ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಟಿ) ಮೀಸಲಾತಿಯಲ್ಲಿ ‘ಕೆನೆಪದರ’ (ಕ್ರೀಮಿಲೇಯರ್) ತತ್ವ ಅಳವಡಿಸುವ ಕುರಿತು ಶಾಸಕಾಂಗ ಮತ್ತು ಕಾರ್ಯಾಂಗ ನಿರ್ಧರಿಸಲಿ. ಚೆಂಡು ಈಗ ಸರ್ಕಾರದ ಅಂಗಳದಲ್ಲಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ಜ.9) ಹೇಳಿದೆ.
ಮೀಸಲಾತಿಯ ಪ್ರಯೋಜನ ಪಡೆದು ಇತರರೊಂದಿಗೆ ಸ್ಪರ್ಧಿಸುವ ಸ್ಥಿತಿಯಲ್ಲಿ ಇರುವವರನ್ನು ಮೀಸಲಾತಿಯಿಂದ ಹೊರಗಿಡಬೇಕು ಎಂದು ಕೋರಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಹಾಗೂ ಆಗಸ್ಟಿನ್ ಜಾರ್ಜ್ ಮಸೀಹ್ ಅವರಿದ್ದ ನ್ಯಾಯಪೀಠ ಮೇಲಿನ ಹೇಳಿಕೆ ನೀಡಿದೆ.
ಏಳು ಸದಸ್ಯರಿದ್ದ ಸಂವಿಧಾನ ಪೀಠವು ಕಳೆದ ವರ್ಷ ಆಗಸ್ಟ್‌ನಲ್ಲಿ ನೀಡಿದ್ದ ತೀರ್ಪಿಗೆ ಸಂಬಂಧಿಸಿ ಸಂತೋಷ್ ಮಾಳವೀಯ ಎಂಬವರು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಪೀಠ ವಿಚಾರಣೆ ನಡೆಸಿದೆ.
ಪರಿಶಿಷ್ಟ ಜಾತಿ (ಎಸ್‌ಸಿ) ಮೀಸಲಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸಲು ರಾಜ್ಯಗಳಿಗೆ ಅವಕಾಶ ನೀಡಿ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ 7 ನ್ಯಾಯಾಧೀಶರ ಪೀಠವು 6:1ರ ಬಹುಮತದೊಂದಿಗೆ 2024ರ ಆಗಸ್ಟ್ 1ರಂದು ತೀರ್ಪು ನೀಡಿತ್ತು. ಇ.ವಿ ಚಿನ್ನಯ್ಯ ಪ್ರಕರಣದಲ್ಲಿ ನೀಡಲಾಗಿದ್ದ ಒಳಮೀಸಲಾತಿ ಸಾಧ್ಯವಿಲ್ಲ ಎಂಬ ತೀರ್ಪನ್ನು ಪೀಠ ರದ್ದುಗೊಳಿಸಿತ್ತು.
ಈ ಪೀಠದಲ್ಲಿ ನ್ಯಾಯಮೂರ್ತಿ ಬಿ.ಆರ್. ಗವಾಯಿ ಕೂಡ ಇದ್ದರು. ಅವರು, ಪರಿಶಿಷ್ಟ ಜಾತಿ ಮತ್ತು ಪಂಗಡಗಳಲ್ಲಿನ ‘ಕೆನೆಪದರ’ ಗುರುತಿಸಿ, ಅವರಿಗೆ ಮೀಸಲಾತಿ ಸೌಲಭ್ಯ ನಿರಾಕರಿಸುವುದಕ್ಕಾಗಿ ರಾಜ್ಯಗಳು ನೀತಿಯೊಂದನ್ನು ರೂಪಿಸಬೇಕು ಎಂಬುದಾಗಿ ಪ್ರತ್ಯೇಕ ತೀರ್ಪು ಬರೆದಿದ್ದರು.
“ಮೀಸಲಾತಿಯ ಪ್ರಯೋಜನ ಪಡೆದವರು, ಇತರರೊಂದಿಗೆ ಸ್ಪರ್ಧಿಸುವ ಸ್ಥಿತಿಯಲ್ಲಿ ಇದ್ದಾಗ ಅವರನ್ನು ಮೀಸಲಾತಿ ಸೌಲಭ್ಯದಿಂದ ಹೊರಗಿಡಬೇಕು. ಕಳೆದ 75 ವರ್ಷಗಳ ವಿದ್ಯಮಾನಗಳನ್ನು ಪರಿಗಣನೆಗೆ ತೆಗೆದುಕೊಂಡೇ ನಾವು ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಆದರೆ, ಈ ಕುರಿತು ಶಾಸಕಾಂಗ ಮತ್ತು ಕಾರ್ಯಾಂಗ ನಿರ್ಧಾರ ಕೈಗೊಳ್ಳಬೇಕು” ಎಂದು ನ್ಯಾಯಮೂರ್ತಿ ಗವಾಯಿ ಹೇಳಿದ್ದಾರೆ.
ಇದನ್ನೂ ಓದಿ | ನ್ಯಾಯಾಧೀಶರಿಂದ ಮುಸ್ಲಿಂ ವಿರೋಧಿ ಹೇಳಿಕೆ : ಹೊಸ ವರದಿ ಕೇಳಿದ ಸಿಜೆಐ


