Homeಮುಖಪುಟಜಗದ ಕಣ್ತೆರೆಸಿದ ಮಾದಿಗರ ಒಳಮೀಸಲಾತಿ ಹೋರಾಟ : ಗುರುಪ್ರಸಾದ್ ಕಂಟಲಗೆರೆ

ಜಗದ ಕಣ್ತೆರೆಸಿದ ಮಾದಿಗರ ಒಳಮೀಸಲಾತಿ ಹೋರಾಟ : ಗುರುಪ್ರಸಾದ್ ಕಂಟಲಗೆರೆ

ಮನೆಯೊಳಗಿನ ಅನುಮಾನ, ಅಪನಂಬಿಗಳು ಬಗೆಹರಿದರೆ - ಇದು ನಮ್ಮ ಮನೆ, ನಾವೆಲ್ಲ ಒಂದಾಗಿ ಹೊರಗಿನ ಶತ್ರುಗಳಿಂದ ಮನೆಯನ್ನು ರಕ್ಷಿಸಿಕೊಳ್ಳಬೇಕೆಂಬ ಜವಬ್ದಾರಿ ಮತ್ತೆ ಹುಟ್ಟುತ್ತದೆ. ಅದಕ್ಕೆ ಮೊದಲು ಒಳಮೀಸಲಾತಿ ಜಾರಿಯಾಗಬೇಕು.

- Advertisement -
- Advertisement -

ಸುಮಾರು ಹದಿನೈದು ವರ್ಷಗಳದ ಹಿಂದೆ, ನಾವು ತುಮಕೂರಿನ ಎಮ್.ಜಿ ರೋಡ್ ಸೈನ್ಸ್ ಹಾಸ್ಟೆಲ್‍ನಲ್ಲಿ ಪಿಯುಸಿ ಓದುತ್ತಿದ್ದೆವು. ರಾತ್ರಿಯಾದರೆ ಸಾಕು ಒಂದಿಲ್ಲೊಂದು ಸಂಘಟನೆಯವರು ಬಂದು ವಿದ್ಯಾರ್ಥಿಗಳಿಗೆ ಸಿದ್ಧಾಂತಗಳನ್ನು ಹೇಳಿ ಸಂಘಟಿಸಿ ಹೋಗುತ್ತಿದ್ದರು. ಅದರಲ್ಲಿ ಕೆಲವೇ ಸಂಖ್ಯೆಯಲ್ಲಿ ಬರುತ್ತಿದ್ದ ಮಾದಿಗ ದಂಡೋರದವರು ಸ್ಪೃಶ್ಯ ಅಸ್ಪೃಶ್ಯ ವಿಷಯಗಳ ಜೊತೆಗೆ ಬಲಗೈನವರಿಂದ ಹೇಗೆ ಅನ್ಯಾಯವಾಗುತ್ತಿದೆ, ಒಳಮೀಸಲು, ಆಂಧ್ರ ಮಾದರಿ ಎಂದೆಲ್ಲ ಹೇಳಿ ಹೋಗುತ್ತಿದ್ದರು. ಹಿಂದೆಯೇ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದ ಡಿಎಸ್‍ಎಸ್‍ನವರು ಮಾದಿಗ ದಂಡೋರದವರನ್ನ ಬೈದು, “ಅವ್ರ ಮಾತ್ನ ಕೇಳ್ಬೇಡಿ, ಅವರು ಮನೆ ಮುರುಕರು, ಅವರಿಗೊಂದು ತತ್ವ ಸಿದ್ಧಾಂತ ಇಲ್ಲ” ಎಂದು ಹೇಳುತ್ತಿದ್ದರು. ಆಶ್ಚರ್ಯ ಎಂದರೆ ಡಿಎಸ್‍ಎಸ್ ಹೆಸರಿನಲ್ಲಿ ಬರುತ್ತಿದ್ದವರೂ ಮಾದಿಗರೇ ಆಗಿರುತ್ತಿದ್ದರು. ನಮಗೆ ಕೆಲವೊಮ್ಮೆ ಗೊಂದಲವಾಗುತ್ತಿತ್ತು – ಇನ್ನು ಕೆಲವೊಮ್ಮೆ ಎರೆಡೂ ಸರಿ ಎನಿಸುತ್ತಿತ್ತು.

ಆಶ್ಚರ್ಯವೆಂದರೆ ಯಾವ ಡಿಎಸ್‍ಎಸ್‍ನವರು ಅಂದು ಮಾದಿಗ ದಂಡೋರದವರನ್ನ ಕಂಡರೆ ಉರಿದುಬೀಳುತ್ತಿದ್ದರೋ, ಅದೇ ಹೋರಾಟಗಾರರು ಇಂದು ಸದಾಶಿವ ಆಯೋಗದ ವರದಿಯ ಜಾರಿಗಾಗಿ ಬೀದಿಗಿಳಿದು ಹೋರಾಡುತ್ತಿದ್ದಾರೆ. ಗಂಟೆಗಟ್ಟಲೆ ಸಮರ್ಥಿಸುತ್ತಿದ್ದಾರೆ. ವ್ಯತ್ಯಾಸವೆಂದರೆ ಇವರೀಗ ಎಪ್ಪತ್ತು ಎಂಭತ್ತರ ಆಸುಪಾಸಿನಲ್ಲಿದ್ದಾರೆ.

ಒಳಮೀಸಲಾತಿ ಹೋರಾಟ ಕೇವಲ ಮಾದಿಗರ ಕಣ್ಣನ್ನಷ್ಟೆ ತೆರೆಸಲಿಲ್ಲ. ಸಾಮಾಜಿಕ ಏರುಪೇರುಗಳನ್ನ ನೋಡುವ, ಸರಿಪಡಿಸುವ ಹೊಸಬಗೆಯ ನೋಟವನ್ನೆ ಕಲಿಸಿಕೊಟ್ಟಿತು ಎಂಬುದು ನಿಧಾನಕ್ಕೆ ತಿಳಿಯುತ್ತಾ ಬಂದಿದೆ.

ಇಂದು ಮಾದಿಗರಿಗೆ ಆಗಿರುವ ಅನ್ಯಾಯವನ್ನ ಒಕ್ಕೊರಲಿನಿಂದ ಎಲ್ಲ ಜಾತಿಯವರು ಮಾತಾಡುವಂತಾಗಿದೆ. ಹೌದು ಇಲ್ಲಿನ ಅನ್ಯಾಯವನ್ನ ಸರಿಪಡಿಸಬೇಕು, ತಿಂದವರೇ ತಿನ್ನುವುದಲ್ಲ ಎಂದು ಎಲ್ಲರೂ ಇಂದು ಮಾತಾಡುವಂತಾಗಿದೆ. ಸಮಾಜದ ಅಸಮಾನತೆಯನ್ನು ನೋಡುವ ಹೊಸ ಕ್ರಮ ಹಾಕಿಕೊಟ್ಟ ಮಾದಿಗ ಮೀಸಲಾತಿ ಹೋರಾಟವನ್ನು ಸ್ಮರಿಸಲೇಬೇಕಿದೆ.

photo courtesy : Udayavani

ಸುಪ್ರೀಂ ಕೋರ್ಟ್‍ನ ಪಂಚ ನ್ಯಾಯಮೂರ್ತಿಗಳ ಪೀಠ ಒಳಮೀಸಲಾತಿಗೆ ಒಲವು ತೋರಿರುವ ಐತಿಹಾಸಿಕ ತೀರ್ಪಿನ ಈ ಹೊತ್ತಿನಲ್ಲಿ ಎಂದಿನಂತೆಯೇ ಹಲವು ಊಹಾಪೋಹಗಳು ಎದ್ದಿವೆ. ಅದರಲ್ಲಿ ಪ್ರಮುಖವಾದುದು ಮೀಸಲಾತಿಯ ಮೇಲೆ ಕಣ್ಣಿಟ್ಟಿರುವ ಆರ್‌ಎಸ್‍ಎಸ್ ಈ ವಿಷಯಕ್ಕೆ ಮುತುವರ್ಜಿ ವಹಿಸುತ್ತಿರುವುದೇಕೆ ಎಂಬುದು ಒಂದಾದರೆ ದಲಿತರ ಐಕ್ಯತೆಯ ಒಡಕಿನ ಪ್ರಶ್ನೆ, ಸದಾಶಿವ ವರದಿಯ ಮೇಲೆ ಮೊದಲು ಚರ್ಚೆ ನಡೆಯಲಿ ಇತ್ಯಾದಿ..

ಹಿಂದಿನಿಂದಲೂ ಒಳಮೀಸಲಾತಿಯನ್ನ ವಿರೋಧಿಸಿಕೊಂಡು ಬಂದವರು ಇಂದು ಆರ್‌ಎಸ್‍ಎಸ್ ಮೂಗು ತೂರಿಸುತ್ತಿರುವುದರತ್ತ ಬೊಟ್ಟುಮಾಡಿ ಮಾದಿಗ ಮೀಸಲಾತಿ ಹೋರಾಟಗಾರರನ್ನು ಅನುಮಾನಿಸಲು ಪ್ರಚೋದಿಸುತ್ತಿದ್ದಾರೆ.

ಆದರೆ ಅವರು ತಿಳಿಯಬೇಕಾಗಿರುವುದು ಏನೆಂದರೆ ಒಳಮೀಸಲಾತಿ ಹೋರಾಟ ಪ್ರಾರಂಭವಾಗಿ ಇಪ್ಪತ್ತೈದು ವರ್ಷಗಳೇ ಸಂದಿವೆ. ಆಗ ಇದು ಮಾದಿಗರ ಹಸಿವಿನ ಪ್ರಶ್ನೆಯಾಗಿ ಮಾತ್ರವೇ ಹುಟ್ಟಿತ್ತು ಬಿಟ್ಟರೆ ಇನ್ನಾವುದೇ ಪ್ರಚೋದನೆಗಳಿಂದಲ್ಲ.

ಈ ನಿರಂತರ ಹೋರಾಟದಲ್ಲಿ ರಾಜಕೀಯ ಏಳುಬೀಳುಗಳು ಬೆರೆತುಹೋಗಿವೆ. ಅಷ್ಟಕ್ಕೂ ಇದು ರಾಜಕಾರಣದಿಂದಲೇ ಬಗೆಹರಿಯಬೇಕಾದ್ದರಿಂದ ಅದನ್ನು ಹೊರಗಿಟ್ಟು ನೋಡುವಂತದ್ದೆ ಅಲ್ಲ.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗಲೇ ಈ ಹೋರಾಟ ತೀವ್ರ ಸ್ವರೂಪ ಪಡೆದಿತ್ತು. ಆರ್‌ಎಸ್‍ಎಸ್‍ನವರನ್ನು ಕಟುವಾಗಿ ಟೀಕಿಸುವ ಸಿದ್ದರಾಮಯ್ಯನವರು “ನಾನು ಇದರ ಪರವಾಗಿದ್ದೇನೆ” ಎಂದು ಬಹಿರಂಗವಾಗಿ ಹಲವು (ಹುಬ್ಬಳ್ಳಿ ಸೇರಿಸಿ) ಸಭೆಗಳಲ್ಲಿ ಹೇಳಿದ್ದರು. ಕ್ಯಾಬಿನೆಟ್‍ನಲ್ಲಿ ಚರ್ಚೆಗೂ ತಂದಿದ್ದರು. ಎಡಬಲದ ಒಕ್ಕೊರಲ ಅಭಿಮತ ಬರದೆ ಕೈಚೆಲ್ಲಿದ್ದರು. ಅವರು ತಮ್ಮ ಸೋಲಿನ ಪರಾಮರ್ಶೆಯ ಸಂದರ್ಭದಲ್ಲಿ (ದೆಹಲಿಯಲ್ಲಿ) ಒಳಮೀಸಲಾತಿ ಹಂಚದಿರುವುದೂ ಕಾರಣವಾಯಿತು ಎಂದಿದ್ದಾರೆ.

ಕಳೆದ ಬಾರಿ ಚುನಾವಣೆಯಲ್ಲಿ ಜೆಡಿಎಸ್ ತನ್ನ ಪಕ್ಷದ ಪ್ರಣಾಳಿಕೆಯಲ್ಲಿ ಒಳಮೀಸಲಾತಿ ನೀಡುವುದನ್ನು ಒಳಗೊಂಡಿತ್ತು. ಸುಪ್ರೀಂ ಕೋರ್ಟ್ ಪಂಚ ನ್ಯಾಯಮೂರ್ತಿಗಳ ಪೀಠ ತೀರ್ಪುಕೊಟ್ಟು, ಒಳಮೀಸಲಾತಿ ಪರವಾಗಿ ಅಭಿಪ್ರಾಯಪಟ್ಟ ಸಮಯದಲ್ಲಿ ಹೆಚ್.ಡಿ ಕುಮಾರಸ್ವಾಮಿಯವರು ಸಾಮಾಜಿಕ ನ್ಯಾಯದ ಬಗ್ಗೆ ಸರಣಿ ಟ್ವೀಟ್ ಮಾಡಿದ್ದಾರೆ.

ಸರ್ವೋದಯ ಪಕ್ಷದ ರೈತ ಮುಖಂಡ ದಿವಂಗತ ಕೆ.ಎಸ್ ಪುಟ್ಟಣ್ಣಯ್ಯ ಅವರು ಅವರದೇ ಆದ ಬಗೆಯಲ್ಲಿ (ಬೆಳೆ ಎಲ್ಲಿ ಕುಲ್ಟು ಬಿದ್ದಿರುತ್ತೊ ಅಲ್ಲಿ ಹೆಚ್ಚು ಗೊಬ್ಬರ ಹಾಕಬೇಕು) ಒಳಮೀಸಲಾತಿಯನ್ನ ಸಮರ್ಥಿಸಿದ್ದರು.

ನ್ಯಾಯಮೂರ್ತಿಗಳಾದ ಹೆಚ್.ಎನ್ ನಾಗಮೋಹನದಾಸ್, ಖ್ಯಾತ ವಕೀಲರಾದ ಸಿ.ಎಸ್ ದ್ವಾರಕನಾಥ್, ಸ್ವಾಮೀಜಿಗಳಾದ ಗದುಗಿನ ತೋಂಟರಾಧ್ಯರು ಹಾಗೂ ಪ್ರಗತಿಪರ ಸಾಹಿತಿಗಳ ದೊಡ್ಡ ದಂಡೇ ಒಳಮೀಸಲಾತಿ ಪರವಾಗಿ ಮಾತನಾಡಿದ್ದಾರೆ. ಕೆ.ಎಸ್ ಭಗವಾನ್ ಮುಂತಾದವರು ಬಹಿರಂಗ ಹೋರಾಟಗಳಲ್ಲು ಪಾಲ್ಗೊಂಡಿದ್ದಿದೆ.

ಇಲ್ಲಿ ನಾನು ಹೇಳ ಬಯಸುತ್ತಿರುವುದು ಇವರ್ಯಾರು ಆರ್‌ಎಸ್‍ಎಸ್‍ನವರಲ್ಲ ಎಂಬುದರ ಜೊತೆಗೆ ಆರ್‌ಎಸ್‍ಎಸ್ ನವರ ನಡೆಯನ್ನ ಹೆಜ್ಜೆ ಹೆಜ್ಜೆಗೂ ಟೀಕಿಸುತ್ತಲೇ ಬಂದವರು. ಈಗ ಅಧಿಕಾರದ ಚುಕ್ಕಾಣಿ ಇರುವುದು ಬಿಜೆಪಿ ಕೈಯಲ್ಲಿ ಅದರ ರಿಮೋಟ್ ಇರುವುದು ಆರ್‍ಎಸ್‍ಎಸ್ ಕೈಯಲ್ಲಿ. ಆರ್‌ಎಸ್‍ಎಸ್‍ನವರಿಗೆ ಮೀಸಲಾತಿಯೊಳಗೆ ಆಗಿಂದಾಗ್ಗೆ ಕೈಯಾಡಿಸುವುದರಲ್ಲಿ ಎಲ್ಲಿಲ್ಲದ ಉತ್ಸಾಹ. ಈಗ ಅದು ಒಳಮೀಸಲಾತಿಯ ಮೂಲಕವಿರಬಹುದು. ಆದರೆ ಮಾದಿಗರು ನಾವು ಒಳಮೀಸಲಿಗಷ್ಟೆ ಸೀಮಿತ, ಒಟ್ಟಾರೆ ಮೀಸಲಾತಿ ರಕ್ಷಣೆಯ ವಿಷಯ ಬಂದಾಗ ಕೈಕಟ್ಟಿ ಕೂರುತ್ತೇವೆ ಎಂದು ಎಲ್ಲಾದರೂ ಹೇಳಿದ್ದಾರ? ಹಾಗೆ ಇರುವ ಜಾಯಮಾನ ಇವರದಲ್ಲ. ಹಿಂದಿನಿಂದಲೂ ಹೋರಾಟವನ್ನೆ ಉಸಿರಾಗಿಸಿಕೊಂಡಿರುವ ಈ ಸಮುದಾಯ ಬೇರೆಲ್ಲರಿಗಿಂತ ಒಂದು ಹೆಜ್ಜೆ ಮುಂದೆ ನಿಂತೆ ಸಂವಿಧಾನ ರಕ್ಷಣೆಗಿಳಿಯುತ್ತದೆ. ಅದು ಯಾರಿಗೂ ತಿಳಿಯದ ವಿಷಯವೇನಲ್ಲ. ಆದರೆ ಸುಖಾ ಸುಮ್ಮನೆ ಒಳಮೀಸಲಾತಿ ವಿರೋಧಿಗಳು ಇಂಥದೊಂದು ಅಸಂಭದ್ದವನ್ನು ಕ್ರಿಯೇಟ್ ಮಾಡಿಬಿಟ್ಟಿದ್ದಾರೆ.

ಇನ್ನು ದಲಿತರ ಐಕ್ಯತೆಯ ವಿಷಯಕ್ಕೆ ಬಂದರೆ, ಎಡ – ಬಲ ಈಗ ಐಕ್ಯವಾಗಿದೆ ಎಂದು ಭಾವಿಸಿದರೆ ಅದು ಮೂರ್ಖತನದ್ದಾಗುತ್ತೆ. ಇಲ್ಲವೆ ಪ್ರಜ್ಞಾಪೂರ್ವಕವಾಗಿ ಸುಳ್ಳೇ ಹೇಳುತ್ತಿದ್ದಾರೆಂದು ತಿಳಿಯಬೇಕಾಗುತ್ತದೆ. ಇವರ ಐಕ್ಯತೆ ಮುರಿದು ಬಿದ್ದು ದಶಕಗಳೆ ಸಂದಿವೆ. ಹೊಸ ತಲಮಾರಿನ ಹೊಲೆ – ಮಾದಿಗ ಯುವಕರು ಒಟ್ಟಿಗೆ ಕೂತು ಗುಂಡಾಕುವುದಿರಲಿ ಒಂದು ಟೀ ಕುಡಿಯುವುದೂ ಸಹ ನಡೆಯುತ್ತಿಲ್ಲ. ಅವರು ಅವರೇ ಇರುತ್ತಾರೆ. ಇವರು ಇವರೇ ಸೇರುತ್ತಾರೆ. ಈರ್ವರ ನಡುವಿನ ಮೀಸಲಾತಿ ಕುರಿತಾದ ಅನುಮಾನ ಅಪನಂಬಿಕೆಯೇ ಇದಕ್ಕೆ ಕಾರಣವಾಗಿದೆ. ಈ ಅಸ್ಪೃಶ್ಯ ಜಾತಿಗಳ ಐಕ್ಯತೆ ಮತ್ತೆ ಸಾಧ್ಯವಿದೆ. ಒಬ್ಬರು ಹೆಚ್ಚು ಕಬಳಿಸಿದರೆಂಬ ಅನುಮಾನ ಅಪನಂಬಿಕೆ ದೂರಾಗಬೇಕು. ಅದು ಅವರವರ ಪಾಲನ್ನು ಅವರವರಿಗೆ ಕೊಟ್ಟಾಗ ಮಾತ್ರ ಸಾಧ್ಯ. ಇದಕ್ಕೆ ಮೀಸಲಾತಿಯಲ್ಲಿನ ಒಳ ವರ್ಗೀಕರಣ ಜಾರಿಯಾಗಬೇಕು.

ಇದು ಮನೆಯೊಳಗಿನ ಸಮಸ್ಯೆಯಾಗಿದ್ದಾಗ ಇದನ್ನು ಬಗೆಹರಿಸಿಕೊಳ್ಳುವುದು ಮನೆಯ ಹಿರಿಯ ಸದಸ್ಯರ ಕೈಯಲ್ಲಿತ್ತು. ಯಾವಾಗ ಹಿರಿಯರೆನಿಸಿದವರು ಕೈಚೆಲ್ಲಿ ಸ್ವಾರ್ಥಪರರೆನಿಸಿದರೋ, ವಂಚನೆಗೊಳಗಾದವರು ಅನಿವಾರ್ಯವಾಗಿ ನ್ಯಾಯಕ್ಕಾಗಿ ಇನ್ನೊಬ್ಬರ ಮನೆ ಕದಬಡಿಯಬೇಕಾಯಿತು.

ಈಗಲೂ ಏನೂ ಆಗಿಲ್ಲ. ಮನೆಯೊಳಗಿನ ಅನುಮಾನ, ಅಪನಂಬಿಗಳು ಬಗೆಹರಿದರೆ – ಇದು ನಮ್ಮ ಮನೆ, ನಾವೆಲ್ಲ ಒಂದಾಗಿ ಹೊರಗಿನ ಶತ್ರುಗಳಿಂದ ಮನೆಯನ್ನು ರಕ್ಷಿಸಿಕೊಳ್ಳಬೇಕೆಂಬ ಜವಬ್ದಾರಿ ಮತ್ತೆ ಹುಟ್ಟುತ್ತದೆ. ಅದಕ್ಕೆ ಮೊದಲು ಒಳಮೀಸಲಾತಿ ಜಾರಿಯಾಗಬೇಕು.

  • ಗುರುಪ್ರಸಾದ್ ಕಂಟಲಗೆರೆ

ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿರುವ ಗುರುಪ್ರಸಾದ್ ಹೊಸತಲೆಮಾರಿನ ಶಕ್ತ ಬರಹಗಾರ. ಹಲವು ದಿನಪತ್ರಿಕೆಗಳ ಕಥಾಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿ ಛಾಪು ಮೂಡಿಸಿದ ಗುರುಪ್ರಸಾದ್ ಅವರ ಚೊಚ್ಚಲ ಕಥಾಸಂಕಲನ ‘ಗೋವಿನ ಜಾಡು’ ಗಮನ ಸೆಳೆದ ಪುಸ್ತಕ. ‘ದಲಿತ ಸಾಂಸ್ಕೃತಿಕ ಕಥನಗಳ ಅಧ್ಯಯನ’ ಎಂಬ ಪುಸ್ತಕವನ್ನೂ ರಚಿಸಿದ್ದಾರೆ.


ಇದನ್ನೂ ಓದಿ: ಮೀಸಲಾತಿ ಮತ್ತು ಒಳಮೀಸಲಾತಿ ಎರಡೂ ಒಂದೆ..: ಬೆಟ್ಟಯ್ಯ ಕೋಟೆ ಸಂದರ್ಶನ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...