Homeಕರ್ನಾಟಕಮತಾಂತರ ನಿಷೇಧ ಕಾಯ್ದೆಯಡಿ ರಾಜ್ಯದಲ್ಲಿ ಮೊದಲ ಪ್ರಕರಣ ದಾಖಲು: ಒಪ್ಪಿತ ಮತಾಂತರಕ್ಕೂ ಕಾಯ್ದೆ ತೊಡಕು

ಮತಾಂತರ ನಿಷೇಧ ಕಾಯ್ದೆಯಡಿ ರಾಜ್ಯದಲ್ಲಿ ಮೊದಲ ಪ್ರಕರಣ ದಾಖಲು: ಒಪ್ಪಿತ ಮತಾಂತರಕ್ಕೂ ಕಾಯ್ದೆ ತೊಡಕು

- Advertisement -
- Advertisement -

ಈ ವರ್ಷದ ಸೆಪ್ಟೆಂಬರ್ 30ರಂದು ಅಧಿಸೂಚನೆ ಹೊರಡಿಸಲಾದ ‘ಮತಾಂತರ ವಿರೋಧಿ ಕಾನೂನು’ ಎಂದೇ ಕರೆಯಲ್ಪಡುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣಾ ಕಾಯ್ದೆಯಡಿ ರಾಜ್ಯ ಪೊಲೀಸರು ಮೊದಲ ಪ್ರಕರಣವನ್ನು ದಾಖಲಿಸಿದ್ದಾರೆ.

ಯಶವಂತಪುರ ಪೊಲೀಸರು ಅಕ್ಟೋಬರ್ 13ರಂದು ಕಾಯ್ದೆಯ ಸೆಕ್ಷನ್ 5ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಉತ್ತರ ಬೆಂಗಳೂರಿನ ಬಿ.ಕೆ.ನಗರದ ನಿವಾಸಿ ಸೈಯದ್ ಮುಯಿನ್ ಅವರನ್ನು ಬಂಧಿಸಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಚಿಕನ್ ಸ್ಟಾಲ್ ನಡೆಸುತ್ತಿರುವ ಮುಯಿನ್, 18 ವರ್ಷದ ಖುಷ್ಬೂ ಎಂಬವರನ್ನು ಮದುವೆಯಾಗುವುದಾಗಿ ಆಮಿಷವೊಡ್ಡಿ ಇಸ್ಲಾಂಗೆ ಮತಾಂತರ ಮಾಡಿದ ಆರೋಪವಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಯುವತಿಯು ಬಲವಂತದ ಮತಾಂತರವನ್ನು ನಿರಾಕರಿಸಿದ್ದಾಳೆ.

ಖುಷ್ಬೂ ಕುಟುಂಬ ಉತ್ತರ ಪ್ರದೇಶದ ಗೋರಖ್‌ಪುರ ಮೂಲದ್ದಾಗಿದ್ದು, ಕಳೆದ 10 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದೆ. ಆಕೆಯ ತಂದೆ ಸುರೇಂದ್ರ ಯಾದವ್ ವೃತ್ತಿಯಲ್ಲಿ ಪೇಂಟರ್. ತಾಯಿ ಜ್ಞಾನಿದೇವಿ ಗೃಹಿಣಿ. ದಂಪತಿಗೆ ಇನ್ನೂ ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗ ಇದ್ದಾರೆ.

ಖುಷ್ಬೂ ನಾಪತ್ತೆಯಾದ ಕೆಲವೇ ಗಂಟೆಗಳ ನಂತರ ಜ್ಞಾನಿದೇವಿಯವರು ಅಕ್ಟೋಬರ್ 5 ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕಳೆದ ಆರು ತಿಂಗಳಿಂದ ಖುಷ್ಬೂಳನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಮುಯಿನ್‌ನೊಂದಿಗೆ ಮಗಳು ಓಡಿಹೋಗಿದ್ದಾಳೆ ಎಂದು ಜ್ಞಾನಿದೇವಿ ಶಂಕೆ ವ್ಯಕ್ತಪಡಿಸಿದ್ದರು.

ಈ ದೂರಿನಲ್ಲಿ ಧಾರ್ಮಿಕ ಮತಾಂತರವನ್ನು ಆರೋಪಿಸಿರಲಿಲ್ಲ. ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ಖುಷ್ಬೂಗಾಗಿ ಹುಡುಕಾಟ ಆರಂಭಿಸಿದ್ದರು. ಮೂರು ದಿನಗಳ ನಂತರ ಅಕ್ಟೋಬರ್ 8ರಂದು ಖುಷ್ಬೂ ಹಿಂತಿರುಗಿದ್ದರು. ತಾನು ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವುದಾಗಿ ಕುಟುಂಬಕ್ಕೆ ತಿಳಿಸಿದ್ದರು.

ಜ್ಞಾನಿದೇವಿ ಮತ್ತು ಸುರೇಂದ್ರ ಯಾದವ್‌ ತನ್ನ ಮಗಳೊಂದಿಗೆ ಚರ್ಚೆಗಿಳಿದರು. ಪೋಷಕರ ಮಾತಿಗೆ ಖುಷ್ಬೂ ಅಸಮ್ಮತಿ ಸೂಚಿಸಿದರು. ಬಲವಂತದ ಮತಾಂತರವನ್ನು ಆರೋಪಿಸಿ ಜ್ಞಾನಿದೇವಿ ಅಕ್ಟೋಬರ್ 13ರಂದು ಮತ್ತೊಂದು ಪೊಲೀಸ್ ದೂರು ದಾಖಲಿಸಿದ್ದಾರೆ. ಹೊಸ ದೂರಿನ ಅನ್ವಯ ಪೊಲೀಸರು ಹೊಸ ಕಾಯ್ದೆಯ ಸೆಕ್ಷನ್ 5ಅನ್ನು ಪ್ರಯೋಗಿಸಿ ಪ್ರಕರಣ ದಾಖಲಿಸಿದ್ದಾರೆ.

ಉಪ ಪೊಲೀಸ್ ಆಯುಕ್ತ (ಉತ್ತರ) ವಿನಾಯಕ ಪಾಟೀಲ್ ಡೆಕ್ಕನ್‌ ಹೆರಾಲ್ಡ್‌ಗೆ ಪ್ರತಿಕ್ರಿಯಿಸಿ, “ನಾವು ಹೊಸ ಕಾನೂನಿನ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದೇವೆ. ಇದು ಮದುವೆಯ ಭರವಸೆಯ ಮೇಲೆ ಧಾರ್ಮಿಕ ಮತಾಂತರ ಮಾಡಿದ ಪ್ರಕರಣವಾಗಿದೆ” ಎಂದು ಮಾಹಿತಿ ನೀಡಿದ್ದಾರೆ.

“ಹುಡುಗಿ ತನ್ನ ಸ್ವಂತ ಇಚ್ಛೆಯ ಮೇರೆಗೆ ಇಸ್ಲಾಂಗೆ ಮತಾಂತರಗೊಂಡಂತೆ ತೋರುತ್ತಿದೆ. ಆದರೆ ಹೊಸ ಕಾನೂನಿನ ಅಡಿಯಲ್ಲಿ ನಿಗದಿಪಡಿಸಿದ ವಿಧಾನವನ್ನು ಮತಾಂತರಕ್ಕೂ ಮುನ್ನ ಅನುಸರಿಸಲಿಲ್ಲ” ಎಂದು ಪೊಲೀಸ್ ಮೂಲಗಳು ತಿಳಿಸಿರುವುದುದಾಗಿ ‘ಡಿಎಚ್‌’ ಉಲ್ಲೇಖಿಸಿದೆ.

ಹೊಸ ಕಾನೂನಿನ ಪ್ರಕಾರ, ”ಧರ್ಮವನ್ನು ಬದಲಾಯಿಸಲು ಬಯಸುವ ಯಾವುದೇ ವ್ಯಕ್ತಿ ಕನಿಷ್ಠ 30 ದಿನಗಳ ಮುಂಚಿತವಾಗಿ ಫಾರ್ಮ್-1ರಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಥವಾ ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ಘೋಷಣೆಯನ್ನು ನೀಡಬೇಕಾಗುತ್ತದೆ.”

ಮತಾಂತರವಾಗುವ ವ್ಯಕ್ತಿಯು ಕನಿಷ್ಠ 30 ದಿನಗಳ ಮುಂಚಿತವಾಗಿ ಫಾರ್ಮ್ II ಅನ್ನು ಸಲ್ಲಿಸಬೇಕು. ಪ್ರಸ್ತಾವಿತ ಧಾರ್ಮಿಕ ಮತಾಂತರಕ್ಕೆ ಆಕ್ಷೇಪಣೆಗಳಿದ್ದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಕರೆ ಮಾಡಬೇಕಿರುತ್ತದೆ.

30 ದಿನಗಳೊಳಗೆ ಆಕ್ಷೇಪಣೆಗಳು ಬಂದಲ್ಲಿ ಕಂದಾಯ ಅಥವಾ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ವಿಚಾರಣೆ ನಡೆಸಬೇಕು. ಈ ವಿಚಾರಣೆಯು ಉದ್ದೇಶಿತ ಪರಿವರ್ತನೆಯ ನಿಜವಾದ ಉದ್ದೇಶ ಮತ್ತು ಕಾರಣವನ್ನು ಪರಿಶೀಲಿಸುತ್ತದೆ.

ವಿಚಾರಣೆಯು ಈ ಕಾಯಿದೆಯಡಿ ಪ್ರಕರಣವನ್ನು ಗುರುತಿಸಿದರೆ, ಜಿಲ್ಲಾಧಿಕಾರಿಗಳು ಕ್ರಿಮಿನಲ್ ಕ್ರಮವನ್ನು ಪ್ರಾರಂಭಿಸಲು ಪೊಲೀಸರಿಗೆ ಸೂಚಿಸುತ್ತಾರೆ. ಪ್ರಸ್ತುತ ಪ್ರಕರಣದಲ್ಲಿ ಮತಾಂತರಗೊಳ್ಳುವ ಮೊದಲು ದಂಪತಿ ಮದುವೆಯಾಗಿರಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದನ್ನೂ ಓದಿರಿ: ಋತುಮತಿಯಾಗದ ಬಾಲಕಿ ಮೇಲೆ ಅತ್ಯಾಚಾರ; ಮತ್ತೊಂದು ಪೋಕ್ಸೋ ಪ್ರಕರಣದಲ್ಲಿ ಮುರುಘಾ ಶರಣರ ಮತ್ತಷ್ಟ ವಿಕೃತಿ ಬಯಲು

ಮುಯಿನ್ ಹುಡುಗಿಯನ್ನು ಆಂಧ್ರಪ್ರದೇಶದ ಪೆನುಕೊಂಡ ದರ್ಗಾಕ್ಕೆ ಕರೆದೊಯ್ದಿದ್ದು, ಅಲ್ಲಿ ಧಾರ್ಮಿಕ ಮತಾಂತರ ಸಮಾರಂಭ ನಡೆಸಲಾಗಿದೆ ಎಂದು ಮೂಲಗಳು ಹೇಳಿವೆ.

ಧರ್ಮವನ್ನು ಬದಲಿಸಿರುವುದು ಏತಕ್ಕೆ ಎಂದು ಪೊಲೀಸರು ಯುವತಿಯನ್ನು ಪ್ರಶ್ನಿಸಿದ್ದಾರೆ. ಆಕೆ ಬಲವಂತದ ಮತಾಂತರ ಆರೋಪವನ್ನು ನಿರಾಕರಿಸಿದ್ದಾಳೆ. ಯುವಕನ ಪೋಷಕರು ಪೊಲೀಸರಿಗೆ, “ಹೊಸ ಕಾನೂನಿನ ಬಗ್ಗೆ ತಿಳಿದಿಲ್ಲ ಮತ್ತು ಘಟನೆ ವಿಷಾದನೀಯ” ಎಂದಿದ್ದಾರೆ.

ಹೊಸ ಕಾನೂನಿನ ಸೆಕ್ಷನ್ 5 ರ ಪ್ರಕಾರ ಬಲವಂತದ ಮತಾಂತರಕ್ಕೆ ಮೂರರಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 25,000 ರೂ. ದಂಡವನ್ನು ವಿಧಿಸಲಾಗುತ್ತದೆ. ನ್ಯಾಯಾಲಯವು ಮುಯಿನ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಪರವಾಗಿಲ್ಲವೇ ಕರ್ನಾಟಕ ಪೊಲೀಸ್ ಎಚ್ಚರದಿಂದ ಇದ್ದಾರೆ.. ಆದರೆ ಅವರಿಗೆ ಒಂದು ಸಾಮಾನ್ಯ ಜ್ಞಾನ ಇಲ್ಲ ಅನ್ನೋದು ತಿಳಿಯಿತು. ಸರ್ಕಾರದ ಈ ಕಾಯ್ದೆ ಏಷ್ಟು ಜನ ಸಾಮಾನ್ಯರಿಗೆ ಗೊತ್ತಿದೆ. ಅಂತ ಕೇಳಿ ಅವರಲ್ಲಿ ಉತ್ತರ ಇಲ್ಲ.. ಈ ಕಾಯ್ದೆ ಕೇವಲ ಒಮ್ಮೆ ಟಿವಿ ಅಲ್ಲಿ ಪ್ರಸಾರಕ್ಕೆ ಸೀಮಿತ. ಕಾಯ್ದೆ ಬಗ್ಗೆ ಜನ ಸಾಮಾನ್ಯರಲ್ಲಿ ಏಷ್ಟು ಅರಿವು ಮೂಡಿಸಿದರೆ ಎಂದು ತಿಳಿಯಬೇಕಿದೆ. ಮಾನ್ಯ ಗೌರಿ. ಕಾಂ ಸಂಸ್ಥೆ ಅವರೇ ದಯಮಾಡಿ ಒಮ್ಮೆ ನಮ್ಮ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಂದರ್ಶನ ಮಾಡಿ ಈ ಮತಾಂತರ ಕಾಯ್ದೆ ಬಗ್ಗೆ ಸಾಮಾನ್ಯರಲ್ಲಿ ಎಷ್ಟರ ಮಟ್ಟಿಗೆ ಅರಿವು, ಮಾಹಿತಿ, ಜ್ಞಾನ ನೀಡಿದ್ದಾರೆ ಎಂದು ಪ್ರಶ್ನಿಸಿ ದಯವಿಟ್ಟು ತಿಳಿಸಲು ಕೇಳಿ ನನ್ನ ಒಂದು ಪುಟ್ಟ ಮನವಿ 🙏🏻🙏🏻🙏🏻

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...