2008ರ ಅಹಮದಾಬಾದ್ ಸರಣಿ ಸ್ಫೋಟ ಪ್ರಕರಣದಲ್ಲಿನ 49 ಮಂದಿ ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದ ಬಳಿಕ ಬಿಜೆಪಿ ಗುಜರಾತ್ ಘಟಕ ಟ್ವೀಟ್ ಮಾಡಿರುವ ವ್ಯಂಗ್ಯಚಿತ್ರ ವಿವಾದಕ್ಕೆ ಕಾರಣವಾಗಿದೆ. ನಂತರ ಟ್ವಿಟರ್ ಸಂಸ್ಥೆ ಸದರಿ ಟ್ವೀಟ್ ಅನ್ನು ರದ್ದು ಮಾಡಿದೆ.
ವ್ಯಂಗ್ಯಚಿತ್ರವು “ಸತ್ಯಮೇವ್ ಜಯತೇ” ಮತ್ತು “ಭಯೋತ್ಪಾದನೆಯನ್ನು ಹರಡುವವರಿಗೆ ಕ್ಷಮೆಯಿಲ್ಲ” ಎಂಬ ವಾಕ್ಯಗಳೊಂದಿಗೆ ಇದ್ದು, ಟೋಪಿ ಧರಿಸಿರುವ ವ್ಯಕ್ತಿಗಳನ್ನು ನೇಣುಹಾಕಿರುವ ಸ್ಥಿತಿಯಲ್ಲಿ ಚಿತ್ರಿಸಲಾಗಿದೆ.
ಫೆಬ್ರವರಿ 19ರಂದು ನ್ಯಾಯಾಲಯದ ತೀರ್ಪು ಹೊರಬಿದ್ದ ಬಳಿಕ ಗುಜರಾತ್ ಬಿಜೆಪಿಯ (@BJP4Gujarat) ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿವಾದಿತ ವ್ಯಂಗ್ಯಚಿತ್ರವನ್ನು ಪೋಸ್ಟ್ ಮಾಡಲಾಗಿದೆ. ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಟೀಕೆಗಳು ವ್ಯಕ್ತವಾಗಿವೆ.
ಟ್ವೀಟ್ ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತುಕೊಂಡ ಟ್ವಿಟರ್ ಸಂಸ್ಥೆಯು ಟ್ವೀಟ್ ಅನ್ನು ರದ್ದುಪಡಿಸಿದ್ದು, “ಟ್ವಿಟರ್‌ನ ನಿಯಮಗಳನ್ನು ಗುಜರಾತ್ ಬಿಜೆಪಿಯ ಪೋಸ್ಟ್ ಉಲ್ಲಂಘಿಸಿದೆ” ಎಂದು ತಿಳಿಸಿದೆ. (ಗುಜರಾತ್ ಬಿಜೆಪಿ ಟ್ವೀಟ್‌ನ ಅರ್ಕೈವ್ ಲಿಂಕ್ ಇಲ್ಲಿದೆ).
Tweet by @BJP4Gujarat taken down for violating twitter rules. pic.twitter.com/zsML7m6nBu
— Mohammed Zubair (@zoo_bear) February 20, 2022
‘ವಿವಾದಾತ್ಮಕ ಟ್ವೀಟ್‌ಗಳ ಮೂಲಕ ಬಿಜೆಪಿ ತೀರ್ಪಿನ ಲಾಭ ಪಡೆಯಲು ಯತ್ನಿಸಿದೆ” ಎಂದು ಗುಜರಾತ್ ಕಾಂಗ್ರೆಸ್ ಆರೋಪಿಸಿದೆ.
“ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ. ಇಬ್ಬರು ಮಾಜಿ ಪ್ರಧಾನಿಗಳನ್ನು ಕಳೆದುಕೊಂಡಿರುವ ಕಾಂಗ್ರೆಸ್ ಪಕ್ಷಕ್ಕಿಂತ ಉತ್ತಮವಾಗಿ ಈ ವಿಚಾರ ಯಾರಿಗೂ ತಿಳಿಯದು. ಇಂದು ಬಿಜೆಪಿ ವಿವಾದಾತ್ಮಕ ಟ್ವೀಟ್‌ಗಳ ಮೂಲಕ ಸಂತೋಷಪಡುತ್ತಿದೆ. ನ್ಯಾಯಾಲಯದ ತೀರ್ಪಿನ ಲಾಭವನ್ನು ಪಡೆಯುತ್ತಿದೆ. ಅಂತಹ ತೀರ್ಪುಗಳನ್ನು ರಾಜಕೀಯಗೊಳಿಸಿ ನೋಡಬಾರದು. ಇಂಥವುಗಳಿಂದ ರಾಜಕೀಯವಾಗಿ ಮೈಲೇಜ್ ಪಡೆಯುವ ಯಾವುದೇ ಅವಕಾಶವನ್ನು ತಪ್ಪಿಸಬೇಕು ”ಎಂದು ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿಯ ವಕ್ತಾರ ಮನೀಶ್ ದೋಷಿ ಆಗ್ರಹಿಸಿದ್ದಾರೆ.
ಇದನ್ನೂ ಓದಿರಿ: ಯುಪಿ: ಚುನಾವಣಾ ಅಧಿಕಾರಿಯ ಕೆನ್ನೆಗೆ ಹೊಡೆದ ಬಿಜೆಪಿ ಶಾಸಕನ ವಿರುದ್ಧ ಎಫ್‌ಐಆರ್
ಗುಜರಾತ್ ಬಿಜೆಪಿಯ ಮಾಧ್ಯಮ ಸೆಲ್ ಸಂಚಾಲಕ ಯಜ್ಞೇಶ್ ದವೆ ಪ್ರತಿಕ್ರಿಯಿಸಿ, “ಪತ್ರಿಕೆಗಳು ಮತ್ತು ಸುದ್ದಿ ವಾಹಿನಿಗಳಲ್ಲಿನ ವರದಿಗಳ ಆಧಾರದ ಮೇಲೆ ವ್ಯಂಗ್ಯಚಿತ್ರವನ್ನು ಬಿಜೆಪಿ ರಚಿಸಿದೆ. ಯಾವುದೇ ಸಮುದಾಯವನ್ನು ಗುರಿಯಾಗಿಸುವ ಉದ್ದೇಶವಿಲ್ಲ” ಎಂದು ತಿಳಿಸಿದ್ದಾರೆ.
ಎಲ್ಲಾ ಪತ್ರಿಕೆಗಳು ಮತ್ತು ಟಿವಿ ಚಾನೆಲ್‌ಗಳು ಅಪರಾಧಿಗಳ ಮೂಲ ಫೋಟೋಗಳನ್ನು ಪ್ರಕಟಿಸಿವೆ, ಪ್ರಸಾರ ಮಾಡಿವೆ. ಆ ವರದಿಗಳ ಆಧಾರದ ಮೇಲೆ ವ್ಯಂಗ್ಯಚಿತ್ರವನ್ನು ಸಿದ್ಧಪಡಿಸಲಾಗಿದೆ ಎಂದಿರುವ ದವೆ ಟ್ವೀಟ್ ಅನ್ನು ಸಮರ್ಥಿಸಿಕೊಂಡಿದ್ದಾರೆ.
ಎಲ್ಲಾ ಅಪರಾಧಿಗಳು ಟೋಪಿಯನ್ನು ಧರಿಸಿರುವ ಚಿತ್ರಗಳನ್ನು ಮಾಧ್ಯಮ ವರದಿಗಳು ಹೊಂದಿಲ್ಲ ಎಂದು ಸೂಚಿಸಿದಾಗ, ಡೇವ್ ಅದನ್ನು ವಿವರಿಸಲು ನಿರಾಕರಿಸಿದರು. ಅಭೂತಪೂರ್ವ ತೀರ್ಪನ್ನು ಸ್ವಾಗತಿಸುವುದು ಟ್ವೀಟ್‌ನ ಉದ್ದೇಶವಾಗಿದೆ ಎಂದು ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಕರ್ನಾಟಕ ಬಿಜೆಪಿಯ ಟ್ವೀಟ್ ಕೂಡ ಇತ್ತೀಚೆಗೆ ರದ್ದಾಗಿತ್ತು
ಹಿಜಾಬ್‌ಗಾಗಿ ಹೋರಾಡುತ್ತಿರುವ ಉಡುಪಿ ಹೆಣ್ಣುಮಕ್ಕಳ ವೈಯಕ್ತಿಕ ವಿವರಗಳನ್ನು ಹಂಚಿಕೊಂಡಿರುವ ಕರ್ನಾಟಕ ಬಿಜೆಪಿ ಟ್ವಿಟರ್ ಖಾತೆಯ ಟ್ವೀಟ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಅವರ ಟ್ವೀಟ್‌ಅನ್ನು ಟ್ವಿಟರ್ ಸಂಸ್ಥೆ ಇತ್ತೀಚೆಗೆ ರದ್ದು ಮಾಡಿತ್ತು.
ಟ್ವಿಟರ್ ನಿಯಮಗಳನ್ನು ಉಲ್ಲಂಘಿಸಿರುವುದನ್ನು ಗುರುತಿಸಿದ್ದ ಟ್ವಿಟರ್ ಸಂಸ್ಥೆಯು, ಟ್ವೀಟ್‌ಗಳನ್ನು ತೆಗೆದುಹಾಕಿತ್ತು.
ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ನೆಪದಲ್ಲಿ, ವಿದ್ಯಾರ್ಥಿನಿಯರ ವಿಳಾಸ, ವಯಸ್ಸು, ತಂದೆತಾಯಿಯ ಹೆಸರು ಇತ್ಯಾದಿ ವಿವರಗಳನ್ನು ಪೋಸ್ಟ್ ಮಾಡಲಾಗಿತ್ತು.
“ಅಪ್ರಾಪ್ತ ಹೆಣ್ಣುಮಕ್ಕಳ ವಿವರಗಳನ್ನು ಹಂಚಿಕೊಳ್ಳುವುದು ಟ್ವಿಟರ್ ಪಾಲಿಸಿಗೆ ವಿರುದ್ಧವೇ?” ಎಂದು ಆಲ್ಟ್ ನ್ಯೂಸ್‌ನ ಸಹಸಂಸ್ಥಾಪಕರಾದ, ಖ್ಯಾತ ಪತ್ರಕರ್ತ ಮೊಹಮ್ಮದ್ ಜುಬೈರ್ ಪ್ರಶ್ನಿಸಿದ್ದರು. ಈ ಸಂಬಂಧ ‘ನಾನುಗೌರಿ.ಕಾಂ’ ಕೂಡ ವರದಿ ಮಾಡಿತ್ತು. (ಬಿಜೆಪಿ ಟ್ವೀಟ್‌ನ ಆರ್ಕೈವ್ ಲಿಂಕ್ ಇಲ್ಲಿದೆ).
A Twitter account @BJP4Karnataka has shared personal details of minors girls from Karnataka including their house address. Isn't it against policy? @DgpKarnataka @BlrCityPolice @CPBlr
Isn't sharing house adress of minors against @Policy @TwitterIndia policy? #KatnatakaHijabRow pic.twitter.com/uiuuNeHuCT
— Mohammed Zubair (@zoo_bear) February 15, 2022
ಇದನ್ನೂ ಓದಿರಿ: ಅಪ್ರಾಪ್ತ ಹೆಣ್ಣುಮಕ್ಕಳ ವೈಯಕ್ತಿಕ ವಿವರ ಪೋಸ್ಟ್ ಮಾಡಿದ್ದ ಬಿಜೆಪಿ: ಟ್ವೀಟ್ ರದ್ದು ಮಾಡಿದ ಟ್ವಿಟರ್


