ಗುಜರಾತ್‌ನ ಅಮ್ರೇಲಿ ಜಿಲ್ಲೆಯಲ್ಲಿ ಸವರ್ಣೀಯ ಜಾತಿಯ ಅಂಗಡಿಯ ಪುತ್ರನಿಗೆ ದಲಿತ ವ್ಯಕ್ತಿಯೋರ್ವ ‘ಬೇಟಾ’ ಎಂದು ಕರೆದಿದ್ದಕ್ಕೆ ಹಲ್ಲೆ ಮಾಡಿ ಆರು ದಿನಗಳ ನಂತರ ಹತ್ಯೆ ಮಾಡಲಾಗಿದೆ.
ಅಮ್ರೇಲಿ ಜಿಲ್ಲೆಯ ಲಾಥಿ ತೆಹ್ಸಿಲ್‌ನ ಜರಾಖಿಯಾ ಗ್ರಾಮದ 20 ವರ್ಷದ ದಲಿತ ಯುವಕ ನೀಲೇಶ್ ರಾಥೋಡ್ ಗುರುವಾರ ಭಾವನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಮೇ 16ರಂದು ರಾಥೋಡ್ ಪ್ಯಾಕ್ ಮಾಡಿದ ತಿಂಡಿಗಳನ್ನು ಖರೀದಿಸಲು ಹತ್ತಿರದ ಅಂಗಡಿಗೆ ಹೋದಾಗ ಈ ಘಟನೆ ಸಂಭವಿಸಿದೆ ಎಂದು ಘಟನೆಯಲ್ಲಿ ಹಲ್ಲೆಗೊಳಗಾದ 28 ವರ್ಷದ ಲಾಲ್ಜಿ ಮನ್ಸುಖ್ ಚೌಹಾಣ್ ಸಲ್ಲಿಸಿದ ದೂರಿನಲ್ಲಿ ಹೇಳಲಾಗಿದೆ.
ಚೌಹಾಣ್ ಅವರು ರಾಥೋಡ್ ಅವರ ಮೇಲೆ ಹಲ್ಲೆ ನಡೆದ ನಂತರ ಪರಿಸ್ಥಿತಿಯನ್ನು ಪರಿಶೀಲಿಸಲು ಅಂಗಡಿಗೆ ಹೋದರು. ಅಲ್ಲಿ ಅಂಗಡಿಯವ ತನ್ನ ಮೇಲೆ ಕೋಲಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಚೌಹಾಣ್ ಮತ್ತು ರಾಥೋಡ್ ಇಬ್ಬರ ಮೇಲೂ ಹಲ್ಲೆ ನಡೆಸಿದ ವಿಜಯ್ ಆನಂದ್ ತೋಟಾ ಅವರ ಹೆಸರನ್ನೂ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಭಜಿಯಾ ಅಂಗಡಿಯ ಮಾಲೀಕ ಜಗ ದುಧಾತ್ ಮಧ್ಯಪ್ರವೇಶಿಸಿ ಅವರನ್ನು ರಕ್ಷಿಸಿದ್ದಾರೆ ಎಂದು ದೂರಿನಲ್ಲಿ ಸೇರಿಸಲಾಗಿದೆ.
ರಾಥೋಡ್‌ನ ಚಿಕ್ಕಪ್ಪ ಸುರೇಶ್ ವಾಲಾ ಅಂಗಡಿಗೆ ಹೋಗಿ ಈ ಕುರಿತು ಪ್ರಶ್ನಿಸಿದರು. ಆ ಹೊತ್ತಿಗೆ, ಅಂಗಡಿಯವನು ವಾಲಾ ಮತ್ತು ಇತರರ ಮೇಲೆ ಕೋಲುಗಳು ಮತ್ತು ಕುಡುಗೋಲುಗಳಿಂದ ಹಲ್ಲೆ ನಡೆಸಿ, ಜಾತಿ ನಿಂದನೆಗಳನ್ನು ಎಸೆದಿದ್ದ ಎಂದು ದೂರಿನಲ್ಲಿ ಹೇಳಲಾಗಿದೆ.
ರಾಥೋಡ್, ವಾಲಾ, ದುಧಾತ್ ಮತ್ತು ಇತರರು ಪರಾರಿಯಾಗಲು ಪ್ರಯತ್ನಿಸಿದರು ಎಂದು ದೂರುದಾರರು ಹೇಳಿದ್ದಾರೆ, ಆದರೆ ದಾಳಿಕೋರರು ಅವರನ್ನು ಬೆನ್ನಟ್ಟಿ ಹೊಡೆಯುತ್ತಲೇ ಇದ್ದರು, ಅವರ ಜಾತಿ ಸ್ಥಿತಿಯನ್ನು ಅಪಹಾಸ್ಯ ಮಾಡುತ್ತಾ ಮತ್ತು “ಅತಿಕ್ರಮಣ” ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಒಬ್ಬ ವೃದ್ಧ ವ್ಯಕ್ತಿ ಸ್ಥಳಕ್ಕೆ ಬಂದು ದಾಳಿಕೋರರನ್ನು ನಿಲ್ಲಿಸುವಂತೆ ಒತ್ತಾಯಿಸಿದ ನಂತರವೇ ಹಲ್ಲೆ ನಿಂತಿದೆ ಎಂದು ವರದಿಯಾಗಿದೆ. ಆರಂಭದಲ್ಲಿ, ಎಫ್‌ಐಆರ್‌ನಲ್ಲಿ ಚೋತಾ ಖೋಡಾ ಭರ್ವಾಡ್, ವಿಜಯ್ ಆನಂದ್ ತೋಟಾ, ಭವೇಶ್ ಮುಂಧ್ವಾ ಮತ್ತು ಜತಿನ್ ಮುಂಧ್ವಾ ಎಂಬ ನಾಲ್ವರು ಆರೋಪಿಗಳನ್ನು ಹೆಸರಿಸಲಾಗಿದೆ.
ಅವರ ಮೇಲೆ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 118(1) (ತೀವ್ರ ಗಾಯ), 115(2) (ಸ್ವಯಂಪ್ರೇರಣೆಯಿಂದ ಗಾಯ ಉಂಟುಮಾಡುವುದು), 189(2) ಮತ್ತು 189(4) (ಮಾರಕ ಆಯುಧಗಳನ್ನು ಹೊಂದುವುದು ಸೇರಿದಂತೆ ಕಾನೂನುಬಾಹಿರ ಸಭೆ), 190 (ಕಾನೂನುಬಾಹಿರ ಸಭೆಯ ಎಲ್ಲಾ ಸದಸ್ಯರ ಹೊಣೆಗಾರಿಕೆ), 191(2) ಮತ್ತು 191(3) (ಶಸ್ತ್ರಸಜ್ಜಿತವಾಗಿದ್ದಾಗ ಗಲಭೆ), 131 (ದಾಳಿ ಅಥವಾ ಕ್ರಿಮಿನಲ್ ಬಲಪ್ರಯೋಗ), 352 (ಶಾಂತಿ ಭಂಗವನ್ನು ಪ್ರಚೋದಿಸಲು ಉದ್ದೇಶಪೂರ್ವಕವಾಗಿ ಅವಮಾನ), 3(5) (ಕ್ರಿಮಿನಲ್ ಕೃತ್ಯದ ಜಂಟಿ ಹೊಣೆಗಾರಿಕೆ), 109 (ಕೊಲೆಗೆ ಪ್ರಯತ್ನ), ಮತ್ತು ನಂತರ, ಸೆಕ್ಷನ್ 103 (ಕೊಲೆ) ಸೇರಿದಂತೆ ಹಲವಾರು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅವರ ಮೇಲೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ವಿವಿಧ ಸೆಕ್ಷನ್‌ಗಳು ಹಾಗೂ ಗುಜರಾತ್ ಪೊಲೀಸ್ ಕಾಯ್ದೆಯ ಸೆಕ್ಷನ್ 135 ರ ಅಡಿಯಲ್ಲಿಯೂ ಆರೋಪ ಹೊರಿಸಲಾಗಿದೆ.
ಈವರೆಗೆ, ಘಟನೆಯಲ್ಲಿ ಭಾಗಿಯಾಗಿರುವ ಹನ್ನೊಂದು ಜನರಲ್ಲಿ ಒಂಬತ್ತು ಜನರನ್ನು ಬಂಧಿಸಲಾಗಿದೆ.
ಬಂಧಿತರಲ್ಲಿ ಭರ್ವಾದ್, ತೋತಾ, ಭವೇಶ್ ಮುಂಧ್ವಾ, ಜತಿನ್ ಮುಂಧ್ವಾ, ಕಥದ್ ಅರ್ಜನ್ ಮುಂಧ್ವಾ, ದೇವ ಸಂಗ ಮುಂಧ್ವಾ, ದುದಾ ಬೋಘಾ ಮುಂಧ್ವಾ ಮತ್ತು ರವಿ ದುದಾ ಮುಂಧ್ವಾ ಸೇರಿದ್ದಾರೆ, ಉಳಿದ ಇಬ್ಬರಿಗಾಗಿ ಪೊಲೀಸ್ ತಂಡಗಳು ಹುಡುಕಾಟ ಮುಂದುವರಿಸಿವೆ.
ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ ಶುಕ್ರವಾರ ಮೃತ ನೀಲೇಶ್ ರಾಥೋಡ್ ಅವರ ಕುಟುಂಬ ಸದಸ್ಯರೊಂದಿಗೆ ಪ್ರತಿಭಟನೆಯಲ್ಲಿ ಕುಳಿತು ನ್ಯಾಯಕ್ಕಾಗಿ ಒತ್ತಾಯಿಸಿದರು.
ವಡ್ಗಾಮ್ ವಿಧಾನಸಭಾ ಕ್ಷೇತ್ರದ ಶಾಸಕರು ಈ ಘಟನೆಯನ್ನು ಖಂಡಿಸಿ, “ಇಂದಿಗೂ ಗುಜರಾತ್‌ನಲ್ಲಿ ಜಾತಿವಾದವು ಆಳವಾಗಿ ಬೇರೂರಿದೆ ಎಂದು ಇದು ತೋರಿಸುತ್ತದೆ. ದಲಿತರು ಭಯದಲ್ಲಿ ಬದುಕುತ್ತಿದ್ದಾರೆ ಮತ್ತು ತಮ್ಮ ಸ್ವಂತ ನೆಲದಲ್ಲಿ ಅಸುರಕ್ಷಿತರಾಗಿದ್ದಾರೆ” ಎಂದು ಹೇಳಿದರು.
गुजरात के अमरेली जिले के लाठी तहसील के जरखिया गांव का दलित युवान नीलेश अपने 3 साथियों के साथ एक दुकान पर नमकीन का पैकेट खरीदने गया था।
दुकान पर बैठे छोटे बच्चे का हाथ पैकेट तक पहुंच नहीं रहा था तो दलित युवकों ने कहा "बेटा, हम खुद पैकेट उतार ले क्या?"
यह सुनते ही दुकान मालिक… pic.twitter.com/d1NS1uE5fE
— Jignesh Mevani (@jigneshmevani80) May 23, 2025
ಅವರು ಉನ್ನತ ನಾಯಕರ ಮೌನವನ್ನು ಟೀಕಿಸುತ್ತಾ, “ಸ್ವತಃ ಗುಜರಾತ್ ಮೂಲದ ಪ್ರಧಾನಿ ಕೂಡ ಸಂತಾಪ ಸೂಚಿಸಿಲ್ಲ. ಏತನ್ಮಧ್ಯೆ, ರಾಜ್ಯದ ಸಾಮಾಜಿಕ ನ್ಯಾಯ ಸಚಿವರು ಮತ್ತು ಮುಖ್ಯಮಂತ್ರಿಗಳು ಒಮ್ಮೆಯೂ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿ ಅವರ ಕಣ್ಣೀರು ಒರೆಸಿಲ್ಲ ಅಥವಾ ಬೆಂಬಲ ನೀಡಿಲ್ಲ” ಎಂದು ಹೇಳಿದರು. ಸರ್ಕಾರದ ವರ್ತನೆಯೂ ಜಾತಿವಾದಿಯಾಗಿ ಕಾಣುತ್ತದೆ. ದಲಿತರನ್ನು ಬಡಿಯಲಾಗುತ್ತದೆ, ತಾರತಮ್ಯ ಮಾಡಲಾಗುತ್ತದೆ, ಸಾಮಾನ್ಯ ಬಾವಿಗಳಿಂದ ನೀರು ತರುವುದನ್ನು ನಿರಾಕರಿಸಲಾಗುತ್ತದೆ, ದೇವಾಲಯಗಳಿಗೆ ಪ್ರವೇಶಿಸುವುದನ್ನು ತಡೆಯಲಾಗುತ್ತದೆ, ಅತ್ಯಾಚಾರ ಮಾಡಲಾಗುತ್ತದೆ ಮತ್ತು ‘ಚರಂಡಿಗಳನ್ನು ಸ್ವಚ್ಛಗೊಳಿಸುವ ಕೆಲಸಕ್ಕೆ ನೇಮಿಸಿ ಸಾಯಿಸಲಾಗುತ್ತಿದೆ ಮತ್ತು ಈಗ, ಒಬ್ಬ ದಲಿತರನ್ನು ಕ್ರೂರವಾಗಿ ಥಳಿಸಲಾಗಿದೆ, ಅದು ಒಬ್ಬ ದಲಿತ ವ್ಯಕ್ತಿಯ ಸಾವಿಗೆ ಕಾರಣವಾಗಿದೆ. ಆದರೆ ಸರ್ಕಾರ ಮೌನವಾಗಿದೆ. ಇದು ಅತ್ಯಂತ ದುರದೃಷ್ಟಕರ ಎಂದು ಅವರು ಹೇಳಿದರು.
ಕಾಂಗ್ರೆಸ್ ಶಾಸಕ ಮೇವಾನಿಯವರು ಗಾಯಗೊಂಡವರು ಸೇರಿದಂತೆ ಸಂತ್ರಸ್ತ ಕುಟುಂಬಗಳಿಗೆ ಪರಿಹಾರವಾಗಿ ಸರ್ಕಾರಿ ಉದ್ಯೋಗ ಅಥವಾ ಭೂಮಿಯನ್ನು ನೀಡಲು ಒತ್ತಾಯಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತೆ ಅಮಿತಾ ಅಂಬೇಡ್ಕರ್ ಈ ಘಟನೆಗೆ ಪ್ರತಿಕ್ರಿಯಿಸುತ್ತಾ, “ಜಾತೀಯತೆಯು ಮತ್ತೊಂದು ದುಃಸ್ವಪ್ನ. ದಲಿತರಾದ ನಿಮ್ಮನ್ನು ಈ ಗೂಂಡಾಗಳು ಬಡಿಯುತ್ತಲೇ ಇರುತ್ತಾರೆ?” ಎಂದಿದ್ದಾರೆ.
ಮಾನಸ್ ಏಕ್ತಾ ಫೌಂಡೇಶನ್‌ನ ರಾಷ್ಟ್ರೀಯ ಉಪಾಧ್ಯಕ್ಷೆ ಗಿರಿಜಾ ಶಂಕರ್ ಪಾಲ್, “ಯಾರದರೂ ತನ್ನ ಮಗನ ವಯಸ್ಸಿನ ಹುಡುಗನನ್ನು ‘ಮಗ’ ಎಂದು ಕರೆದರೆ ಅದಕ್ಕೆ ಸಾವು ರೂಪದಲ್ಲಿ ಶಿಕ್ಷೆಯೇ?” ಎಂದು ಪ್ರಶ್ನಿಸಿದರು.
“ಇದು ಹೊಸ ಭಾರತವೇ? ಜಾತಿಯ ಗೋಡೆಗಳು ತುಂಬಾ ಎತ್ತರವಾಗಿದ್ದು, ಒಂದೇ ಒಂದು ಮಾತು ಒಬ್ಬರ ಜೀವವನ್ನು ಕಳೆದುಕೊಳ್ಳುವುದಕ್ಕೆ ಕಾರಣವಾಗುತ್ತದೆಯೇ?” ಎಂದು ಹೇಳಿದರು.
ಅಧಿಕಾರಿಗಳ ಮೌನವನ್ನು ಟೀಕಿಸಿದ ಪಾಲ್, “ಗುಜರಾತ್ ಸರ್ಕಾರ ಮೌನವಾಗಿದೆ. ಕಾನೂನು ಪಾಲಕರು ಮೌನವಾಗಿದ್ದಾರೆ. ಇದೇ ಭೂಮಿಯಿಂದ ಬಂದಿರುವ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ – ಅವರು ಏಕೆ ಉತ್ತರಿಸುತ್ತಿಲ್ಲ?” ಎಂದು ಎಚ್ಚರಿಸಿದರು.
“ಈಗ ಎದ್ದು ನಿಲ್ಲುವ, ಮಾತನಾಡುವ ಮತ್ತು ಅನ್ಯಾಯದ ವಿರುದ್ಧ ಎದ್ದು ಪ್ರತಿಭಟಿಸುವ ಪ್ರತಿಯೊಂದು ಧ್ವನಿಯೊಂದಿಗೆ ನಾವು ನಿಲ್ಲುವ ಸಮಯ” ಎಂದು ಅವರು ಹೇಳಿದರು.
ಹೊಲದಲ್ಲಿ ದನ ಮೇಯಿಸುವುದನ್ನು ಆಕ್ಷೇಪಿಸಿದ ದಲಿತ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ


