ಪರಿಶಿಷ್ಟ ಜಾತಿಗಳ (ಎಸ್‌ಸಿ) ಒಳ ಮೀಸಲಾತಿ ವರದಿಯನ್ನು ರಾಜ್ಯ ಸರ್ಕಾರ ಸ್ವೀಕರಿಸಿದ್ದು, ಮೀಸಲಾತಿ ಜಾರಿ ಕುರಿತು ಆಗಸ್ಟ್ 16 ರಂದು ಸರ್ಕಾರ ವಿಶೇಷ ಸಚಿವ ಸಂಪುಟ ಸಭೆ ಕರೆದಿದೆ.
ಈ ಬಗ್ಗೆ ಇಂದು ಬೆಂಗಳೂರಿನಲ್ಲಿ ನಡೆದ ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದ್ದು, “ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣ ಕುರಿತು ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್ ನಾಗಮೋಹನ್ ದಾಸ ಅವರ ಆಯೋಗವನ್ನು ನೇಮಕ ಮಾಡಿದ್ದು, ವರದಿ ಸಲ್ಲಿಕೆಯಾಗಿದೆ. ಶ್ರಮವಹಿಸಿ ಕಡಿಮೆ ಸಮಯದಲ್ಲಿ ವೈಜ್ಞಾನಿಕವಾದ ಅಧ್ಯಯನ ಮಾಡುವ ಮೂಲಕ ಶೇ 95 ರಷ್ಟು ಸಮುದಾಯದ ಜನಸಂಖ್ಯೆಯನ್ನು ಸಮೀಕ್ಷೆಗೆ ಒಳಪಡಿಸಿ ವರದಿ ಸಲ್ಲಿಸಿದ್ದಾರೆ. ಸದರಿ ವರದಿಯನ್ನು ಎಲ್ಲ ಸಚಿವರಿಗೆ ನೀಡಲಾಗಿದೆ. ಸಚಿವ ಸಂಪುಟ ವರದಿಯನ್ನು ಸ್ವೀಕರಿಸಿದೆ. ಈ ಬಗ್ಗೆ ಅಧ್ಯಯನ ಮಾಡಿ ಆಗಸ್ಟ್ 16 ರಂದು, ಶನಿವಾರ ವಿಶೇಷ ಸಚಿವ ಸಂಪುಟ ಸಭೆಯನ್ನು ಕರೆದು ಚರ್ಚಿಸಿ ನಿರ್ಣಯವನ್ನು ಕೈಗೊಳ್ಳಲಾಗುವುದು” ಎಂದು ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಅವರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
ಮತ್ತೊಮ್ಮೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮಿಕ್ಷೆ!
ಸಿದ್ದರಾಮಯ್ಯ ಅವರು ಮೊದಲ ಭಾರಿಗೆ ಮುಖ್ಯಮಂತ್ರಿಯಾಗಿದ್ದಾಗ, 2015 ರಲ್ಲಿ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿ ಗಣತಿ) ನಡೆಸಲಾಗಿತ್ತು. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಈ ವರದಿಯನ್ನು ಸಿದ್ಧಪಡಿಸಿತ್ತು. ವರದಿ ಸಿದ್ದಪಡಿಸಿ ಈಗಾಗಲೇ 10 ವರ್ಷ ಕಳೆದಿದ್ದು, ಅದನ್ನು ಈವರೆಗೆ ಬಹಿರಂಗಪಡಿಸಿಲ್ಲ. ಆದರೆ. ಇದೀಗ ಮತ್ತೊಮ್ಮೆ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಅಯೋಗದ ವತಿಯಿಂದ ಕರ್ನಾಟಕ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಸಮೀಕ್ಷೆಯನ್ನು ಕೈಗೊಳ್ಳಲು ಸಚಿವ ಸಂಪುಟ ಇಂದು ನಿರ್ಧರಿಸಿದೆ.
ಡಿಜಿಟಲ್ ಮಾದರಿಯಲ್ಲಿ ಸಮೀಕ್ಷೆಯನ್ನು ಕೈಗೊಳ್ಳುವುದು, ಸಮೀಕ್ಷೆಯನ್ನು ಡಿಜಿಟಲ್ ವಿಧಾನದಲ್ಲಿ ಮಾಡಲು ತಂತ್ರಾಂಶದ ಅಭಿವೃದ್ಧಿ ಮತ್ತು ಉಸ್ತುವಾರಿಯನ್ನು ಇ-ಆಡಳಿತ ಇಲಾಖೆ ಮೂಲಕ ಕೈಗೊಳ್ಳಲು; ಹಾಗೂ ಸಮೀಕ್ಷೆಯಲ್ಲಿ ನಮೂದಿಸಲಾಗುವ 6 ವರ್ಷ ಮೇಲ್ಪಟ್ಟ ಪ್ರತಿ ವ್ಯಕ್ತಿಯ ಆಧಾರ್ ದೃಢೀಕರಣವನ್ನು ಕಡ್ಡಾಯಗೊಳಿಸಲು ನಿರ್ಧರಿಸಲಾಗಿದೆ. ನ್ಯಾ.ನಾಗಮೋಹನ್‌ದಾಸ್ ರವರ ನೇತೃತ್ವದಲ್ಲಿ ಒಳಮೀಸಲಾತಿಗೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಸಮೀಕ್ಷೆಗೆ ಸಾರ್ವಜನಿಕವಾಗಿ ಲಭ್ಯವಿರುವ ಚುನಾವಣಾ ಮತದಾರರ ಪಟ್ಟಿಯನ್ನು ಉಪಯೋಗಿಸಿರುತ್ತಾರೆ. ಅದೇ ರೀತಿಯಾಗಿ ಹಿಂದುಳಿದ ವರ್ಗಗಳ ಆಯೋಗವು ನಡೆಸುವ ಸಮೀಕ್ಷೆಗೆ ಸಾರ್ವಜನಿಕವಾಗಿ ಲಭ್ಯವಿರುವ ಚುನಾವಣಾ ಮತದಾರರ ಪಟ್ಟಿಯನ್ನು ಉಪಯೋಗಿಸಿಕೊಂಡು ಸಮೀಕ್ಷಾ ಕಾರ್ಯವನ್ನು ಕೈಗೊಳ್ಳುವ ಜೊತೆಗೆ, ಸಮೀಕ್ಷಾ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಆಯೋಗದ ಮೇಲುಸ್ತುವಾರಿಯಲ್ಲಿ ಅಗತ್ಯವಿರುವ ಅಧಿಕಾರಿಗಳು, ಶಿಕ್ಷಕರು ಹಾಗೂ ಇತರೆ ಸಿಬ್ಬಂದಿಗಳು ಕೆಲಸ ಮಾಡುವರು ಎಂದು ಸಚಿವರು ತಿಳಿಸಿದ್ದಾರೆ.
2021-22ನೇ ಸಾಲಿನ À RIDF ಟ್ರಾಂಚ್-27ರಡಿ ನಬಾರ್ಡ್ ನಿಂದ ಅನುಮೋದನೆಗೊಂಡು ನಿರ್ಮಿಸುತ್ತಿರುವ ಕೃಷಿ ಇಲಾಖೆಯ 13 ಶೀತಲ ಘಟಕಗಳ ನಿರ್ಮಾಣ ಕಾಮಗಾರಿಗಳ ರೂ.171.91 ಕೋಟಿಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ ಹಾಗೂ ಹೆಚ್ಚುವರಿ ಮೊತ್ತ ರೂ.47.81 ಕೋಟಿಗಳನ್ನು ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಸಂಗ್ರಹವಾಗುವ ಸೇವಾ ಶುಲ್ಕದಿಂದ ಭರಿಸಲು ಸಚಿವ ಸಂಪುಟ ನಿರ್ಧರಿಸಿದೆ.


