ಗುಜರಾತ್ ವಕ್ಫ್ ಮಂಡಳಿಯಡಿಯಲ್ಲಿ ನೋಂದಾಯಿಸಲ್ಪಟ್ಟ, ಅಹಮದಾಬಾದ್ ಮೂಲದ ಎರಡು ಟ್ರಸ್ಟ್‌ಗಳ ಒಡೆತನದ ಭೂಮಿಯಲ್ಲಿ ನಿರ್ಮಿಸಲಾದ ಕಟ್ಟಡಗಳ ಟ್ರಸ್ಟಿಗಳು ಎಂಬಂತೆ ನಟಿಸಿ 17 ವರ್ಷಗಳ ಕಾಲ ಬಾಡಿಗೆ ಸಂಗ್ರಹಿಸುತ್ತಿದ್ದ ಆರೋಪದ ಮೇಲೆ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಈ ಬಗ್ಗೆ ನಗರದ ಗಾಯಕ್ವಾಡ್ ಹವೇಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು ಎಂದು ವರದಿಯಾಗಿದೆ.
ಎಫ್‌ಐಆರ್ ಪ್ರಕಾರ, ಕಾಂಚ್ನಿ ಮಸೀದಿ ಟ್ರಸ್ಟ್ ಮತ್ತು ಶಾ ಬಡಾ ಕಸಮ್ ಟ್ರಸ್ಟ್‌ಗೆ ಸೇರಿದ ಭೂಮಿಯಲ್ಲಿ ಸುಮಾರು 100 ಮನೆಗಳು ಮತ್ತು ಅಂಗಡಿಗಳಿಂದ ವಂಚಕರು ಬಾಡಿಗೆ ಸಂಗ್ರಹಿಸುತ್ತಿದ್ದರು ಎಂದು ಆರೋಪಿಸಲಾಗಿದೆ.
“ವಕ್ಫ್ ಮಂಡಳಿಯ ಅಡಿಯಲ್ಲಿ ನೋಂದಾಯಿಸಲಾದ ಟ್ರಸ್ಟ್‌ಗಳಿಗೆ ಸೇರಿದ ಆಸ್ತಿಗಳನ್ನು ಅವರು ವೈಯಕ್ತಿಕ ಲಾಭಕ್ಕಾಗಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಕಂಡುಬಂದ ನಂತರ ಅವರ ವಿರುದ್ಧ ವಂಚನೆ ಮತ್ತು ನಕಲಿ ದಾಖಲೆಗಳ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ” ಎಂದು ಡಿಸಿಪಿ ಭರತ್ ರಾಥೋಡ್ ಹೇಳಿದ್ದಾರೆ.
ವಕ್ಫ್ ಆಸ್ತಿಯನ್ನು ಧಾರ್ಮಿಕ ಅಥವಾ ದತ್ತಿ ಉದ್ದೇಶಗಳಿಗೆ ಮೀಸಲಿಡಲಾಗಿದೆ. ಅಂತಹ ಆಸ್ತಿಗಳಿಂದ ಬರುವ ಆದಾಯವನ್ನು ಸಾಮಾನ್ಯವಾಗಿ ಧಾರ್ಮಿಕ ಚಟುವಟಿಕೆಗಳು, ದತ್ತಿ ಕಾರ್ಯಗಳು ಅಥವಾ ಸಾರ್ವಜನಿಕ ಪ್ರಯೋಜನಕ್ಕಾಗಿ ಬಳಸಲಾಗುತ್ತದೆ.
ಆರೋಪಿಗಳು ಎರಡು ಟ್ರಸ್ಟ್‌ಗಳಿಗೆ ಸೇರಿದ 5,000 ಚದರ ಮೀಟರ್‌ಗಿಂತ ಹೆಚ್ಚು ಅಕ್ರಮ ನಿರ್ಮಾಣವನ್ನು ನಡೆಸುತ್ತಿದ್ದಾರೆ. ಅವರು ಸುಮಾರು 100 ಆಸ್ತಿಗಳನ್ನು (ಮನೆಗಳು ಮತ್ತು ಅಂಗಡಿಗಳು) ನಿರ್ಮಿಸಿದ್ದು, 2008 ಮತ್ತು 2025 ರ ನಡುವೆ ಮಾಸಿಕ ಬಾಡಿಗೆಯನ್ನು ಸಂಗ್ರಹಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಬಂಧಿತ ಐವರು ಆರೋಪಿಗಳನ್ನು ಸಲೀಂ ಖಾನ್ ಪಠಾಣ್, ಮೊಹಮ್ಮದ್ ಯಾಸರ್ ಶೇಖ್, ಮಹಮೂದ್‌ಖಾನ್ ಪಠಾಣ್, ಫೈಜ್ ಮೊಹಮ್ಮದ್ ಚೋಬ್ದಾರ್ ಮತ್ತು ಶಾಹಿದ್ ಅಹ್ಮದ್ ಶೇಖ್ ಎಂದು ಗುರುತಿಸಲಾಗಿದೆ. ಸಲೀಂ ಖಾನ್ ಪಠಾಣ್ ಒಬ್ಬ ರೌಡಿ ಶೀಟರ್ ಆಗಿದ್ದು, ಶಸ್ತ್ರಾಸ್ತ್ರ ಕಾಯ್ದೆ ಸಂಬಂಧಿಸಿದ ಒಟ್ಟು ಐದು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಆರೋಪಿಗಳಲ್ಲಿ ಯಾರೂ ಕೂಡಾ ಯಾವುದೇ ಟ್ರಸ್ಟ್‌ನ ಸದಸ್ಯರಲ್ಲ ಎಂದು ದೂರುದಾರ ಮೊಹಮ್ಮದ್ ರಫೀಕ್ ಹೇಳಿದ್ದಾರೆ. ಅವರು ಕಾಂಚಿನಿ ಮಸೀದಿ ಟ್ರಸ್ಟ್‌ಗೆ ಸೇರಿದ ಭೂಮಿಯಲ್ಲಿ ನಿರ್ಮಿಸಲಾದ ಆಸ್ತಿಗಳ ಬಾಡಿಗೆದಾರರಾಗಿದ್ದಾರೆ. ಬಾಡಿಗೆ ಹಣವನ್ನು ತಮ್ಮ ಲಾಭಕ್ಕಾಗಿ ಬಳಸುವುದರ ಜೊತೆಗೆ, ಶಾ ಬಡಾ ಕಾಸಿ ಟ್ರಸ್ಟ್‌ನ ದೇಣಿಗೆ ಪೆಟ್ಟಿಗೆಯಲ್ಲಿ ಸಂಗ್ರಹಿಸಿದ ಹಣದ ಮಾಲೀಕತ್ವ ತಮ್ಮದು ಎಂದು ಆರೋಪಿಗಳು ಹೇಳಿಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಆರೋಪಿಗಳು ಕಾಂಚಿನಿ ಮಸೀದಿ ಟ್ರಸ್ಟ್‌ಗೆ ಸೇರಿದ ಭೂಮಿಯಲ್ಲಿ 15 ಅಂಗಡಿಗಳನ್ನು ನಿರ್ಮಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಭೂಮಿಯನ್ನು ಹಿಂದೆ ಉರ್ದು ಶಾಲೆಗಾಗಿ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಎಎಂಸಿ) ಗೆ ಹಸ್ತಾಂತರಿಸಲಾಗಿತ್ತು ಎಂದು ಅವರು ಹೇಳಿದ್ದಾರೆ. 2001 ರ ಭೂಕಂಪದ ಸಮಯದಲ್ಲಿ, ಶಾಲಾ ಕಟ್ಟಡ ಶಿಥಿಲಗೊಂಡಿತ್ತು. ಎಎಂಸಿ 2009 ರಲ್ಲಿ ಶಾಲೆಯನ್ನು ಕೆಡವಿ ಹತ್ತಿರದ ಪ್ರದೇಶಕ್ಕೆ ಸ್ಥಳಾಂತರಿಸಿತು.
ಈ ಮಧ್ಯೆ, ನಕಲಿ ಟ್ರಸ್ಟಿಗಳು ಅಲ್ಲಿ ಹತ್ತು ಅಂಗಡಿಗಳನ್ನು ನಿರ್ಮಿಸಿದರು, ಅದರಲ್ಲಿ ಒಂದನ್ನು ಆರೋಪಿ ಸಲೀಂ ಖಾನ್ ತನ್ನ ಕಚೇರಿಯನ್ನಾಗಿ ಬಳಸುತ್ತಿದ್ದರು ಎಂದು ದೂರುದಾರರು ಹೇಳಿದ್ದಾರೆ. ಉಳಿದವುಗಳನ್ನು ಬಾಡಿಗೆಗೆ ನೀಡಲಾಗಿದೆ ಎಂದು ಹೇಳಿದ್ದಾರೆ. ಆರೋಪಿಗಳು ಸಂಗ್ರಹಿಸಿದ ಬಾಡಿಗೆಯನ್ನು ಟ್ರಸ್ಟ್‌ನ ಖಾತೆಯಲ್ಲಿ ಠೇವಣಿ ಮಾಡಿಲ್ಲ ಅಥವಾ ಎಎಂಸಿಗೆ ಹಸ್ತಾಂತರಿಸಿಲ್ಲ. ಈ ಮೂಲಕ ಅವರು ಎಎಂಸಿ ಮತ್ತು ವಕ್ಫ್ ಮಂಡಳಿಗೆ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಗುಜರಾತ್
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಒಂದು ದೇವಸ್ಥಾನ, ಒಂದು ಬಾವಿ ಹಾಗೂ ಒಂದೇ ಸ್ಮಶಾನ ಬಳಸುವಂತೆ ಹಿಂದೂಗಳಿಗೆ ಭಾಗವತ್ ಕರೆ
ಒಂದು ದೇವಸ್ಥಾನ, ಒಂದು ಬಾವಿ ಹಾಗೂ ಒಂದೇ ಸ್ಮಶಾನ ಬಳಸುವಂತೆ ಹಿಂದೂಗಳಿಗೆ ಭಾಗವತ್ ಕರೆ

