Homeಮುಖಪುಟಶಿವಮೊಗ್ಗ: ಬಜರಂಗದಳ ಕಾರ್ಯಕರ್ತನ ಕೊಲೆ; ಶಾಲಾ ಕಾಲೇಜುಗಳಿಗೆ ರಜೆ

ಶಿವಮೊಗ್ಗ: ಬಜರಂಗದಳ ಕಾರ್ಯಕರ್ತನ ಕೊಲೆ; ಶಾಲಾ ಕಾಲೇಜುಗಳಿಗೆ ರಜೆ

- Advertisement -
- Advertisement -

ಯುವಕನೊಬ್ಬನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಶಿವಮೊಗ್ಗ ನಗರದ ಕಾಮತ್ ಪೆಟ್ರೋಲ್‌ ಬಂಕ್‌ ಸಮೀಪದ ಭಾರತಿ ಕಾಲೋನಿಯಲ್ಲಿ ನಡೆದಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೊಲೆಯಾದ ಯುವಕನನ್ನು ಬಜರಂಗ ದಳದ ಕಾರ್ಯಕರ್ತ ಹರ್ಷ ಎಂದು ಗುರುತಿಸಲಾಗಿದ್ದು, ಜಿಲ್ಲೆಯಾದ್ಯಂತ ಶಾಂತಿ ಸುವ್ಯವಸ್ಥೆಗೆ ಕ್ರಮ ಜಾರಿಗೊಳಿಸಲಾಗಿದೆ. ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಕ್ರಮ ಜರುಗಿಸಿದ್ದು, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಭಾನುವಾರ ರಾತ್ರಿ ಹತ್ತು ಗಂಟೆ ಸುಮಾರಿಗೆ ಕೊಲೆಯಾಗಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಕೊಲೆಯ ಬಳಿಕ ಎರಡು ಗುಂಪುಗಳ ನಡುವೆ ಘರ್ಷಣೆಯಾಗಿದ್ದು, ಪೊಲೀಸರು ಲಾಠಿಚಾರ್ಜ್ ಮಾಡಿ, ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

ಘಟನೆ ಹಿನ್ನೆಲೆಯಲ್ಲಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಸಂಘಪರಿವಾರದ ಕಾರ್ಯಕರ್ತರು ಜಮಾಯಿಸಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ ಎಂದು ವರದಿಯಾಗಿದೆ.

ಹರ್ಷ ಕೆಲವು ತಿಂಗಳ ಹಿಂದೆ ಮತ್ತೊಂದು ಧರ್ಮವನ್ನು ಅವಹೇಳನ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರವನ್ನು ಪೋಸ್ಟ್‌ ಮಾಡಿದ್ದರು. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜೊತೆಗೆ ಗಡಿಪಾರಾಗಿದ್ದ ಎಂದೂ ತಿಳಿದುಬಂದಿದೆ.

ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಕೆ.ಎಸ್‌.ಈಶ್ವರಪ್ಪ ಅವರು, “ಮುಸ್ಲಿಂ ಗುಂಪಿನಿಂದ ಹರ್ಷ ಅವರ ಕೊಲೆಯಾಗಿದೆ” ಎಂದು ಆರೋಪಿಸಿದ್ದಾರೆ.

ಗೃಹ ಸಚಿವ ಆರಗ ಜ್ಞಾನೇಂದ್ರ ಮಾಧ್ಯಮಗಳೊಂದಿಗೆ ಮಾತನಾಡಿದ್ದು, “ಯುವಕನ ಕುಟುಂಬಕ್ಕೆ ಸಾಂತ್ವನ ಹೇಳಿದ್ದೇವೆ. ಹರ್ಷ ಸಾವಿಗೆ ನ್ಯಾಯ ದೊರಕಿಸಿಕೊಡಬೇಕಾಗಿ ಕುಟುಂಬ ಮನವಿ ಮಾಡಿದೆ. ಸರ್ಕಾರ ನಿಮ್ಮ ಪರವಾಗಿದೆ ಎಂದು ಅವರಿಗೆ ತಿಳಿಸಿದ್ದೇವೆ. ಜನರು ಶಾಂತಿ ಕಾಪಾಡಿಕೊಳ್ಳಬೇಕು” ಎಂದು ಮನವಿ ಮಾಡಿದ್ದಾರೆ.

“ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇನೆ. ಈಗಾಗಲೇ ಸಾಕ್ಷಿ ಕೂಡ ಸಿಕ್ಕಿದೆ. ಪ್ರಕರಣ ತನಿಖೆಯಾಗುತ್ತಿರುವುದರಿಂದ ಆರೋಪಿಗಳ ಹೆಸರನ್ನು ಹೇಳಬಾರದು. ಸಮಾಧಾನಕರ ಸಂಗತಿ ಏನೆಂದರೆ ಯಾರು ಕೊಲೆ ಮಾಡಿದ್ದಾರೆಂದು ಗೊತ್ತಾಗಿದೆ. ಅವರನ್ನು ಹಿಡಿಯುತ್ತಾರೆ. ಬಹುಬೇಗ ಆರೋಪಿಗಳನ್ನು ಬಂಧಿಸಲಾಗುತ್ತದೆ. ನಾಲ್ಕರಿಂದ ಐದು ಜನರು ಕೊಲೆಯಲ್ಲಿ ಭಾಗಿಯಾಗಿರಬಹುದು ಎಂಬ ಮಾಹಿತಿ ಇದೆ. ಇನ್ನಷ್ಟು ಖಚಿತ ಆಗಬೇಕಾಗಿದೆ” ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

“ಶಿವಮೊಗ್ಗದಲ್ಲಿ ಈ ರೀತಿಯ ಘಟನೆ ನಡೆದಿರುವುದು ದುರದೃಷ್ಟಕರ ಸಂಗತಿ. ಈ ರೀತಿಯ ವಿಕೃತಿಯನ್ನು ಯಾರೂ ಏನೇ ಮಾಡಿದರೂ ಬಜಾವ್ ಮಾಡಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಕೊಡುತ್ತೇವೆ” ಎಂದಿದ್ದಾರೆ.

“ಯಾವ ಕಾರಣಕ್ಕೆ ಕೊಲೆಯಾಗಿದೆ ಎಂಬುದು ತನಿಖೆಯಾಗಲಿದೆ. ಕೊಲೆಯಾದ ಕಾರ್ಯಕರ್ತನ ಮೇಲೂ ಒಂದೆರಡು ಪ್ರಕರಣ ಇದೆ ಎಂಬ ಮಾಹಿತಿಯನ್ನು ಕೊಡುತ್ತಿದ್ದಾರೆ. ಆಮೇಲೆ ನಾನು ಸ್ಪಷ್ಟವಾಗಿ ಹೇಳುತ್ತೇನೆ” ಎಂದು ತಿಳಿಸಿದ್ದಾರೆ.

ವೈಯಕ್ತಿಕ ಕಾರಣಗಳಿಗಾಗಿ ಕೊಲೆಯಾಗಿದೆಯೇ ಎಂಬ ಆಯಾಮದಲ್ಲಿಯೂ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ‘ಮಲೆನಾಡು ವಿರರ್‌’ ವರದಿ ಮಾಡಿದೆ.


ಇದನ್ನೂ ಓದಿರಿ: ಗುಜರಾತ್‌ ಬಿಜೆಪಿಯ ವಿವಾದಾತ್ಮಕ ಪೋಸ್ಟ್‌‌ ರದ್ದು ಮಾಡಿದ ಟ್ವಿಟರ್‌ ಸಂಸ್ಥೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕರ್ನಾಟಕದಲ್ಲಿ ಮುಸ್ಲಿಮರು ರಸ್ತೆ ಮಧ್ಯೆ ಗೋಹತ್ಯೆ ಮಾಡಿದ್ದಾರೆ ಎಂಬುವುದು ಸುಳ್ಳು

0
"ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯದವರು ರಸ್ತೆ ಮಧ್ಯೆಯೇ ಬಹಿರಂಗವಾಗಿ ಗೋಹತ್ಯೆ ಮಾಡಿದ್ದಾರೆ" ಎಂದು ಎಕ್ಸ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಜೀಪ್‌ ಒಂದರ ಮುಂಭಾಗದಲ್ಲಿ ಹಸುವಿನ ಕಳೇಬರ ಕಟ್ಟಿದಂತೆ ಕಾಣುತ್ತಿದೆ. ಫ್ಯಾಕ್ಟ್‌ಚೆಕ್ : ವಿಡಿಯೋದ ಸತ್ಯಾಸತ್ಯತೆಯನ್ನು ನಾವು...