ಗೋವುಗಳನ್ನು ದತ್ತು ಪಡೆಯುವ ಸರ್ಕಾರದ ಪುಣ್ಯಕೋಟಿ ದತ್ತು ಯೋಜನೆಗಾಗಿ ಸರ್ಕಾರಿ ನೌಕರರು ನವೆಂಬರ್ ತಿಂಗಳಿನಲ್ಲಿ ದೇಣಿಗೆ ನೀಡುತ್ತಿದ್ದೇವೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಅಧ್ಯಕ್ಷರಾದ ಸಿ.ಎಸ್ ಷಡಕ್ಷರಿಯವರು ತಿಳಿಸಿದ್ದಾರೆ.
ಸರ್ಕಾರಿ ನೌಕರರು ಮತ್ತು ನಿಗಮ ಮಂಡಳಿಗಳ ಪ್ರತಿನಿಧಿಗಳನ್ನೊಳಗೊಂಡ ನಿಯೋಗವು ಇಂದು ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿದ ನಂತರ ಮಾತನಾಡಿದ ಅವರು, ರಾಜ್ಯದ 9.5 ಲಕ್ಷ ಸರಕಾರಿ ನೌಕರರು, ನಿಗಮ ಮಂಡಳಿಗಳ ನೌಕರರು ದೇಣಿಗೆ ನೀಡಲು ಮುಂದಾಗಿದ್ದೇವೆ ಎಂದಿದ್ದಾರೆ.
ಸರ್ಕಾರಿ ನೌಕರರು ಇದುವರೆಗೂ ನೆರೆ, ಭೂಕಂಪ, ಕಾರ್ಗಿಲ್ ಯುದ್ದ, ಕೋವಿಡ್‌ನಂತಹ ದುರಂತದ ಸಂದರ್ಭದಲ್ಲಿ ದೇಣಿಗೆ ನೀಡುವ ಮೂಲಕ ಸಾಮಾಜಿಕ ಕಾಳಜಿಯ ಬದ್ದತೆಯ ಪ್ರದರ್ಶನ ಮಾಡಿದ್ದೇವೆ. ಈಗ ಸಿಎಂ ಬಸವರಾಜ ಬೊಮ್ಮಾಯಿಯವರು ಮನವಿ ಮಾಡಿರುವುದರಿಂದ ಕ್ಲಾಸ್ ಒನ್ ಅಧಿಕಾರಿಗಳು ತಲಾ 11,000 ರೂ, ಗ್ರೂಪ್ ಬಿ ನೌಕರರು 5,000 ರೂ ಮತ್ತು ಗ್ರೂಪ್ ಸಿ ನೌಕರರು 400 ರೂ ನೀಡುವ ಮೂಲಕ ಯೋಜನೆಗೆ ಕೈ ಜೋಡಿಸುತ್ತಿದ್ದೇವೆ ಎಂದಿದ್ದಾರೆ.
ಹೀಗೆ ಸಂಗ್ರಹವಾಗುವ ಸುಮಾರು 80- 100 ಕೋಟಿ ರೂ ವೆಚ್ಚದಲ್ಲಿ 1 ಲಕ್ಷ ಗೋವುಗಳನ್ನು ಅದರಲ್ಲಿಯೂ ಅಶಕ್ತ, ಕಸಾಯಿಖಾನೆಗೆ ಕಳಿಸುವ ಗೋವುಗಳನ್ನು ಸಾಕುವಂತಹ ಪುಣ್ಯಕೋಟಿ ಕಾರ್ಯಕ್ಕೆ ನಾಲ್ಕನೇ ಹಂತವಾಗಿ ತೊಡಗಿಸಿಕೊಂಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಈ ಪುಣ್ಯಕೋಟಿ ಯೋಜನೆಗೆ ಸರ್ಕಾರಿ ನೌಕರರಿಂದ ದೇಣಿಗೆ ವಸೂಲಿ ಮಾಡುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ /ಎಸ್ಟಿ ನೌಕರರ ಸಮನ್ವಯ ಸಮಿತಿಯು ದೇಣಿಗೆ ನೀಡಬೇಕೆಂಬ ಪ್ರಸ್ತಾಪವನ್ನು ತಿರಸ್ಕರಿಸಿದೆ.
ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ /ಎಸ್ಟಿ ನೌಕರರ ಸಮನ್ವಯ ಸಮಿತಿಯ ಅಧ್ಯಕ್ಷರಾದ ಡಿ. ಶಿವ ಶಂಕರ್ ರವರು ನಾನುಗೌರಿ.ಕಾಂ ಜೊತೆ ಮಾತನಾಡಿ, “ಸರ್ಕಾರಿ ನೌಕರರು ದೇಣಿಗೆ ಕೊಡಲೇಬೇಕೆಂದು ಸರ್ಕಾರ ಕಡ್ಡಾಯ ಮಾಡಿಲ್ಲ. ಸಾಧ್ಯವಾದವರು ಇಚ್ಚಾನುಸಾರ ದೇಣಿಗೆ ಕೊಡಿ ಎಂದಿದೆ. ಆದರೆ ಈ ಕುರಿತು ತಳಮಟ್ಟದ ನೌಕರರ ಜೊತೆ ಚರ್ಚಿಸಿ ಒಪ್ಪಿಗೆ ಪಡೆದು ದೇಣಿಗೆ ಸಂಗ್ರಹಿಸಬೇಕಿದ್ದ ನೌಕರರ ಸಂಘದ ಅಧ್ಯಕ್ಷರು ಎಲ್ಲೊ ಕುಳಿತು ತೀರ್ಮಾನ ಮಾಡಿ ಸರ್ಕಾರವನ್ನು ಒಲೈಸುವ ಕೆಲಸ ಮಾಡುತ್ತಿದ್ದಾರೆ. ನೀವು ತಳಮಟ್ಟದಲ್ಲಿ ಯಾವುದೇ ನೌಕರರನ್ನು ಕೇಳಿದರೆ ಅವರು ವಿರೋಧ ವ್ಯಕ್ತಪಡಿಸುತ್ತಾರೆ. ಆದರೆ ಸಂಘದವರು ನೇರವಾಗಿ ನೌಕರರ ಖಾತೆಯಿಂದ ಹಣ ಕಟ್ ಮಾಡಿಕೊಳ್ಳುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಂದು ಅಸಂಖ್ಯಾತ ಮಕ್ಕಳು ಹಸಿವಿನಿಂದ ಸಾಯುತ್ತಿದ್ದಾರೆ. ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇದಕ್ಕಾಗಿ ದೇಣಿಗೆ ಕೇಳಿದರೆ ನಾವು ಸಂತೋಷದಿಂದ ಕೊಡುತ್ತೇವೆ. ಅಧಿಕಾರಿಗಳು ಈ ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಮುಂದಾಗಬೇಕು. ಅವರಿಗೆ ಉತ್ತಮ ಶಿಕ್ಷಣ ಕೊಟ್ಟು ಉತ್ತಮ ನಾಗರೀಕರನ್ನಾಗಿ ರೂಪಿಸಬೇಕು. ಆಗ ಮಾತ್ರ ನಮ್ಮ ದೇಶ ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಆದರೆ ಹಸಿವಿನಿಂದ ಮಕ್ಕಳು ಸಾಯುತ್ತಿರುವಾಗ ಹಸುಗಳನ್ನು ಮಾತ್ರ ಸಾಕಿ ಎನ್ನುವುದು ಎಷ್ಟು ವೈಜ್ಞಾನಿಕ? ನಮ್ಮದು ಜಾತ್ಯಾತೀತ ದೇಶ. ಯಾವುದೇ ಒಂದು ಭಾಷೆ, ಒಂದು ಧರ್ಮಕ್ಕೆ ಮಣೆ ಹಾಕುವುದು ಸರಿಯಲ್ಲ. ಆದರೆ ನೌಕರರ ಸಂಘದ ನಡೆ ನೋಡಿದರೆ ಒಂದು ಜಾತಿಯ, ಒಂದು ಧರ್ಮದ ಪರವಾಗಿ ಕೆಲಸ ಮಾಡುವ ಷಡ್ಯಂತ್ರ ನಡೆಯುತ್ತಿದೆ. ಮುಖ್ಯಮಂತ್ರಿಗಳನ್ನು ಒಲೈಸುವ ಭರದಲ್ಲಿ ನಡೆಯುತ್ತಿರುವ ಜನಾನುರಾಗಿಯಲ್ಲದ, ಜನೋಪಯೋಗಿಯಲ್ಲದ ಈ ಕೆಲಸವನ್ನು ನಾವು ಖಂಡಿಸುತ್ತೇವೆ ಎಂದು ಡಿ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಏನಿದು ಪುಣ್ಯಕೋಟಿ ಯೋಜನೆ
ರಾಜ್ಯದ ಸರ್ಕಾರಿ ಮತ್ತು ಖಾಸಗೀ ಗೋಶಾಲೆಗಳಲ್ಲಿರುವ ಅಲ್ಲದೆ ವಯಸ್ಸಾದ, ಖಾಯಿಲೆಗೊಳಗಾದ, ತಪ್ಪಿಸಿಕೊಂಡ ಹಾಗೂ ಅಕ್ರಮ ಸಾಗಾಟದಲ್ಲಿ ವಶಕ್ಕೆ ಪಡೆದ ಗೋವುಗಳನ್ನು ಸಾಕುವುದಕ್ಕಾಗಿ ಕರ್ನಾಟಕ ಸರ್ಕಾರವು ಪುಣ್ಯಕೋಟಿ ದತ್ತು ಯೋಜನೆಯನ್ನು ಜಾರಿಗೆ ತಂದಿದೆ. ಚಿತ್ರನಟ ಸುದೀಪ್‌ರವರನ್ನು ರಾಯಭಾರಿಯನ್ನಾಗಿ ನೇಮಿಸಿದೆ. ಆದರೆ ಈ ಯೋಜನೆ ಜಾರಿಗೆ ಆರ್ಥಿಕ ಮುಗ್ಗಟ್ಟು ಉಂಟಾಗಿದ್ದರಿಂದ ಸಿಎಂ ಬಸವರಾಜ ಬೊಮ್ಮಾಯಿಯವರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟಕ್ಕೆ ಪತ್ರ ಬರೆದು ಸರ್ಕಾರಿ ನೌಕರರು ದೇಣಿಗೆ ನೀಡಬೇಕೆಂದು ಮನವಿ ಮಾಡಿದ್ದರು.
ಇದನ್ನೂ ಓದಿ: ಋತುಮತಿಯಾಗದ ಬಾಲಕಿ ಮೇಲೆ ಅತ್ಯಾಚಾರ; ಮತ್ತೊಂದು ಪೋಕ್ಸೋ ಪ್ರಕರಣದಲ್ಲಿ ಮುರುಘಾ ಶರಣರ ಮತ್ತಷ್ಟ ವಿಕೃತಿ ಬಯಲು


