ಗುಜರಾತ್‌ನ ದೇವಗಢ್ ಬರಿಯಾ ಮತ್ತು ಧನ್‌ಪುರ ತಾಲೂಕುಗಳಲ್ಲಿ ನಡೆದ 75 ಕೋಟಿ ರೂ.ಗಳ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ನರೇಗಾ) ಹಗರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಸಚಿವ ಬಚು ಖಬಾದ್ ಅವರ ಪುತ್ರ ಬಲವಂತ್‌ಸಿನ್ಹ ಖಬಾದ್ ಅವರನ್ನು ದಾಹೋದ್ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಬಚು ಖಬಾದ್ ಪಂಚಾಯತ್ ರಾಜ್ ಮತ್ತು ಕೃಷಿ ಖಾತೆ ರಾಜ್ಯ ಸಚಿವರಾಗಿದ್ದಾರೆ.
ಬಲವಂತಸಿನ್ಹ ಮತ್ತು ಅವರ ಕಿರಿಯ ಸಹೋದರ ಕಿರಣ್ ದಾಹೋದ್ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಹಿಂತೆಗೆದುಕೊಂಡ ಕೆಲ ದಿನಗಳ ನಂತರ ಅವರ ಬಂಧನ ಆಗಿದೆ.
ಹಗರಣದಲ್ಲಿ ಬಲವಂತಸಿನ್ಹ ಭಾಗಿಯಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದ ನಂತರ ಅವರನ್ನು ಬಂಧಿಸಲಾಗಿದೆ ಎಂದು ದಾಹೋದ್‌ನ ಉಪ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್ ಭಂಡಾರಿ ಹೇಳಿದ್ದಾಗಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
“ಪ್ರಾಥಮಿಕ ತನಿಖೆ ತನಿಖೆಯಲ್ಲಿ ನರೇಗಾ ಯೋಜನೆಗಳಿಗೆ ಸರಕುಗಳನ್ನು ಪೂರೈಸುವ ಬಲ್ವಂತ್‌ಸಿನ್ಹ ಖಬಾದ್ ಮಾಲೀಕತ್ವದ ಏಜೆನ್ಸಿಯು ಕೆಲವು ಮೊತ್ತಗಳಿಗೆ ಬಿಲ್‌ಗಳನ್ನು ನೀಡದೆ ಸಂಪೂರ್ಣ ಸರಕುಗಳ ಪಟ್ಟಿಯನ್ನು ತಲುಪಿಸಿದೆ ಎಂದು ತಿಳಿದುಬಂದಿದೆ. ತನಿಖೆ ಮುಂದುವರೆದಿದೆ ಮತ್ತು ದುರುಪಯೋಗದ ನಿಖರವಾದ ಮೊತ್ತವನ್ನು ನಾವು ಇನ್ನೂ ಖಚಿತಪಡಿಸಿಕೊಳ್ಳಬೇಕಾಗಿದೆ,” ಎಂದು ಭಂಡಾರಿ ಹೇಳಿದ್ದಾರೆ.
ಕಿರಣ್ ಅವರನ್ನು ಇನ್ನೂ ಬಂಧಿಸಲಾಗಿಲ್ಲ. ಹಗರಣದಲ್ಲಿ ಅವರ ಪಾತ್ರವನ್ನು ಖಚಿತಪಡಿಸಿಕೊಳ್ಳಲು ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಏಪ್ರಿಲ್ 24 ರಂದು ದಾಖಲಾಗಿರುವ ಎಫ್‌ಐಆರ್‌ನಲ್ಲಿ, ನರೇಗಾ ಯೋಜನೆಗಳಿಗೆ ಸಾಮಗ್ರಿಗಳನ್ನು ಪೂರೈಸುವ ಗುತ್ತಿಗೆಯನ್ನು ಬಿಡ್ ಗೆಲ್ಲದ ಕಂಪನಿಗಳಿಗೆ ನೀಡಲಾಗಿದೆ. ಅವರ ಬಿಲ್ ಹಣವನ್ನೂ ಪಾವತಿಸಲಾಗಿದೆ. ಅಸ್ತಿತ್ವದಲ್ಲೇ ಇಲ್ಲದ ಕೆಲ ಯೋಜನೆಗಳಿಗೆ ಬಿಲ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಹಗರಣವು ವಿಶೇಷವಾಗಿ ದೇವಗಢ ಬರಿಯಾದ ಕುವಾ ಗ್ರಾಮದ ಜನರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ ಬೆಳಕಿಗೆ ಬಂತು ಎಂದು ವರದಿಗಳು ಹೇಳಿವೆ.
ಈ ಪ್ರಕರಣ ಸಂಬಂಧ ದಾಹೋದ್ ಜಿಲ್ಲಾ ಪೊಲೀಸರು ಈ ಹಿಂದೆ ಐವರನ್ನು ಬಂಧಿಸಿದ್ದರು. ಅವರಲ್ಲಿ ನರೇಗಾ ಶಾಖೆಯ ಇಬ್ಬರು ಲೆಕ್ಕಪರಿಶೋಧಕರಾದ ಜಯವೀರ್ ನಾಗೋರಿ ಮತ್ತು ಮಹಿಪಾಲ್‌ಸಿನ್ಹ ಚೌಹಾಣ್. ಗ್ರಾಮ ರೋಜ್‌ಗಾರ್ ಸೇವಕರಾದ ಕುಲದೀಪ್ ಬರಿಯಾ ಮತ್ತು ಮಂಗಲ್‌ಸಿನ್ಹ ಪಟೇಲಿಯಾ ಹಾಗೂ ತಾಂತ್ರಿಕ ಸಹಾಯಕ ಮನೀಶ್ ಪಟೇಲ್ ಸೇರಿದ್ದಾರೆ.
ಹಗರಣದ ತನಿಖೆಗೆ ವಿಶೇಷ ತಂಡ ರಚಿಸುವಂತೆ ಕಾಂಗ್ರೆಸ್ ನಾಯಕ ಅಮಿತ್ ಚಾವ್ಡಾ ಅವರು ಒತ್ತಾಯಿಸಿದ್ದಾರೆ. 30 ವರ್ಷಗಳ ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರವು ಮೊದಲ ಆದ್ಯತೆಯಾಗಿದೆ. ದಾಹೋದ್‌ನಲ್ಲಿ ನರೇಗಾ ಯೋಜನೆಯಲ್ಲಿ ಭ್ರಷ್ಟಾಚಾರದ ಬಗ್ಗೆ ಪದೇ ಪದೇ ದೂರುಗಳು ಬಂದರೂ ಸರ್ಕಾರ ಕ್ರಮ ಕೈಗೊಂಡಿರಲಿಲ್ಲ. ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿಲ್ಲ. ಆದರೂ, ಬಿಲ್ ಪಾಸ್ ಮಾಡಲಾಗಿದೆ. ಕಾಂಗ್ರೆಸ್ ಈ ವಿಷಯವನ್ನು ಲಿಖಿತವಾಗಿ ಮತ್ತು ಮೌಖಿಕವಾಗಿ ಹಾಗೂ ವಿಧಾನಸಭೆಯಲ್ಲಿ ಪ್ರಶ್ನೆಗಳ ಮೂಲಕ ಪದೇ ಪದೇ ಪ್ರಶ್ನಿಸಿದೆ ಎಂದು ಚಾವ್ಡಾ ಹೇಳಿದ್ದಾರೆ.
ಭಯೋತ್ಪಾದನೆ ವಿರುದ್ಧದ ಭಾರತದ ನಿಲುವು ವಿಶ್ವಕ್ಕೆ ತಿಳಿಸಲು ಸರ್ವಪಕ್ಷ ನಿಯೋಗ


