ತನ್ನ ಕಚೇರಿಯಲ್ಲೇ ನಕಲಿ ನ್ಯಾಯಾಲಯ ಸ್ಥಾಪಿಸಿ, ಅದರಲ್ಲಿ ನ್ಯಾಯಾಧೀಶನಂತೆ ನಟಿಸಿ ನೈಜ ನ್ಯಾಯಾಲಯದಂತೆ ಆದೇಶವನ್ನೂ ಹೊರಡಿಸಿದ ವ್ಯಕ್ತಿಯೊಬ್ಬನನ್ನು ಗುಜರಾತ್‌ನ ಗಾಂಧಿನಗರದಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಮೋರಿಸ್ ಸ್ಯಾಮ್ಯುಯೆಲ್ ಕ್ರಿಶ್ಚಿಯನ್ ಬಂಧಿತ ಆರೋಪಿ. ಈತ 2019ರಲ್ಲಿ ಸರ್ಕಾರಿ ಭೂಮಿಗೆ ಸಂಬಂಧಿಸಿದ ಪ್ರಕರಣದಲ್ಲಿ ತನ್ನ ಕಕ್ಷಿದಾರನ ಪರವಾಗಿ ಆದೇಶ ನೀಡಿದ ಆರೋಪವಿದೆ. ಕಳೆದ ಐದು ವರ್ಷಗಳಿಂದ ನಕಲಿ ನ್ಯಾಯಾಲಯ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದು ಬಂದಿದೆ.
ಸ್ಯಾಮ್ಯುಯೆಲ್ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಭೂ ವಿವಾದದ ಪ್ರಕರಣಗಳು ಬಾಕಿ ಇರುವ ಜನರನ್ನು ಬಲೆಗೆ ಬೀಳಿಸುತ್ತಿದ್ದ. ತನ್ನ ಕಕ್ಷಿದಾರರಿಂದ ಅವರ ಪ್ರಕರಣವನ್ನು ಪರಿಹರಿಸಲು ಶುಲ್ಕವಾಗಿ ನಿರ್ದಿಷ್ಟ ಮೊತ್ತವನ್ನು ತೆಗೆದುಕೊಳ್ಳುತ್ತಿದ್ದ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಸ್ಯಾಮ್ಯುಯೆಲ್ ಮೊದಲು ನ್ಯಾಯಾಲಯದಿಂದ ನೇಮಕಗೊಂಡ ಅಧಿಕೃತ ಮಧ್ಯಸ್ಥಗಾರನಾಗಿ ತನ್ನನ್ನು ತಾನು ಗುರುತಿಸಿಕೊಳ್ಳುತ್ತಿದ್ದ. ನ್ಯಾಯಾಲಯದಂತೆ ವಿನ್ಯಾಸಗೊಳಿಸಲಾಗಿರುವ ಗಾಂಧಿನಗರದ ತನ್ನ ಕಚೇರಿಗೆ ಗ್ರಾಹಕರನ್ನು ಕರೆಸಿಕೊಳ್ಳುತ್ತಿದ್ದ. ನ್ಯಾಯಮಂಡಳಿಯ ಮುಖ್ಯಸ್ಥರಂತೆ ಅನುಕೂಲಕರ ಆದೇಶಗಳನ್ನು ನೀಡುತ್ತಿದ್ದ ಎಂದು ವರದಿಯಾಗಿದೆ.
ಆರ್ಬಿಟ್ರಲ್ ಟ್ರಿಬ್ಯೂನಲ್ ನ್ಯಾಯಾಲಯದ ನ್ಯಾಯಾಧೀಶನಂತೆ ನಟಿಸುವ ಮೂಲಕ ಜನರನ್ನು ವಂಚಿಸಿದ ಆರೋಪದ ಮೇಲೆ ಅಹ್ಮದಾಬಾದ್ ನಗರ ಪೊಲೀಸರು ಸ್ಯಾಮ್ಯುಯೆಲ್‌ನನ್ನು ಬಂಧಿಸಿದ್ದಾರೆ.
ಸಿಟಿ ಸಿವಿಲ್ ನ್ಯಾಯಾಲಯದ ರಿಜಿಸ್ಟ್ರಾರ್ ಹಾರ್ದಿಕ್ ದೇಸಾಯಿ ದೂರಿನಂತೆ ಕಾರಂಜ್ ಪೊಲೀಸ್ ಠಾಣೆಯಲ್ಲಿ ಸ್ಯಾಮ್ಯುಯೆಲ್ ಕ್ರಿಶ್ಚಿಯನ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 170 ಮತ್ತು 419ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
2019ರಲ್ಲಿ ಸ್ಯಾಮ್ಯುಯೆಲ್ ನಕಲಿ ನ್ಯಾಯಾಲಯ ಸೃಷ್ಟಿಸಿ ತನ್ನ ಗ್ರಾಹಕರ ಪರವಾಗಿ ಆದೇಶ ಹೊರಡಿಸಿದ್ದ. ಈ ಪ್ರಕರಣವು ಜಿಲ್ಲಾಧಿಕಾರಿಗಳ ಅಧೀನದಲ್ಲಿರುವ ಸರ್ಕಾರಿ ಜಮೀನಿಗೆ ಸಂಬಂಧಿಸಿತ್ತು. ಪಾಲ್ಡಿ ಪ್ರದೇಶದಲ್ಲಿನ ಈ ಜಮೀನನ್ನು ತನ್ನ ಕಕ್ಷಿದಾರನಿಗೆ ಆರೋಪಿ ನೀಡಿದ್ದ. ಸ್ಯಾಮ್ಯುಯೆಲ್ ಸರ್ಕಾರದಿಂದ ನೇಮಿತ ‘ಅಧಿಕೃತ ಮಧ್ಯಸ್ಥಗಾರ’ ಎಂದು ಹೇಳಿಕೊಂಡು ನ್ಯಾಯಾಲಯದ ಕಲಾಪ ಆರಂಭಿಸಿ ತನ್ನ ಕಕ್ಷಿದಾರನ ಪರವಾಗಿ ಆದೇಶವನ್ನು ಹೊರಡಿಸಿದ್ದ.
ತನ್ನ ಆದೇಶವನ್ನು ಜಾರಿಗೆ ತರಲು ಸ್ಯಾಮ್ಯುಯೆಲ್ ಮತ್ತೋರ್ವ ವಕೀಲನ ಮೂಲಕ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದಾನೆ ಮತ್ತು ಆದೇಶದ ಪ್ರತಿಯನ್ನೂ ಈ ವೇಳೆ ಲಗತ್ತಿಸಿದ್ದಾನೆ. ಆದರೆ, ನ್ಯಾಯಾಲಯದ ರಿಜಿಸ್ಟ್ರಾರ್ ಹಾರ್ದಿಕ್ ದೇಸಾಯಿ ಇದು ನಕಲಿ ಆದೇಶ ಎಂದು ಪತ್ತೆ ಹಚ್ಚಿ ಕಾರಂಜ್ ಪೊಲೀಸರಿಗೆ ದೂರು ನೀಡಿದ್ದಾರೆ.
ಸ್ಯಾಮ್ಯುಯೆಲ್ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 170 (ಸಾರ್ವಜನಿಕ ಸೇವಕನಾಗಿ ಯಾವುದೇ ಕಚೇರಿಯನ್ನು ಹೊಂದಿರುವಂತೆ ನಟಿಸುವುದು) ಮತ್ತು 419 (ವ್ಯಕ್ತಿಯಿಂದ ವಂಚನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಡಿಸೆಂಬರ್ 2023ರಲ್ಲಿ ಗುಜರಾತ್‌ನ ಮೊರ್ಬಿ ಜಿಲ್ಲೆಯಲ್ಲಿ ನಕಲಿ ಟೋಲ್ ಫ್ಲಾಝಾ ಸ್ಥಾಪಿಸಿ ವಾಹನ ಚಾಲಕರಿಂದ ಹಣ ಪಡೆಯುತ್ತಿದ್ದ ಪ್ರಕರಣವೊಂದು ಬೆಳಕಿಗೆ ಬಂದಿತ್ತು. ಆ ಬಳಿಕ ನಕಲಿ ಸರ್ಕಾರಿ ಕಚೇರಿ ಪತ್ತೆಯಾದ ಬಗ್ಗೆ ವರದಿಯಾಗಿತ್ತು. ಕಳೆದ ಜುಲೈನಲ್ಲಿ ಅಹಮದಾಬಾದ್ ಜಿಲ್ಲೆಯ ಭವ್ಲಾ ತಾಲೂಕಿನ ಕೇರಳ ಎಂಬ ಗ್ರಾಮದಲ್ಲಿ ನಕಲಿ ಆಸ್ಪತ್ರೆಯೂ ಪತ್ತೆಯಾಗಿತ್ತು.
ಇದನ್ನೂ ಓದಿ : ಸಿಎಎ ವಿರೋಧಿ ಪ್ರತಿಭಟನೆ ವೇಳೆ ಹಿಂಸಾಚಾರ | ಅಸ್ಸಾಂ ಶಾಸಕ ಅಖಿಲ್ ಗೊಗೋಯ್ ವಿರುದ್ಧ ಯುಎಪಿಎ ಅಡಿಯಲ್ಲಿ ಆರೋಪ


