ಎಲೆಮರೆ-22
ರಾಮನಗರದ ಜಾನಪದ ಲೋಕ ಆಯೋಜಿಸಿದ್ದ ಲೋಕೋತ್ಸವ ಕಾರ್ಯಕ್ರಮದಲ್ಲಿ ಭಾಷಣ ಮಾಡಲು ಹೋಗಿದ್ದೆ. ಭಾಷಣ ಮುಗಿಸಿಕೊಂಡು ಊರಿಗೆ ಮರಳುವಾಗ, ರಾಮನಗರದ ಪ್ರಜಾವಾಣಿ ಪತ್ರಕರ್ತ ರುದ್ರೇಶ್ ನಿಮಗೆ ಒಬ್ಬರನ್ನು ಪರಿಚಯಿಸುತ್ತೇನೆ ಬನ್ನಿ ಎಂದರು. ಯಾರು ಏನು ಎಂದು ಕೇಳದೆ ಸರಿ ಆಗಲಿ ಎಂದು ಆತನ ಬೈಕ್ ಏರಿ ಹೊರಟೆ. ಸಂದಿಗೊಂದಿ ಸುತ್ತಿಕೊಂಡು ಒಂದು ಪುಟ್ಟ ಮನೆಗೆ ಕರೆತಂದರು. ಇಳಿವಯಸ್ಸಿನ ಅಜ್ಜಿಯೊಬ್ಬರು ಬಂದು ಗೇಟ್ ತೆಗೆದು ಒಳ ಕರೆದರು. ಅದೊಂದು ಪುಟ್ಟ ಮನೆ. `ಬಾ ಮಗನೆ ಕೂತುಕೋ..’ ಎಂದು ಕುಡಿಯಲು ನೀರು ಕೊಟ್ಟರು. ಆಗ ರುದ್ರೇಶ ಇವರು ಶಾಂತಮ್ಮ ಅಂತ. ಗುಬ್ಬಿ ವೀರಣ್ಣನ ಮಗ ನಟ ಜಿ.ವಿ.ಚನ್ನಬಸಪ್ಪ ಅವರ ಮಡದಿ, ಇಂದು ಯಾರ ಆಸರೆಯೂ ಇಲ್ಲದಂತೆ ಬದುಕುತ್ತಿದ್ದಾರೆ ಎಂದು ಹೇಳಿದರು. ಶಾಂತಮ್ಮ ತಮ್ಮ ವೃತ್ತಿಜೀವನದ ಫೋಟೋಗಳ ಆಲ್ಬಮ್ ಮುಂದಿಟ್ಟರು. ನಾನು ಈ ಫೋಟೋಗಳನ್ನು ನೋಡುತ್ತಾಹೋದಂತೆ ಅಲ್ಲಲ್ಲಿ ತಡೆದು ಶಾಂತಮ್ಮ ಒಂದೊಂದು ಫೋಟೋದ ಸಂದರ್ಭವನ್ನು ವಿವರಿಸತೊಡಗಿದರು. ಮುಖದಲ್ಲಿ ಒಮ್ಮೊಮ್ಮೆ ಮಿಂಚು, ಮತ್ತೊಮ್ಮೆ ಕಡುದುಃಖ. ಹಳೆಯ ನೆನಪುಗಳು ಉತ್ಸಾಹ ಹೆಚ್ಚಿಸಿ ಒಮ್ಮೆ ಜೋರು ಮಾತಾಡಿದರೆ, ಮತ್ತೊಮ್ಮೆ ಪಿಸುದನಿಯಲ್ಲಿ ಅದನ್ನೆಲ್ಲಾ ಹೇಳಬಾರದು ಮರಿ ಎಂದು ಕಣ್ಣಲ್ಲಿ ನೀರು ತರುತ್ತಿದ್ದರು. ಒಂದು ಗಂಟೆಯ ಮಾತುಕತೆ ನನ್ನನ್ನು ಎಪ್ಪತ್ತು ಎಂಬತ್ತರ ದಶಕದ ರಂಗಭೂಮಿಯ ವಾತಾವರಣವನ್ನು ಕಣ್ಮುಂದೆ ಸೃಷ್ಟಿಸಿತು. ಸಾವಿರಾರು ನಾಟಕಗಳಲ್ಲಿ ಅಭಿನಯಿಸಿ ದುಸ್ಥಿತಿಯಲ್ಲಿ ಬದುಕುತ್ತಿರುವ ಶಾಂತಮ್ಮನ ಬಗೆಗೆ ದುಃಖವೂ ಆಯಿತು.
ಒಮ್ಮೆ ಪ್ರಜಾಮತ ಎನ್ನುವ ಪತ್ರಿಕೆಯಲ್ಲಿ ವಾದಿರಾಜ, ಜಯಂತಿ, ರಾಧಾ-ರುಕ್ಮಿಣಿ (ನಟಿ ಶೃತಿ ಅವರ ತಾಯಿ) ಯವರ ಫೋಟೋ ಪ್ರಕಟವಾಗಿರುತ್ತದೆ. ಪುಟ್ಟ ಹುಡುಗಿ ಪೇಪರ್ ನೋಡುತ್ತಾ ಈ ನಟನಟಿಯರ ಚಿತ್ರ ನೋಡುತ್ತಾಳೆ. ನಾನು ಇವರ ಹಾಗೆ ನಟಿಯಾಗಬೇಕೆಂದು ಕನಸು ಕಾಣುತ್ತಾಳೆ. ಈ ಕನಸಿನ ದಾರಿ ಹಿಡಿದು 1964 ರಲ್ಲಿ 13ನೇ ವಯಸ್ಸಿನಲ್ಲಿ ಲವ-ಕುಶ ನಾಟಕದಲ್ಲಿ ಬಾಲನಟಿಯಾಗಿ ಆ ಹುಡುಗಿ ನಟಿಸಿ ಎಲ್ಲರ ಗಮನ ಸೆಳೆಯುತ್ತಾರೆ. ಈ ಹುಡುಗಿಯೇ ಮುಂದೆ ಗುಬ್ಬಿ ವೀರಣ್ಣ ನಾಟಕ ಕಂಪನಿ ಸೇರಿ 40 ವರ್ಷಗಳ ಕಾಲ ವೈವಿಧ್ಯಮಯ ಪಾತ್ರಗಳಲ್ಲಿ ನಟಿಸುತ್ತಾಳೆ. ಆ ಪುಟ್ಟ ಹುಡುಗಿಯೇ ಇಂದು ರಾಮನಗರದಲ್ಲಿ ಒಂಟಿಜೀವನ ನಡೆಸುತ್ತಿರುವ ರಂಗನಟಿ ಶಾಂತಮ್ಮ.
ರಾಮನಗರದ ಬಳಿ ಇರುವ ಪುಟ್ಟ ಊರು ಅರ್ಚಕರಳ್ಳಿಯಲ್ಲಿ ನಿಂಗಯ್ಯ ಮತ್ತು ಪುಟ್ಟಮ್ಮನ ಮಗಳಾಗಿ ಶಾಂತಮ್ಮ 1951 ರಲ್ಲಿ ಜನಿಸಿದರು. `ಮೊದಲ ನಾಟಕ ಲವ-ಕುಶದಲ್ಲಿ ಬಾಲ ನೃತ್ಯಕಲಾವಿದೆಯಾಗಿ ಅಭಿನಯಿಸಿದಾಗ ಮೊದಲು ನನಗೆ ಬಣ್ಣ ಹಚ್ಚಿದ್ದು ರಾಧಮ್ಮ. ನನ್ನ ಮೊದಲ ಸಂಬಳ ಹದಿನೈದು ರೂಪಾಯಿ. ಅಂದು ಆರಂಭವಾದ ಕಲಾ ಬದುಕು ಸುದೀರ್ಘ ನಲವತ್ತೆರಡು ವರ್ಷ ನಾಟಕ ಕಂಪನಿ ಬಿಟ್ಟರೆ ಬೇರೆ ಲೋಕವೆ ಗೊತ್ತಿರಲಿಲ್ಲ’ ಎನ್ನುತ್ತಾರೆ. ಮೈಸೂರು ಮಹಾರಾಜರ ಸಮ್ಮುಖದಲ್ಲಿ `ಸಾಹುಕಾರ’ ನಾಟಕದಲ್ಲಿ ಬಾಲಕಲಾವಿದೆಯಾಗಿ ನರ್ತನ ಮಾಡಿದ್ದು ಹಾಗೂ ವರನಟ ಡಾ. ರಾಜಕುಮಾರ್ ಅವರಿಂದ ನೆನಪಿನ ಕಾಣಿಕೆ ಸ್ವೀಕರಿಸಿದ್ದು ನನ್ನ ಜೀವನದ ಮರೆಯಲಾರದ ಕ್ಷಣಗಳು’ ಎನ್ನುತ್ತಾರೆ.
ಶ್ರೀ ಯಡಿಯೂರು ಸಿದ್ದಲಿಂಗೇಶ್ವರ ನಾಟಕದಲ್ಲಿ ಪಾರ್ವತಿಯಾಗಿ, ಸಂಸಾರನೌಕೆಯಲ್ಲಿ ಗಿರಿಜೆಯಾಗಿ, ಆರ್. ನಾಗರತ್ನಮ್ಮ ಅವರ ಶ್ರೀಕೃಷ್ಣ ಗಾರುಡಿಯಲ್ಲಿ ಸಹದೇವನ ಪಾತ್ರ, ಮುದುಕನ ಮದುವೆಯಲ್ಲಿ ಕಾವೇರಿ, ಕಲ್ಯಾಣಿ, ಗೋಮುಖ ವ್ಯಾಘ್ರದಲ್ಲಿ ತುಳಸಿ, ಚನ್ನಪ್ಪ ಚನ್ನೇಗೌಡ ಪಾತ್ರದಲ್ಲಿ ಪಾರ್ವತಿ, ಶ್ರೀಕೃಷ್ಣ ಲೀಲೆಯ ಲಲಿತ, ಸುಂದರಿ, ಶರಣ ಬಸವೇಶ್ವರ ನಾಟಕದ ಗಂಗಾಂಬಿಕೆ, ಸಾಹುಕಾರ ನಾಟಕದ ಇಂದುಮತಿ, ಅಣ್ಣ ತಮ್ಮ ನಾಟಕದಲ್ಲಿ ಹಾಸ್ಯ ಕಲಾವಿದೆಯಾಗಿ ಲಕ್ಷ್ಮಿ, ಶೋಭಾ ಪಾತ್ರ, ಲವ-ಕುಶ ನಾಟಕದಲ್ಲಿ ಸೀತೆಯಾಗಿ, ಹೀಗೆ ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ಭಕ್ತಿ ಪ್ರಧಾನ ಎಲ್ಲಾ ಬಗೆಯ ನಾಟಕಗಳಲ್ಲಿ ಎಲ್ಲಾ ಬಗೆಯ ಪಾತ್ರಗಳಿಗೆ ಶಾಂತಮ್ಮ ಜೀವ ತುಂಬಿ ನಟಿಸಿದರು.
`ರಾಜ್ಯದಾದ್ಯಂತ ಸಾವಿರಾರು ಪ್ರದರ್ಶನಗಳನ್ನು ನೀಡಿದ್ದೇನೆ. ಒಮ್ಮೊಮ್ಮೆ ದಿನಕ್ಕೆ ಮೂರು ಬಾರಿ ಪ್ರದರ್ಶನ ನೀಡಿರುವೆ. ಗುಬ್ಬಿ ವೀರಣ್ಣ ಅವರ ಹಿರಿಯ ಪುತ್ರಿ ಜಿ.ವಿ. ಸುವರ್ಣಮ್ಮ ಅವರೊಂದಿಗೆ `ಪಾದುಕ ಪಟ್ಟಾಭಿಷೇಕ’ದಲ್ಲಿ ಅವರು ಮಂಥರೆಯಾಗಿ ನಾನು ಸೀತೆ, ಕೈಕೆಯಾಗಿ ನಟಿಸಿದ್ದೆ. ಯೋಗಾನರಸಿಂಹಮೂರ್ತಿ ಅವರ ಕಂಪನಿಯಲ್ಲಿ `ಬೀದಿ ಕಾಮಣ್ಣ’ ನಾಟಕದಲ್ಲಿ ಎಂ.ಎಸ್.ಸತ್ಯ ಅವರ ಜೋಡಿಯಾಗಿ, ಸದಾರಮೆ ನಾಟಕದಲ್ಲಿ ನರಸಿಂಹರಾಜು, ಶಾಂತಕುಮಾರ ರಾಯರು, ಜಿ.ವಿ.ಚನ್ನಬಸಪ್ಪ, ಜಿ.ವಿ.ರಾಜಣ್ಣ (ಗುಬ್ಬಿ ವೀರಣ್ಣ ಅವರ ಪುತ್ರರು), ನಟ ರಾಮಕೃಷ್ಣ, ಚೋಮನದುಡಿ ವಾಸುದೇವ, ಧೀರೇಂದ್ರ ಗೋಪಾಲ್, ಸುಂದರ ಕೃಷ್ಣ ಅರಸ್, ಸುಧೀರ್, ರಾಜಾನಂದ್, ಗಾಜಿನ ಮನೆ ನಾಟಕದಲ್ಲಿ ಚಿಂದೋಡಿ ಲೀಲಾ, ಉಮಾಶ್ರೀ, ರಾಧಾ-ರುಕ್ಮಿಣಿ, ಶ್ರೀಲಲಿತಾ ಸೇರಿದಂತೆ ಹಲವರೊಂದಿಗೆ ಅಭಿನಯಿಸಿದ್ದೇನೆ’ ಎಂದು ಶಾಂತಮ್ಮ ಹಳೆ ನೆನಪುಗಳನ್ನು ಮೆಲುಕು ಹಾಕುತ್ತಾರೆ.
ಸಾಮಾಜಿಕ ನಾಟಕಗಳಾದ `ವರ ನೋಡಿ ಹೆಣ್ಣು ಕೊಡು’ ನಾಟಕದಲ್ಲಿ ರತ್ನನ ಪಾತ್ರ, `ಚನ್ನಪ್ಪ ಚನ್ನಗೌಡ’ ನಾಟಕದಲ್ಲಿ ಪಾರ್ವತಿ ಪಾತ್ರದಲ್ಲಿ ಶಾಂತಮ್ಮ ತುಂಬಾ ಜನಪ್ರಿಯರಾಗಿದ್ದರು. `ಮೂರು ಬಾರಿ ಅಣ್ಣಾವ್ರನ್ನ ನೋಡಿ ಮಾತಾಡಿಸಿದ್ದೆ. ಫಾರಿನ್‍ಗೆ ಹೋಗಬೇಕಾದ್ರೆ ದಾವಣಗೆರೆ ಕ್ಯಾಂಪಿಗೆ ಬಂದಿದ್ರು, ದೇವತಾ ಮನುಷ್ಯ ಶೂಟಿಂಗ್‍ನಲ್ಲಿ ಹೇಳಿಕಳಿಸಿದ್ರು ಆಗ ನಮ್ಮ ಯಜಮಾನರು ಮತ್ತು ನಾನು ತುಂಬಾ ಹೊತ್ತು ಮಾತಾಡಿದ್ವಿ’ ಎಂದು ಡಾ. ರಾಜಕುಮಾರ್ ಅವರ ಭೇಟಿಯ ನೆನಪುಗಳನ್ನು ಹೇಳುತ್ತಾರೆ. ಯಾವುದೇ ನಾಟಕದಲ್ಲಿ ಇಂತ ಪಾತ್ರ ಮಾಡೋರಿಲ್ಲ ಅಂದ್ರೆ ಸಾಕು ಯಾವುದೇ ಪಾತ್ರವಿರಲಿ ಅದನ್ನು ನಿರ್ವಹಿಸಿ ಸೈ ಅನ್ನಿಸಿಕೊಂಡಿದಿನಿ, ಅಷ್ಟರಮಟ್ಟಿಗೆ ರಂಗಭೂಮಿಯಲ್ಲಿ ನಾನು ಪಳಗಿದ್ದೆ, ಈಗಲೂ ಕೃಷ್ಣ ಲೀಲೆ ನಾಟಕದ ರಾಧೆ ಪಾತ್ರದ ಲಂಗವನ್ನು, ಮಂತ್ರಿಣಿ ಪಾತ್ರದ ಡ್ರೆಸ್ಸುಗಳನ್ನು, ಆಗಿನ ವಿಗ್ಗುಗಳನ್ನು ನೆನಪಿಗಾಗಿ ಕಾಪಾಡಿರುವೆ’ ಎನ್ನುತ್ತಾರೆ.
ನಾಟಕಗಳ ಅಭಿನಯದಲ್ಲಿ ಪರಸ್ಪರರು ಆಕರ್ಷಣೆಯಾಗಿ 1971 ರಲ್ಲಿ ಗುಬ್ಬಿ ವೀರಣ್ಣನ ಮಗ ಜಿ.ವಿ.ಚನ್ನಬಸಪ್ಪ ಅವರನ್ನು ಮದುವೆಯಾದರು. ಇದು ಎರಡನೆ ಮದುವೆಯಾದ ಕಾರಣ ಶಾಂತಮ್ಮ ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳಲು ಆಗಲಿಲ್ಲ. ಎಲ್ಲರೂ ನನಗೆ ಮೋಸ ಮಾಡಿದರು ಎಂದು ಶಾಂತಮ್ಮ ದುಃಖಿಸುತ್ತಾರೆ. ಈಗಲೂ ಅವಕಾಶ ಸಿಕ್ಕರೆ ನಟಿಸಲು ಸಿದ್ಧ ಎನ್ನುವ ಸ್ವಾಭಿಮಾನಿ ಶಾಂತಮ್ಮ ನಿಜಕ್ಕೂ ಕಡುಕಷ್ಟದಲ್ಲಿ ಬದುಕುತ್ತಿದ್ದಾರೆ. ಪ್ರಜಾವಾಣಿ ಪತ್ರಕರ್ತ ರುದ್ರೇಶ್ ಶಾಂತಮ್ಮಗೆ ಒಂದಷ್ಟು ಆಸರೆಯಾಗಿದ್ದಾರೆ. ತಾಂತ್ರಿಕ ಕಾರಣದಿಂದ ಕಳೆದ ಮೂರು ತಿಂಗಳಿಂದ ಕಲಾವಿದರ ಮಾಸಾಶನವೂ ಬರುತ್ತಿಲ್ಲ. ಈ ವಿಷಯವನ್ನು ಕವಿ ನಾಗೇಂದ್ರ ಪ್ರಸಾದ್ ಅವರ ಗಮನಕ್ಕೆ ತಂದಾಗ ಶಿವಾರ್ಜುನ ಸಿನೆಮಾದ ನಿರ್ಮಾಪಕ ಶಿವಾರ್ಜುನ ಅವರಿಂದ ಒಂದಷ್ಟು ನೆರವು ಕೊಡಿಸಿದ್ದಾರೆ. ಇಂತಹ ರಂಗಕಲಾವಿದೆಗೆ ನೆರವಾಗುವ ಮನಸ್ಸಿದ್ದವರು ಖಂಡಿತಾ ಸಹಾಯ ಮಾಡಬಹುದು. ಎಲೆಮರೆಕಾಲಂನಲ್ಲಿ ಈ ತೆರನಾಗಿ ಸಹಾಯವನ್ನು ಯಾರಿಗೂ ಕೋರಿಲ್ಲ, ಆದರೆ ಶಾಂತಮ್ಮನ ದುಸ್ಥಿತಿಗೆ `ನ್ಯಾಯಪಥ’ವೂ ನೆರವಿಗೆ ಬರಬೇಕೆನ್ನುವ ಕಾರಣಕ್ಕೆ ಶಾಂತಮ್ಮನ ಬ್ಯಾಂಕ್ ವಿವರ ಮತ್ತು ಅವರ ಮೊಬೈಲ್ ಸಂಖ್ಯೆಯನ್ನು ಕೊಡುತ್ತಿದ್ದೇವೆ. ಈ ಇಳಿಗಾಲದಲ್ಲಿ ಮನಸ್ಸಿದ್ದವರು ಶಾಂತಮ್ಮನಿಗೆ ನೆರವಾಗಿ.
ಬ್ಯಾಂಕ್ ಖಾತೆ ವಿವರ:
Name: N.Shanthamma
A/C: 0593101026583
IFSC: CNRB0000593
Bank: CANARA BANK
Mobil: 9845643106


