ಗುಜರಾತ್‌ನ ಅಹಮದಾಬಾದ್ ನಗರದ ಓಧವ್ ಪ್ರದೇಶದ ಖಾಸಗಿ ಸಭಾಂಗಣದಲ್ಲಿ ಧಾರ್ಮಿಕ ಮತಾಂತರ ನಡೆಯುತ್ತಿದೆ ಎಂದು ಆರೋಪಿಸಿ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಸದಸ್ಯರ ಗುಂಪೊಂದು ಈಸ್ಟರ್ ಆಚರಣೆಗೆ ಅಡ್ಡಿಪಡಿಸಿದ್ದಾರೆ.
ಏಪ್ರಿಲ್ 20 ರ ಭಾನುವಾರದಂದು ನಡೆದಿರುವ ಈ ಘಟನೆಯಲ್ಲಿ, ಹಿಂದುತ್ವ ಗುಂಪು ಕೋಲುಗಳನ್ನು ಹಿಡಿದು ‘ಜೈ ಶ್ರೀ ರಾಮ್’ ಘೋಷಣೆಗಳನ್ನು ಕೂಗುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ.
ಈಸ್ಟರ್ ಆಚರಣೆಗೆ ಅಡ್ಡಿಪಡಿಸಿದಾಗ ಮಕ್ಕಳು ಸೇರಿದಂತೆ ಸುಮಾರು 100 ಕ್ರಿಶ್ಚಿಯನ್ ಸಮುದಾಯದ ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಎರಡೂ ಕಡೆಯವರನ್ನು ಠಾಣೆಗೆ ಕರೆದೊಯ್ದರು.
ಆಚರಣೆಯಲ್ಲಿ ಹಾಜರಿದ್ದವರನ್ನು ಅವರ ಧರ್ಮದ ಬಗ್ಗೆ ಪ್ರಶ್ನಿಸಿದ ಹಿಂದುತ್ವ ಕಾರ್ಯಕರ್ತರು, ಮತಾಂತರ ನಡೆಸಲಾಗುತ್ತಿದೆ ಎಂದು ಆರೋಪಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಆದರೂ, ಸ್ಥಳದಲ್ಲಿ ಅಂತಹ ಚಟುವಟಿಕೆಯ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ಓಧವ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಪಿಎನ್ ಜಿಂಜುವಾಡಿಯಾ ದೃಢಪಡಿಸಿದರು.
ಅಧಿಕಾರಿಗಳಿಗೆ ಎರಡು ದೂರುಗಳು ಬಂದಿವೆ; ಒಂದು ಸ್ಥಳೀಯ ಬಜರಂಗದಳ ಸದಸ್ಯ ದರ್ಶನ್ ಜೋಶಿ ಅವರಿಂದ ಮತಾಂತರದ ತನಿಖೆ ಕೋರಿ, ಇನ್ನೊಂದು ಕ್ರಿಶ್ಚಿಯನ್ ಪ್ರೇಕ್ಷಕ ಇಮ್ಯಾನುಯೆಲ್ ಅಮಯ್ದಾಸ್ ಅವರಿಂದ ದೂರು ದಾಖಲಾಗಿದೆ. ಅವರು 10 ರಿಂದ 15 ಅಪರಿಚಿತ ವ್ಯಕ್ತಿಗಳು ಸಭಾಂಗಣಕ್ಕೆ ಬಲವಂತವಾಗಿ ಪ್ರವೇಶಿಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ. ಎರಡೂ ದೂರುಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕೋವಿಡ್ ಲಸಿಕೆಯಿಂದಾಗಿ ಅಂಗವೈಕಲ್ಯ; ಪರಿಹಾರಕ್ಕೆ ಮೊಕದ್ದಮೆ ಹೂಡುವಂತೆ ಸುಪ್ರೀಂ ಕೋರ್ಟ್ ಸೂಚನೆ


