Homeಮುಖಪುಟಹಂಪಿ ವಿವಿಯ ಫೇಕ್ ಡಿಗ್ರಿ ರಾದ್ಧಾಂತ: ಜರ್ನಲಿಸ್ಟ್ ಹಕೀಂ ಸಾಹೇಬ್ರೆ ಏನಿದೆಲ್ಲ!?

ಹಂಪಿ ವಿವಿಯ ಫೇಕ್ ಡಿಗ್ರಿ ರಾದ್ಧಾಂತ: ಜರ್ನಲಿಸ್ಟ್ ಹಕೀಂ ಸಾಹೇಬ್ರೆ ಏನಿದೆಲ್ಲ!?

- Advertisement -
- Advertisement -

ಜೂನ್ 30ರಂದು ಅಬ್ದುಲ್ ಹಕೀಂ ಎಂಬ ಪತ್ರಕರ್ತರೊಬ್ಬರ ವಿರುದ್ಧ ಹೊಸಪೇಟೆ ತಾಲೂಕಿನ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಹಂಪಿ ಕನ್ನಡ ವಿವಿಯ ಕುಲಪತಿ ನೀಡಿದ ದೂರಿನ ಮೇರೆಗೆ ಐಪಿಸಿಯ ಕಾಯ್ದೆಯ 9 ಕಲಂಗಳಡಿ ಪ್ರಕರಣ ದಾಖಲಾಗಿದೆ. ಇಲ್ಲಿ ಹಕೀಂ ಅವರ ಮೇಲೆ ಇರುವ ಆಪಾದನೆ ಎಂದರೆ ಉತ್ತರಪ್ರದೇಶದ ಝಾನ್ಸಿ ಬುಂದೇಲಖಂಡ ವಿವಿಯ ಖೊಟ್ಟಿ ಪದವಿ ದಾಖಲೆ ಪತ್ರಗಳನ್ನು ಹಂಪಿ ವಿವಿಗೆ ಸಲ್ಲಿಸಿ ‘ಅಭಿವೃದ್ಧಿ ಅಧ್ಯಯನ’ದಲ್ಲಿ ಪಿಎಚ್‍ಡಿ ಪಡೆದುಕೊಂಡಿದ್ದಾರೆ ಅನ್ನೋದು. ಈ ಆರೋಪದ ಮೇಲೆ ವಿವಿ ಅವರ ಪದವಿ ಮತ್ತು ಡಾಕ್ಟರೇಟ್‍ಗಳನ್ನು ರದ್ದು ಮಾಡಿದೆ.

ಹಕೀಂ ವಾದವೇನು?

ತನ್ನ ವಿರುದ್ಧದ ಆರೋಪಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ಅಬ್ದುಲ್ ಹಕೀಂ ವಿವಿಯ ಅಧಿಕಾರಿಗಳ ವಿರುದ್ಧ ಕಾನೂನು ಸಮರಕ್ಕೆ ಸಿದ್ದ ಎಂದು ಸಾರಿದ್ದಾರೆ. ತಾವು ಕುವೆಂಪು ವಿವಿಯಿಂದ ಎಂಎ ಪದವಿ ಪಡೆದಿರುವೆ ಎಂದು ‘ದಾಖಲೆಗಳನ್ನು’ ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದ್ದಾರೆ. ಆದರೆ ಈಗ ಎದ್ದಿರುವ ಪ್ರಶ್ನೆ ಎಂದರೆ, ಇಲ್ಲಿ ಅವರು ಕುವೆಂಪು ವಿವಿಯನ್ನೂ ಯಾಮಾರಿಸಿ ಎಂ.ಎ ಪದವಿ ಪಡೆದಿದ್ದಾರಾ ಎಂಬುದು. ಏಕೆಂದರೆ ಹಂಪಿ ವಿವಿ ದೂರು ಕೊಟ್ಟಿರೋದು ಅವರ ಎಂಎ ಪ್ರಮಾಣಪತ್ರದ ಬಗ್ಗೆಯಲ್ಲ, ಪದವಿ ಪ್ರಮಾಣಪತ್ರದ ಬಗ್ಗೆ. ಅದು ಯಾವ ಯುನಿವರ್ಸಿಟಿಯ ಯಾವ ಕಾಲೇಜಿನ ಪದವಿ ಪ್ರಮಾಣ ಪತ್ರ ಎಂಬುದರ ಬಗ್ಗೆ ಈ ಪ್ರಕರಣದಲ್ಲಿ ಸ್ಪಷ್ಟವೇ ಆಗಿಲ್ಲ. ಅದನ್ನು ಹಕೀಂ ಸಾಹೇಬರೂ ಸ್ಪಷ್ಟಗೊಳಿಸಿಲ್ಲ.

ಜನಸಾಮಾನ್ಯರ ಪ್ರಶ್ನೆಗಳಿಷ್ಟೇ

ಹಕೀಂ ಪ್ರಕಾರ, ಅವರು ಬೆಂಗಳೂರು ವಿವಿಯ ಕಾನೂನು ಪದವಿ ಮತ್ತು ಕುವೆಂಪು ವಿವಿಯ ರಾಜ್ಯಶಾಸ್ತ್ರ ಎಂಎ ಪದವಿ ಆಧಾರದ ಮೇಲೆ ಹಂಪಿ ವಿವಿಗೆ ಪಿಎಚ್ಡಿ ಅಧ್ಯಯನಕ್ಕೆ ಅರ್ಜಿ ಸಲ್ಲಿಸಿದ್ದರಂತೆ. ಆದರೆ ಅವರನ್ನು ಕಂಡರಾಗದ ಹಂಪಿ ವಿವಿಯ ಸೋಮನಾಥ್ ಎಂಬ ಅಧಿಕಾರಿ, ಹಕೀಂ ಅವರ ‘ಒರಿಜಿನಲ್’ ಪ್ರಮಾಣ ಪತ್ರಗಳನ್ನು ತೆಗೆದು ಹಾಕಿ, ಅಲ್ಲಿ ಬುಂದೇಲಖಂಡ ವಿವಿಯ ಫೇಕ್ ಡಿಗ್ರಿ ಸರ್ಟಿಫಿಕೇಟುಗಳನ್ನು ತುರುಕಿದ್ದಾರಂತೆ. ಓಕೆ, ಅವರು ಕೊಟ್ಟ ಡಿಗ್ರಿ ಸರ್ಟಿಫಿಕೇಟುಗಳನ್ನು ಬದಲಿಸಿ, ಫೇಕ್ ಡಿಗ್ರಿಗಳನ್ನು ಲಗತ್ತಿಸಿರುವ ಸಾಧ್ಯತೆಯನ್ನೂ ಒಪ್ಪಿಕೊಳ್ಳೋಣ. ಆದ್ರೆ, ಹಕೀಂ ಸ್ವತಃ ತಮ್ಮ ಕೈರಬಹದಲ್ಲಿ ಬರೆದ ಪಿ.ಎಚ್‍ಡಿ ಅರ್ಜಿಯಲ್ಲಿ ಪದವಿಯನ್ನು ಬಂದೇಲ್‍ಖಂಡ್ ವಿವಿಯಿಂದಲೇ ಪಡೆದಿರುವುದಾಗಿ ಬರೆದುಕೊಟ್ಟಿದ್ದಾರೆ! ಇದರ ಬಗ್ಗೆ ಅವರ ಯಾವ ಸ್ಪಷ್ಟಣೆಯನ್ನೂ ಕೊಟ್ಟಿಲ್ಲ.
ಹಕೀಂರನ್ನು ಅನುಮಾನದಿಂದ ನೋಡುವಂತೆ ಮಾಡುತ್ತಿರೋ ಸಂಗತಿ ಅಂದ್ರೆ, ಆ ಪಿ.ಎಚ್ಡಿ ಪಡೆಯುವಾಗ ಅವರು ಅದೇ ವಿವಿಯ ಸಿಂಡಿಕೇಟ್ ಸದಸ್ಯರಾಗಿದ್ದರು. ಸಹಜವಾಗಿಯೇ ಅಧಿಕಾರ ದುರ್ಬಳಕೆ ಮಾಡಿಕೊಂಡು ಇಂಥಾ ಯಡವಟ್ಟು ಮಾಡಿಕೊಂಡರಾ ಅನ್ನಿಸದಿರದು.

ಇನ್ನೊಂದು ವಿಚಿತ್ರ ಎಂದರೆ ಹಂಪಿ ವಿವಿ ನೀಡಿದ ದೂರಿನ ಆಧಾರದಲ್ಲಿ ತನಿಖೆ ನಡೆದಾಗ, ಬುಂದೇಲಖಂಡ ವಿವಿಯ ಅಧಿಕಾರಿಗಳು ಈ ಹೆಸರಿನ ಕರ್ನಾಟಕದ ಯಾವ ವ್ಯಕ್ತಿಯೂ ನಮ್ಮ ವಿಶ್ವವಿದ್ಯಾಲಯದಿಂದ ಪದವಿ ಪಡೆದಿಲ್ಲ ಎಂದು ಅಧಿಕೃತ ದಾಖಲೆ ನೀಡಿದ್ದಾರೆ. ನಿಜ, ಅಲ್ಲಿ ಹಕೀಂ ಓದಿಯೇ ಇಲ್ಲ. ಕುಚೋದ್ಯವೆಂದರೆ ಹಕೀಂ ಕೂಡಾ ಅದನ್ನೇ ಹೇಳುತ್ತಿದ್ದಾರೆ…

ಹಂಪಿ ವಿವಿಯ ದೂರು ಏನು?

ಜೂನ್ 28ರಂದು ಹಂಪಿ ವಿವಿ ಕುಲಸಚಿವ ಕಮಲಾಪುರದ ಠಾಣೆಯಲ್ಲಿ ದೂರು ದಾಖಲಿಸಿ, ಹಂಪಿ ವಿವಿಯಲ್ಲಿ ಪಿಎಚ್‍ಡಿ ಪಡೆಯಲು ಅಬ್ದುಲ್ ಹಕೀಂ ಅವರು ಖೊಟ್ಟಿ ಪದವಿ ದಾಖಲೆಗಳನ್ನು ಸಲ್ಲಿಸುವ ಮೂಲಕ ವಂಚನೆ ಮಾಡಿದ್ದಾರೆ ಎಂದು ಆಪಾದಿಸುತ್ತಾರೆ.

ಹಕೀಂ ಅವರು ಉತ್ತರಪ್ರದೇಶದ ಝಾನ್ಸಿಯ ಬುಂದೇಲಖಂಡ್ ವಿವಿಯ ಪದವಿಯ ಖೊಟ್ಟಿ ದಾಖಲೆಗಳನ್ನು ಸಲ್ಲಿಸಿ 2012-13ರಲ್ಲಿ ಎಂಎ ಪತ್ರಿಕೋದ್ಯಮ (ದೂರಶಿಕ್ಷಣ) ಪದವಿಯನ್ನು ಮತ್ತು 2014-15ರಲ್ಲಿ ಅಭಿವೃದ್ಧಿ ಅಧ್ಯಯನದಲ್ಲಿ ಪಿಎಚ್‍ಡಿ ಪದವಿ ಪಡೆದಿರುವುದು ದೂರಿನಲ್ಲಿ ದಾಖಲಾಗಿದೆ. ಹಕೀಂ ಅವರ ಇತಿಹಾಸವನ್ನು ನೋಡಿದರೆ ಇದರಲ್ಲೇನೂ ಆಶ್ಚರ್ಯ ಎನಿಸದು. ಅವರು ಹಂಪಿ ವಿವಿಯ ಕೆಲವು ಅಧಿಕಾರಿಗಳನ್ನು ಬೆದರಿಸಿಯೂ ತಮ್ಮ ಕೆಲಸ ಮಾಡಿಕೊಂಡಿದ್ದಾರೆ ಎಂಬ ಆರೋಪಗಳು ಹಿಂದೆಯೂ ಕೇಳಿಬಂದಿದ್ದವು.
ನನಗೆ ನೌಕರಿ ಮಾಡಲು ಈ ಪದವಿ, ಪಿಎಚ್‍ಡಿ ಅಗತ್ಯವಿಲ್ಲ, ನನ್ನ ಗೌರವಕ್ಕೆ ಧಕ್ಕೆ ತರುವ ಈ ಕೆಲಸವನ್ನು ನಾನು ಸಹಿಸಲಾರೆ ಎಂದು ಅವರು ಅಬ್ಬರಿಸಿದ್ದಾರೆ. ಈ ಹಿಂದೆಯೇ ಅವರ ಈ ಪಿಎಚ್‍ಡಿ ವಿರುದ್ಧ ದಾಖಲೆ ಸಹಿತ ಪತ್ರಕರ್ತರೊಬ್ಬರು ವರದಿ ಮಾಡಿದ್ದರೂ ಆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಮಹಾಶಯರು ಅದನ್ನು ಪ್ರಕಟಿಸಲಿಲ್ಲ ಮಾತ್ರವಲ್ಲ. ಇಂಥದ್ದೇನಲ್ಲ ಬರೆಯಕೂಡದು ಎಂದು ವಾರ್ನಿಂಗ್ ಕೂಡ ಕೊಟ್ಟಿದ್ದರು ಎಂದು ಆ ಪತ್ರಕರ್ತರು ಫೇಸ್‍ಬುಕ್ ಖಾತೆಯಲ್ಲಿ ಬಹಿರಂಗವಾಗೇ ಬರೆದುಕೊಂಡಿದ್ದಾರೆ. ಹೀಗೆ ವಾರ್ನಿಂಗ್ ಕೊಟ್ಟ ಕಾರ್ಯ ನಿರ್ವಾಹಕ ಸಂಪಾದಕರಿಗೆ ಹಕೀಂ ಜೊತೆಗಿದ್ದ ಗಳಸ್ಯ ಕಂಠಸ್ಯ ಗೆಳೆತನವೇ ವರದಿಯನ್ನು ತಡೆಹಿಡಿಯುವಂತೆ ಮಾಡಿದ್ದಿರಲೂಬಹುದು.

ಹುಬ್ಬಳ್ಳಿಯ ‘ಪ್ರಪಂಚ’ 2 ‘ಹೊಡಿ ಒಂಭತ್’ ಟಿವಿವರೆಗೆ!

ಈಗ ‘ಹಕೀಕತ್ತಿನ’ ಕ್ಲೈಮಾಕ್ಸಿನಲ್ಲಿ ಕೆಲವು ರೋಚಕ ಆದರೆ ಪುಟ್ಟಾಪೂರಾ ಸತ್ಯಗಳನ್ನು ನಿಮ್ಮ ಮುಂದೆ ಇಡಲೇಬೇಕು. ಪಾಟೀಲ ಪುಟ್ಟಪ್ಪನವರ ‘ಪ್ರಪಂಚ’ ವಾರಪತ್ರಿಕೆಯಲ್ಲಿ ಹಕೀಂ ಒಂದರ್ಥದಲ್ಲಿ ಸೆಕೆಂಡ್ ಸಂಪಾದಕರೇ ಆಗಿದ್ದ ಕಾಲವೂ ಇತ್ತು. ಬೆಂಗಳೂರಲ್ಲಿ ಕೂತು ಅವರು ಹುಬ್ಬಳ್ಳಿಯ ‘ಪ್ರಪಂಚ’ಕ್ಕೆ ಪಿಚ್ಚರ್ ವರದಿ ಕೊಡ್ತಾ ಇದ್ದರು. ಮುಂದೆ ಪಾಪು ಅವರ ಟೈಟಲ್ ಪಡೆದು ಅದನ್ನು ಸಿನಿಮಾ ಪತ್ರಿಕೆ ಮಾಡಿದರು, ನಂತರ ಕ್ರೀಡಾ ಪತ್ರಿಕೆ ಮಾಡಿದರು, ಫೈನಲಿ ಅದನ್ನು ಸ್ಪರ್ಧಾ ಪತ್ರಿಕೆಯನ್ನೂ ಮಾಡಿಬಿಟ್ಟರು. ಅದನ್ನು ಎಷ್ಟು ಜನ ಓದಿದರೋ ಗೊತ್ತಿಲ್ಲ, ಆದರೆ ಹಕೀಂ ಮಾತ್ರ ‘ಭವ್ಯ’ ಪತ್ರಕರ್ತರಾದರು.

ಹಂಪಿ ವಿವಿಯ ಪಿಎಚ್‍ಡಿ ಪದವಿ ಪಡೆದು ಅವರು ‘ಹೊಡಿ ಒಂಭತ್’ ಚಾನೆಲ್ ಸೇರಿದರು. ಅಲ್ಲಿ ಅವರ ಪೋಸ್ಟ್ ಏನೆಂಬುದು ನಿಗೂಢವಾಗಿದೆಯಾದರು ಹೊಡಿ ಒಂಭತ್ ಗ್ಯಾಂಗಿಗೆ ಇಂತಹ ಸಕಲಕಲಾವಲ್ಲಭರ ಅಗತ್ಯವಂತೂ ಇದ್ದೇ ಇದೆ ಅಲ್ಲವೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...