ಭಾರತದಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಅಮೆರಿಕದಿಂದ ಹಣಕಾಸಿನ ನೆರವು ಪಡೆಯಲಾಗಿದೆ ಎಂಬ ಆರೋಪ ಸಂಬಂಧ, ಭಾರತದ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳಿಗೆ ನೀಡಲಾಗಿರುವ ಯುಎಸ್ ನಿಧಿಯ ನೆರವಿನ ವಿವರಗಳನ್ನು ಒಳಗೊಂಡ ಶ್ವೇತಪತ್ರ ಹೊರಡಿಸಬೇಕು ಕಾಂಗ್ರೆಸ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
“ಭಾರತದ ಚುನಾವಣೆಯಲ್ಲಿ ಬೇರೆ ಯಾರನ್ನೋ ಆಯ್ಕೆ ಮಾಡಲು 21 ಮಿಲಿಯ ಡಾಲರ್ ನೆರವನ್ನು ಉಪಯೋಗಿಸಿರುವ ಸಾಧ್ಯತೆ ಇದೆ” ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪವನ್ನು ‘ಅಸಂಬದ್ಧ’ ಎಂದು ಕಾಂಗ್ರೆಸ್ ಹೇಳಿದೆ.
“ಭಾರತದ ಮತದಾನಕ್ಕಾಗಿ ನಾವೇಕೆ 21 ಮಿಲಿಯನ್ ಡಾಲರ್ ಹಣ ಖರ್ಚು ಮಾಡಬೇಕಾಗಿತ್ತು? ಅವರು ಬೇರೆ ಯಾರನ್ನೋ ಆಯ್ಕೆ ಮಾಡಲು ಪ್ರಯತ್ನಿಸುತ್ತಿದ್ದರು ಎಂದು ನಾನು ಭಾವಿಸುತ್ತೇನೆ” ಎಂಬುವುದಾಗಿ ಟ್ರಂಪ್ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ಜೈರಾಮ್ ರಮೇಶ್ “ಇದೀಗ ಯುಎಸ್ ನಿಧಿ (USAID) ಭಾರೀ ಸುದ್ದಿಯಲ್ಲಿದೆ. ಅದನ್ನು 1961 ನವೆಂಬರ್ 3ರಂದು ಸ್ಥಾಪಿಸಲಾಯಿತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡುತ್ತಿರುವ ಹೇಳಿಕೆಗಳು ‘ಅತ್ಯಂತ ಅಸಂಬದ್ಧ’ ಎಂದಷ್ಟೇ ಹೇಳಬಹುದಾಗಿದೆ. ಹಾಗಿದ್ದರೂ, ಭಾರತದ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳಿಗೆ ದಶಕಗಳಿಂದ ನೀಡಲಾಗಿರುವ ಯುಎಸ್‌ನಿಧಿ ನೆರವಿನ ವಿವರಗಳನ್ನು ಒಳಗೊಂಡ ಶ್ವೇತಪತ್ರವೊಂದನ್ನು ಭಾರತ ಸರ್ಕಾರ ಎಷ್ಟು ಸಾಧ್ಯವೋ ಅಷ್ಟು ಬೇಗ ಹೊರಡಿಸಬೇಕು” ಎಂದಿದ್ದಾರೆ.
USAID is very much in the news these days.
It was set up on November 3, 1961. Claims being made by the US President are typically nonsensical to say the least. Even so, the Govt of India should bring out a White Paper at the earliest detailing USAID's support to both…
— Jairam Ramesh (@Jairam_Ramesh) February 20, 2025
ಫೆಬ್ರವರಿ 16 ರಂದು, ಬಿಲಿಯನೇರ್ ಸ್ಪೇಸ್‌ಎಕ್ಸ್ ಸಿಇಒ ಎಲಾನ್ ಮಸ್ಕ್ ನೇತೃತ್ವದ ಅಮೆರಿಕದ ಸರ್ಕಾರಿ ದಕ್ಷತೆ ಇಲಾಖೆ (ಡಿಒಜಿಇ), ಯುಎಸ್ ತೆರಿಗೆದಾರರ ಹಣವನ್ನು ಯಾವುದಕ್ಕೆಲ್ಲ ಖರ್ಚು ಮಾಡಲಾಗುತ್ತಿದೆ ಎಂದು ಪಟ್ಟಿ ಮಾಡಿದೆ. ಆ ಪಟ್ಟಿಯಲ್ಲಿ ಭಾರತದ ಮತದಾನಕ್ಕಾಗಿ 21 ಮಿಲಿಯನ್ ಯುಎಸ್ ಡಾಲರ್ ಖರ್ಚು ಮಾಡಿರುವುದೂ ಸೇರಿದೆ.
ಡಿಒಜಿಇ ಮಾಡಿರುವ ಪಟ್ಟಿಯಲ್ಲಿ ಬಾಂಗ್ಲಾದೇಶದ ರಾಜಕೀಯ ಬಲಪಡಿಸಲು 29 ಮಿಲಿಯನ್ ಡಾಲರ್, ಹಣಕಾಸು ಒಕ್ಕೂಟಕ್ಕೆ 20 ಮಿಲಿಯನ್ ಡಾಲರ್, ನೇಪಾಳದಲ್ಲಿ ಜೀವವೈವಿಧ್ಯ ಸಂರಕ್ಷಣೆಗಾಗಿ 19 ಮಿಲಿಯನ್ ಡಾಲರ್ ಹಾಗೂ ಏಷ್ಯಾದಲ್ಲಿ ಕಲಿಕಾ ಫಲಿತಾಂಶಗಳನ್ನು ಸುಧಾರಿಸಲು 47 ಮಿಲಿಯನ್ ಡಾಲರ್ ನೀಡುತ್ತಿರುವುದು ಸೇರಿದೆ.
ಡಿಒಜಿಇ ಈ ಎಲ್ಲಾ ನೆರವುಗಳನ್ನು ರದ್ದುಗೊಳಿಸಿದೆ ಎಂದು ವರದಿಯಾಗಿದೆ.
ಕಳೆದ ಮಂಗಳವಾರ ಮಾರ್-ಎ-ಲಾಗೊದಲ್ಲಿ ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕಿ ಮಾತನಾಡಿದ ಟ್ರಂಪ್, “ಭಾರತದ ಚುನಾವಣೆಗೆ ನಾವೇಕೆ 21 ಮಿಲಿಯನ್ ಡಾಲರ್ ಖರ್ಚು ಮಾಡಬೇಕು. ನಮಗೆ ಗೊತ್ತಿರುವಂತೆ ಭಾರತ ಅತಿ ಹೆಚ್ಚು ತೆರಿಗೆ ಸಂಗ್ರಹಿಸುವ ರಾಷ್ಟ್ರಗಳಲ್ಲಿ ಒಂದು. ಅವರು ಹಲವು ರೀತಿಯ ಸುಂಕಗಳನ್ನು ವಿಧಿಸುತ್ತಿದ್ದಾರೆ. ಹಾಗಾಗಿ, ನಾವು ಹಣ ನೀಡುವುದು ಸರಿಯಲ್ಲ” ಎಂದಿದ್ದಾರೆ.
ಚುನಾವಣಾ ಆಯೋಗ ನಿಲುವು ಸ್ಪಷ್ಟಪಡಿಸಬೇಕು : ಉಮರ್ ಅಬ್ದುಲ್ಲಾ
ಭಾರತದಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಅಮೆರಿಕ 21 ಮಿಲಿಯನ್ ಡಾಲರ್ ವೆಚ್ಚ ಮಾಡಿದೆ ಎಂಬ ವರದಿ ಕುರಿತು ಚುನಾವಣಾ ಆಯೋಗ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರು ಗುರುವಾರ (ಫೆ.29) ಆಗ್ರಹಿಸಿದ್ದಾರೆ.
ಇದು (ವಿದೇಶಿ ಹಸ್ತಕ್ಷೇಪ) ಸಂಭವಿಸಬಾರದು. ಇದುವರೆಗೆ ವಿದೇಶಿ ಹಸ್ತಕ್ಷೇಪದ ಕುರಿತು ಯಾವುದೇ ಪುರಾವೆ ಇಲ್ಲ. ನಮ್ಮ ಚುನಾವಣೆಯಲ್ಲಿ ವಿದೇಶಿ ಹಸ್ತಕ್ಷೇಪ ನಡೆದಿದೆಯೇ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಬೇಕು. ಯಾಕೆಂದರೆ, ಇಂದಿನವರೆಗೆ ನಾವು ನಮ್ಮ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯಯುತ ರೀತಿಯಲ್ಲಿ ನಡೆಸಲಾಗಿದೆ ಎಂದು ನಂಬಿದ್ದೇವೆ’’ ಎಂದು ಅಬ್ದುಲ್ಲಾ ಹೇಳಿದ್ದಾರೆ.
‘ಈ ವ್ಯವಸ್ಥೆಯಿಂದ ನೀವು ನಲುಗಿ ಹೋಗಿದ್ದೀರಿ’ : ದಲಿತ ವಿದ್ಯಾರ್ಥಿಗಳೊಂದಿಗೆ ರಾಹುಲ್ ಗಾಂಧಿ ಸಂವಾದ


