“ಪರಿಸರವಾದಿ, ಲಡಾಖ್ ಹೋರಾಟಗಾರ ಸೋನಮ್ ವಾಂಗ್‌ಚುಕ್ ಬಂಧನವು ಕಾನೂನುಬಾಹಿರವಾಗಿ ನಡೆದಿದೆ. ಈ ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ ಎಂಬುವುದು ಈಗಾಗಲೇ ಸರ್ಕಾರದ (ಸಾಲಿಸಿಟರ್ ಜನರಲ್) ಗಮನಕ್ಕೆ ಬಂದಿದೆ. ಆದ್ದರಿಂದ ಪ್ರತಿ ಸಲ ಹೊಸ ದಿನಾಂಕ ಕೋರಿ ವಿಚಾರಣೆ ಮುಂದೂಡುವಂತೆ ಮಾಡುತ್ತಿದ್ದಾರೆ” ಎಂದು ಸೋನಮ್ ವಾಂಗ್‌ಚುಕ್ ಪತ್ನಿ ಗೀತಾಂಜಲಿ ಆಂಗ್ಮೋ ಹೇಳಿದ್ದಾರೆ.
ಸುದ್ದಿ ಸಂಸ್ಥೆ ಪಿಟಿಐಗೆ ನೀಡಿದ ಮಾತನಾಡಿದ ಅವರು, “ಸೋನಮ್ ವಾಂಗ್‌ಚುಕ್ ಅವರ ಬಂಧನವು ದೇಶದಲ್ಲಿ ಪ್ರಜಾಪ್ರಭುತ್ವ ಯಾವ ಹಂತದಲ್ಲಿದೆ ಎಂಬುವುದನ್ನು ಪ್ರತಿಬಿಂಬಿಸುತ್ತದೆ. ಅಧಿಕಾರಿಗಳ ಕಾರ್ಯವಿಧಾನದ ಲೋಪಗಳಿಂದಾಗಿ ಸೋನಮ್ ಜೈಲಿನಲ್ಲಿದ್ದಾರೆ. ಇಲ್ಲವಾದಲ್ಲಿ ಈಗಾಗಲೇ ಜೈಲಿನಿಂದ ಹೊರಬರಬೇಕಾಗಿತ್ತು” ಎಂದಿದ್ದಾರೆ.
ದಂಪತಿ ಜೊತೆಯಾಗಿ ಸ್ಥಾಪಿಸಿರುವ ಲಡಾಖ್‌ನ ಹಿಮಾಲಯನ್ ಇನ್ಸಿಟ್ಯೂಟ್ ಆಫ್ ಆಲ್ಟರ್ನೇಟಿವ್ಸ್ (ಹೆಚ್‌ಐಎಎಲ್) ವಿರುದ್ಧ ಇರುವ ವಿದೇಶಿ ದೇಣಿಗೆ ಪಡೆದ ಆರೋಪದ ಬಗ್ಗೆಯೂ ಗೀತಾಂಜಲಿ ಪ್ರತಿಕ್ರಿಯಿಸಿದ್ದು, “ಇದು ಸಂಪೂರ್ಣವಾಗಿ ಓಪನ್ ಅಂಡ್ ಶಟ್ ಕೇಸ್” ಎಂದು ಹೇಳಿದ್ದಾರೆ.
ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡಬೇಕು, ಲಡಾಖ್ ಅನ್ನು ಸಂವಿಧಾನದ ಆರನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ಹಲವು ವರ್ಷಗಳಿಂದ ನಡೆಸುತ್ತಿದ್ದ ಪ್ರತಿಭಟನೆ, 2025ರ ಸೆಪ್ಟೆಂಬರ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿತ್ತು. ಈ ವೇಳೆ ಪೊಲೀಸರ ಗುಂಡೇಟಿಗೆ ನಾಲ್ವರು ಬಲಿಯಾದರೆ, 90ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
ಈ ಘಟನೆಯ ಬಳಿಕ ಹೋರಾಟ ನಿರತ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಪರಿಸರವಾದಿ, ಶಿಕ್ಷಣತಜ್ಞ ಸೋನಮ್ ವಾಂಗ್ಚುಕ್ ಅವರನ್ನು ಸೆಪ್ಟೆಂಬರ್ 26ರಂದು ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ಬಂಧಿಸಲಾಗಿದೆ. ಸದ್ಯ ವಾಂಗ್‌ಚುಕ್ ಜೋಧ್‌ಪುರ ಜೈಲಿನಲ್ಲಿದ್ದಾರೆ. ವಾಂಗ್‌ಚುಕ್ ಬಂಧನಕ್ಕೆ ಹಲವು ಸಾಮಾಜಿಕ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರ ತನ್ನ ವಿರುದ್ಧ ಹೋರಾಡುವವರನ್ನು ಹತ್ತಿಕ್ಕಲು ಎನ್‌ಎಸ್‌ಎ ಕಾಯ್ದೆಯ ದುರುಪಯೋಗ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ತನ್ನ ಪತಿಯ ಪರ ವಾಂಗ್‌ಚುಕ್ ಪತ್ನಿ ಗೀತಾಂಜಲಿ ಕಾನೂನು ಹೋರಾಟ ನಡೆಸುತ್ತಿದ್ದಾರೆ.
ಈ ದೇಶದಲ್ಲಿ, ದೇಶಕ್ಕಾಗಿ ಕೆಲಸ ಮಾಡುತ್ತಿರುವವರನ್ನು ಅಕ್ರಮವಾಗಿ ಬಂಧಿಸಲು ಅಧಿಕಾರವನ್ನು ದುರುಪಯೋಗ ಮಾಡಲಾಗುತ್ತಿದೆ. ದೇಶಕ್ಕಾಗಿ ಇಷ್ಟೊಂದು ಕೊಡುಗೆ ನೀಡಿದ ಸೋನಮ್‌ಗೆ ಹೀಗೆ ಆಗುವುದಾದರೆ, ಬೇರೆಯವರಿಗೆ ಯಾವ ರೀತಿಯ ಅನ್ಯಾಯವಾಗಬಹುದು? ಎಂದು ಗೀತಾಂಜಲಿ ಆತಂಕ ವ್ಯಕ್ತಪಡಿಸಿದ್ದಾರೆ.
ಸೋನಮ್ ವಾಂಗ್ಚುಕ್ ಬಂಧನ ಬಗ್ಗೆ ನಿರೀಕ್ಷಿತ ವಿರೋಧ ವ್ಯಕ್ತವಾಗದಿರುವುದು ನನಗೆ ಸ್ವಲ್ಪ ನಿರಾಶೆಯಾಗಿದೆ. ಆದರೆ, ನಾವು ಮೌನವಾಗಿರಲು ಸಾಧ್ಯವಿಲ್ಲ. ನಾವು ಹೆಚ್ಚು ಸಂಯಮದಿಂದ ಮತ್ತು ಜೋರಾದ ಧ್ವನಿಯಲ್ಲಿ ಮಾತನಾಡಬೇಕಾಗಿದೆ, ವಿರೋಧಿಸಬೇಕಾಗಿದೆ ಎಂದು ನಾನು ಭಾವಿಸುತ್ತೇನೆ” ಎಂದು ಗೀತಾಂಜಲಿ ಹೇಳಿದ್ದಾರೆ.


