ಅಹಮದಾಬಾದ್: ಗುಜರಾತ್‌ನ ಬೆಟ್ ದ್ವಾರಕ ಜಿಲ್ಲಾ ಆಡಳಿತವು ಈ ವಾರದಲ್ಲಿ ದರ್ಗಾಗಳು (ಮುಸ್ಲಿಂ ದೇವಾಲಯ), ಮನೆಗಳು ಮತ್ತು ವಾಣಿಜ್ಯ ಕಟ್ಟಡಗಳು ಸೇರಿದಂತೆ ಸುಮಾರು 335 ಕಟ್ಟಡಗಳನ್ನು ಕೆಡವಿದೆ. ಅವುಗಳನ್ನು “ಅತಿಕ್ರಮಣ” ಕಟ್ಟಡಗಳು ಎಂದು ಅದು ಘೋಷಿಸಿದೆ.
ಕಳೆದ ಶನಿವಾರದಿಂದ ಬೆಟ್ ದ್ವಾರಕ ದ್ವೀಪದ ಬಾಲಪರ್ ಗ್ರಾಮದಲ್ಲಿ ಬೃಹತ್ ತೆರವು ಕಾರ್ಯಾಚರಣೆಯನ್ನು ನಡೆಸಲಾಯಿತು.
ಈ ಬೃಹತ್ ಮಟ್ಟದ ತೆರವು ಕಾರ್ಯಾಚರಣೆಯ ವೀಡಿಯೊಗಳನ್ನು ಗುಜರಾತ್‌ನ ಗೃಹ ಸಚಿವ ಹರ್ಷ ಸಂಘವಿಯವರು ತಮ್ಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
53,04,25,500 ರೂ. ಮೌಲ್ಯದ 1,00,642 ಚದರ ಮೀಟರ್ ಭೂಮಿಯಲ್ಲಿ ತೆರವುಗೊಳಿಸಲಾಗಿದೆ. ಇವುಗಳಲ್ಲಿ 314 ವಸತಿ ಕಟ್ಟಡಗಳು, 9 ವಾಣಿಜ್ಯ ಕಟ್ಟಡಗಳು ಮತ್ತು 12 ಧಾರ್ಮಿಕ ಸ್ಥಳಗಳು ಮತ್ತು ಸ್ಮಾರಕಗಳು ಸೇರಿವೆ ಎಂದು ಸಂಘವಿ ಹೇಳಿದ್ದಾರೆ.
ಗೌರವಾನ್ವಿತ ಮುಖ್ಯಮಂತ್ರಿ ಭೂಪೇಂದ್ರ ಪಾಟೀಲ್ ನೇತೃತ್ವದಲ್ಲಿ ಈ ಭೂಮಿಯಲ್ಲಿ ಶೀಘ್ರದಲ್ಲೇ ಜನರಿಗೆ ಹೊಸ ಸೌಲಭ್ಯಗಳನ್ನು ಒದಗಿಸಲಿದ್ದೇವೆ. ಎಲ್ಲರ ಉತ್ತಮ ಭವಿಷ್ಯದತ್ತ ಒಂದು ಉತ್ತಮ ಹೆಜ್ಜೆ!” ಎಂದು ಅವರು ಹೇಳಿದರು.
Bet Dwarka!
The Govt of Gujarat has cleared massive illegal encroachments, freeing up land reserved for citizen facilities.
Here are the details:
– Residential: 314 encroachments removed
– Commercial: 9 encroachments removed
– Religious: 12 encroachments removed
– Total:… pic.twitter.com/RkicyNCRHt
— Harsh Sanghavi (@sanghaviharsh) January 16, 2025
ಆದಾಗ್ಯೂ, ಅಕ್ರಮ ಅತಿಕ್ರಮಣಗಳನ್ನು ತೆಗೆದುಹಾಕುವ ಹೆಸರಿನಲ್ಲಿ ಸರ್ಕಾರವು ಧಾರ್ಮಿಕ ಸ್ಥಳಗಳು ಮತ್ತು ಸ್ಮಾರಕಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಹೇಳಿದೆ.
“ಗುಜರಾತ್‌ನ ಬೆಟ್ ದ್ವಾರಕಾದಲ್ಲಿ ನಡೆಯುತ್ತಿರುವ ಬೃಹತ್ ಮತ್ತು ನಿರಂತರ ಧ್ವಂಸ ಕಾರ್ಯಾಚರಣೆಯಲ್ಲಿ, 13,12,72,000 ರೂ. ಮೌಲ್ಯದ ವಸತಿ ಆಸ್ತಿಗಳು ಮತ್ತು ಹಜರತ್ ಪಂಜ್ ಪೀರ್ ದರ್ಗಾವನ್ನು ಭಾನುವಾರ ಮಾತ್ರವೇ ಕೆಡವಲಾಯಿತು. ಇಲ್ಲಿ ಮುಸ್ಲಿಂ ಪೂಜಾ ಸ್ಥಳಗಳು ಮತ್ತು ಮುಸ್ಲಿಂ ಸ್ಮಾರಕಗಳು ಅನಿವಾರ್ಯವಾಗಿ ಗುರಿಯಾಗಿವೆ ಎಂದು ಹೇಳಬೇಕಾಗಿಲ್ಲ” ಎಂದು SDPI ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್ ಫರಂಗಿಪೇಟೆ ಹೇಳಿದರು.
ಸರ್ಕಾರವು ವಿಶ್ವದ ಇತರ ಭಾಗಗಳಲ್ಲಿನ ನಿರ್ಮಾಣದ ಮೇಲೆ ಕೇಂದ್ರೀಕರಿಸಿದೆ. ಆದಾಗ್ಯೂ, ಮೋದಿ ಸರ್ಕಾರವು ತೆರವು ಮತ್ತು ವಿನಾಶಗಳ ಮೇಲೆ ಕೇಂದ್ರೀಕರಿಸಿದೆ ಎಂದು ಅವರು ಹೇಳಿದ್ದಾರೆ.
“ಬುಲ್ಡೋಜರ್ ಬಿಜೆಪಿ ಆಡಳಿತಗಾರರ ವಜ್ರಾಯುಧವಾಗಿದೆ ಮತ್ತು ‘ಅತಿಕ್ರಮಣ’ ಮತ್ತು ‘ಅನಧಿಕೃತ ಅಥವಾ ಅಕ್ರಮ ನಿರ್ಮಾಣವು ಅವರ ಟ್ರಂಪ್ ಕಾರ್ಡ್ ಆಗಿದೆ. ಬುಲ್ಡೋಜರ್‌ನಿಂದ ಹೊಡೆದುರುಳಿಸಲ್ಪಡುವವರು ಯಾವಾಗಲೂ ಮುಸ್ಲಿಮರು ಆಗಿದ್ದಾರೆ” ಎಂದು ಫರಂಗಿಪೇಟೆ ತಿಳಿಸಿದರು.
ಈ ಕಟ್ಟಡಗಳ ತೆರವು ಕಾರ್ಯಾಚರಣೆಯು ಭಾರೀ ಪೊಲೀಸ್ ಭದ್ರತೆಯಲ್ಲಿ ಪ್ರಾರಂಭವಾಗಿದೆ. ಇದಕ್ಕಾಗಿ ಇತರ ಜಿಲ್ಲೆಗಳಿಂದ ಪೊಲೀಸ್ ಸಿಬ್ಬಂದಿಯನ್ನು ಕರೆತರಲಾಗಿದೆ ಮತ್ತು 1,000 ಸಿಬ್ಬಂದಿಯನ್ನು ಬೆಟ್ ದ್ವಾರಕದಲ್ಲಿ ನಿಯೋಜಿಸಲಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ದೇವಭೂಮಿ ದ್ವಾರಕ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ನಿತೇಶ್ ಪಾಂಡೆ, “ಜಿಲ್ಲಾಡಳಿತವು ಬೆಟ್ ದ್ವಾರಕದ ಬಾಲಪರ್ ಪ್ರದೇಶದಲ್ಲಿ ಅಕ್ರಮ ನಿರ್ಮಾಣಗಳ ತೆರವು ಕಾರ್ಯಾಚರಣೆಯನ್ನು ಕೈಗೊಂಡಿತು. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು SRP ಮತ್ತು ಮೆರಿನ್ ಟಾಸ್ಕ್ ಫೋರ್ಸ್ ಸೇರಿದಂತೆ ಸುಮಾರು 1,000 ಸಿಬ್ಬಂದಿಯನ್ನು ನಿಯೋಜಿಸಿದ್ದೇವೆ. ಕರಾವಳಿ ಭದ್ರತೆಯನ್ನು ಕಾಪಾಡಿಕೊಳ್ಳಲು, ಪೊಲೀಸ್ ದೋಣಿ ಗಸ್ತು ಮುಂದುವರೆಯಿತು ಮತ್ತು ನಾವು ಕಣ್ಗಾವಲುಗಾಗಿ ಡ್ರೋನ್‌ಗಳನ್ನು ಸಹ ಬಳಸುತ್ತಿದ್ದೇವೆ” ಎಂದಿದ್ದಾರೆ.

ತೆರವು ಕಾರ್ಯಾಚರಣೆಯ ಭಾಗವಾಗಿ ಪೊಲೀಸರು ಶುಕ್ರವಾರದಿಂದ ಪ್ರದೇಶವನ್ನು ಸುತ್ತುವರೆದಿದ್ದಾರೆ ಮತ್ತು ಹೊರಗಿನವರನ್ನು ಒಳಗೆ ಬಿಡುತ್ತಿಲ್ಲವೆಂದು ವರದಿಗಳು ಹೇಳಿವೆ.
ಬೆಟ್ ದ್ವಾರಕವನ್ನು ಓಖಾ ಕರಾವಳಿಗೆ ಸಂಪರ್ಕಿಸುವ ಭಾರತದ ಅತಿ ಉದ್ದದ ಕೇಬಲ್-ಸ್ಟೇಡ್ ಸೇತುವೆಯಾದ ಸುದರ್ಶನ ಸೇತುಗೆ ಕಳೆದ ವರ್ಷ ಫೆಬ್ರವರಿ 25ರಂದು ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದ್ದರು. ಪ್ರತಿ ವರ್ಷ ಲಕ್ಷಾಂತರ ಭಕ್ತರು ಬೆಟ್ ದ್ವಾರಕಕ್ಕೆ ಭೇಟಿ ನೀಡುತ್ತಾರೆ ಮತ್ತು ಸೇತುವೆ ತೆರೆದ ನಂತರ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ.
ಈ ಹಿಂದೆ, ಅಕ್ಟೋಬರ್ 2022ರಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗಿತ್ತು. ಈ ವರ್ಷದ ಸೆಪ್ಟೆಂಬರ್‌ನಲ್ಲಿ, ಗುಜರಾತ್‌ನ ಗಿರ್-ಸೋಮನಾಥ್ ಜಿಲ್ಲೆಯ ವೆರಾವಲ್ ಪ್ರದೇಶದಲ್ಲಿ ಅತಿಕ್ರಮಣಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯ ಭಾಗವಾಗಿ ಮಸೀದಿಗಳು ಮತ್ತು ದರ್ಗಾಗಳು ಸೇರಿದಂತೆ ಒಂಬತ್ತು ಧಾರ್ಮಿಕ ಸ್ಥಳಗಳನ್ನು ತೆರವುಗೊಳಿಸಲಾಗಿತ್ತು. ಆನಂತರ ಧಾರ್ಮಿಕ ಸ್ಥಳಗಳನ್ನು ಅಕ್ರಮವಾಗಿ ನೆಲಸಮ ಮಾಡಿದ್ದಕ್ಕಾಗಿ ಗುಜರಾತ್ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿದೆ.
ಕಳೆದ ವರ್ಷ ನವೆಂಬರ್‌ನಲ್ಲಿ ಮಾಲೀಕರಿಗೆ 15 ದಿನಗಳ ಪೂರ್ವ ಸೂಚನೆ ಇಲ್ಲದೆ ಮತ್ತು ಕಾನೂನುಬದ್ಧ ಮಾರ್ಗಸೂಚಿಗಳನ್ನು ಅನುಸರಿಸದೆ ಯಾವುದೇ ತೆರವು ಕಾರ್ಯಾಚರಣೆಯನ್ನು ಕೈಗೊಳ್ಳಬಾರದು ಎಂದು ನಿರ್ದೇಶಿಸುವ ಮಾರ್ಗಸೂಚಿಗಳನ್ನು ಸುಪ್ರೀಂ ಕೋರ್ಟ್ ನಿಗದಿಪಡಿಸಿದೆ.
ನೋಟಿಸ್ ಅನ್ನು ನೋಂದಾಯಿತ ಅಂಚೆ ಮೂಲಕ ಮಾಲೀಕರಿಗೆ ತಲುಪಿಸಬೇಕು ಮತ್ತು ಕಟ್ಟಡದ ಹೊರ ಭಾಗದಲ್ಲಿ ಅಂಟಿಸಬೇಕು. ನೋಟಿಸ್ ಅನಧಿಕೃತ ನಿರ್ಮಾಣದ ಸ್ವರೂಪ, ನಿರ್ದಿಷ್ಟ ಉಲ್ಲಂಘನೆಯ ವಿವರಗಳು ಮತ್ತು ತೆರವಿಗೆ ಕಾರಣಗಳನ್ನು ಒಳಗೊಂಡಿರಬೇಕು. ತೆರವು ಕಾರ್ಯಾಚರಣೆಯನ್ನು ವೀಡಿಯೊಗ್ರಾಫ್ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಕಾನೂನು ಉಲ್ಲಂಘನೆಗಳು ಕಾನೂನುಬಾಹಿರತೆಯನ್ನು ಉತ್ತೇಜಿಸಬಹುದು ಮತ್ತು ಸಾಂವಿಧಾನಿಕ ಪ್ರಜಾಪ್ರಭುತ್ವವನ್ನು ರಕ್ಷಿಸಲು ನಾಗರಿಕ ಹಕ್ಕುಗಳ ರಕ್ಷಣೆ ಅತ್ಯಗತ್ಯ ಎಂದು ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ಕೆವಿ ವಿಶ್ವನಾಥನ್ ಅವರ ಪೀಠ ಹೇಳಿದೆ.
ಮುಖ್ಯವಾಹಿನಿಗೆ ಬಂದ 6 ನಕ್ಸಲರನ್ನು ವಶಕ್ಕೆ ಪಡೆದ ಪೊಲೀಸರು : ಚಿಕ್ಕಮಗಳೂರಿನಲ್ಲಿ ವಿಚಾರಣೆ


