ಮುಂದಿನ ಹದಿನಾರು ತಿಂಗಳ ಬಳಿಕ ಗುಜರಾತ್ ವಿಧಾನಸಭೆ ಚುನಾವಣೆ ಎದುರಾಗಲಿದ್ದು, ಬಿಜೆಪಿಯು ಹಿಂದುತ್ವವನ್ನು ಮುನ್ನೆಲೆಗೆ ತರಲು ಸಿದ್ಧತೆ ನಡೆಸಿದೆ. ಬೆಲೆ ಏರಿಕೆ, ಉದ್ಯೋಗ ನಷ್ಟದಂತಹ ಸಮಸ್ಯೆಗಳಿಗೆ ಬೆನ್ನು ತಿರುಗಿಸುವ ಸೂಚನೆಗಳು ದೊರೆತ್ತಿದ್ದು, ತನ್ನ ಹಳೆಯ ಅಜೆಂಡಾವಾದ ಹಿಂದುತ್ವದ ಬೆನ್ನೇರಿ ಚುನಾವಣೆ ಎದುರಿಸುವತ್ತ ಬಿಜೆಪಿ ಹೆಜ್ಜೆಗಳನ್ನಿರಿಸಿದೆ. ಈಗಾಗಲೇ ಚುನಾವಣಾ ಸಿದ್ಧತೆಯಲ್ಲಿ ಬಿಜೆಪಿ ತೊಡಗಿದ್ದು, ಹಿಂದುತ್ವವನ್ನು ಕೈಬಿಟ್ಟರೆ “ಅಚ್ಛೇದಿನ್” ಘೋಷಣೆ ಬಿಜೆಪಿಗೆ ಮುಳುವಾಗುವುದು ಸ್ಪಷ್ಟ.
ಬಿಜೆಪಿಯ ಕಾರ್ಯಕಾರಿ ಸಭೆ ಗುಜರಾತ್‌ನ ಕೆವಾಡಿಯದಲ್ಲಿ ಒಕ್ಕೂಟ ಸರ್ಕಾರದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉಪಸ್ಥಿತಿಯಲ್ಲಿ ಗುರುವಾರ ನಡೆದಿದ್ದು, ಸಭೆಯಲ್ಲಿ ಹಿಂದುತ್ವವೇ ಪ್ರಧಾನವಾಗಿ ಚರ್ಚಿಸಲ್ಪಟ್ಟಿದೆ ಎಂದು ’ದಿ ವೈರ್’ ಜಾಲತಾಣ ಅಭಿಪ್ರಾಯಪಟ್ಟಿದೆ.
ಸಭೆಯಲ್ಲಿ ಮಾತನಾಡಿರುವ ಪ್ರತಿಯೊಬ್ಬರೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸಿ, “ಭಯೋತ್ವಾದನೆ ಮುಕ್ತ ಭಾರತ”, “ಸ್ವಾವಲಂಬಿ ಭಾರತ”, “ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ”, “370ನೇ ವಿಧಿ ರದ್ಧತಿ” ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. 2017 ರಲ್ಲಿ ವಿಕಾಸ ಮತ್ತು ಅಚ್ಛೇದಿನ್ ಎನ್ನುತ್ತಿದ್ದವರು ಈಗ ಹಿಂದುತ್ವದ ಕಡೆಗೆ ಹೊರಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ 71 ನೇ ಜನ್ಮದಿನ ಹಿನ್ನೆಲೆಯಲ್ಲಿ ಸೆ.17 ರಂದು ಇಡೀ ಗುಜರಾತ್ ರಾಜ್ಯದ್ಯಾಂತ 7,001 ರಾಮ ಮಂದಿರಗಳಲ್ಲಿ ವಿಶೇಷ ಆರತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದಾಗಿ ರಾಜ್ಯ ಬಿಜೆಪಿ ಮುಖ್ಯಸ್ಥ ಸಿ.ಆರ್.ಪಾಟೀಲ್ ಘೋಷಿಸಿದ್ದಾರೆ. “ನಿಮಗೆ ರಾಮಮಂದಿರ ಸಿಗದಿದ್ದರೆ ರಾಮನ ಫೋಟೋವನ್ನಾದರೂ ಇಟ್ಟು ಪೂಜೆ ಮಾಡಿ” ಎಂದು ತಿಳಿಸಿದ್ದಾರೆ.
ಕೋಟ್ಯಂತರ ಭಾರತೀಯರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ರಾಮಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಿಸಲಾಗುತ್ತಿದೆ. ಜಾತ್ಯತೀತರೆಂದು ಕರೆಸಿಕೊಳ್ಳುವವರು ಇದನ್ನು ಇಷ್ಟಪಡುವುದಿಲ್ಲ. ಪ್ರತಿಯೊಬ್ಬರೂ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿ ಕೆಲಸ ಮಾಡಿ ಮೋದಿಯವರ ಸಾಧನೆಗಳನ್ನು ಜನರಿಗೆ ತಿಳಿಸಬೇಕು ಎಂದು ಸಭೆಯಲ್ಲಿದ್ದವರಿಗೆ ನಿರ್ದೇಶಿಸಲಾಗಿದೆ.
ರಾಜ್‌ನಾಥ್ ಸಿಂಗ್ ಮಾತನಾಡಿ, “ಮೋದಿಯವರು ಭಯೋತ್ಪಾದನೆಯನ್ನಷ್ಟೇ ನಿರ್ಮೂಲನೆ ಮಾಡಿಲ್ಲ. 17,000 ಕೋಟಿ ರೂ. ಮೌಲ್ಯದ ರಕ್ಷಣಾ ಉತ್ಪನ್ನಗಳನ್ನು ರಫ್ತು ಮಾಡಿದ್ದಾರೆ. ನಾವು ಇವಿಎಂ ತಿರುಚಿ ಗೆದ್ದಿಲ್ಲ, ಜನರ ನಂಬಿಕೆಯನ್ನು ಉಳಿಸಿಕೊಂಡು ಗೆದ್ದಿದ್ದೇವೆ. ಭಾರತವನ್ನು ವಿಶ್ವಗುರು ಮಾಡಲು ಬೇಕಾದ ಕ್ರಮಗಳನ್ನು ಮೋದಿ ಕೈಗೊಂಡಿದ್ದಾರೆ. ಮುಸ್ಲಿಂ ಮಹಿಳೆಯರ ಉನ್ನತಿಗಾಗಿ ತ್ರಿವಳಿ ತಲಾಖ್ ನಿಷೇಧಿಸಿ ಕಾನೂನು ತರಲಾಗಿದೆ” ಎಂದಿದ್ದಾರೆ.
ಇದನ್ನೂ ಓದಿ: ನಕಲಿ ದೇಶಭಕ್ತಿ ಹೇಳುತ್ತಿದ್ದ ಬಿಜೆಪಿ ಈಗ ಜನರ ಬದುಕನ್ನು ಹೈರಾಣಾಗಿಸಿದೆ: ಸಿದ್ದರಾಮಯ್ಯ


