ಜಾತಿ ಗಣತಿ ವರದಿ ಬಿಡುಗಡೆಗೆ ವ್ಯಕ್ತವಾಗುತ್ತಿರುವ ವಿರೋಧದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಗೃಹ ಸಚಿವ ಜಿ ಪರಮೇಶ್ವರ ಅವರು, “ವಿರೋಧ ಪ್ರತಿಕ್ರಿಯೆಗಳು ಈಗ ನಡೆಯುತ್ತಿರುವ ಚರ್ಚೆಯ ಭಾಗವಾಗಿದೆ” ಎಂದು ಹೇಳಿದ್ದಾರೆ. ಈ ವೇಳೆ ಜಾತಿ ಗಣತಿ ಬಿಡುಗಡೆ ಮಾಡುವುದನ್ನು ಅವರು ಸಮರ್ಥಿಸಿಕೊಂಡರು.
ಈ ಬಗ್ಗೆ ಭಾನುವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು, “ಜಾತಿ ಗಣತಿಗೆ ಮೊದಲು ಕೂಗು ಎದ್ದಿದ್ದರೂ ಈಗ ಅದನ್ನು ಮುಂದಕ್ಕೆ ತರುವ ಸರ್ಕಾರದ ಕ್ರಮಕ್ಕೆ ವಿರೋಧ ವ್ಯಕ್ತವಾಗಿದೆ” ಎಂಬುದನ್ನು ಅವರು ಮಾಧ್ಯಮಗಳ ಗಮನಕ್ಕೆ ತಂದರು.
“ನಾವು ಜಾತಿ ಗಣತಿ ವಿಷಯವನ್ನು ಸಂಪುಟದ ಚರ್ಚೆಗೆ ತೆಗೆದುಕೊಳ್ಳಲು ನಿರ್ಧರಿಸಿದ್ದೇವೆ. ಜಾರಿಗೆ ವಿಳಂಬವಾಗಿದೆ. ಆದರೆ, ಈಗ ನಾವು ಅದನ್ನು ಪರಿಹರಿಸಲು ಯೋಜಿಸಿದ್ದೇವೆ. ಸಂಪುಟ ಸಭೆಯ ನಂತರ ವಿಧಾನಸಭೆಯಲ್ಲಿ ಮಂಡಿಸಬೇಕೋ ಅಥವಾ ನೇರವಾಗಿ ಬಿಡುಗಡೆ ಮಾಡಬೇಕೋ ಎಂಬ ಬಗ್ಗೆ ತೀರ್ಮಾನಿಸಲಾಗುವುದು” ಎಂದು ಅವರು ಹೇಳಿದರು.
“ಇದೊಂದು ವಿಚಿತ್ರ ಸಂದರ್ಭ, ಜಾತಿ ಜನಗಣತಿ ವರದಿ ಸ್ವೀಕರಿಸಿಲ್ಲವೆಂದರೆ ಮಾಡಿಲ್ಲ ಅಂತಾರೆ. ಮಾಡಿದರೆ ಯಾಕೆ ಈಗ ಮಾಡುತ್ತೀರಿ ಎಂದು ಪ್ರಶ್ನಿಸುತ್ತಾರೆ. ಜನಗಣತಿ ಸ್ವೀಕಾರ ವಿಳಂಬಕ್ಕೂ ಕಾರಣಗಳಿವೆ. ಕ್ಯಾಬಿನೆಟ್ನಲ್ಲಿ ಚರ್ಚೆ ಮಾಡಿ ಅಸೆಂಬ್ಲಿಗೆ ತರಬೇಕಾ, ಬೇಡವಾ ಎಂದು ತೀರ್ಮಾನಿಸುತ್ತೇವೆ. ಅಸೆಂಬ್ಲಿಗೆ ಬೇಕಾಗಿಲ್ಲ ಎಂದು ಕ್ಯಾಬಿನೆಟ್ ತೀರ್ಮಾನ ಮಾಡಿದರೆ ಮುಗೀತು” ಎಂದರು.
“ಸದ್ಯದಲ್ಲೇ ಕೇಂದ್ರ ಸರ್ಕಾರದಿಂದ ಜನಗಣತಿ ನಡೆಯಲಿದೆ. ಅದು ಓವರ್ ಲ್ಯಾಪ್ ಆದರೆ ಮುಂದೆ ಸರಿಪಡಿಸಿಕೊಳ್ಳಬಹುದು. ಯಾವುದಾದರೂ ಸಮುದಾಯದ ಅಂಕಿ ಸಂಖ್ಯೆ ಹೆಚ್ಚು ಕಮ್ಮಿ ಆಗಿದ್ದರೆ ಆಮೇಲೆ ಸರಿ ಮಾಡಿಕೊಳ್ಳಬಹುದು. ಕೇಂದ್ರ ಸರ್ಕಾರದ ಜನಗಣತಿಯನ್ನೇ ಎಲ್ಲರೂ ಪರಿಗಣಿಸುತ್ತಾರೆ” ಎಂದರು.
“ಮೊದಲು ಕ್ಯಾಬಿನೆಟ್ ಸಂಪುಟ ಸಭೆಯಲ್ಲಿ ಚರ್ಚೆಯಾಗಲಿ, ಆಮೇಲೆ ನೋಡೋಣ. ಜಾತಿಗಣತಿಗೆ ರಾಜ್ಯ ಸರ್ಕಾರ ₹160 ಕೋಟಿ ಖರ್ಚು ಮಾಡಿದೆ. ಅದಕ್ಕೂ ಲೆಕ್ಕ ಕೊಡಬೇಕು. ನಾಳೆ ಸಿಎಜಿ ಕೂಡ ಇದಕ್ಕೆ ಆಕ್ಷೇಪ ಮಾಡಬಹುದು” ಎಂದು ಪರಮೇಶ್ವರ್ ಹೇಳಿದರು.
ಇದನ್ನೂ ಓದಿ; PoSH ಸಮಿತಿ ರಚನೆ ಬಗ್ಗೆ 15 ದಿನಗಳ ಕಾಲಾವಕಾಶ ಕೋರಿದ ಕರ್ನಾಟಕ ಫಿಲ್ಮ್ ಚೇಂಬರ್


