ಕೊರೊನಾದಿಂದಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಈ ವರ್ಷ ಬಿಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಿದೆ. ವಿಧ್ಯಾರ್ಥಿ ಸಂಘಟನೆಗಳು, ಪೋಷಕರ ಹೋರಾಟದ ಪ್ರಭಾವದಿಂದ ಈ ಬಾರಿ ಖಾಸಗಿ ಶಾಲೆಗಳಲ್ಲಿ ಹೆಚ್ಚು ಶುಲ್ಕ ವಸೂಲು ಮಾಡಬಾರದು ಎಂದು ರಾಜ್ಯ ಸರ್ಕಾರದ ಆದೇಶ ಮಾಡಿದೆ. ಆದರೆ ಸರ್ಕಾರದ ಆದೇಶ ಕೇವಲ ಕಾಗದ ಪತ್ರಕ್ಕೆ ಸೀಮಿತವಾಗಿದ್ದು, ಬಹುತೇಕ ಖಾಸಗಿ ಶಾಲೆಗಳು ಈ ಆದೇಶವನ್ನು ಪಾಲಿಸುತ್ತಿಲ್ಲ ಎಂದು ಸ್ಟೂಡೆಂಟ್ ಫೆಡರೇಷನ್ ಆಫ್ ಇಂಡಿಯಾ(SFI) ಆಕ್ರೋಶ ವ್ಯಕ್ತಪಡಿಸಿದೆ.
ಖಾಸಗಿ ಶಾಲೆಗಳು ಈ ವರ್ಷ ಶುಲ್ಕ ಹೆಚ್ಚಳ ಮಾಡುವಂತಿಲ್ಲ. ಕಳೆದ ವರ್ಷದ ಶುಲ್ಕದ ಶೇಖಡ 70 ಮೊತ್ತವನ್ನು ಮಾತ್ರ ಪಡೆಯಬೇಕು ಎಂದು ರಾಜ್ಯ ಸರ್ಕಾರವು ಆದೇಶಿಸಿತ್ತು. ಆದರೆ ಇದೀಗ ಸರ್ಕಾರದ ಈ ಆದೇಶವನ್ನು ವಾಪಸ್ ಪಡೆಯಬೇಕೆಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟಗಳು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಒತ್ತಡ ಹಾಕಲು ಯೋಚಿಸಿವೆ. ಇಂತಹ ಯಾವುದೇ ಒತ್ತಡಗಳಿಗೆ ಸರ್ಕಾರ ಮಣಿಯದೆ ಸರ್ಕಾರ ದೃಢವಾಗಿ ತನ್ನ ಆದೇಶವನ್ನು ಜಾರಿಗೆ ತರಬೇಕೆಂದು ಎಂದು SFI ರಾಜ್ಯ ಸಮಿತಿ ಒತ್ತಾಯಿಸಿದೆ.
ಇದನ್ನೂ ಓದಿ: ಶಿಕ್ಷಣದ ಖಾಸಗೀಕರಣ, ಕೇಂದ್ರೀಕರಣ ತೀವ್ರಗೊಳಿಸುವ ಬಜೆಟ್: SFI
“ಮನಸೋಇಚ್ಛೆ ಖಾಸಗಿ ಶಾಲೆಗಳು ಶುಲ್ಕ ಪಾವತಿಸಲು ಪೋಷಕರಿಗೆ ಒತ್ತಡ ಹಾಕುತ್ತಿವೆ. ಈ ಕೊರೊನಾ ಲಾಕ್‌ಡೌನ್‌ನಿಂದ ಉದ್ಯೋಗ, ಆದಾಯ ಇಲ್ಲದೆ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬಡವರು, ಅಸಂಘಟಿತ ಕಾರ್ಮಿಕರು, ರೈತರು, ದುಡಿಯುವ ವರ್ಗದ ಜನರು ಈ ಖಾಸಗಿ ಶಾಲೆಗಳ ಶುಲ್ಕ ವಸೂಲಾತಿಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರತಿಯೊಂದು ಖಾಸಗಿ ಶಾಲೆಗಳು ಎಷ್ಟು ಶುಲ್ಕ ಪಡೆಯುತ್ತಿವೆ ಎಂದು ಬಹಿರಂಗವಾಗಿ ಫಲಕದಲ್ಲಿ ಶುಲ್ಕ ವಿವರಣೆ ಮಾಹಿತಿಯನ್ನು ಸಾರ್ವಜನಿಕರಿಗೆ ಪ್ರದರ್ಶನ ಮಾಡಬೇಕೆಂಬ ಆದೇಶವನ್ನು ಪಾಲಿಸುತ್ತಿಲ್ಲ.
ಎಲ್ಲಾ ಶಾಲೆಗಳು ಈ ನಿಯಮವನ್ನು ಪಾಲಿಸದೇ ಇರುವುದನ್ನು SFI ಖಂಡಿಸಿದೆ.
ಪ್ರತಿಯೊಂದು ಜಿಲ್ಲೆಯಲ್ಲಿ ಇರುವ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರ (DERA) ಕಮಿಟಿ ಸಕ್ರಿಯವಾಗಿ ಖಾಸಗಿ ಶಾಲೆಗಳಿಗೆ ಭೇಟಿ ನೀಡಿ ಸರ್ಕಾರದ ಆದೇಶ ಪಾಲಿಸದೆ ಇರುವ ಶಾಲೆಗಳ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕು ಆ ಮೂಲಕ ಕೊರೋನಾ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಪೋಷಕರಿಂದ ದುಬಾರಿ ಶುಲ್ಕ ವಸೂಲಿ ಮಾಡುವುದನ್ನು ಕಡಿವಾಣ ಹಾಕಬೇಕೆಂದು SFI ಆಗ್ರಹಿಸಿದೆ.
ಇದನ್ನೂ ಓದಿ: ಅಂಬೇಡ್ಕರ್ ಸಂವಿಧಾನ ರಚಿಸಿಲ್ಲ ವಿವಾದ: ಶಿಕ್ಷಣ ಸಚಿವರ ರಾಜಿನಾಮೆಗೆ ಎಸ್ಎಫ್ಐ(SFI) ಒತ್ತಾಯ.


