ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿ ಬಸ್ ಪ್ರಯಾಣ ದರವನ್ನು ಶೇ.15ರಷ್ಟು ಹೆಚ್ಚಿಸಲು ಗುರುವಾರ (ಜ.2) ನಡೆದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ಅನುಮೋದನೆ ನೀಡಿದೆ.
ದರ ಹೆಚ್ಚಳ ಕೋರಿ ನಾಲ್ಕು ಸಾರಿಗೆ ನಿಗಮಗಳು ಸಲ್ಲಿಸಿದ್ದ ಪ್ರಸ್ತಾವನೆಗೆ ಸರ್ಕಾರ ಸಮ್ಮತಿ ಸೂಚಿಸಿದೆ. ಪರಿಷ್ಕೃತ ದರ ಇದೇ ಭಾನುವಾರದಿಂದ (ಜ.5) ಜಾರಿಗೆ ಬರಲಿದೆ.
ಸಚಿವ ಸಂಪುಟ ಸಭೆಯ ಬಳಿಕ ವಿಧಾನಸೌಧದ ಸಮಿತಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ ಪಾಟೀಲ್ ಅವರು “ಡೀಸೆಲ್ ದರ ಮತ್ತು ಸಿಬ್ಬಂದಿ ವೆಚ್ಚ ಹೆಚ್ಚಳವಾಗಿರುವುದರಿಂದ ಮತ್ತು ದರ ಪರಿಷ್ಕರಣೆ ಮಾಡದೆ ಹಲವು ವರ್ಷಗಳೇ ಆಗಿರುವುದರಿಂದ ಪರಿಷ್ಕರಣೆಗೆ ಒಪ್ಪಿಗೆ ನೀಡಲಾಗಿದೆ” ಎಂದು ಸಮರ್ಥಿಸಿಕೊಂಡರು.
ಈ ಹಿಂದೆ ದರ ಹೆಚ್ಚಳ ಮಾಡಿದಾಗ ರಾಜ್ಯ ನಾಲ್ಕೂ ಸಾರಿಗೆ ನಿಗಮಗಳ ಒಟ್ಟು ಡೀಸೆಲ್ ವೆಚ್ಚ 9.16 ಕೋಟಿ ರೂಪಾಯಿ ಇತ್ತು. ಈಗ ಆ ಮೊತ್ತ 13.21 ಕೋಟಿ ರೂ.ಗೆ ಹೆಚ್ಚಳವಾಗಿದೆ. ನಾಲ್ಕೂ ಸಾರಿಗೆ ನಿಗಮಗಳ ಪ್ರತಿದಿನದ ಸಿಬ್ಬಂದಿ ವೆಚ್ಚ 12.85 ಕೋಟಿ ರೂ. ಇದ್ದದ್ದು ಈಗ 18.36 ಕೋಟಿ ರೂ.ಗೆ ಏರಿಕೆಯಾಗಿದೆ. ಪ್ರತಿದಿನ 9.56 ಕೋಟಿ ರೂ. ಹೆಚ್ಚುವರಿ ಹೊರೆ ಆಗುತ್ತಿದೆ. ಅದನ್ನು ಸರಿದೂಗಿಸಲು ದರ ಹೆಚ್ಚಳ ಅನಿವಾರ್ಯವಾಗಿತ್ತು ಎಂದು ಹೇಳಿದರು.
ಎಲ್ಲಾ ನಿಗಮಗಳು, ನಗರ ಬಸ್‌ಗಳು, ಐಷಾರಾಮಿ ಬಸ್‌ಗಳು ಸೇರಿದಂತೆ ಎಲ್ಲರಿಗೂ ಶೇ.15ರಷ್ಟು ದರ ಪರಿಷ್ಕರಿಸಲಾಗಿದೆ. ಇದರಿಂದ ಪ್ರತಿ ತಿಂಗಳು 74.85 ಕೋಟಿ ರೂ. ಆದಾಯ ಹೆಚ್ಚಾಗಲಿದೆ. ಶಕ್ತಿ ಯೋಜನೆಗಾಗಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ 5,015 ಕೋಟಿ ರೂ. ಮೀಸಲಿಡಲಾಗಿದೆ. ಪ್ರತಿ ತಿಂಗಳು ನಾಲ್ಕೂ ನಿಗಮಗಳಿಗೆ 417.92 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಹೊರೆಯಾಗುವುದಿಲ್ಲ. ಕರ್ನಾಟಕ ಅತ್ಯುತ್ತಮ ಆರ್ಥಿಕ ಹೊಣೆಗಾರಿಕೆಯನ್ನು ಅನುಷ್ಠಾನ ಮಾಡಿರುವ ರಾಜ್ಯ ಎಂದು ಸಚಿವರು ತಿಳಿಸಿದರು.
2 ಸಾವಿರ ಕೋಟಿ ರೂ. ಸಾಲ ಪಡೆಯಲು ಒಪ್ಪಿಗೆ
ನಾಲ್ಕು ಸಾರಿಗೆ ನಿಗಮಗಳಿಗೆ ಭವಿಷ್ಯ ನಿಧಿ ಬಾಕಿ ಮತ್ತು ಇಂಧನ ಬಾಕಿ ಹೊಣೆಗಾರಿಕೆಯನ್ನು ಪಾವತಿಸಲು 2,000 ಕೋಟಿ ರೂ. ಸರ್ಕಾರ ಖಾತರಿಯೊಂದಿಗೆ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಸಚಿವ ಹೆಚ್.ಕೆ ಪಾಟೀಲ್ ತಿಳಿಸಿದರು.
ಸಾರಿಗೆ ನಿಗಮಗಳು ಹಣಕಾಸು ಸಂಸ್ಥೆಗಳಿಂದ ಪ್ರತ್ಯೇಕವಾಗಿ ಸಾಲ ಪಡೆಯಬಹುದು. ಅದನ್ನು ಮರು ಪಾವತಿಸಲು ನಿಗಮಗಳು ವಿಫಲವಾದರೆ ಸರ್ಕಾರ ನಿಗಮಗಳ ನೆರವಿಗೆ ಬರಲಿದೆ. ಹೊಣೆ ಹೊತ್ತುಕೊಳ್ಳಲಿದೆ ಎಂದು ಸಚಿವರು ವಿವರಿಸಿದರು.
ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯನ್ನು ವಿಭಜಿಸಿ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ರಚಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.
ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆಗಳಿರಲಿವೆ. ಧಾರವಾಡ ಮಹಾನಗರ ಪಾಲಿಕೆ ಆದ ಬಳಿಕ ಅದರ ವ್ಯಾಪ್ತಿಯಲ್ಲಿ 2,75,339 ಜನಸಂಖ್ಯೆ ಇರುತ್ತದೆ. ಒಟ್ಟು ವಿಸ್ತೀರ್ಣ 120.94.ಚ.ಕಿ.ಮೀ ಹಾಗೂ ಜನಸಾಂದ್ರತೆ 2,227 ಇರುತ್ತದೆ. ಹುಬ್ಬಳ್ಳಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜನಸಂಖ್ಯೆ 6,68,449 ಮತ್ತು ವಿಸ್ತೀರ್ಣ 127.05 ಚ.ಕಿ.ಮೀ, ಜನಸಾಂದ್ರತೆ 5,261 ಇರುತ್ತದೆ ಎಂದು ಸಚಿವ ಹೆಚ್.ಕೆ ಪಾಟೀಲ್ ವಿವರಿಸಿದ್ದಾರೆ.
ಇದನ್ನೂ ಓದಿ : ಏಷ್ಯಾದ ಅತ್ಯಂತ ಕೆಟ್ಟ ಟ್ರಾಫಿಕ್ ನಗರಗಳ ಪಟ್ಟಿಯಲ್ಲಿ ಬೆಂಗಳೂರು-ಪುಣೆಗೆ ಅಗ್ರ ಸ್ಥಾನ


