Homeಕರ್ನಾಟಕಯಾರ್‍ಯಾರು ನಾಮಪತ್ರ ಹಿಂಪಡೆದರು? ಇಲ್ಲಿದೆ ವಿವರ

ಯಾರ್‍ಯಾರು ನಾಮಪತ್ರ ಹಿಂಪಡೆದರು? ಇಲ್ಲಿದೆ ವಿವರ

- Advertisement -
- Advertisement -

ಬಂಡಾಯವೆದ್ದು ನಾಮಪತ್ರ ಸಲ್ಲಿಸಿದ್ದ ಅನೇಕರು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದು ಕಣದಿಂದ ಹಿಂದೆ ಸರಿದಿದ್ದಾರೆ. ಜೊತೆಗೆ ತಮ್ಮ ತಮ್ಮ ರಾಜಕೀಯ ಪಕ್ಷಗಳಿಗೆ ಬೆಂಬಲ ಘೋಷಣೆ ಮಾಡಿದ್ದಾರೆ. ಉಳ್ಳಾಲ ಕ್ಷೇತ್ರದಲ್ಲಿ ಆಶ್ಚರ್ಯಕರ ಬೆಳವಣಿಗೆಯಾಗಿದ್ದು, ಜೆಡಿಎಸ್ ಅಭ್ಯರ್ಥಿಯೇ ನಾಮಪತ್ರ ವಾಪಸ್ ಪಡೆದುಕೊಂಡಿರುವುದು ಪಕ್ಷದ ಮುಖಂಡರ ಆಕ್ರೋಶಕ್ಕೆ ಗುರಿಯಾಗಿದೆ.

ನಾಮಪತ್ರ ಪಡೆಯಲು ಇಂದು (ಏ.24) ಕೊನೆಯ ದಿನವಾಗಿರುವ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳೂ ಬಂಡಾಯ ಅಭ್ಯರ್ಥಿಗಳೊಂದಿಗೆ ಮಾತುಕತೆ ನಡೆಸಿ ಬಂಡಾಯ ಶಮನಕ್ಕೆ ಮುಂದಾಗಿದ್ದರು.

ಶಿರಸಿ ಸಿದ್ದಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ್ದ ವೆಂಕಟೇಶ ಹೆಗಡೆ ಹೊಸಬಾಳೆ ಪಕ್ಷದ ಹಿರಿಯರ ಸೂಚನೆಯಂತೆ ನಾಮಪತ್ರ ವಾಪಸ್ ಪಡೆದಿದ್ದಾರೆ.

ಬೆಂಗಳೂರಲ್ಲಿ ಕಾಂಗ್ರೆಸ್ ಪ್ರಮುಖರಾದ ಸಿದ್ದರಾಮಯ್ಯ ಅವರ ಜತೆ ಸಮಾಲೋಚಿಸಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಜೊತೆ ದೂರವಾಣಿ ಮೂಲಕ ಮಾತಾಡಿದ ಬಳಿಕ ಅವರು ನಾಮಪತ್ರ ವಾಪಸ್ ಪಡೆದಿರುವುದಾಗಿ ತಿಳಿಸಿದ್ದಾರೆ.

“ಪಕ್ಷದ ಆದೇಶ ಪಾಲಿಸಲು, ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಅವರಿಗೆ ನನ್ನ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಹಾಗೂ ಪಕ್ಷದ ಗೆಲುವಿಗಾಗಿ ನಿರಂತರವಾಗಿ ಶ್ರಮಿಸುತ್ತೇನೆ” ಎಂದು ಸ್ಪಷ್ಟಪಡಿಸಿದ್ದಾರೆ.

ಬಿಬಿಎಂಪಿ ಮಾಜಿ ಮೇಯರ್ ಗಂಗಾಂಬಿಕೆಯವರು ಟಿಕೆಟ್ ಅಧಿಕೃತವಾಗಿ ಘೋಷಣೆ ಆಗದಿದ್ದರೂ, ಗುರುವಾರ ನಾಮಪತ್ರ ಸಲ್ಲಿಕೆ ಮಾಡಿದ್ದರು. ಆದರೆ ಕಾಂಗ್ರೆಸ್ ವರಿಷ್ಠರು ಕರೆ ಮಾಡಿದ ಬಳಿಕ ನಾಮಪತ್ರ ಹಿಂಪಡೆದಿದ್ದಾರೆ. ಹೀಗಾಗಿ ಚಿಕ್ಕಪೇಟೆಯಿಂದ ಆರ್‌.ವಿ.ದೇವರಾಜ್‌ ಕಾಂಗ್ರೆಸ್‌ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿಯುವಂತಾಗಿದೆ.

“ನಮ್ಮ ಎಲ್ಲಾ ಹೈಕಮಾಂಡ್ ನಾಯಕರು ದೂರವಾಣಿ ಮೂಲಕ ಮಾತನಾಡಿದ್ದಾರೆ. ನಾವು ಕಾಂಗ್ರೆಸ್ ಪಕ್ಷದಲ್ಲೇ ಇರಬೇಕು. ಹಾಗಾಗಿ ನಾಯಕರ ಮಾತಿಗೆ ಬೆಲೆ ಕೊಟ್ಟು ನಾಮಪತ್ರ ವಾಪಸ್ ಪಡೆಯುತ್ತಿದ್ದೇವೆ. ನಮ್ಮದು ಯಾವುದೇ ಡಿಮ್ಯಾಂಡ್ ಇಲ್ಲ” ಎಂದು ಗಂಗಾಂಬಿಕೆ ಪತಿ ಮಲ್ಲಿಕಾರ್ಜುನ ಸ್ಪಪಡಿಸಿದ್ದಾರೆ.

ರಾಯಚೂರು ನಗರ ವಿಧಾನಸಭೆಯ ಕಾಂಗ್ರೆಸ್‌ ಟಿಕೆಟ್ ಆಕಾಂಕ್ಷಿಯಾಗಿದ್ದ ರವಿ ಬೋಸರಾಜ, ಎಂ.ಕೆ.ಬಾಬರ ಮತ್ತು ಎಸ್‌ಡಿಪಿಐನ ತೌಸೀಫ ಅಹಮದ ಉಮೆದುವಾರಿಕೆ ವಾಪಸ್ ಪಡೆದಿದ್ದಾರೆ.

ಕುಮಟಾ ಕ್ಷೇತ್ರದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದ ಶಾರದಾ ಶೆಟ್ಟಿಯವರು ನಾಮಪತ್ರ ಹಿಂಪಡೆದಿದ್ದಾರೆ. “ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೂರವಾಣಿ ಕರೆ ಮಾಡಿ ನಾಮಪತ್ರ ಹಿಂಪಡೆಯುವಂತೆ ಕೇಳಿದರು. ಎಂ.ಎಲ್.ಸಿ. ಅಥವಾ ನಿಗಮ ಮಂಡಳಿ ಅಧ್ಯಕ್ಷ ಹುದ್ದೆ ಕೊಡುವುದಾಗಿಯೂ ಭರವಸೆ ಕೊಟ್ಟರು. ಆದರೆ ನಾನು ರಾಜಕೀಯವಾಗಿಯೇ ನಿವೃತ್ತಿ ಪಡೆಯಲು ಬಯಸಿದ್ದೇನೆ” ಎಂದು ತಿಳಿಸಿದ್ದಾರೆ.

ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಅವರು, “ಪಕ್ಷಕ್ಕಾಗಿ ಹಲವು ವರ್ಷದಿಂದ ನಾನು ಮತ್ತು ನಮ್ಮ ಕುಟುಂಬದವರು ಕೆಲಸ ಮಾಡಿದ್ದೇವೆ. ಆದರೆ ಪಕ್ಷ ಟಿಕೆಟ್ ನೀಡದಿರುವುದು ನೋವುಂಟು ಮಾಡಿದೆ. ಪಕ್ಷದ ನಿರ್ಧಾರದಿಂದ ಬಹಳಷ್ಟು ನೊಂದಿದ್ದೇನೆ. ರಾಜಕೀಯ ನಿವೃತ್ತಿ ಪಡೆದ ಮೇಲೆ ಯಾರೊಬ್ಬರಿಗೂ ಬೆಂಬಲಿಸುವ ಪ್ರಮೇಯವೇ ಇಲ್ಲ. ನಮ್ಮ ಬೆಂಬಲಿಗರು ಯಾರನ್ನಾದರೂ ಬೆಂಬಲಿಸಲು ಸ್ವತಂತ್ರರು. ಪುತ್ರ ರವಿಕುಮಾರ್ ರಾಜಕೀಯ ನಿರ್ಧಾರ ಕೈಗೊಳ್ಳಲು ಸ್ವತಂತ್ರರು” ಎಂದು ಪ್ರತಿಕ್ರಿಯಿಸಿದ್ದಾರೆ.

ಮಾಹಿತಿ ನೀಡದೆ ನಾಮಪತ್ರ ಹಿಂಪಡೆದ ಜೆಡಿಎಸ್ ಅಭ್ಯರ್ಥಿ

ಮಂಗಳೂರು ನಗರ (ಉಳ್ಳಾಲ) ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದ ಅಲ್ತಾಫ್ ಕುಂಪಲ ಪಕ್ಷದ ಮುಖಂಡರಿಗೆ ಮಾಹಿತಿ ನೀಡದೆಯೇ ನಾಮಪತ್ರವನ್ನು ಹಿಂಪಡೆದುಕೊಂಡಿದ್ದು, ಈ ಬಗ್ಗೆ ಜೆಡಿಎಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜಕೀಯ ಗೊಂದಲ ಬೇಡ ಎಂದು ತೀರ್ಮಾನಿಸಿ ಎ.21 ರಂದು ಅವರು ನಾಮಪತ್ರ ವಾಪಸ್ ಪಡೆದಿದ್ದಾರೆ. ಇದರ ಬಳಿಕ ಅವರು ಕೇರಳ ಕಡೆ ತೆರಳಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದರು ಎಂದು ಜೆಡಿಎಸ್‌ನ ಹಿರಿಯ ಮುಖಂಡರೊಬ್ಬರು ತಿಳಿಸಿರುವುದಾಗಿ ‘ವಾರ್ತಾ ಭಾರತಿ’ ವರದಿ ಮಾಡಿದೆ.

ಅಲ್ತಾಫ್ ಕುಂಪಲ ಅವರು ಇತ್ತೀಚೆಗೆ ಜೆಡಿಎಸ್ ಪಕ್ಷದಲ್ಲಿ ಕಾಣಿಸಿಕೊಂಡು ವಿಧಾನಪರಿಷತ್ ಸದಸ್ಯ ಬಿ.ಎಂ ಫಾರುಕ್ ಅವರ ಮನವೊಲಿಸಿ ಜೆಡಿಎಸ್‌ನಿಂದ ಉಳ್ಳಾಲ ಕ್ಷೇತ್ರದಿಂದ ಸ್ಪರ್ಧಿಸಲು ಬಿ- ಫಾರಂ ಪಡೆದುಕೊಂಡಿದ್ದರು.

ಉಳ್ಳಾಲ ನಗರಸಭೆಯ ಜೆಡಿಎಸ್ ಕೌನ್ಸಿಲರ್ ಹಾಗೂ ಜಿಲ್ಲಾ ಮುಖಂಡರ ಜೊತೆಗೆ ನಾಮಪತ್ರ ಸಲ್ಲಿಸಿದ್ದ ಅವರು  ಎ.21 ರಂದು ಅಲ್ತಾಫ್ ಅವರು ತನ್ನ ಪಕ್ಷದ ಮುಖಂಡರುಗಳಿಗೆ ಮಾಹಿತಿಯೇ ಇಲ್ಲದೆ ನಾಮಪತ್ರ ವಾಪಸ್ಸು ಪಡೆದುಕೊಂಡಿದ್ದರು. ಈ ಕುರಿತು ಎ.22 ರಂದು ನೋಟೀಸು ಬೋರ್ಡಿನಲ್ಲಿ ಮಾಹಿತಿಯನ್ನು ಹಾಕಲಾಗಿತ್ತು. ಇದನ್ನು ಗಮನಿಸಿದ ಸ್ಥಳೀಯರು ಜೆಡಿಎಸ್ ಮುಖಂಡರುಗಳಿಗೆ ಮಾಹಿತಿ ನೀಡಿದ್ದಾರೆ. ಮುಖಂಡರು ಅಲ್ತಾಫ್ ಅವರನ್ನು ಸಂಪರ್ಕಿಸಲು ಯತ್ನಿಸಿದರೂ ಕಳೆದ ಎರಡು ದಿನಗಳಿಂದ ಮೊಬೈಲ್ ಸ್ವಿಚ್ ಆಫ್ ಆಗಿತ್ತು.

ನಾಪತ್ತೆಯಾಗಿದ್ದ ಅವರು ಇಂದು ಸುದ್ದಿಗೋಷ್ಠಿ ನಡೆಸಿದ್ದಾರೆ. “ಮಂಗಳೂರು (ಉಳ್ಳಾಲ) ಕ್ಷೇತ್ರದಿಂದ ಜೆಡಿಎಸ್ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದ ನನ್ನನ್ನು ಕಾಂಗ್ರೆಸ್ ಪಕ್ಷದ ತಂಡವೊಂದು ಅಪಹರಿಸಿ ಕರೆದೊಯ್ದು ಬಲವಂತವಾಗಿ ನಾಮಪತ್ರ ಹಿಂತೆಗೆಯುವಂತೆ ಮಾಡಿದೆ” ಎಂದು ಅಲ್ತಾಫ್ ಕುಂಪಲ ಆರೋಪಿಸಿದ್ದಾರೆ.

“ನಾನು ಎಲ್ಲೂ ಓಡಿಹೋಗಿಲ್ಲ. ನನಗೆ ಯಾವುದೇ ರೀತಿಯಲ್ಲಿ ಆಮಿಷ ಒಡ್ಡಲಾಗಿಲ್ಲ. ನಗರ ಪೊಲೀಸ್ ಕಮಿಷನರ್ ಅವರಿಗೆ ಭದ್ರತೆ ನೀಡುವಂತೆ ಮನವಿ ಮಾಡಿದ್ದೇನೆ” ಎಂದು ಮಾಹಿತಿ ನೀಡಿದ್ದಾರೆ.

ಜೆಡಿಎಸ್ ರಾಜ್ಯ ವಕ್ತಾರ ಎಂ.ಬಿ. ಸದಾಶಿವ, “ಅಲ್ತಾಫ್ ಕುಂಪಲ ಅವರು ಈದ್ ಉಲ್ ಫಿತ್ರ್ ಹಬ್ಬದ ದಿನ ಮಸೀದಿಯಿಂದ ಹೊರಬರುವಾಗ ತಂಡವೊಂದು ಅವರನ್ನು ಬೆದರಿಸಿ ಚುನಾವಣಾಧಿಕಾರಿಯ ಬಳಿಗೆ ಕರೆದೊಯ್ದು ನಾಮಪತ್ರ ಹಿಂತೆಗೆದುಕೊಳ್ಳುವಂತೆ ಮಾಡಿದೆ. ಇದು ಎಲ್ಲರೂ ಚಿಂತಿಸಬೇಕಾದ ವಿಷಯವಾಗಿದೆ. ಜೆಡಿಎಸ್‌ನ ಸಾಮಾನ್ಯ ಕಾರ್ಯಕರ್ತನನ್ನೇ ಎದುರಿಸಲಾಗದವರು ಜನರನ್ನು ಹೇಗೆ ನಡೆಯಿಸಿಕೊಳ್ಳಬಹುದು” ಎಂದು ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿರಿ: ಎಚ್‌.ಡಿ.ಕೋಟೆ ಕ್ಷೇತ್ರ: ತ್ರಿಕೋನ ಸ್ಪರ್ಧೆಯಲ್ಲಿ ಬಿಜೆಪಿ ಖಾತೆ ತೆರೆಯುವುದೇ?

“ಈ ಬಾರಿ ಯಾರ ಸಹಾಯವೂ ಇಲ್ಲದೆ ಸ್ವತಂತ್ರವಾಗಿ ಜೆಡಿಎಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ನಾವು ಜನಪರವಾದ ಪಂಚರತ್ನ ಯೋಜನೆಯ ಮೂಲಕ ಜನರ ಮನಸಿಗೆ ಹತ್ತಿರವಾಗಿದ್ದೇವೆ. ಜೆಡಿಎಸ್ ಹೇಳಿರುವ ಜನಪರ ಕಾರ್ಯಕ್ರಮಗಳನ್ನು ಆಡಳಿತಕ್ಕೆ ಬರುವ ಮರುಕ್ಷಣವೇ ಜಾರಿಗೆ ತರಲು ನಾವು ಸಿದ್ಧರಿದ್ದೇವೆ” ಎಂದು ತಿಳಿಸಿದ್ದಾರೆ.

ರಾಮದುರ್ಗ ಬಿಜೆಪಿ ಶಾಸಕ ನಾಮಪತ್ರ ವಾಪಸ್

ಬಿಜೆಪಿಯಿಂದ ಟಿಕೆಟ್ ಕೈತಪ್ಪಿದ್ದ ಬೆನ್ನಲ್ಲೇ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ಸೋಮವಾರ ತಮ್ಮ ನಾಮಪತ್ರ ವಾಪಸ್ ಪಡೆದಿದ್ದಾರೆ. ಬಿಜೆಪಿ ವರಿಷ್ಠರ ಮನವೊಲಿಕೆ ಫಲಿಸಿದ್ದು, ನಾಮಪತ್ರ ವಾಪಸ್ ಪಡೆದಿರುವ ಅವರು ಬಿಜೆಪಿ ಅಭ್ಯರ್ಥಿ ಚಿಕ್ಕ ರೇವಣ್ಣ ಅವರಿಗೆ ಬೆಂಬಲ ನೀಡಲು ನಿರ್ಧರಿಸಿದ್ದಾರೆ.

2018ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮಹದೇವಪ್ಪ ಪಟ್ಟಣ ಅವರ ವಿರುದ್ಧ ಮಹಾದೇವಪ್ಪ ಯಾದವಾಡ 57,047 ಮತಗಳ ಅಂತದರಲ್ಲಿ ಭರ್ಜರಿ ಜಯ ಸಾಧಿಸಿದ್ದರು. ಹಾಲಿ ಶಾಸಕರಿಗೆ ಬಿಜೆಪಿ ಈ ಬಾರಿ ಟಿಕೆಟ್ ನೀಡದೆ ಚಿಕ್ಕ ರೇವಣ್ಣ ಅವರಿಗೆ ನೀಡಿತ್ತು. ಇದರಿಂದ ಪಕ್ಷದ ವಿರುದ್ಧ ಬಂಡಾಯವೆದ್ದಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...