HomeUncategorizedಬಿಕ್ಕಟ್ಟಿನ ಸಮಯದಲ್ಲಿ ಸರ್ಕಾರಗಳ ಮತ್ತು ಕೆಲವು ಮುಖಂಡರ ನಡೆ ಕೇಡುಗಾಲಕ್ಕೆ ಕುದುರೆ ಮೊಟ್ಟೆ ಇಟ್ಟಂತಿದೆ

ಬಿಕ್ಕಟ್ಟಿನ ಸಮಯದಲ್ಲಿ ಸರ್ಕಾರಗಳ ಮತ್ತು ಕೆಲವು ಮುಖಂಡರ ನಡೆ ಕೇಡುಗಾಲಕ್ಕೆ ಕುದುರೆ ಮೊಟ್ಟೆ ಇಟ್ಟಂತಿದೆ

- Advertisement -
- Advertisement -

ಕೇಡುಗಾಲದ ಬಗ್ಗೆ ಇರುವ ಗಾದೆಗೆ ಹಲವು ರೂಪಗಳಿವೆ. ‘ಕೇಡು ಬರುವ ಕಾಲಕ್ಕೆ ಕೂಡುವುದು ದುರ್ಬುದ್ಧಿ’, ಕೇಡು ಬರುವ ಕಾಲಕ್ಕೆ (ತಾನು) ಪೆಟ್ಟಿಗೆಯಲ್ಲಿ ಇದ್ದರೂ ತಪ್ಪದು’, ‘ಕೇಡುಗಾಲಕ್ಕೆ ನಾಯಿ ಮರಿ ಮೊಟ್ಟೆಯಿಕ್ಕಿತು’ ಹೀಗೆ. ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ದೇಶದ ಹಲವು ರಾಜ್ಯಗಳಲ್ಲಿ ನಡೆಯುತ್ತಿರುವ ಕೆಲವು ಸಂಗತಿಗಳು ಹಾಗೂ ಒಕ್ಕೂಟ ಸರ್ಕಾರದ ನಡೆ-ನುಡಿ, ಅಧಿಕಾರದ ಮದದಲ್ಲಿ ತೇಲುತ್ತಿರುವ ಕೆಲವು ಮುಖಂಡರ ಟ್ವಿಟ್ಟರ್ ಉಲಿಕೆಗಳು ಅಸಹ್ಯದ ಪರಮಾವಧಿಯನ್ನು ದಾಟಿವೆ. ಈ ಪರಿಸ್ಥಿತಿ ಮೇಲಿನ ಗಾದೆಗಳನ್ನು ನೆನಪಿಸುತ್ತಿದೆ. ಸಂಕಟದಲ್ಲಿ ನರಳುತ್ತಿರುವ ಜನರ ನಡುವೆ ನಿಂತು, ಬರುತ್ತಿರುವ ಟೀಕೆ-ವಿಮರ್ಶೆಗಳನ್ನು ‘ಪಾಸಿಟಿವ್’ (ಸರಿಪಡಿಸಿಕೊಳ್ಳಲು ಆಸ್ಪದ ನೀಡುವಂತಹ) ಆಗಿ ಸ್ವೀಕರಿಸಿ ವಿಪತ್ತು ನಿರ್ವಹಣೆಯಲ್ಲಿ ತನುಮನ ಅರ್ಪಿಸಿಕೊಳ್ಳಬೇಕಿದ್ದ ಆಳುವ ಮುಖಂಡರು, ತಮ್ಮ ವೈಫಲ್ಯತೆಯನ್ನು ಜನರ ಮೇಲೆ ಹಾಕಲು, ಟೀಕಿಸುವ ವಿರೋಧ ಪಕ್ಷಗಳನ್ನು ಹಳಿಯಲು ತಮ್ಮ ಸಮಯ ಬಳಸಿ ಬಿಕ್ಕಟ್ಟನ್ನು ತೀವ್ರಗೊಳಿಸಿವೆ. ಪರ್ಸೆಪ್ಷನ್ ನಿರ್ವಹಣೆ ತಮ್ಮನ್ನು ಎಂದೆಂದಿಗೂ ಕಾಯಬಹುದು ಎಂಬ ಭ್ರಮಾಲೋಕದಲ್ಲಿ ಬದುಕುತ್ತಿರುವ ಇವರಿಗೆ ಸತ್ಯದರ್ಶನ ಮಾಡಿಸುವ, ಅವರ ಯೋಗ್ಯತೆಯನ್ನು ತಿಳಿಸುವ ಕೆಲಸಗಳು ಅಲ್ಲಲ್ಲಿ ಶುರುವಾಗಿವೆ. ಕೆಲವೊಮ್ಮೆ ಅವರ ಬಳಗದಿಂದಲೇ ಅದು ನಡೆದಿದೆ!

ಕೆಲವು ದಿನಗಳ ಹಿಂದೆ ದೆಹಲಿಯ ಕೆಲವು ಕಡೆ ಪೋಸ್ಟರ್‌ಗಳನ್ನು ಹಾಕಲಾಗಿತ್ತು. ‘ನಮ್ಮ ಮಕ್ಕಳಿಗೆ ಮೀಸಲಾಗಿದ್ದ ಲಸಿಕೆಗಳನ್ನು ವಿದೇಶಕ್ಕೆ ಕಳಿಸಿದ್ದೇಕೆ’ ಎಂಬ ಸಂದೇಶ ಹೊತ್ತಿದ್ದ ಪೋಸ್ಟರ್‌ಗಳು ಅವು. ಇದಕ್ಕೆ ಒಕ್ಕೂಟ ಸರ್ಕಾರದ ಅಡಿಯಲ್ಲಿರುವ ದೆಹಲಿ ಪೊಲೀಸರು 17 ಎಫ್‌ಐಆರ್‌ಗಳನ್ನು ದಾಖಲಿಸಿಕೊಂಡು ಸುಮಾರು 25 ಜನರನ್ನು ಬಂಧಿಸಿರುವುದಾಗಿ ತಿಳಿಸಿದ್ದರು. ಸಾರ್ವಜನಿಕ ಆಸ್ತಿಪಾಸ್ತಿ ವಿರೂಪಗೊಳಿಸಿರುವ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿತ್ತು. ಪ್ರಧಾನಿಗಳ ಕಟ್‌ಔಟ್‌ಗಳನ್ನು ಹಾಕಿದಾಗ ಆಗದ ವಿರೂಪ, ನ್ಯಾಯಬದ್ಧ ಟೀಕೆಯ ಪೋಸ್ಟರ್‌ಗಳನ್ನು ಅಂಟಿಸಿದಾಗ ಆಗಿಹೋಗಿತ್ತು! ದೆಹಲಿಯ ಪೊಲೀಸರ ನಡೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದಲ್ಲದೆ, ಬಹಳಷ್ಟು ನಾಗರಿಕರು ಸಾಮಾಜಿಕ ಜಾಲತಾಣಗಳ ತಮ್ಮ ಟೈಮ್‌ಲೈನ್‌ಗಳಲ್ಲಿ ಆ ಪೋಸ್ಟರ್‌ಅನ್ನು ಹಂಚಿಕೊಂಡು ತಮ್ಮನ್ನೂ ಅರೆಸ್ಟ್ ಮಾಡಿ ಎಂದು ಪೊಲೀಸರಿಗೆ ಸವಾಲೆಸೆದರು.


ಇನ್ನು ಬಿಜೆಪಿಯನ್ನು ಸತತವಾಗಿ ಎರಡೂವರೆ ದಶಕಗಳಿಂದ ಅಧಿಕಾರದಲ್ಲಿಟ್ಟಿರುವ ಗುಜರಾತ್ ರಾಜ್ಯದ ಹುಸಿ ಮಾಡೆಲ್ ಕುಸಿದು ಬಿದ್ದಿದೆ. ಆ ರಾಜ್ಯದಲ್ಲಿ ನಿಖರವಾದ ಕೋವಿಡ್ ಸಂಖ್ಯೆಯನ್ನು ತಿಳಿಸಿದ, ಕೋವಿಡ್ ಸಾವಿನ ಸಂಖ್ಯೆಗಳನ್ನು ಮರೆಮಾಚುತ್ತಿರುವ ಹಲವು ವರದಿಗಳು ಇವೆ. ಚಿಕಿತ್ಸೆಗಾಗಿ ಜನರು ಹರಸಾಹಸ ಪಡುತ್ತಿರುವ ಚಿತ್ರಗಳು ಇಡೀ ದೇಶದ ಜನರಿಗೆ ಅಘಾತ ಮೂಡಿಸಿವೆ. ಅಲ್ಲಿ ಬಲಪಂಥೀಯರಿಗೆ ಬಹಳ ಆಪ್ತವಾಗಿದ್ದ ಕವಯತ್ರಿಯೊಬ್ಬರು, ಇಂತಹ ಅಸಾಧಾರಣ ಬಿಕ್ಕಟ್ಟಿನ ಸಮಯದಲ್ಲಿ ಸರ್ಕಾರಗಳ ವಿರುದ್ಧ ಟೀಕೆ ವ್ಯಕ್ತಪಡಿಸುವುದಕ್ಕೆ ಹಿಂಜರಿಯಲಿಲ್ಲ. ಇವರ ರಾಮರಾಜ್ಯದಲ್ಲಿ ಗಂಗಾ ನದಿಯಲ್ಲಿ ಹೆಣಗಳು ತೇಲುತ್ತಿವೆ ಎಂದು ತಮ್ಮ ನೋವನ್ನು ಪದ್ಯರೂಪದಲ್ಲಿ ಪಾರುಲ್ ಕಕ್ಕರ್ ವ್ಯಕ್ತಪಡಿಸಿದರು. ಇದು ಹಲವು ಭಾಷೆಗಳಗೆ ಅನುವಾದವಾಗಿ ವೈರಲ್ ಆಗುವ ಹೊತ್ತಿಗೆ ಬಿಜೆಪಿ ಐಟಿ ಸೆಲ್ ಫೀಲ್ಡ್‌ಗೆ ಇಳಿದು ಪಾರುಲ್ ಅವರನ್ನು ನಿಂದಿಸುವ, ಅಪಮಾನಿಸುವ ಕೆಲಸಕ್ಕೆ ನುಗ್ಗಿತ್ತು. ಆದರೆ ಇವೆಲ್ಲವನ್ನೂ ಮೀರಿ ಆ ಕವನ ಹಲವು ಭಾಷೆಗಳಿಗೆ ಅನುವಾದವಾಗುತ್ತಲೇ ಹೋಗಿದೆ. ಇಡೀ ದೇಶದಲ್ಲಿ ಕೊರೊನಾ ಸೋಂಕಿಗೆ ಸರಿಯಾದ ಚಿಕಿತ್ಸೆ ಸಿಗದೆ, ಲಸಿಕೆಗಳ ಕೊರತೆಯಿಂದ ಉಂಟಾಗಿರುವ ಯಾತನೆಗೆ ಕನ್ನಡಿ ಹಿಡಿದಂತರುವ ಈ ಕವನ ‘ನಗ್ನ ಚಕ್ರವರ್ತಿ’ಯನ್ನು ನಿರೀಕ್ಷೆಗಿಂತಲೂ ದೊಡ್ಡಮಟ್ಟದಲ್ಲಿ ಕಾಡಿದೆ.

ಕ್ಲೈಮೇಟ್ ಚೇಂಜ್ ಕಾರ್ಯಕರ್ತೆ ದಿಶಾ ರವಿಯವರ ವಿರುದ್ಧ ಸುಳ್ಳು ಟೂಲ್‌ಕಿಟ್ ಅರೋಪ ಮಾಡಿ ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡ ನೆನಪು ಇನ್ನೂ ಮಾಸಿಲ್ಲ, ಅಷ್ಟರಲ್ಲಿಯೇ ಮತ್ತೊಂದು ನಕಲಿ ಟೂಲ್‌ಕಿಟ್ ಪ್ರಕರಣವನ್ನು ಬಿಜೆಪಿ ಮುಖಂಡರು ಸೃಷ್ಟಿಸಿ ಅದೇ ಬಲೆಗೆ ಸಿಕ್ಕಿಕೊಳ್ಳುವಂತೆ ಕಾಣುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಬಿಜೆಪಿ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಅದೇ ಪಕ್ಷದ ವಕ್ತಾರ ಸಂಬಿತ್ ಪಾತ್ರ ಸೇರಿದಂತೆ ಹಲವರು, ಮೋದಿ ಮತ್ತು ಭಾರತದ ಹೆಸರಿಗೆ ಜಾಗತಿಕವಾಗಿ ಮಸಿ ಬಳಿಯಲು ಕಾಂಗ್ರೆಸ್ ಟೂಲ್‌ಕಿಟ್ ತಯಾರಿಸಿದೆ ಎಂದು ಹಲವಾರು ಟ್ವೀಟ್‌ಗಳನ್ನು ಮಾಡಿ ಕೋವಿಡ್ ಯಾತನೆಯಿಂದ ಮಾಧ್ಯಮಗಳ ಗಮನವನ್ನು ವಿಚಲಿಸಲು ಪ್ರಯತ್ನಪಟ್ಟರು. ಆಪಾದನೆಗಳು ಬಾಲಿಶವಾಗಿದ್ದು ಮಾತ್ರವಲ್ಲ, ಹಲವು ಬಿಜೆಪಿ ನಾಯಕರು ಹಂಚಿಕೊಂಡಿದ್ದ ದಾಖಲೆಗಳು ನಕಲಿನವು ಎಂದು ಕೂಡ ಆಲ್ಟ್‌ನ್ಯೂಸ್ ವರದಿ ಮಾಡಿತ್ತು. ಈ ವರದಿ ಮಾಡಿದ ಬೆನ್ನಲ್ಲಿಯೇ ಬಿಜೆಪಿ ಪಕ್ಷದ ಬೆಂಬಲಿಗ ವಿವೇಕ್ ಅಗ್ನಿಹೋತ್ರ ಎಂಬ ವ್ಯಕ್ತಿ ಮತ್ತಿತರು ಟ್ವಿಟ್ಟರ್‌ನಲ್ಲಿ ಬರೆದು, ಆಲ್ಟ್‌ನ್ಯೂಸ್ ಸಂಪಾದಕ ಪ್ರತೀಕ್ ಸಿನ್ಹಾ ಅವರ ತಂದೆಯವರ ಸಾವಿನ ಬಗ್ಗೆ ಅನುಚಿತ ಕಮೆಂಟ್ ಗಳನ್ನು ಹಾಕಲು ಪ್ರಾರಂಭಿಸಿದರು. ಈಗ ಕಾಂಗ್ರೆಸ್ ಟೂಲ್‌ಕಿಟ್ ಬಗೆಗಿನ ಪೋಸ್ಟ್‌ಗಳಿಗೆ ಟ್ವಿಟ್ಟರ್ ನಕಲಾಗಿದೆ ಎಂಬ ಎಚ್ಚರಿಕೆ ಸಂದೇಶಗಳನ್ನು ಸೇರಿಸುತ್ತಿದೆ. ಇನ್ನೂ ಪ್ರತೀಕ್ ಸಿನ್ಹಾ ವಿರುದ್ಧ ಎದ್ದಿರುವ ಟ್ರಾಲ್ ಸೇನೆಗೂ ಜನ ತಿರುಗಿಸಿ ಸತ್ಯದರ್ಶನ ಮಾಡಿಸುತ್ತಿದ್ದಾರೆ. ಬಿಜೆಪಿ ಮುಖಂಡರ ವಿರುದ್ಧ ನಕಲು ಮಾಡಿರುವ ಆರೋಪ ಹೊರಿಸಿ ಕಾಂಗ್ರೆಸ್ ಮುಖಂಡರು ಕೇಸು ದಾಖಲಿಸಿದ್ದಾರೆ.

ದೆಹಲಿ ಹೈಕೋರ್ಟ್ ಅನಧಿಕೃತವಾಗಿ ಕೆಲವು ರಾಜಕಾರಣಿಗಳು ರೆಮ್ಡಿಸಿವರ್ ಔಷಧಿಯನ್ನು ಶೇಖರಿಸಿಟ್ಟುಕೊಂಡು ಜನರಿಗೆ ಹಂಚುತ್ತಿರುವ ಬಗ್ಗೆ ತನಿಖೆ ನಡೆಸಿ ಎಂದು ಹೇಳಿದೆ ಎಂಬ ನೆಪ ಒಡ್ಡಿ, ಒಕ್ಕೂಟ ಸರ್ಕಾರದ ಅಡಿಯಲ್ಲಿ ಬರುವ ದೆಹಲಿ ಪೊಲೀಸರು ಯುವ ಕಾಂಗ್ರೆಸ ಅಧ್ಯಕ್ಷ ಶ್ರೀನಿವಾಸ ಬಿವಿ ಅವರನ್ನು ವಿಚಾರಣೆ ನಡೆಸಿದ್ದರು. ಕರ್ನಾಟಕ ಮೂಲದವರಾದ ಶ್ರೀನಿವಾಸ್ ಕೋವಿಡ್ ಎರಡನೇ ಅಲೆಯ ಸಮಯದಲ್ಲಿ ದೆಹಲಿಯಲ್ಲಿ ಸರ್ಕಾರದ ಸಹಾಯ ಸಿಗದೆ ಒದ್ದಾಡುತ್ತಿದ್ದ ಎಷ್ಟೋ ಜನಕ್ಕೆ ಆಕ್ಸಿಜನ್ ಒದಗಿಸುವುದರಿಂದ ಹಿಡಿದು, ಹಾಸ್ಪಿಟಲ್ ಬೆಡ್ ಹುಡುಕಿಕೊಡುವವರೆಗೆ ತಮ್ಮ ಶಕ್ತಿ ಮೀರಿ ಸಹಾಯ ಮಾಡಿ ದೇಶದ ಗಮನ ಸೆಳೆದಿದ್ದರು. ಅತ್ತ ಪೊಲೀಸ್ ವಿಚಾರಣೆಯ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾಯಿತು. ನಂತರ ಇದರ ಬಗ್ಗೆ ವರದಿ ನೀಡಿದ್ದ ದೆಹಲಿ ಪೊಲೀಸರು ಶ್ರೀನಿವಾಸ್ ಅವರ ಕೆಲಸವನ್ನು ಶ್ಲಾಘಿಸಿದ್ದರು. ಅವರು ಯಾವುದೇ ತಪ್ಪೆಸಗಿಲ್ಲ ಎಂದರು. ಆದರೆ ಇದು ಅಷ್ಟಕ್ಕೇ ನಿಲ್ಲಲಿಲ್ಲ. ಕಾಂಗ್ರೆಸ್ ಟೂಲ್‌ಕಿಟ್ ಎಂದು ಆರೋಪ ಮಾಡಿದ ಸಮಯದಲ್ಲಿ ಬಿಜೆಪಿ ಮುಖಂಡರು, #ಐವೈಸಿ (ಇಂಡಿಯನ್ ಯೂಥ್ ಕಾಂಗ್ರೆಸ್) ಎಂದು ಟ್ಯಾಗ್ ಮಾಡಿದವರಿಗೆ ಮಾತ್ರ ಶ್ರೀನಿವಾಸ್ ಸಹಾಯ ಮಾಡುತ್ತಿದ್ದು ಇದು ಟೂಲ್‌ಕಿಟ್ ಭಾಗವಾಗಿದೆ ಎಂದು ಜರಿಯುವುದಕ್ಕೆ ಪ್ರಾರಂಭಿಸಿದರು. ಆದರೆ ಮತ್ತೆ ಆಲ್ಟ್‌ನ್ಯೂಸ್ ಇದರ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿ, ಯುವ ಕಾಂಗ್ರೆಸ್‌ಅನ್ನು ಟ್ಯಾಗ್ ಮಾಡದ ಎಷ್ಟೋ ಪ್ರಕರಣಗಳಲ್ಲಿ ಶ್ರೀನಿವಾಸ್ ಸಹಾಯ ಮಾಡಿದ್ದನ್ನು ಪಟ್ಟಿ ಮಾಡಿತ್ತು.

ಇನ್ನೂ ಉತ್ತರ ಪ್ರದೇಶದ ಮಾಡೆಲ್ ಬಗ್ಗೆ ಬೊಗಳೆ ಬಿಡುತ್ತಿದ್ದವರಿಗೆ ಗಂಗಾ ನದಿಯಲ್ಲಿ ತೇಲುತ್ತಿರುವ ನೂರಾರು ಹೆಣಗಳ ಬಗ್ಗೆ ಏನು ಉತ್ತರ ನೀಡಬೇಕೆಂದು ತಿಳಿಯುತ್ತಿಲ್ಲ. ಟೀಕಿಸಿದವರನ್ನು ಬೆದರಿಸುವ, ಸುಳ್ಳು ಕೇಸು ಜಡಿದು ಜೈಲಿಗೆ ಅಟ್ಟುವ ಅಭ್ಯಾಸವಾಗಿದ್ದ ಅಲ್ಲಿನ ಸರ್ಕಾರಕ್ಕೆ ಸದ್ಯಕ್ಕೆ ಕೋವಿಡ್ ಅಂಕಿ ಸಂಖ್ಯೆಗಳನ್ನು ಮ್ಯಾನಿಪ್ಯಲೇಟ್ ಮಾಡುವುದಕ್ಕೆ ಸಮಯ ಸಾಲುತ್ತಿರುವಂತೆ ಕಾಣುತ್ತಿಲ್ಲ. ಇದರ ಮಧ್ಯೆ ಮೂರು ಬಿಜೆಪಿ ಶಾಸಕರು ಕೋವಿಡ್ ಎರಡನೇ ಅಲೆಯಲ್ಲಿ ಮೃತಪಟ್ಟಿದ್ದರೆ, ಒಬ್ಬ ಸಚಿವರೂ ಇತ್ತೀಚೆಗಷ್ಟೇ ಕೊರೊನಾ ಇಂದ ತೀರಿಕೊಂಡದ್ದು ವರದಿಯಾಗಿತ್ತು. ಒಬ್ಬ ಬಿಜೆಪಿ ಶಾಸಕ ವಿಡಿಯೋದಲ್ಲಿ ಕಾಣಿಸಿಕೊಂಡು ಕೊರೊನಾ ಚಿಕಿತ್ಸೆಗಾಗಿ ನಾನೇ ಇಷ್ಟು ಸಮಸ್ಯೆಯಲ್ಲಿ ಇದ್ದೇನೆ ಅಂದರೆ ಸಾಮನ್ಯರು ಮತ್ತು ಬಡವರ ಪಾಡೇನು ಅಂದಿದ್ದರು. ಮತ್ತೊಬ್ಬ ಶಾಸಕ ರಾಕೇಶ್ ರಾಥೋರ್, ಇಲ್ಲಿ ಯಾರ ಮಾತನ್ನೂ ಆಲಿಸಲಾಗುವುದಿಲ್ಲ. ನಮ್ಮ ವಿರುದ್ಧವೇ ದೇಶದ್ರೋಹದ ಪ್ರಕರಣ ಹಾಕುವ ಬೆದರಿಕೆ ಇದೆ ಎಂದಿದ್ದರು. ಇಂತಹ ರಾಮರಾಜ್ಯ ಸೃಷ್ಟಿಸಿರುವ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮೊದಲನೇ ಅಲೆಯನ್ನು ಸೋಲಿಸಿದ್ದೆವು, ಎರಡನೇ ಅಲೆಗೆ ಬ್ರೇಕ್ ಹಾಕಿದ್ದೇವೆ ಮತ್ತು ಮೂರನೇ ಅಲೆಗೆ ಸನ್ನದ್ಧರಾಗಿದ್ದೇವೆ ಎಂದು ಪತ್ರಕರ್ತರಿಗೆ ಹೇಳಿದ್ದು ಎಷ್ಟು ಹಾಸ್ಯಾಸ್ಪದವಾಗಿದೆ ಅಲ್ಲವೇ?

ಮೇ 20ರಂದು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಪ್ರಧಾನಿ ಕೋವಿಡ್ ನಿರ್ವಹಣೆಯ ಬಗ್ಗೆ ಆನ್ಲೈನ್ ಸಭೆ ನಡೆಸಿದ್ದರು. ಸದ್ಯಕ್ಕೆ ಕೋವಿಡ್ ನಿರ್ವಹಣೆಯ ಹೊಣೆ ಹೊತ್ತಿರುವುದು ರಾಜ್ಯ ಸರ್ಕಾರಗಳೇ! ಈ ಸಮಯದಲ್ಲಿ ರಾಜ್ಯಗಳು ಕೊರೊನಾ ಬಿಕ್ಕಟ್ಟನ್ನು ಹೇಗೆ ನಿರ್ವಹಿಸುತ್ತಿವೆ ಎಂದು ತಿಳಿದು, ಹೆಚ್ಚೆಚ್ಚು ಮುಖ್ಯಮಂತ್ರಿಗಳ ಮಾತುಕತೆಗೆ ಅವಕಾಶ ನೀಡಬೇಕಿತ್ತು. ಆದರೆ ಸಭೆ ಮುಗಿದ ನಂತರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ‘ಒಂದು ದೇಶ ಮತ್ತು ಎಲ್ಲರಿಗೂ ಅಪಮಾನ ಮಾತ್ರ’ ಎಂದು ಹೇಳಿ ಸಭೆಯಲ್ಲಿ ಮುಖ್ಯಮಂತ್ರಿಗಳಿಗೆ ಮಾತನಾಡಲು ಅವಕಾಶ ನೀಡದಿರುವುದರ ಬಗ್ಗೆ ದೂರಿದ್ದರು. ಇದೇನೋ ರಾಜಕೀಯ ವಿವಾದ ಇರಬಹುದೇ ಎಂದು ನೋಡಿದರೆ, ಕೆಲವು ವಾರಗಳ ಹಿಂದೆ ಜಾರ್ಖಂಡ ಮುಖ್ಯಮಂತ್ರಿ ಹೇಮಂತ್ ಸೊರೇನ್ ಕೂಡ ಇದೇ ರೀತಿಯ ಅರೋಪ ಮಾಡಿದ್ದು ನೆನಪಿಸಿಕೊಳ್ಳಬಹುದು. ಒಂದು ಕಡೆಯಿಂದ ಮಾತನಾಡುವುದಲ್ಲ, ನಮ್ಮ ಮಾತನ್ನೂ ಕೇಳಿಸಿಕೊಳ್ಳಿ ಎಂದಿದ್ದರು ಅವರು ಪ್ರಧಾನಿ ಮೋದಿಯವರಿಗೆ. ಹಾಗೆಯೇ ಕಳೆದ ಬಾರಿ ಮುಖ್ಯಮಂತ್ರಿಗಳ ಸಭೆಯಲ್ಲಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸಭೆಯ ನೇರಪ್ರಸಾರ ಮಾಡುತ್ತಿದ್ದಾರೆ ಎಂಬ ಕಾರಣಕ್ಕಾಗಿ ಅದರ ವಿರುದ್ಧ ಸಭೆಯಲ್ಲೆ ಪ್ರಧಾನಿ ಕುಪಿತಗೊಂಡು ಮಾತನಾಡಿದ್ದರಲ್ಲದೆ, ಬಿಜೆಪಿ ಐಟಿ ಸೆಲ್ ಇದನ್ನು ಬಳಸಿಕೊಂಡು ಕೇಜ್ರಿವಾಲ ತೇಜೋವಧೆಗೆ ಇಳಿದಿತ್ತು. ಕೊರೊನಾ ನಿರ್ವಹಣೆಗಿಂತಲೂ ಶಿಷ್ಟಾಚಾರದ ಕನ್ಸರ್ನ್ ಅಲ್ಲಿ ಹೆಚ್ಚಾಗಿತ್ತು.

ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ಅವರ ತೇಜೋವಧೆ, ಲಸಿಕೆ ಇಲ್ಲದಿರುವುದಕ್ಕೆ ಕಾಂಗ್ರೆಸ್ ಅನುಮಾನ ವ್ಯಕ್ತಪಡಿಸಿದ್ದೇ ಕಾರಣ ಎಂಬಂತಹ ಬಾಲಿಶ ಹೇಳಿಕೆಗಳೂ ಸೇರಿದಂತೆ ಇಂತಹ ಘಟನೆಗಳು ಎಗ್ಗಿಲ್ಲದೆ ಇಂದು ನಡೆಯುತ್ತಿವೆ. ಇಂತಹ ಸಾಂಕ್ರಾಮಿಕ ವಿಪತ್ತಿನ ಸಮಯದಲ್ಲಿ ತಮ್ಮ ತಪ್ಪುಗಳನ್ನು ಒಪ್ಪಿಕೊಂಡು, ತಿದ್ದಿಕೊಂಡು ಎಲ್ಲರನ್ನು ಒಟ್ಟಿಗೆ ಕರೆದುಕೊಂಡು, ಸಲಹೆ ಸೂಚನೆಗಳನ್ನು ಸ್ವೀಕರಿಸಿ ಮುಂದಿನ ಹೆಜ್ಜೆಯಿಟ್ಟು ಹೋರಾಡಬೇಕಿರುವ ಸರ್ಕಾರಗಳು ಮತ್ತು ಮುಖಂಡರು ಯಾವುದಕ್ಕೂ ನಾವು ಕೇರ್ ಮಾಡುವಿದಿಲ್ಲ ಎಂಬ ತಮ್ಮ ಹಳೇ ಧಾಟಿಯಲ್ಲಿ, ಈಗಲೂ ಕೇವಲ ಪರ್ಸೆಪ್ಷನ್ ನಿರ್ವಹಣೆಯಿಂದ ಏನನ್ನು ಬೇಕಾದರೂ ಗೆಲ್ಲಬಹುದೆಂಬ ಹುಸಿ ಪಾಸಿಟಿವಿಟಿಯಲ್ಲಿ ಮೆರೆಯುತ್ತಿರುವುದು ನಮ್ಮ ನಾಡಿನ ದುರಂತವಾಗಿದೆ. ನಾಗರಿಕರು ಎಚ್ಚರಿಕೆಯಿಂದ ಎಲ್ಲವನ್ನೂ ನೋಡುತ್ತಿದ್ದಾರೆ. ದುರಹಂಕಾರಕ್ಕೆ ಮದ್ದು ನೀಡಲಿದ್ದಾರೆ.

– ಗುರುಪ್ರಸಾದ್ ಡಿ ಎನ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...