Homeಕರ್ನಾಟಕವಿವಾದಿತ ಪಠ್ಯ ಕೈಬಿಡುವುದು ಗ್ಯಾರೆಂಟಿ; 'ಜ್ಞಾನದೇಗುಲಕ್ಕೆ ಸ್ವಾಗತ, ಕೈಮುಗಿದು ಒಳಗೆ ಬನ್ನಿ': ರಾಜ್ಯದ ಮಕ್ಕಳಿಗೆ ಸಿಎಂ...

ವಿವಾದಿತ ಪಠ್ಯ ಕೈಬಿಡುವುದು ಗ್ಯಾರೆಂಟಿ; ‘ಜ್ಞಾನದೇಗುಲಕ್ಕೆ ಸ್ವಾಗತ, ಕೈಮುಗಿದು ಒಳಗೆ ಬನ್ನಿ’: ರಾಜ್ಯದ ಮಕ್ಕಳಿಗೆ ಸಿಎಂ ಸಿದ್ದರಾಮಯ್ಯ ಪತ್ರ

- Advertisement -
- Advertisement -

ಕಳೆದ ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರವು ರೋಹಿತ್‌ ಚಕ್ರತೀರ್ಥ ಅವರ ಸಮಿತಿಯಿಂದ ಪಠ್ಯಪುಸ್ತಕ ಪರಿಷ್ಕರಣೆ ಮಾಡಿದ್ದು, ಸಾಕಷ್ಟು ವಿವಾದಕ್ಕೀಡಾಗಿತ್ತು. ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಪಠ್ಯಪುಸ್ತಕದಲ್ಲಿನ ವಿವಾದಿತ ಪಾಠಗಳನ್ನು ಕೈಬಿಡಲು ದೃಢ ನಿರ್ಧಾರ ಮಾಡಿದ್ದು, ಪರಿಷ್ಕರಣೆಗಾಗಿ ತಜ್ಞರ ಸಮಿತಿಯನ್ನು ನೇಮಿಸಲೂ ತೀರ್ಮಾನಿಸಿದೆ.

ರೋಹಿತ್ ಚಕ್ರತೀರ್ಥ ಎನ್ನುವವರ ಮುಂದಾಳತ್ವದಲ್ಲಿ ನಡೆದ ಪರಿಷ್ಕರಣೆಯಲ್ಲಿ ಪಠ್ಯದಲ್ಲಿ ಅನೇಕ ಮುಖ್ಯವಾದ ವಿಚಾರಗಳನ್ನು ಕೈ ಬಿಟ್ಟು ಅನಗತ್ಯ ವಿಚಾರಗಳನ್ನು ಸೇರಿಸಲಾಗಿದೆ ಎಂದು ನಾಡಿನ ಸಾಹಿತಿಗಳು, ವಿಚಾರವಂತರು ವಿರೋಧ ವ್ಯಕ್ತಪಡಿಸಿದ್ದರು. ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದು, ಪಠ್ಯಪುಸ್ತಕ ಪರಿಷ್ಕರಣೆಗೆ ತಕ್ಷಣವೇ ಸಮಿತಿ ರಚಿಸಬೇಕು ಎಂದು ಸಮಾನ ಮನಸ್ಕರ ಒಕ್ಕೂಟ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದರು.

ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ”ಹಿಂದಿನ ಸರ್ಕಾರದ ಅವಧಿಯಲ್ಲಿ ಶಾಲಾ ಪಠ್ಯಪುಸ್ತಕಗಳಲ್ಲಿ ತಂದಿರುವ ಬದಲಾವಣೆಗಳನ್ನು ಮರುಪರಿಶೀಲಿಸಲು ಶೀಘ್ರದಲ್ಲೇ ಸಮಿತಿ ರಚಿಸಲಾಗುವುದು” ಎಂದು ಭರವಸೆ ನೀಡಿತ್ತು. ಅದರಂತೆ ಕ್ರಮವಹಿಸಲು ಸರ್ಕಾರ ಮುಂದಾಗಿದೆ.

ಈ ಬಗ್ಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ನಧು ಬಂಗಾರಪ್ಪ ಮಾತನಾಡಿದ್ದು, ”ಪಠ್ಯಪುಸ್ತಕಗಳಲ್ಲಿ ವಿವಾದಿತ ಪಾಠಗಳನ್ನು ಕೈಬಿಡುವುದು ನಿಶ್ಚಿತ. ಅದಕ್ಕಾಗಿ ಶೀಘ್ರ ಪರಿಷ್ಕರಣಾ ಸಮಿತಿ ರಚಿಸಲಾಗುವುದು. ಮುಖ್ಯಮಂತ್ರಿ ಹಾಗೂ ತಜ್ಞರ ಜತೆ ಚರ್ಚಿಸಿದ ನಂತರ ಸಮಿತಿಯ ಅಧ್ಯಕ್ಷರ ಆಯ್ಕೆ ಅಂತಿಮಗೊಳಿಸಲಾಗುವುದು” ಎಂದು ತಿಳಿಸಿದ್ದಾರೆ.

”ಸಮಿತಿಗೆ ವರದಿ ನೀಡಲು ಎರಡು ತಿಂಗಳ ಗಡುವು ನೀಡಲಾಗುವುದು. ಪಠ್ಯದಲ್ಲಿ ಕೆಲವು ಪಾಠಗಳಷ್ಟೆ ವಿವಾದಕ್ಕೆ ಒಳಗಾಗಿವೆ. ಅವುಗಳನ್ನು ಬಿಟ್ಟು ಉಳಿದ ಪಾಠಗಳನ್ನು ಬೋಧನೆ ಮಾಡಲಾಗುತ್ತದೆ. ಪೋಷಕರು, ಮಕ್ಕಳು ಅತಂಕ ಪಡುವ ಅಗತ್ಯವಿಲ್ಲ. ಈ ಕುರಿತು ಎಲ್ಲ ಶಾಲೆಗಳಿಗೂ ಸ್ಪಷ್ಟ ಸೂಚನೆ ನೀಡಲಾಗುತ್ತದೆ. ಸಮಿತಿಯ ವರದಿಯ ನಂತರ ಇದೇ ಪಠ್ಯಕ್ರಮಕ್ಕೆ ಹೊಸ ಪಾಠಗಳನ್ನು ಸೇರಿಸಲಾಗುವುದು” ಎಂದು ಮಾಹಿತಿ ನೀಡಿದರು.

ಈ ಬಗ್ಗೆ ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಮಾತನಾಡಿ, ”ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಠ್ಯಪುಸ್ತಕಗಳಲ್ಲಿ ಆಗಿರುವ ಎಡವಟ್ಟುಗಳನ್ನು ನಾವು ತಿದ್ದುತ್ತೇವೆ” ಎಂದಿದ್ದಾರೆ.

”ಇತಿಹಾಸ ಪುರುಷರನ್ನೇ ಅವರು ಇತಿಹಾಸ ಪುರುಷರಲ್ಲ ಎಂದು ಹೇಳಿದ್ದಾರೆ. ಆ ತಪ್ಪು ತಿದ್ದಬೇಕಲ್ಲವೇ? ನಾವು ಚುನಾವಣೆಗೂ ಮುಂಚಿನಿಂದಲೇ ಅದನ್ನು ಹೇಳುತ್ತಿದ್ದೇವೆ. ಈಗ ಅದನ್ನು ಜಾರಿಗೊಳಿಸಲಿದ್ದೇವೆ. ವಾಸ್ತವವನ್ನು ಪಠ್ಯದಲ್ಲಿ ಸೇರಿಸಲಿದ್ದೇವೆ. ಸತ್ಯವಲ್ಲದ್ದನ್ನು ತೆಗೆದು ಹಾಕುತ್ತೇವೆ” ಎಂದು ಹೇಳಿದರು.

ಇನ್ನು ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಶಾಲೆಗಳು ಇಂದು ಆರಂಭವಾಗುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಲಾ ಮಕ್ಕಳಿಗೆ ಸ್ವಾಗತ ಕೋರಿ ಪತ್ರವೊಂದನ್ನು ಬರೆದಿದ್ದಾರೆ.

ನನ್ನ ಪ್ರೀತಿಯ ವಿದ್ಯಾರ್ಥಿ-ವಿದ್ಯಾರ್ಥಿನಿಯರೇ,

ರಜಾದಿನಗಳನ್ನು ತಂದೆ-ತಾಯಿ, ಗೆಳೆಯ-ಗೆಳತಿಯರ ಜೊತೆ ಆನಂದದಿಂದ ಕಳೆದ ನಿಮ್ಮನ್ನು ಶಾಲೆಗಳು ಕೈಬೀಸಿ ಕರೆಯುತ್ತಿವೆ. ಕಳೆದ ಎರಡು -ಮೂರು ವರ್ಷಗಳಲ್ಲಿ ಕೊರೊನಾ ವೈರಾಣುವಿನಿಂದಾಗಿ ನೀವೆಲ್ಲ ವಿದ್ಯಾರ್ಥಿ ಜೀವನವನ್ನು ಸಂಪೂರ್ಣ ಅನುಭವಿಸಲಾಗದೆ ಅನೇಕ ಬಗೆಯ ಸಂಕಟ-ಸಂಕಷ್ಟಕ್ಕೆ ಈಡಾಗಿದ್ದೀರಿ. ಈಗ ನಾವು ಆ ಸವಾಲನ್ನು ಗೆದ್ದಿದ್ದೇವೆ, ಆರೋಗ್ಯದ ಪಾಠವನ್ನು ಕಲಿತಿದ್ದೇವೆ. ರಾಜ್ಯದ ಈ ಬಾರಿಯ ಶೈಕ್ಷಣಿಕ ವರ್ಷ ಇಂತಹ ಬದಲಾವಣೆಯ ತಂಗಾಳಿಯೊಂದಿಗೆ ಪ್ರಾರಂಭವಾಗಿದೆ. ಜ್ಞಾನ ದೇಗುಲಕ್ಕೆ ನಿಮಗೆಲ್ಲರಿಗೂ ಸ್ವಾಗತ. ಕೈಮುಗಿದು ಒಳಗೆ ಬನ್ನಿ…

ಶಾಲೆಯೆಂದರೆ ಬರೀ ಕಲ್ಲು ಕಟ್ಟಡವಲ್ಲ. ಅದೊಂದು ಜ್ಞಾನ ದೇಗುಲ. ಹೆತ್ತ ತಂದೆ-ತಾಯಿಗಳಂತೆ ಕಲಿಸುವ ಗುರುಗುಳು ಕೂಡಾ ವಿದ್ಯಾರ್ಥಿಗಳ ಪಾಲಿನ ದೇವರು. ಈ ಶ್ರದ್ಧೆ ಮತ್ತು ಗೌರವ ಸದಾ ನಿಮ್ಮಲ್ಲಿರಲಿ. ‘ಪ್ರತಿಯೊಬ್ಬರು ಹುಟ್ಟಿದಾಗ ವಿಶ್ವಮಾನವ, ಬೆಳೆಯುತ್ತಾ ಅಲ್ಪ ಮಾನವನಾಗುತ್ತಾನೆ’ ಎಂದು ರಾಷ್ಟ್ರಕವಿ ಕುವೆಂಪು ಎಚ್ಚರಿಸಿದ್ದರು. ಪರೀಕ್ಷೆ- ಫಲಿತಾಂಶ ಎಲ್ಲವೂ ಮುಖ್ಯವಾದರೂ ಶಿಕ್ಷಣ ಎಂದರೆ ಅಷ್ಟೇ ಅಲ್ಲ. ಶಿಕ್ಷಣ ಎನ್ನವುದು ನಮ್ಮಲ್ಲಿ ವೈಜ್ಞಾನಿಕ ಮತ್ತು ವೈಚಾರಿಕ ಅರಿವು ಮೂಡಿಸಬೇಕು, ಸತ್ಯ ಹೇಳುವ ಧೈರ್ಯವನ್ನು,ನ್ಯಾಯದ ಮಾರ್ಗದಲ್ಲಿ ಮುನ್ನಡೆಯುವ ಶಕ್ತಿಯನ್ನು ನೀಡಬೇಕು. ಅಂತಹ ಶಿಕ್ಷಣ ನಿಮ್ಮ ಪಾಲಿಗೆ ಒದಗಿಬಂದು ನೀವೆಲ್ಲರೂ ಮಹಾಮಾನವರಾಗಿ ಎಂದು ಹಾರೈಸುತ್ತೇನೆ.

ನಾನು ಹಳ್ಳಿಯ ಸಾಮಾನ್ಯ ರೈತ ಕುಟುಂಬದಿಂದ ಬಂದ ವ್ಯಕ್ತಿ. ಈಗ ನಿಮಗೆ ಇರುವ ಕಲಿಕೆಯ ಅವಕಾಶ ನನ್ನಂತಹವನಿಗೆ ಇರಲಿಲ್ಲ. ಒಂದನೇ ತರಗತಿಯಿಂದಲೇ ಶಾಲೆಗೆ ಹೋಗಲಾಗದೆ ಮರಳ ಮೇಲೆ ಕೈಬೆರಳಗಳನ್ನೊತ್ತಿ ಅಕ್ಷರಾಭ್ಯಾಸ ಮಾಡಿ ನಾಲ್ಕನೇ ತರಗತಿಗೆ ನೇರವಾಗಿ ಸೇರಿದವನು ನಾನು. ಅಲ್ಲಿಂದ ಕಾನೂನು ವ್ಯಾಸಂಗ ಮುಗಿಸುವವರೆಗೆ ನನ್ನ ವಿದ್ಯಾರ್ಥಿ ಜೀವನ ಹೂವಿನ ಹಾದಿಯಾಗಿರಲಿಲ್ಲ. ಅಮಾಯಕರಾಗಿದ್ದ ಹೆತ್ತವರ ವಿರೋಧ, ಶೋಷಕರ ಅಡ್ಡಗಾಲು, ಹಣಕಾಸಿನ ಸಮಸ್ಯೆಗಳ ಜೊತೆ ಹೋರಾಡುತ್ತಲೇ ಬಂದವನು. ಕಠಿಣ ಶ್ರಮ ಮತ್ತು ಕಲಿಕೆಯ ಮೇಲೆ ಆಸಕ್ತಿ-ಶ್ರದ್ಧೆಗಳಿದ್ದರೆ ಸಾಮಾನ್ಯ ಕುಟುಂಬದಿಂದ ಬಂದ ಒಬ್ಬ ಬಾಲಕ ಕೂಡಾ ಮುಂದೊಂದು ದಿನ ರಾಜ್ಯದ ಮುಖ್ಯಮಂತ್ರಿಯೂ ಆಗಬಹುದು ಎನ್ನುವುದಕ್ಕೆ ನಾನೇ ಸಾಕ್ಷಿ. ಇದೇ ರೀತಿ ನಿಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಗಳಿಗೇರಬೇಕೆಂದು ನನ್ನ ಆಸೆ.

ಇದೇ ಉದ್ದೇಶದಿಂದ ಕಳೆದ ಬಾರಿ ನಾನು ಮುಖ್ಯಮಂತ್ರಿಯಾಗಿದ್ದಾಗ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಧ್ಯಾಹ್ನದ ಬಿಸಿ ಊಟ, ಕ್ಷೀರಭಾಗ್ಯ, ವಿದ್ಯಾಸಿರಿ,ವಿದ್ಯಾರ್ಥಿ ವೇತನ ಶೂ ಮತ್ತು ಸಾಕ್ಸ್ ಮೊದಲಾದ ಯೋಜನೆಗಳನ್ನು ಜಾರಿಗೊಳಿಸಿದ್ದೆ. ಇವುಗಳಿಗೆ ಎದುರಾಗಿರುವ ಸಣ್ಣಪುಟ್ಟ ಅಡ್ಡಿ-ಆತಂಕಗಳನ್ನು ನಿವಾರಿಸಿ ಪುನರ್ ಚಾಲನೆ ನೀಡುವೆ.

ನೀವು ಪಡೆಯುವ ಶಿಕ್ಷಣ ನಿಮ್ಮನ್ನು ತಂದೆ-ತಾಯಿ ಹೆಮ್ಮೆ ಪಡುವಂತಹ ಮಕ್ಕಳನ್ನಾಗಿ ಮತ್ತು ಸಮಾಜ ಪ್ರೀತಿಸುವ ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸಲಿ. ಮುಂದಿನ ಜನಾಂಗವಾಗಿರುವ ನಿಮ್ಮಿಂದ ರಾಜ್ಯದ ಸರ್ವಜನಾಂಗದ ಶಾಂತಿಯ ತೋಟ ಸದಾ ನಳನಳಿಸುತ್ತಾ ಇರಲಿ. ಪಠ್ಯಪುಸ್ತಕಗಳಿಗಷ್ಟೇ ನಿಮ್ಮ ಓದನ್ನು ಸೀಮಿತಗೊಳಿಸಬೇಡಿ.

ನಿಮಗೆಲ್ಲರಿಗೂ ಹೊಸ ಶೈಕ್ಷಣಿಕ ವರ್ಷಕ್ಕೆ ಮತ್ತೊಮ್ಮೆ ಸ್ವಾಗತ ಮತ್ತು ಶುಭಾಶಯಗಳು.

ನಿಮ್ಮೆಲ್ಲರ ಪ್ರೀತಿಯ ಮುಖ್ಯಮಂತ್ರಿ

ಸಿದ್ದರಾಮಯ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...