ಪಶ್ಚಿಮ ನೈಜೀರಿಯಾದಲ್ಲಿ ಕ್ಯಾಥೋಲಿಕ್ ವಸತಿ ಶಾಲೆಗೆ ನುಗ್ಗಿದ ಬಂದೂಕುಧಾರಿಗಳು 200ಕ್ಕೂ ಹೆಚ್ಚು ಮಕ್ಕಳನ್ನು ಅಪಹರಿಸಿದ್ದಾರೆ. ಇದು ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ನಡೆದ ಅತಿದೊಡ್ಡ ಸಾಮೂಹಿಕ ಅಪಹರಣ ಎಂದು ಸುದ್ದಿ ಸಂಸ್ಥೆ ಅಲ್-ಜಝೀರಾ ವರದಿ ಮಾಡಿದೆ.
ನೈಜರ್ ರಾಜ್ಯದ ಅಗ್ವಾರಾ ಜಿಲ್ಲೆಯ ಪಾಪಿರಿ ಸಮುದಾಯದ ಸೇಂಟ್ ಮೇರಿಸ್ ಶಾಲೆಯ ಮೇಲೆ ಶುಕ್ರವಾರ (ನವೆಂಬರ್ 21) ಬೆಳಗಿನ ಜಾವ ದಾಳಿ ನಡೆಸಿದ ಬಂದೂಕುಧಾರಿಗಳು 215 ವಿದ್ಯಾರ್ಥಿಗಳು ಮತ್ತು 12 ಶಿಕ್ಷಕರನ್ನು ಅಪಹರಿಸಿದ್ದಾರೆ ಎಂದು ನೈಜೀರಿಯಾದ ಕ್ರಿಶ್ಚಿಯನ್ ಅಸೋಸಿಯೇಷನ್ (ಸಿಎಎನ್) ತಿಳಿಸಿದೆ.
“ತಾನು ಅಪಹರಣಕ್ಕೊಳಗಾದ ಮಕ್ಕಳ ಪೋಷಕರು ಮತ್ತು ಶಿಕ್ಷಕರ ಕುಟುಂಬಸ್ಥರನ್ನು ಭೇಟಿಯಾಗಿದ್ದು, ಆತಂಕದಲ್ಲಿರುವ ಅವರಿಗೆ ಧೈರ್ಯ ಹೇಳಿದ್ದೇನೆ” ಎಂದು ನೈಜರ್ ರಾಜ್ಯದ ಸಿಎಎನ್ ವಕ್ತಾರ ಡೇನಿಯಲ್ ಅಟೋರಿ ಹೇಳಿದ್ದಾರೆ.
ಬೆಳಗಿನ ಜಾವಕ್ಕೂ ಮುನ್ನ ಶಾಲೆಯ ಮೇಲೆ ದಾಳಿ ನಡೆದಿರುವುದನ್ನು ಪೊಲೀಸರು ದೃಢಪಡಿಸಿದ್ದು, ಸೈನಿಕರು ಸೇರಿದಂತೆ ಭದ್ರತಾ ಸಿಬ್ಬಂದಿಯನ್ನು ಶಾಲೆಯ ಬಳಿ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಶಾಲೆ ಇರುವ ಪ್ರದೇಶದಲ್ಲಿ ದುಷ್ಕರ್ಮಿಗಳ ದಾಳಿಯ ಅಪಾಯ ಹೆಚ್ಚಾಗಿದೆ ಎಂಬ ಮಾಹಿತಿ ಸರ್ಕಾರಕ್ಕೆ ಮೊದಲೇ ಇತ್ತು. ಸೇಂಟ್ ಮೇರಿಸ್ ಶಾಲೆಯು ರಾಜ್ಯ ಸರ್ಕಾರಕ್ಕೆ ತಿಳಿಸದೆ, ಸರ್ಕಾರದ ಅನುಮತಿ ಕೂಡ ಪಡೆಯದೆ ತರಗತಿ ಪುನರಾರಂಭಿಸಿದೆ. ಇದರಿಂದ ಮಕ್ಕಳು ಅಪಹರಣಕ್ಕೊಳಗಾಗುವಂತಾಯಿತು ಎಂದು ನೈಜರ್ ರಾಜ್ಯ ಸರ್ಕಾರದ ಕಾರ್ಯದರ್ಶಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಕ್ಕಳ ಅಪಹರಣದ ಘಟನೆ ಹಿನ್ನೆಲೆ, ದಕ್ಷಿಣ ಆಫ್ರಿಕಾದಲ್ಲಿ ನಡೆಯುವ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ತೆರಳಬೇಕಿದ್ದ ನೈಜೀರಿಯಾ ಅಧ್ಯಕ್ಷ ಬೋಲಾ ಟಿನುಬು ಅವರು ತಮ್ಮ ಪ್ರವಾಸ ರದ್ದುಗೊಳಿಸಿದ್ದಾರೆ. ಅವರ ಬದಲಾಗಿ ಉಪಾಧ್ಯಕ್ಷ ಕಾಶಿಮ್ ಶೆಟ್ಟಿಮಾ ಅವರನ್ನು ಸಭೆಗೆ ಕಳಿಸಿದ್ದಾರೆ.
ನೈಜೀರಿಯಾದ ಕ್ರೈಸ್ತರ ಮೇಲೆ ಉದ್ದೇಶಪೂರ್ವಕವಾಗಿ ದಾಳಿ ನಡೆಸಲಾಗುತ್ತಿದೆ. ಇದಕ್ಕೆ ಪ್ರತಿಯಾಗಿ ಸೇನಾ ಕಾರ್ಯಾಚರಣೆ ನಡೆಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾರದ ಹಿಂದೆ ಎಚ್ಚರಿಕೆ ನೀಡಿದ್ದರು. ಆದರೆ ನೈಜೀರಿಯಾ ಸರ್ಕಾರ ಟ್ರಂಪ್ ಆರೋಪವನ್ನು ಸಂಪೂರ್ಣವಾಗಿ ತಿರಸ್ಕರಿಸಿತ್ತು. ಸಶಸ್ತ್ರ ಗುಂಪುಗಳ ದಾಳಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಯುತ್ತಿರುವವರು ಮತ್ತು ಬಾಧಿತರಾಗುತ್ತಿರುವವರು ಮುಸ್ಲಿಮರೇ ಹೊರತು, ಕ್ರೈಸ್ತರಲ್ಲ ಎಂದಿತ್ತು.
ಟ್ರಂಪ್ ಎಚ್ಚರಿಕೆ ನೀಡಿದ ಬಳಿಕ ಒಂದು ಚರ್ಚ್ ಮೇಲೆ ದಾಳಿ ನಡೆದಿದೆ. ಎರಡನೆಯದಾಗಿ ಶಾಲಾ ಮಕ್ಕಳ ಅಪಹರಣವಾಗಿದೆ. ಈ ಮೂಲಕ ಟ್ರಂಪ್ ಆರೋಪಕ್ಕೆ ಬಲ ಬಂದಂತಾಗಿದೆ.
ನೈಜೀರಿಯಾದಲ್ಲಿ ಕ್ರೈಸ್ತರ ಮೇಲೆ ಉದ್ದೇಶಪೂರ್ವಕ ದಾಳಿ ನಡೆಯುತ್ತಿದೆ ಎಂಬುವುದು ಅಮೆರಿಕದ ಬಲಪಂಥೀಯ ಮತ್ತು ಕ್ರೈಸ್ತ ಎವಾಂಜೆಲಿಕಲ್ (ತೀವ್ರ ಧಾರ್ಮಿಕ ಪ್ರಚಾರಕ) ಗುಂಪುಗಳ ವಾದವಾಗಿದೆ. ಅದನ್ನೇ ಟ್ರಂಪ್ ಪ್ರತಿಧ್ವನಿಸಿದ್ದಾರೆ.


