ಗರ್ಬಾ ಕಾರ್ಯಕ್ರಮವೊಂದರಲ್ಲಿ ದಲಿತ ಯುವತಿಯನ್ನು ಆಕೆಯ ಜಾತಿ ಕಾರಣಕ್ಕೆ ಅವಮಾನಿಸಿ ಹಲ್ಲೆ ನಡೆಸಿದ ಆರೋಪದ ಮೇಲೆ ಗುಜರಾತ್‌ನ ಮಹಿಸಾಗರ್ ಜಿಲ್ಲೆಯ ಭರೋಡಿ ಗ್ರಾಮದ ನಾಲ್ವರು ಮಹಿಳೆಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.
ಗಾಂಧಿನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಾಲ್ಕನೇ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿರುವ 25 ವರ್ಷದ ರಿಂಕು ವಾಂಕರ್ ಎಂಬಾಕೆ ವಿರ್‌ಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಆರೋಪಿಗಳಾದ ಲೋಮಾ ಪಟೇಲ್, ರೋಶ್ನಿ ಪಟೇಲ್, ವೃಷ್ಠಿ ಪಟೇಲ್ ಮತ್ತು ಮೀನಾ ಪಟೇಲ್ ಅವರು ತನ್ನ ಸ್ನೇಹಿತನೊಂದಿಗೆ ಗರ್ಭಾ ನೃತ್ಯದಲ್ಲಿ ಭಾಗವಹಿಸಿದ್ದಾಗಿ ಅವರು ಹೇಳಿದ್ದಾರೆ.
ರಿಂಕು ಅವರ ಹೇಳಿಕೆಯ ಪ್ರಕಾರ, ಕಾರ್ಯಕ್ರಮಕ್ಕೆ ಹಾಜರಾಗಿದ್ದಕ್ಕಾಗಿ ಪ್ರಬಲ ಜಾತಿ ಮಹಿಳೆಯರು ಯುವತಿಯನ್ನು ಗದರಿಸಿ ಅವಮಾನಿಸಿದ್ದಾರೆ.
“ಅವರು ನನ್ನ ಜಾತಿ ಹೆಸರಿಡಿದು ನಿಂದನೆ ಮಾಡಿದರು, ಈ ಜನರು ನಮಗೆ ಸಮಾನರಲ್ಲ ಮತ್ತು ನಮ್ಮೊಂದಿಗೆ ಗರ್ಬಾ ಆಡಲು ಸಾಧ್ಯವಿಲ್ಲ” ಎಂದು ಎಫ್‌ಐಆರ್‌ನಲ್ಲಿ ಆರೋಪಿಸಿದ್ದಾರೆ.
ಸಂಗೀತವನ್ನು ಬಂದ್ ಮಾಡಿಸುವ ಮೂಲಕ, ಕಾರ್ಯಕ್ರಮದ ಸಂಘಟಕರಿಗೆ ದೂರು ನೀಡುತ್ತಿದ್ದಂತೆಯೇ ಮಹಿಳೆಯರು ಹಿಂಸಾತ್ಮಕರಾದರು ಎಂದು ಆರೋಪಿಸಲಾಗಿದೆ. ರಿಂಕು ತನ್ನ ಕೂದಲನ್ನು ಹಿಡಿದು, ಸ್ಥಳದಿಂದ ಹೊರಗೆ ಎಳೆದುಕೊಂಡು ಹೋಗಿ ಘಟನೆಯನ್ನು ಚಿತ್ರೀಕರಿಸದಂತೆ ತಡೆದರು ಎಂದು ಹೇಳಿಕೊಂಡಿದ್ದಾರೆ. ಗರ್ಬಾ ನೃತ್ಯಕ್ಕೆ ಮರಳಲು ಪ್ರಯತ್ನಿಸಿದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಆರೋಪಿ ಬೆದರಿಕೆ ಹಾಕಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ನ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ನಾಲ್ವರು ಮಹಿಳೆಯರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ. ಇದರಲ್ಲಿ ಸೆಕ್ಷನ್ 115(2) (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), ಸೆಕ್ಷನ್ 54 (ಪ್ರೊತ್ಸಾಹಕನ ಸಮ್ಮುಖದಲ್ಲಿ ಅಪರಾಧ), ಸೆಕ್ಷನ್ 351(1) (ಕ್ರಿಮಿನಲ್ ಬೆದರಿಕೆ) ಮತ್ತು ಸೆಕ್ಷನ್ 352 (ಶಾಂತಿ ಭಂಗವನ್ನು ಪ್ರಚೋದಿಸಲು ಉದ್ದೇಶಪೂರ್ವಕವಾಗಿ ಅವಮಾನಿಸುವುದು) ಸೇರಿವೆ. ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ನಿಬಂಧನೆಗಳನ್ನು ಸಹ ಅನ್ವಯಿಸಲಾಗಿದೆ.
ಮಹಿಸಾಗರ್‌ನ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸಫಿನ್ ಹಸನ್ ಅವರು, ಎಸ್‌ಸಿ/ಎಸ್‌ಟಿ ಸೆಲ್‌ನ ಉಪ ಸೂಪರಿಂಟೆಂಡೆಂಟ್ ಈ ಪ್ರಕರಣವನ್ನು ತನಿಖೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ತಮಿಳುನಾಡು| ದಲಿತ ವಿದ್ಯಾರ್ಥಿಗಳಿಗೆ ಜಾತಿ ನಿಂದನೆ; ರಸ್ತೆ ಪ್ರವೇಶಿಸದಂತೆ ತಡೆದ ಪ್ರಬಲಜಾತಿ ವೃದ್ದೆ


