ತೀವ್ರ ಕೂತುಹಲ ಕೆರಳಿಸಿದ್ದ ಗುಜರಾತ್ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದೆ. ಕಳೆದ ಚುನಾವಣೆಯಲ್ಲಿ ವಡ್ಗಾಮ್ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದ್ದ ಯುವ ದಲಿತ ಹೋರಾಟಗಾರ ಈ ಬಾರಿ ಜಿಗ್ನೇಶ್ ಮೇವಾನಿ ಕಾಂಗ್ರೆಸ್ ಪಕ್ಷದ ಟಿಕೆಟ್‌ನಡಿ ಸ್ಪರ್ಧಿಸಿದ್ದಾರೆ. ಆರಂಭಿಕ ಸುತ್ತಿನ ಮತ ಎಣಿಕೆಯಲ್ಲಿ 2,000 ಮತಗಳಷ್ಟು ಹಿನ್ನಡೆ ಅನುಭವಿಸಿದ್ದ ಅವರು ಸದ್ಯ 1,192 ಮತಗಳ ಅಂತರದಿಂದ ಹಿನ್ನಡೆ ಅನುಭವಿಸುತ್ತಿದ್ದಾರೆ.
9ನೇ ಸುತ್ತಿನ ಮತ ಎಣಿಕೆ ಮುಗಿದಾಗ ಜಿಗ್ನೇಶ್ ಮೇವಾನಿ 36,901 ಮತಗಳನ್ನು ಪಡೆದಿದ್ದರೆ ಬಿಜೆಪಿ ಅಭ್ಯರ್ಥಿ ಮನಿಬಾಯ್ ವಘೇಲ 38,093 ಮತಗಳನ್ನು ಪಡೆದು ಅಲ್ಪ ಮುನ್ನಡೆ ಸಾಧಿಸಿದ್ದಾರೆ.
ಪ.ಜಾ ಮೀಸಲು ಕ್ಷೇತ್ರವಾದ ವಡ್ಗಾಮ್‌ನಲ್ಲಿ ಜಿಗ್ನೇಶ್ ಮೇವಾನಿಯವರಿಗೆ ಬಿಜೆಪಿ ಅಭ್ಯರ್ಥಿ ಮನಿಬಾಯ್ ವಘೇಲ ತುರುಸಿನ ಸ್ಪರ್ಧೆ ನೀಡುತ್ತಿದ್ದಾರೆ. ವಘೇಲ 2012ರಲ್ಲಿ ಕಾಂಗ್ರೆಸ್ ಪಕ್ಷದಿಂದ ಈ ಕ್ಷೇತ್ರದಲ್ಲಿ ಆಯ್ಕೆಯಾಗಿದ್ದರು. ಆದರೆ 2017ರಲ್ಲಿ ಜಿಗ್ನೇಶ್ ಮೇವಾನಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆಗ ಕಾಂಗ್ರೆಸ್ ಪಕ್ಷವು ಅವರಿಗೆ ಬೆಂಬಲ ಸೂಚಿಸಿ ತಮ್ಮ ಪಕ್ಷದ ಅಭ್ಯರ್ಥಿ ಹಾಕದೆ ಜಿಗ್ನೇಸ್ ಗೆಲುವಿಗೆ ಸಹಕರಿಸಿತ್ತು.
ಆದರೆ ಕ್ಷೇತ್ರ ಬಿಟ್ಟುಕೊಟ್ಟಿದ್ದ ವಘೇಲ 2021ರಲ್ಲಿ ಬಿಜೆಪಿ ಪಕ್ಷ ಸೇರಿದ್ದರು. ಅವರು ಈ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನಡಿ ಸ್ಪರ್ಧಿಸಿದ್ದಾರೆ.
ವಕೀಲರಾಗಿ, ಸಾಮಾಜಿಕ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದ ಜಿಗ್ನೇಶ್ ಮೇವಾನಿ ದಲಿತರಿಗೆ ಭೂಮಿ ದೊರಕಿಸಿಕೊಡಲು ಹೋರಾಡುತ್ತಿದ್ದರು. ಆದರೆ ಊನಾದಲ್ಲಿ ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಅವರು ನಡೆಸಿದ ಬೃಹತ್ ಹೋರಾಟದ ಮೂಲಕ ಅವರು ದೇಶದ ಗಮನ ಸೆಳೆದಿದ್ದರು.
ಸದ್ಯಕ್ಕೆ ಗುಜರಾತ್‌ನ ಒಟ್ಟು 182 ಕ್ಷೇತ್ರಗಳ ಪೈಕಿ ಬಿಜೆಪಿಯು 154 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಸತತ 7ನೇ ಬಾರಿಗೆ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಲು ಮುಂದಾಗಿದೆ.
ಇದನ್ನೂ ಓದಿ: ಹಿಮಾಚಲಪ್ರದೇಶ: ಸರ್ಕಾರ ರಚಿಸುವತ್ತ ಕಾಂಗ್ರೆಸ್ ದಾಪುಗಾಲು


