ದೇವಸ್ಥಾನಕ್ಕೆ ತೆರಳುತ್ತಿದ್ದ ದಲಿತ ಸಮುದಾಯದ ಕಾರ್ಮಿಕನೊಬ್ಬನನ್ನು ಥಳಿಸಿ ಜಾತಿ ನಿಂದನೆ ಮಾಡಿರುವ ಘಟನೆ ಗುಜರಾತ್‌ನ ಹಿಮತ್‌ನಗರದಲ್ಲಿ ಬೆಳಕಿಗೆ ಬಂದಿದ್ದು, ಖೇದವಾಡ ಲಕ್ಷ್ಮಿಪುರ ಗ್ರಾಮದ ದಿನಗೂಲಿ ಕಾರ್ಮಿಕ 38 ವರ್ಷದ ಶೈಲೇಶ್ ಸೋಲಂಕಿ ಎಂಬುವವರು ಹಿಮತ್‌ನಗರ ಗ್ರಾಮೀಣ ಪೊಲೀಸರಿಗೆ ದೂರು ನೀಡಿದ್ದಾರೆ.
ಎಫ್‌ಐಆರ್ ಪ್ರಕಾರ, ಸೆಪ್ಟೆಂಬರ್ 26 ರ ಸಂಜೆ ಈ ಘಟನೆ ನಡೆದಿದೆ. ಬಲೂಚ್‌ಪುರದ ಕ್ರಾಸ್‌ರೋಡ್ ಬಳಿ ಬಸ್‌ಗಾಗಿ ಕಾಯುತ್ತಿದ್ದಾಗ ಸ್ಕೂಟರ್‌ನಲ್ಲಿದ್ದ ಧನ್‌ಪುರದ ಭರತ್ ಪಟೇಲ್ ಎಂಬುವವರು ಸೋಲಂಕಿಯನ್ನು ತಡೆದು, ಅವರ ಗುರುತನ್ನು ಕೇಳಿದರು. ಸೋಲಂಕಿ ಅವರು ಕಾಲ ಭೈರವ ದೇವಸ್ಥಾನಕ್ಕೆ ಹೋಗುತ್ತಿರುವುದಾಗಿ ಹೇಳಿದರು, ಆದರೆ ಪಟೇಲ್ ಅವರನ್ನು ನಂಬದೆ ಅದಕ್ಕೆ ಪುರಾವೆ ಕೇಳಿದರು.
“ನಾನು ಅವನಿಗೆ ನನ್ನ ಆಧಾರ್ ಕಾರ್ಡ್ ಕೊಟ್ಟೆ. ಅವನು ನನ್ನ ಉಪನಾಮವನ್ನು ನೋಡಿದಾಗ, ನಾನು ಪರಿಶಿಷ್ಟ ಜಾತಿಗೆ ಸೇರಿದವನಾ ಎಂದು ಕೇಳಿದನು. ನಾನು ದಲಿತ ಎಂದು ಹೇಳಿದಾಗ, ಅವನು ನನ್ನನ್ನು ನಿಂದಿಸಲು ಪ್ರಾರಂಭಿಸಿದನು. ನೀನು ದಲಿತನಾಗಿ ರಾತ್ರಿ ಹೊತ್ತು ದೇವಸ್ಥಾನಕ್ಕೆ ಭೇಟಿ ನೀಡಲು ಏಕೆ ಬಂದೆ ಎಂದು ಅವನು ನನ್ನನ್ನು ಪ್ರಶ್ನಿಸಿದ. ನಂತರ ಜಾತಿ ನಿಂದನೆ ಮಾಡುತ್ತಾ ಹಲವಾರು ಬಾರಿ ಕಪಾಳಮೋಕ್ಷ ಮಾಡಿದನು” ಎಂದು ಹೇಳಿದ್ದಾರೆ.
ಸ್ವಲ್ಪ ಸಮಯದ ನಂತರ, ತಿತ್ಪುರ ಗ್ರಾಮದ ಇಬ್ಬರು ವ್ಯಕ್ತಿಗಳು, ನರೇಂದ್ರಸಿನ್ಹ್ ಪರ್ಮಾರ್ ಮತ್ತು ಜಗತ್ಸಿನ್ಹ್ ಪರ್ಮಾರ್, ಮೋಟಾರ್ ಸೈಕಲ್‌ನಲ್ಲಿ ಬಂದು ಹಲ್ಲೆಯನ್ನು ನಿಲ್ಲಿಸಿದರು. ಆದರೆ ಪಟೇಲ್ ಸೋಲಂಕಿಯನ್ನು ತನ್ನ ಸ್ಕೂಟರ್‌ನಲ್ಲಿ ಬಲವಂತವಾಗಿ ಕೂರಿಸಿ, ಘೋರ್ವಾಡಾ ಬಳಿಯ ಮತ್ತೊಂದು ಪ್ರದೇಶಕ್ಕೆ ಕರೆದೊಯ್ದು, ಮತ್ತೊಮ್ಮೆ ದೇವಾಲಯಕ್ಕೆ ಬಂದರೆ ‘ಗಂಭೀರ ಪರಿಣಾಮಗಳನ್ನು” ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ನಂತರ ಸೋಲಂಕಿ ತನ್ನ ಕುಟುಂಬಕ್ಕೆ ಮಾಹಿತಿ ನೀಡಿ ಮಧ್ಯಪ್ರವೇಶಿಸಿದ ಇಬ್ಬರು ವ್ಯಕ್ತಿಗಳನ್ನು ಭೇಟಿಯಾದರು. ಅವರು ಸಾಕ್ಷಿಗಳಾಗಿರಲು ಒಪ್ಪಿಕೊಂಡರು. ಅವರ ದೂರಿನ ಆಧಾರದ ಮೇಲೆ, ಪೊಲೀಸರು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ನಿಬಂಧನೆಗಳ ಜೊತೆಗೆ ಹಲ್ಲೆ ಮತ್ತು ಬೆದರಿಕೆ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ತನಿಖೆ ನಡೆಯುತ್ತಿದೆ.
ಗುಜರಾತ್| ದಲಿತ ಯುವತಿಯನ್ನು ಗರ್ಬಾ ಕಾರ್ಯಕ್ರಮದಿಂದ ಹೊರಗೆ ಕಳಿಸಿ ಅವಮಾನ; ದೂರು ದಾಖಲು


