ಮಹಿಳಾ ಉದ್ಯೋಗಿಗಳಿಗೆ ಪ್ರತಿ ತಿಂಗಳು ಒಂದು ದಿನ ವೇತನ ಸಹಿತ ಮುಟ್ಟಿನ ರಜೆ ನೀಡುವ ಸಂಬಂಧ ಹೊರಡಿಸಿದ್ದ ತನ್ನ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಹೈಕೋರ್ಟ್‌ನಲ್ಲಿ ಬಲವಾಗಿ ಸಮರ್ಥಿಸಿಕೊಂಡಿದೆ.
ಸರ್ಕಾರದ ವಾದ ಆಲಿಸಿದ ಹೈಕೋರ್ಟ್, ಅಧಿಸೂಚನೆಗೆ ಮಂಗಳವಾರ (ಡಿಸೆಂಬರ್ 9) ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ತೆರವುಗೊಳಿಸಿದೆ. ಸಾರ್ವಜನಿಕರ ಹಿತ ದೃಷ್ಟಿಯಿಂದ ಅತ್ಯಂತ ಮಹತ್ವದ ಈ ಪ್ರಕರಣವನ್ನು ವಿಸ್ತೃತವಾಗಿ ವಿಚಾರಣೆ ನಡೆಸಬೇಕಿದೆ ಎಂದು ಅಭಿಪ್ರಾಯಪಟ್ಟಿರುವ ಕೋರ್ಟ್, ವಿಚಾರಣೆಯನ್ನು ಜನವರಿ 20ಕ್ಕೆ ಮುಂದೂಡಿದೆ.
ರಾಜ್ಯ ಕಾರ್ಮಿಕ ಇಲಾಖೆ 2025ರ ನವೆಂಬರ್ 20ರಂದು ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ಬೆಂಗಳೂರು ಹೋಟೆಲ್‌ಗಳ ಸಂಘ, ಅವಿರತ ಡಿಫೆನ್ಸ್ ಸಿಸ್ಟಮ್, ಫೆಸಿಲ್ ಏರೋಸ್ಪೇಸ್ ಟೆಕ್ನಾಲಜೀಸ್ ಲಿಮಿಟೆಡ್, ಸ್ಯಾಮೋಸ್ ಟೆಕ್ನಾಲಜೀಸ್ ಲಿಮಿಟೆಡ್‌ಗಳ ಆಡಳಿತ ಮಂಡಳಿಗಳು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ (ಡಿಸೆಂಬರ್ 9) ವಿಚಾರಣೆ ನಡೆಸಿತು.
ಬೆಂಗಳೂರು ಹೋಟೆಲ್‌ಗಳ ಸಂಘ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಮಂಗಳವಾರ ಬೆಳಿಗ್ಗೆ ಸರ್ಕಾರದ ಅಧಿಸೂಚನೆಗೆ ಮಧ್ಯಂತರ ತಡೆ ನೀಡಿತ್ತು.
ಇದಾಗಿ ಕೆಲವು ಗಂಟೆಗಳ ನಂತರ, ರಾಜ್ಯ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಶಶಿ ಕಿರಣ್ ಶೆಟ್ಟಿ ನ್ಯಾಯಾಲಯಕ್ಕೆ ಹಾಜರಾಗಿ ತನ್ನ ಮಧ್ಯಂತರ ತಡೆಯಾಜ್ಞೆಯನ್ನು ಮರುಪರಿಶೀಲಿಸುವಂತೆ ಕೋರಿದ್ದರು. ಇದನ್ನು ಪುರಸ್ಕರಿಸಿದ ನ್ಯಾಯಾಲಯ ತನ್ನ ತಡೆಯಾಜ್ಞೆಯನ್ನು ಹಿಂತೆಗೆದುಕೊಂಡಿತ್ತು. ನಂತರ ನ್ಯಾಯಾಲಯವು ವಿಷಯವನ್ನು ಇಂದು ಮತ್ತಷ್ಟು ಆಲಿಸಲು ಒಪ್ಪಿಕೊಂಡಿತ್ತು.
ಇಂದು ವಿಚಾರಣೆ ವೇಳೆ ಎಜಿ, ಸರ್ಕಾರದ ಹೊಸ ನೀತಿಯು ಸಂಪೂರ್ಣ ಪ್ರಗತಿಪರವಾಗಿದೆ. ಸೂಕ್ತ ಪರಿಗಣನೆಯ ನಂತರ ಅದನ್ನು ಪರಿಚಯಿಸಲಾಗಿದೆ. ಕೆಲಸದ ಸ್ಥಳದಲ್ಲಿ ಮಾನವೀಯ ಪರಿಸ್ಥಿತಿಗಳನ್ನು ಖಚಿತಪಡಿಸಿಕೊಳ್ಳಲು ಅಂತಹ ನೀತಿಗೆ ಸಾಂವಿಧಾನಿಕ ಆಧಾರವಿದೆ ಎಂದು ವಾದಿಸಿದರು.
ಮಹಿಳೆಯರ ಹಿತದೃಷ್ಟಿಯಿಂದ ದೇಶದ ಬೇರಾವುದೇ ರಾಜ್ಯದಲ್ಲಿ ಜಾರಿಗೊಳಿಸದ ಪ್ರಗತಿಪರ ಕಾನೂನನ್ನು ಸರ್ಕಾರ ಜಾರಿಗೊಳಿಸಿದೆ. 72 ಆಕ್ಷೇಪಗಳು ಬಂದಿದ್ದು, ಎಲ್ಲವನ್ನೂ ಆಲಿಸಲಾಗಿದೆ. ಸಂವಿಧಾನದ 42ನೇ ಪರಿಚ್ಛೇದದ ಅಡಿ ನೀತಿ ರೂಪಿಸಲು ಸರ್ಕಾರಕ್ಕೆ ಅವಕಾಶವಿದೆ. ಈ ಸಂಬಂಧ ಸುಪ್ರೀಂ ಕೋರ್ಟ್ ನಿರ್ದೇಶನವೂ ಇದೆ. ಕಾನೂನು ಆಯೋಗವೂ ಈ ಕುರಿತು ಶಿಫಾರಸು ಮಾಡಿದೆ. ಇದೆಲ್ಲವನ್ನೂ ಆಕ್ಷೇಪದಲ್ಲಿ ವಿವರಿಸಲಾಗಿದೆ ಎಂದು ಸರ್ಕಾರದ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡರು.
ಸರ್ಕಾರದ ಅಧಿಸೂಚನೆ ಎಲ್ಲಾ ಕ್ಷೇತ್ರಗಳಿಗೂ ಅನ್ವಯಿಸಲಿದೆಯೇ? ಎಂಬ ನ್ಯಾಯಪೀಠದ ಪ್ರಶ್ನೆಗೆ ಅಡ್ವೊಕೇಟ್ ಜನರಲ್ ಹೌದು ಎಂದು ಉತ್ತರಿಸಿದರು. ಇದನ್ನು ಆಲಿಸಿದ ನ್ಯಾಯಪೀಠ, ಪ್ರಕರಣವನ್ನು ವಿಸ್ತೃತವಾಗಿ ವಿಚಾರಣೆ ನಡೆಸಬೇಕಿದ್ದು, ಜನವರಿಯಲ್ಲಿ ನಡೆಸಲಾಗುವುದು. ಅಷ್ಟರಲ್ಲಿ ಸರ್ಕಾರ ಸಲ್ಲಿಸಿರುವ ಆಕ್ಷೇಪಗಳಿಗೆ ಪ್ರತಿಕ್ರಿಯೆಗಳಿದ್ದರೆ ಅರ್ಜಿದಾರರು ಸಲ್ಲಿಸಬಹುದು ಎಂದು ಹೇಳಿತು.
ಅರ್ಜಿದಾರರ ಪರ ವಕೀಲ ಬಿ.ಕೆ ಪ್ರಶಾಂತ್ ವಾದ ಮಂಡಿಸಿ, ಅಲ್ಲಿಯವರೆಗೆ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಆದೇಶಿಸಬೇಕು ಎಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಡ್ವೋಕೇಟ್ ಜನರಲ್, ಈ ಆದೇಶವನ್ನು ಈಗಾಗಲೇ ಎಲ್ಲಾ ಕ್ಷೇತ್ರಗಳಲ್ಲಿಯೂ ಜಾರಿಗೊಳಿಸಿಯಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಈ ವೇಳೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಅರ್ಜಿಯ ಮುಂದಿನ ವಿಚಾರಣೆಯೊಳಗೆ ಏನೂ ಆಗುವುದಿಲ್ಲ. ಇದು ಸಾರ್ವಜನಿಕ ಹಿತದೃಷ್ಟಿಯಿಂದ ಅತ್ಯಂತ ಮಹತ್ವದ ಪ್ರಕರಣವಾಗಿದೆ. ಈ ಸಂಬಂಧ ವಿಸ್ತೃತವಾಗಿ ವಾದ ಆಲಿಸಿದ ಬಳಿಕವೇ ಆದೇಶ ಹೊರಡಿಸಲಾಗುವುದು, ವಿಚಾರಣೆಗೆ ದಿನ ನಿಗದಿಪಡಿಸಲಾಗುವುದು ಎಂದರು.
ಅಂತಿಮವಾಗಿ ನ್ಯಾಯಪೀಠ, ಸರ್ಕಾರದ ಆಕ್ಷೇಪಕ್ಕೆ ಪ್ರತ್ಯುತ್ತರ ದಾಖಲಿಸುವಂತೆ ಅರ್ಜಿದಾರರ ಪರ ವಕೀಲರಿಗೆ ನಿರ್ದೇಶಿಸಿ, ವಿಚಾರಣೆಯನ್ನು ಜನವರಿ 20ಕ್ಕೆ ಮುಂದೂಡಿತು. ಜೊತೆಗೆ, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸುವವರು ರಿಜಿಸ್ಟ್ರಾರ್ ಕಚೇರಿಯಲ್ಲಿ ಸಲ್ಲಿಸಿ, ಅರ್ಜಿಯ ಪ್ರತಿಯನ್ನು ಸರ್ಕಾರದ ಪರ ವಕೀಲರಿಗೆ ಒದಗಿಸಬೇಕು ಎಂದು ಸೂಚಿಸಿತು.


