ಜುಲೈ 11, 2016 ಊನಾ, ಗುಜರಾತ್:
ಬಾಲು ಸರ್ವೈಯಾ, ಅವನ ಇಬ್ಬರು ಪುತ್ರರಾದ ರಮೇಶ್ ಸರ್ವೈಯಾ ಮತ್ತು ವಶರಾಮ್ ಸರ್ವೈಯಾ ಅವರೊಂದಿಗೆ ಕುಂವರ್, ಅಶೋಕ್ ಸರ್ವೈಯಾ, ಮತ್ತು ಬೇಚರ್ ಸರ್ವೈಯಾ ಅವರುಗಳು ತಮ್ಮ ಊರಲ್ಲಿ ಸತ್ತ ಆಕಳ ಚರ್ಮ ಸುಲಿಯುತ್ತಿದ್ದಾಗ ಬಂದ ಗೋರಕ್ಷಕ ಪಡೆಯವರು, ಅವರುಗಳು ಆಕಳನ್ನು ಕೊಂದಿದ್ದು ಎಂದು ಆಪಾದಿಸಿ ಅಲ್ಲಿಂದ ಎತ್ತೊಯ್ಯುತ್ತಾರೆ. ಊನಾ ಪಟ್ಟಣಕ್ಕೆ ಕರೆತಂದು ಒಂದು ದೊಡ್ಡ ವಾಹನಕ್ಕೆ ಅವರನ್ನು ಕಟ್ಟಿ ಹಾಕಿ, ರಾಡ್‍ಗಳಿಂದ ಮನಸೋಇಚ್ಛೆ ಥಳಿಸಲಾಗುತ್ತದೆ. ನೂರಾರು ಜನ ಥಳಿತದ ಈ ದೃಶ್ಯವನ್ನು ನೋಡುತ್ತಾರೆ. ಒಬ್ಬ ತನ್ನ ಮೊಬೈಲಿನ ಕ್ಯಾಮೆರಾದಲ್ಲಿ ದೃಶ್ಯವನ್ನು ಸೆರೆಹಿಡಿಯುತ್ತಾನೆ. ದಲಿತರ ಮೇಲಿನ ಈ ಹಲ್ಲೆಯನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತವೆ. ಗುಜರಾತಿನ ಮತ್ತು ದೇಶದ ಇತರ ಹೋರಾಟಗಾರರು ಸೇರಿ ಊನಾ ಚಳವಳಿಯನ್ನು ರೂಪಿಸುತ್ತಾರೆ.
ಆಗಸ್ಟ್ 15 ರಂದು ಲಕ್ಷಾಂತರ ಜನ ಊನಾದಲ್ಲಿ ಸೇರಿ, ತಾವೆಂದೂ ಇನ್ನು ಮುಂದೆ ಸತ್ತ ದನದ ಚರ್ಮವನ್ನು ಸುಲಿಯುವುದಿಲ್ಲ ಎಂದು ಪ್ರತಿಜ್ಞೆ ಮಾಡುತ್ತಾರೆ. ಅದೇ ಚಳವಳಿಯ ರೂವಾರಿಯಾಗಿದ್ದ ಜಿಗ್ನೇಶ್ ಮೇವಾನಿ ಎನ್ನುವ ಯುವಕ ಮುನ್ನೆಲೆಗೆ ಬಂದು ದೇಶಾದ್ಯಂತ ಚಳವಳಿ ಕಟ್ಟಲು ತಿರುಗಾಡುತ್ತಿದ್ದಾನೆ. ಈಗ ಗುಜರಾತಿನ ಶಾಸಕ ಕೂಡ. ಹಲ್ಲೆ ಮಾಡಿದವರನ್ನು ಬಂಧಿಸಿ, 43 ಜನರ ವಿರುದ್ಧ ಪ್ರಕರಣ ನಡೆಯುತ್ತಿದೆ..
ಮೇ 2018, ಶಾಪರ್ ಗ್ರಾಮ, ರಾಜಕೋಟ್ ಜಿಲ್ಲೆ, ಗುಜರಾತ್
ಮುಕೇಶ್ ವಾನಿಯಾ, ಅವನ ಹೆಂಡತಿ ಜಯಾ ಮತ್ತು ಇನ್ನೊಬ್ಬ ಮಹಿಳೆ ಸವಿತಾ, ಈ ಮೂವರು ಬೆಳಗ್ಗೆ 5 ಗಂಟೆಯ ಸುಮಾರಿಗೆ ಎಂದಿನಂತೆ ಅಲ್ಲಿಯ ಕಾರ್ಖಾನೆಯ ಹತ್ತಿರ ಚಿಂದಿ ಆಯಲು ಪ್ರಾರಂಭಿಸಿದ್ದರು. ಆಗ ಅಲ್ಲಿಗೆ ಬಂದ ಕಾರ್ಖಾನೆಯ ಮಾಲೀಕ ಜಯಸುಖ್ ರಾದಾದಿಯ ಮತ್ತು ಅವನ ಸಂಗಡಿಗರು, ಅವರಿಗೆ ಕಾರ್ಖಾನೆಯ ಆವರಣದಲ್ಲಿಯ ಕಸವನ್ನು ತೆಗೆಯಲು ಹೇಳಿದರು. ಆ ಕೆಲಸಕ್ಕೆ ದುಡ್ಡು ತೆಗೆದುಕೊಳ್ಳದೇ ಮಾಡಬೇಕು ಎಂದಿದ್ದಕ್ಕಾಗಿ ಇವರು ಒಪ್ಪಲಿಲ್ಲ. ಇವರು ಕೆಳಜಾತಿಯವರು, ಚಿಂದಿ, ಕಸ ಆಯುವುದು ಅವರ ಕರ್ತವ್ಯ ಎಂದು ವಾದಿಸಿ ಮುಕೇಶನ ಮೇಲೆ ಹಲ್ಲೆ ಮಾಡಲಾರಂಭಿಸಿದರು. ಅಲ್ಲಿಂದ ಅವನ ಹೆಂಡತಿ ಮತ್ತು ಸವಿತಾ ಇಬ್ಬರೂ ಮಹಿಳೆಯರನ್ನು ಅಲ್ಲಿಂದ ಹೊರಗೆ ದಬ್ಬಿದರು. ಕೆಲ ಹೊತ್ತಿನ ನಂತರ ಆ ಇಬ್ಬರೂ ಮಹಿಳೆಯರು ತಮ್ಮ ಹಳ್ಳಿಯ ಕೆಲವು ಜನರೊಂದಿಗೆ ಬಂದಾಗ ಮುಕೇಶ್ ನೆಲದ ಮೇಲೆ ನಿಶ್ಚಲವಾಗಿ ಬಿದ್ದಿದ್ದ. ಅವನನ್ನು ಆಸ್ಪತ್ರೆಗೆ ಕರೆದೊಯ್ದಾಗ ಅವನು ಆಗಲೇ ಅಸುನೀಗಿದ್ದ.
ಮುಕೇಶನನ್ನು ಒಂದು ಕಂಬಕ್ಕೆ ಕಟ್ಟಿ, ಲೋಹದ ಒಂದು ರಾಡಿನಿಂದ ಒಬ್ಬೊಬ್ಬರಾಗಿ ಥಳಿಸಿದ್ದರು, ಆ ಗುಂಪಿನಲ್ಲಿಯ ಒಬ್ಬ ತುಂಬಾ ಸಂತೋಷದಿಂದಲೇ ಈ ದೃಶ್ಯವನ್ನು ತನ್ನ ಮೊಬೈಲ್‍ನ ಕ್ಯಾಮೆರಾದಲ್ಲಿ ಸೆರೆಹಿಡಿದು, ತನ್ನ ಸ್ನೇಹಿತರಿಗೆ ಕಳಿಸಿದ. ಆ ವಿಡಿಯೋವನ್ನು
ಲಕ್ಷಾಂತರ ಜನ ಈಗಾಗಲೇ ನೋಡಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
25ನೇ ಏಪ್ರಿಲ್ 2018, ಊನಾ, ಗುಜರಾತ್
2016 ಜುಲೈನಲ್ಲಿ ಹಲ್ಲೆಗೀಡಾದ ಸರ್ವೈಯಾ ಕುಟುಂಬದವರು ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳಲು ನಿರ್ಧರಿಸಿದರು. ಏಪ್ರಿಲ್ 29ರಂದು ಅವರು ಅಧಿಕೃತವಾಗಿ ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳಲಿದ್ದರು. ಅದಕ್ಕಾಗಿಯೇ ಇಡೀ ಕುಟುಂಬ ತಯಾರಿಯಲ್ಲಿತ್ತು. ಭಾನುವಾರದ ಕಾರ್ಯಕ್ರಮಕ್ಕಾಗಿ ಕೆಲವು ವಸ್ತುಗಳನ್ನು ಖರೀದಿಸಲು ಅವರು ಸಮೀಪದ ಪಟ್ಟಣವಾದ ಊನಾಗೆ ಬಂದು ಖರೀದಿ ಮಾಡಿ ಹಿಂತಿರುಗುತ್ತಿದ್ದರು. ಬಾಲುಭಾಯಿ, ವಸರಾಮ್ ಮತ್ತಿತರರು ಎಲ್ಲ ವಸ್ತುಗಳೊಂದಿಗೆ ವಾಹನದಲ್ಲಿದ್ದರೆ, ರಮೇಶ್ ಮತ್ತು ಅಶೋಕ್ ಅವರಿಗಿಂತ ಸ್ವಲ್ಪ ಮುಂದೆ ಮೋಟರ್ ಸೈಕಲ್‍ನಲ್ಲಿ ಬರುತ್ತಿದ್ದರು. ಇವರು ಸಮ್ತೇರ್ ಗ್ರಾಮದ ಬಳಿ ಬರುತ್ತಿದ್ದಂತೆ ಎರಡು ವರ್ಷಗಳ ಹಿಂದೆ ಇವರ ಮೇಲೆ ಹಲ್ಲೆ ಮಾಡಿದ್ದ ಕಿರಣ್ ಸಿಂಗ್ ಇವರನ್ನು ನೋಡಿ, ‘ಇವರಿಗೇ ನೋಡು, ನಾವು ಹೊಡೆದಿದ್ದು’ ಎಂದು ತನ್ನ ಸಂಗಡಿಗನಿಗೆ ಹೇಳಿ ಗೇಲಿ ಮಾಡುತ್ತಾ, ರಮೇಶ್ ಮತ್ತು ಅಶೋಕ್ ಅವರನ್ನು ತಡೆಯುತ್ತಾರೆ.. ಅಲ್ಲಿ ಕಿರಣ್ ಸಿಂಗ್ ಇವರಿಬ್ಬರಿಗೂ ಬೆದರಿಕೆ ಹಾಕಿ, ಪ್ರಕರಣವನ್ನು ಹಿಂತೆಗೆದುಕೊಳ್ಳುವಂತೆ ಆದೇಶಿಸುತ್ತಾನೆ. ರಮೇಶ್ ಅವನ ಬೆದರಿಕೆಗೆ ಜಗ್ಗದಿರುವಾಗ ಕಟ್ಟಿಗೆಯ ಸನಿಕೆಯನ್ನು ತೆಗೆದುಕೊಂಡು ಅವನ ಮೇಲೆ ಹಲ್ಲೆಗೆ ಮುಂದಾಗುತ್ತಾನೆ. ರಮೇಶ್ ಪ್ರತಿರೋಧ ತೋರುತ್ತಾನೆ ಮತ್ತು ಅಷ್ಟರಲ್ಲಿ ಗ್ರಾಮಸ್ಥರು ಬಂದು ಸೇರುವುದರಿಂದ ಕಿರಣ್ ಸಿಂಗ್ ಅವನ ಸಂಗಡಿಗನೊಂದಿಗೆ ಪರಾರಿಯಾಗುತ್ತಾನೆ. ಸರ್ವೈಯಾ ಕುಟುಂಬದವರು ಪೊಲೀಸ್ ಠಾಣೆಗೆ ಹೋಗಿ ಪ್ರಕರಣ ದಾಖಲಿಸುತ್ತಾರೆ. ಕಿರಣ್ ಸಿಂಗ್ ಮತ್ತು ಅವನ ಸಂಗಡಿಗ ತಲೆಮರೆಸಿಕೊಳ್ಳುತ್ತಾರೆ.
ಊನಾದ ಘಟನೆಯ ನಂತರ 2016 ರ ಡಿಸೆಂಬರ್ ತಿಂಗಳಲ್ಲಿಯೇ ಊನಾದ 43 ಆರೋಪಿಗಳಲ್ಲಿ 35 ಜನರಿಗೆ ಜಾಮೀನು ಸಿಕ್ಕಿರುತ್ತದೆ. ಆರೋಪಿ ಕಿರಣ್ ಸಿಂಗ್ ಸುಪ್ರೀಮ್ ಕೋರ್ಟಿಗೆ ಹೋಗಿ ತನ್ನನ್ನು ಬಂಧಿಸಬಾರದು ಎನ್ನುವ ಆದೇಶವನ್ನು ತಂದಿದ್ದಾನೆ.
10 ಜೂನ್ 2018, ವಾಕಡಿ ಗ್ರಾಮ, ಜಲಗಾಂವ ಜಿಲ್ಲೆ, ಮಹಾರಾಷ್ಟ್ರ
16 ಮತ್ತು 17 ನೇ ಹದಿವಯಸ್ಸಿನ ಹುಡುಗರು ಜೋಷಿಯವರ ತೋಟದ ಬಾವಿಗೆ ಈಜಲು ಹೋಗಿದ್ದರು. ಆಗ ಅಲ್ಲಿಗೆ ಬಂದ ಈಶ್ವರ್ ಜೋಷಿ ಮತ್ತು ಪಲ್ಹಾದ್ ಲೋಹಾರ್ ಅವರುಗಳು ಈ ಹುಡುಗರನ್ನು ಹಿಡಿದು, ಒಂದೆಡೆಗೆ ಹಾಕಿ, ಬಟ್ಟೆ ಬಿಚ್ಚಿಸಿ ಮನಬಂದಂತೆ ಥಳಿಸಿದರು. ಇಲ್ಲಿಯೂ ಆ ಥಳಿತದ ದೃಶ್ಯವನ್ನು ಮೊಬೈಲ್ ಫೋನಿನ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಯಿತು. ಥಳಿತಕ್ಕೊಳಗಾದ ಹುಡುಗರು ಆದ ಘಟನೆಯ ಬಗ್ಗೆ ಯಾರ ಮುಂದೆಯೂ ಬಾಯಿ ಬಿಚ್ಚಲಿಲ್ಲ. ಎರಡು ದಿನಗಳ ನಂತರ ಥಳಿತದ ವೀಡಿಯೋ ಎಲ್ಲೆಡೆ ಹರಿದಾಡಿ ಅವರ ಪಾಲಕರಿಗೆ ತಲುಪಿದ್ದರಿಂದ ಪ್ರಕರಣ ಬೆಳಕಿಗೆ ಬಂದು ಹತ್ತಿರದ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದರು. ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ.
ಹೀಗೆ ಕಲೆಹಾಕುತ್ತ ಹೋದರೆ ದಲಿತರ ಮೇಲಿನ ಹಲ್ಲೆಗಳ ಪ್ರಕರಣಕ್ಕೆ ಕೊನೆಯೇ ಇಲ್ಲ. ಈ ಎಲ್ಲಾ ಘಟನೆಗಳಲ್ಲಿ ಹಲ್ಲೆಯ ದೃಶ್ಯವನ್ನು ಸೆರೆಹಿಡಿದದ್ದು ಸಾಮಾನ್ಯವಾಗಿದೆ. ಮತ್ತು ವಿಶೇಷವೆಂದರೆ ಹಲ್ಲೆಕೋರರೇ ಸ್ವತಃ ವಿಡಿಯೋ ಮಾಡಿದ್ದು. ಒಂದು, ಬಹುಶಃ ಅವರಿಗೆ ತಮಗೆ ಯಾವುದೇ ಶಿಕ್ಷೆ ಆಗುವುದಿಲ್ಲ ಎನ್ನುವ ಖಾತ್ರಿ ಇದೆ. ಇನ್ನೊಂದು, ನೋಡಿ ನಾವು ಈ ತರಹ ಹಲ್ಲೆ ಮಾಡುತ್ತಿದ್ದೇವೆ, ಮುಂದೆಯೂ ಮಾಡಲಿದ್ದೇವೆ ಎನ್ನುವ ಸಂದೇಶ ರವಾನಿಸುವ ಉದ್ದೇಶವೂ ಇರಬಹುದು.
ಬಹುಶಃ ಅವರ ಧೋರಣೆಯೇ ಇಂದಿನ ವಾಸ್ತವ ಸತ್ಯವಾಗಿರಬಹುದು.
– ರಾಜಶೇಖರ್ ಅಕ್ಕಿ


