗೆ ನೇರ ಪ್ರವೇಶವನ್ನು ಪಡೆಯಲು ಅನುಮತಿ ನೀಡಲಾಗಿದೆ. ಟ್ವಿಟರ್ ಸಂಸ್ಥೆ ತನ್ನ ಬಳಕೆದಾರರಿಗೆ ಖಚಿತಪಡಿಸಿದ ಬದ್ಧತೆಯನ್ನು ಟ್ವಿಟರ್ ಅಧಿಕಾರಿಗಳು ಉಲ್ಲಂಘಿಸಿದ್ದಾರೆ” ಎಂದು ಗಂಭೀರವಾದ ಆರೋಪವನ್ನು ಅವರು ಮಾಡಿದ್ದಾರೆ.
ಇದನ್ನೂ ಓದಿರಿ: ಚಕ್ರವರ್ತಿ ಸೂಲಿಬೆಲೆಯಿಂದ ಆಯುಧ ತರಬೇತಿ ಆರೋಪ: ಟ್ವಿಟರ್‌ನಲ್ಲಿ ಕನ್ನಡಿಗರ ಆಕ್ಷೇಪ
ವಾಷಿಂಗ್ಟನ್ ಪೋಸ್ಟ್ ತನ್ನ ವರದಿಯಲ್ಲಿ ವಿಷಯಕ್ಕೆ ಸಂಬಂಧಿಸಿದ ವ್ಯಕ್ತಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿದೆ. ಝಕ್ಟೋ ಮಾಡಿರುವ ಆರೋಪಗಳನ್ನು ಅವರು ಕೂಡ ಅಲ್ಲಗಳೆದಿಲ್ಲ. ನೇಮಕಗೊಂಡ ಉದ್ಯೋಗಿ ಬಹುಶಃ ಸರ್ಕಾರಿ ಏಜೆಂಟ್ ಎಂಬ ಅಂಶವನ್ನು ಅವರೂ ಪ್ರಸ್ತಾಪಿಸಿದ್ದಾರೆ.
‘ಸ್ಕ್ವೀಜಿಂಗ್ ಲೋಕಲ್ ಸ್ಟಾಫ್’ ಎಂಬ ಶೀರ್ಷಿಕೆಯ ಮತ್ತೊಂದು ವಿಭಾಗದಲ್ಲಿ ಮಾಜಿ ಟ್ವಿಟರ್ ಭದ್ರತಾ ಮುಖ್ಯಸ್ಥರು ಮತ್ತಷ್ಟು ಸಂಗತಿಗಳನ್ನು ಪ್ರಸ್ತಾಪಿಸಿದ್ದಾರೆ. ಹತೋಟಿಯಾಗಿ ಬಳಸಬಹುದಾದ, ಸ್ಥಳೀಯ ಪೂರ್ಣ ಸಮಯದ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಟ್ವಿಟರ್ ಅನ್ನು ಭಾರತ ಸರ್ಕಾರ ಒತ್ತಾಯಿಸಿತು ಎಂದು ಆರೋಪಿಸಿದ್ದಾರೆ.


