ಬೆಂಗಳೂರಿನ ಗುರುರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕಿನ ವಂಚನೆ ಪ್ರಕರಣದ ದೂರು ದಾಖಲಾಗಿ ಎರಡು ವರ್ಷಗಳಾದರೂ, ಗ್ರಾಹಕರಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ ಎಂದು ದೂರಲಾಗಿದೆ. ಜುಲೈ 2 ರ ಶುಕ್ರವಾರದಂದು ಒಕ್ಕೂಟ ಸರ್ಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಬ್ಯಾಂಕ್‌ನ ಠೇವಣಿದಾರರು ಭೇಟಿ ಮಾಡಿದ್ದರು. ಈ ವೇಳೆ ನ್ಯಾಯ ಕೊಡಿಸುವಂತೆ ಅವರಲ್ಲಿ ಕೇಳಿಕೊಂಡಾಗ ‘‘ನನ್ನನ್ನು ಕೇಳಿ ಹಣ ಇಟ್ಟಿದ್ದೀರಾ” ಎಂದು ಉಡಾಫೆಯಿಂದ ಮಾತನಾಡಿದರು ಎಂದು ಠೇವಣಿದಾರ ಹರೀಶ್ ಸೋಮವಾರ ಆರೋಪಿಸಿದ್ದಾರೆ.
ಕೆಪಿಸಿಸಿ ವೈದ್ಯಕೀಯ ಘಟಕದ ಕಾರ್ಯದರ್ಶಿ ಡಾ. ಶಂಕರ್ ಗುಹಾ ಅವರು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಠೇವಣಿದಾರ ಹರೀಶ್, “ಸಚಿವೆ ಸೀತಾರಾಮ್ ಅವರು ಇತ್ತೀಚೆಗೆ ನಗರಕ್ಕೆ ಆಗಮಿಸಿದ್ದರು. ಈ ವೇಳೆ ಗುರು ರಾಘವೇ೦ದ್ರ ಸಹಕಾರಿ ಬ್ಯಾಂಕ್ ಠೇವಣಿದಾರರು ತಾವು ಹೂಡಿಕೆ ಮಾಡಿದ ಹಣ ಕಳೆದುಕೊಂಡಿರುವ ಬಗ್ಗೆ ಹೇಳಲಾಯಿತು. ಅದಕ್ಕೆ ಅವರು, ನನ್ನನ್ನು ಕೇಳಿ ರಾಘವೇಂದ್ರ ಬ್ಯಾಂಕ್‌ನಲ್ಲಿ ಹಣ ಹೂಡಿಕೆ ಮಾಡಿದ್ದೀರಾ” ಎಂದು ಪ್ರಶ್ನಿಸಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಿಲಯನ್ಸ್ ಫೈನಾನ್ಸ್‌ಗಳಿಂದ ಬ್ಯಾಂಕಿಂಗ್ ಫ್ರಾಡ್- ಕರ್ನಾಟಕ ಬ್ಯಾಂಕ್‌ಗೆ ವಂಚನೆ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಾ. ಶಂಕರ್ ಗುಹಾ, ‘‘ಈ ಹಗರಣದ ಬಗ್ಗೆ ಪ್ರಕರಣ ದಾಖಲಾಗಿ ಎರಡು ವರ್ಷಗಳು ಕಳೆದಿವೆ. ಆದರೂ ಠೇವಣಿದಾರರಿಗೆ ನ್ಯಾಯ ಸಿಕ್ಕಿಲ್ಲ. ಹಣ ಕಳೆದುಕೊಂಡ ಕೊರಗಿನಲ್ಲೇ 70 ಜನ ವಿವಿಧ ಕಾಯಿಲೆಗಳಿಗೆ ತುತ್ತಾಗಿ ಮೃತಪಟ್ಟಿದ್ದಾರೆ. ಪ್ರಕರಣದ ತನಿಖೆಯ ಹೊಣೆಯನ್ನು ಸಿಐಡಿಗೆ ವಹಿಸಲಾಗಿದೆಯಾದರೂ, ಏನೂ ಪ್ರಯೋಜನ ಆಗಿಲ್ಲ. ಆದ್ದರಿಂದ ಪ್ರಕರಣವನ್ನು ಸಿಬಿಐಗೆ ವಹಿಸಬೇಕು’’ ಎಂದು ಆಗ್ರಹಿಸಿದ್ದಾರೆ.
“ಬ್ಯಾಂಕಿಗೆ ಸತತವಾಗಿ ‘ಎ’ ದರ್ಜೆಯ ಪ್ರಮಾಣ ಪತ್ರ ನೀಡಲಾಗಿದೆ. ಇಂತಹ ವಂಚಕ ಬ್ಯಾಂಕ್‌ಗೆ ಆರ್‌ಬಿಐ ಈ ಪ್ರಮಾಣಪತ್ರ ನೀಡಿದ್ದಾದರೂ ಹೇಗೆ? ವಿವಿಧ ಕಡೆ ಶಾಖಾ ಕಚೇರಿಗಳನ್ನು ತೆರೆಯಲು ಅನುಮತಿ ನೀಡಿರುವುದರ ಹಿಂದಿನ ಉದ್ದೇಶವೇನು? ಈ ಬಗ್ಗೆ ಸಂಸದರನ್ನು ಪ್ರಶ್ನಿಸಿದರೆ ಹಾರಿಕೆಯ ಉತ್ತರ ನೀಡುತ್ತಾರೆ. ಸಂಸದರು ಹಾಗೂ ಶಾಸಕರಿಂದ ಸಮಸ್ಯೆಗೆ ಪರಿಹಾರ ಸಿಗುವುದು ಕಷ್ಟ. ಮುಖ್ಯಮಂತ್ರಿ ಮಧ್ಯ ಪ್ರವೇಶಿಸಬೇಕು. ಇದೇ 14 ರಂದು ಆಡಿಟ್ ವರದಿ ನೀಡುವುದಾಗಿ ಹೇಳಿದ್ದಾರೆ. ಕೊಡದಿದ್ದರೆ ‘ಆರ್‌ಬಿಐ ಚಲೋ’ ಅಭಿಯಾನ ಹಮ್ಮಿಕೊಳ್ಳುತ್ತೇವೆ” ಎಂದು ಶಂಕರ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಎಸ್‌ಬಿಐ ಬ್ಯಾಂಕ್‌ನಿಂದ ಗ್ರಾಹಕರಿಗೆ ಎಟಿಎಂ ವಿತ್ ಡ್ರಾ ಸೇರಿ ಹಲವು ಶುಲ್ಕಗಳು!
ಪ್ರಕರಣ ಸಂಬಂಧ ಕಳೆದ ವರ್ಷದ ಜನವರಿಯಲ್ಲಿ ಟ್ವೀಟ್ ಮಾಡಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, “ಗುರು ರಾಘವೇಂದ್ರ ಸಹಕಾರಿ ಬ್ಯಾಂಕಿನ ಯಾವುದೇ ಠೇವಣಿದಾರರು ಭಯಭೀತರಾಗದಿರಿ. ಅವರಿಗೆ ನಾನು ಭರವಸೆ ನೀಡುತ್ತೇನೆ. ಗೌರವಾನ್ವಿತ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಕರಣದ ಬಗ್ಗೆ ಮೌಲ್ಯಮಾಪನ ಮಾಡುತ್ತಾರೆ, ಜೊತೆಗೆ ವೈಯಕ್ತಿಕವಾಗಿ ಸಮಸ್ಯೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಠೇವಣಿದಾರರ ಹಿತಾಸಕ್ತಿಗಳನ್ನು ಸರ್ಕಾರ ರಕ್ಷಿಸುತ್ತದೆ ಎಂದು ಅವರು ಭರವಸೆ ನೀಡಿದ್ದಾರೆ. ಅವರ ಕಾಳಜಿಗೆ ಕೃತಜ್ಞತೆಗಳು” ಎಂದು ಹೇಳಿದ್ದರು.
I want to assure all depositors of Sri Guru Raghavendra Co-operative Bank to not panic.
Hon’ble Finance Minister Smt. @nsitharaman is appraised of matter & is personally monitoring the issue. She has assured Govt will protect interests of depositors. Grateful for her concern. pic.twitter.com/pmoAcUFAu7
— Tejasvi Surya (@Tejasvi_Surya) January 13, 2020
ಇದಾಗಿ ಒಂದೂವರೆ ವರ್ಷ ಕಳೆದರೂ ಪ್ರಕರಣವು ಯಾವುದೇ ತಾರ್ಕಿಕ ಅಂತ್ಯಕ್ಕೆ ತಲುಪಿಲ್ಲ. ಜುಲೈ 2 ರ ಶುಕ್ರವಾರದಂದು ಠೇವಣಿದಾರರನ್ನು ಭೇಟಿಯಾದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ನಿರ್ಮಲಾ ಸೀತಾರಾಮನ್, ಆರ್‌ಬಿಐ ನೇಮಿಸಿರುವ ಆಡಳಿತಾಧಿಕಾರಿ ವರದಿ ಸಲ್ಲಿಸುವವರೆಗೆ ತಾಳ್ಮೆಯಿಂದ ಇರಿ ಎಂದು ವಿನಂತಿಸಿದ್ದರು. “ಕೆಲವು ಕಾರ್ಯವಿಧಾನಗಳನ್ನು ಅನುಸರಿಸಬೇಕಾದ ಅಗತ್ಯವಿದ್ದು, ಆಡಳಿತಾಧಿಕಾರಿ ಆರ್‌ಬಿಐಗೆ ವರದಿ ಸಲ್ಲಿಸಿದ ಕೂಡಲೇ ಸಮಸ್ಯೆಯನ್ನು ಬಗೆಹರಿಸಲು ನನ್ನಿಂದಾದ ಪ್ರಯತ್ನವನ್ನು ಖಂಡಿತಾ ಮಾಡುತ್ತೇನೆ” ಹೇಳಿದ್ದರು.
ಬ್ಯಾಂಕಿನ ಒಟ್ಟು 25 ಸಾವಿರ ಮಂದಿ ಹಣ ಕಳೆದುಕೊಂಡಿದ್ದು, 2,130 ಕೋಟಿಗೂ ಅಧಿಕ ಹಣ ವಂಚನೆ ನಡೆಸಿದೆ ಎಂದು ಹೇಳಲಾಗಿದೆ. ಈ ಹಗರಣದಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಅಶ್ವಥ ನಾರಾಯಣ ಗೌಡ ಅವರ ಪಾತ್ರವು ಇದೆ ಎಂದು ಆರೋಪಿಸಲಾಗಿದ್ದು, ಅವರು ಕೂಡಾ ಬ್ಯಾಂಕಿಗೆ 12 ಕೋಟಿ ಬಾಕಿ ಕಟ್ಟಬೇಕಿದೆ ಎಂದು ಹೇಳಲಾಗಿದೆ. ಈ ಮಧ್ಯೆ, ಬ್ಯಾಂಕಿನ ಆಡಿಟ್ ನಡೆಲಿದ್ದು, ಅದರ ವರದಿ ಬರಬೇಕಿದೆ. ಆದ್ದರಿಂದ ವಹಿವಾಟು ಆರು ತಿಂಗಳು ಯಥಾಸ್ಥಿತಿಯಲ್ಲಿ ಇರಬೇಕು ಎಂದು ಆರ್‌ಬಿಐ ಹೇಳಿದೆ. ಇದರಿಂದಾಗಿ ಠೇವಣಿದಾರರು ತಮ್ಮ ಹಣವನ್ನು ಬ್ಯಾಂಕಿನಿಂದ ತೆಗೆಯಲು ಆಗುತ್ತಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: ಕನ್ನಡ ಚಿತ್ರನಿರ್ಮಾಣಕ್ಕೆ ಸ್ಥಿರತೆ ತಂದುಕೊಟ್ಟ ಪಾರ್ವತಮ್ಮ ರಾಜಕುಮಾರ್ ಸ್ಮರಣೆ


