ಸದಾಶಿವ ಆಯೋಗದ ವರದಿಗೆ ವಿರೋಧ: ಛಲವಾದಿ ಕ್ಷೇಮಾಭಿವೃದ್ಧಿ ಸಂಘದ ನಡೆಗೆ ತೀವ್ರ ಖಂಡನೆ

ಒಳಮೀಸಲಾತಿ ಚರ್ಚೆಯ ಹಿನ್ನಲೆಯಲ್ಲಿ ಹಿರಿಯ ಹೋರಾಟಗಾರರು ಮತ್ತು ಸಾಹಿತಿಗಳ ಸಂದರ್ಶನದ ಭಾಗವಾಗಿ ಮೈಸೂರಿನ ದಲಿತ ಸಂಘರ್ಷ ಸಮಿತಿಯ ಮುಂದಾಳುಗಳಲ್ಲಿ ಒಬ್ಬರಾದ ಬೆಟ್ಟಯ್ಯ ಕೋಟೆಯವರ ಸಂದರ್ಶನ ಇಲ್ಲಿದೆ.

ಒಳಮೀಸಲಾತಿಯ ಬಗ್ಗೆ ನಿಮ್ಮ ನಿಲುವೇನು? ಒಳಮೀಸಲಾತಿ ಮತ್ತು ಮೀಸಲಾತಿ ಎರಡರ ತಾತ್ವಿಕತೆಯೂ ಭಿನ್ನವೇ ಅಥವಾ ಒಂದೆಯೇ? ಮೀಸಲಾತಿಗೆ ಶೇ.50 ರ ಮಿತಿ ಹೇರಿಕೆ, ಶೇ.3 ರಷ್ಟಿರುವ ಸಮುದಾಯಗಳಿಗೆ ಶೇ. 10 ಮೀಸಲಾತಿ ಕಲ್ಪಿಸಿರುವುದರ ವಿರುದ್ಧ ಹೋರಾಟಗಳಾಗಲಿಲ್ಲವೇಕೆ?

ಮೀಸಲಾತಿ ಎಂದರೇನು ಎಂಬುದರ ಅರ್ಥ ಈಗ ಮತ್ತೆ ಹುಡುಕಬೇಕಿದೆ – ಕಾರಣ ಸಂವಿಧಾನಕರ್ತರು ಸಾವಿರಾರು ವರ್ಷಗಳಿಂದ ಜಾತಿ ಕಾರಣದಿಂದ ಬದುಕುವ ಹಕ್ಕನ್ನೇ ಕಳೆದುಕೊಂಡಿದ್ದಂತಹ ಅಸ್ಪೃಶ್ಯ ತಳ ಸಮುದಾಯಗಳಿಗೆ ಒಂದಿಷ್ಟು ಅವಕಾಶಗಳನ್ನು ಕಲ್ಪಿಸಿ ಸಮಾಜದ ಮುಖ್ಯವಾಹಿನಿಗೆ ಅವರನ್ನು ಸೇರ್ಪಡೆಗೊಳಿಸುವ ಉದ್ದೇಶವನ್ನು ಮೀಸಲಾತಿ ಹೊಂದಿತ್ತು. ಆದರೆ ಶೇ.3ರಷ್ಟಿರುವ ಮೇಲ್ಜಾತಿಗೆ ಶೇ.10 ಮೀಸಲಾತಿ ಎಂದಾಗ ಆದರ ಅರ್ಥ ಏನು ಎಂಬುದು ಗೊಂದಲಮಯವಾಗಿ ಸಮುದಾಯವನ್ನು ಚಿಂತೆಗೀಡುಮಾಡಿತು. ಇದರ ವಿರುದ್ಧ ಹೋರಾಟ ರೂಪಿಸಬೇಕಾದ ಶೇ.60 ಮಿಕ್ಕಿರುವ ಹಿಂದುಳಿದ ಜಾತಿಗಳ ಮೌನವೂ ಪ್ರಶ್ನಾರ್ಥವಾಯಿತು.

ಜಾತಿ ಕಾರಣಕ್ಕಾಗಿ ಕಡೆಗಣಿಸಲ್ಪಟ್ಟ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಘನತೆಯಿಂದ ಬದುಕು ಕಟ್ಟಿಕೊಳ್ಳುವ ಅವಕಾಶವೇ ಮೀಸಲಾತಿ. ಇಂತಹ ಮೀಸಲಾತಿಗೆ ಒಳಪಡುವ ಜಾತಿ ಉಪಜಾತಿಗಳು ಅಸ್ತಿತ್ವ ಇನ್ನೂ ಅಳಿಸಿಲ್ಲವಾದ್ದರಿಂದ ಒಳಮೀಸಲಾತಿ ಒಪ್ಪಬೇಕಿದೆ. ಮೀಸಲಾತಿ ಮತ್ತು ಒಳಮೀಸಲಾತಿ ಈ ಎರಡರ ತಾಂತ್ರಿಕತೆಯೂ ಒಂದೇ ಆಗಿದೆ.

ಸ್ಪೃಶ್ಯರನ್ನು ಪರಿಶಿಷ್ಠ ಜಾತಿ ಪಟ್ಟಿಯಿಂದ ಹೊರಗಿಡಬೇಕೆಂಬುದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

ದಲಿತ ಚಳುವಳಿಯು ಎಲ್ಲಾ ಶೋಷಿತ ಸಮುದಾಯಗಳ ಬಿಡುಗಡೆಗಾಗಿ ಧ್ವನಿ ಎತ್ತಿದ ಸಂಘಟನೆ. ಹುಟ್ಟಿನಿಂದಲೂ ಎಲ್ಲಾ ತಳ ಸಮುದಾಯಗಳನ್ನು ತೆಕ್ಕೆಗೆ ತೆಗೆದುಕೊಂಡಿರುವ ಸಂಘಟನೆಯೇ ಇದು. ಆದರೂ ಅಸ್ಪಶ್ಯ ಮತ್ತು ಸ್ಪೃಶ್ಯರಲ್ಲಿ ಸಾಮಾಜಿಕ ಭಿನ್ನತೆಗಳು ಇರುವಿಕೆಯನ್ನು ಗುರುತಿಸಿಕೊಂಡಿದೆ. ಅಸ್ಪೃಶ್ಯತೆಯ ಅವಮಾನಗಳು ಇನ್ನೂ ಜೀವಂತವಾಗಿರುವುದರಿಂದ ಈ ಎರಡೂ ಸಮುದಾಯಗಳಿಗೂ ಜನಸಂಖ್ಯೆಗನುಗುಣವಾಗಿ ಮೀಸಲಾತಿಯನ್ನು ವರ್ಗೀಕರಿಸಬಹುದು ಎಂಬುದು ಒಪ್ಪಿಕೊಳ್ಳಬೇಕಾಗುತ್ತದೆ.

ಕೆಲವು ಬಲಗೈ ರಾಜಕಾರಣಿಗಳು ಒಳಮೀಸಲಾತಿ ವಿರುದ್ಧವಾಗಿ ದನಿ ಎತ್ತಿದ ಕಾರಣಕ್ಕೆ ಹೊಲೆಮಾದಿಗರ ನಡುವೆ ಭಿನ್ನತೆ ಉಂಟಾಯಿತು ಎನ್ನಲಾಗುತ್ತದೆ. ನಿಜಕ್ಕೂ ಆಯಾ ದಲಿತ ಜಾತಿಗಳನ್ನು ಪ್ರತಿನಿಧಿಸುವ ಪ್ರಾಮಾಣಿಕ ರಾಜಕಾರಣಿಗಳು ಇಂದಿಗೂ ಇದ್ದಾರೆಯೇ?

ಇಂದಿನ ರಾಜಕೀಯವೇ ಓಲೈಕೆ ರಾಜಕಾರಣ. ಇತರರನ್ನು ಅವಲಂಬಿಸಿ ರಾಜಕೀಯ ಮಾಡಬೇಕಾದ ಅನಿವಾರ್ಯತೆ ಸಮುದಾಯಗಳದು. ಬಾಬಾಸಾಹೇಬ್ ಅಂಬೇಡ್ಕರ್ ಅವರು ಒತ್ತಾಯಿಸಿದಂತೆ ಅಸ್ಪೃಶ್ಯರಿಗೆ ಪ್ರತ್ಯೇಕ ಮತದಾನ ಪದ್ಧತಿ ಇದ್ದು ಆ ಮೂಲಕ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಈಗ ಇಲ್ಲವಾದ್ದರಿಂದ ತಳಸಮುದಾಯಗಳು ರಾಜಕಾರಣಿಗಳಿಂದ ಏನನ್ನೂ ನೀರಿಕ್ಷಿಸಲು ಸಾಧ್ಯವಿಲ್ಲ.

ಒಳಮೀಸಲಾತಿ ದಲಿತರನ್ನು ಒಡೆದು ಆಳುತ್ತದೆ ಎಂದು ಆರಂಭದಲ್ಲಿ ಭಯ ಬೀಳಿಸಿದ್ದಿದೆ. ಆದರೆ ಈಗ ಒಳಮೀಸಲಾತಿ ಜಾರಿಯಾಗದಿದ್ದರೆ ದಲಿತರ ಒಗ್ಗಟ್ಟು ಸಂಪೂರ್ಣ ಮುರಿದು ಬೀಳುತ್ತದೆ ಎಂಬ ಪರಿಸ್ಥಿತಿ ಉಂಟಾಗಿದೆ. ಇದಕ್ಕೆ ನಿಮ್ಮ ಅಭಿಪ್ರಾಯವೇನು?

ಅಸ್ಪೃಶ್ಯ ಜಾತಿಗಳ ಪಟ್ಟಿಯಿಂದ ಸ್ಪೃಶ್ಯ ಜಾತಿಗಳನ್ನು ಹೊರಗಿಡಬೇಕು ಎಂಬ ಕೂಗು ಕೇಳತೊಡಗಿದಾಗ ಒಳಮೀಸಲಾತಿ ಧ್ವನಿ ತಣ್ಣಗಾಗಿ ಅಸ್ಪೃಶ್ಯ ಸಮುದಾಯಗಳು ಒಟ್ಟಾಗತೊಡಗಿದವು. ಈಗ ಇದ್ದಕ್ಕಿದ್ದಂತೆ ಒಳಮೀಸಲಾತಿ ಧ್ವನಿ ಗಟ್ಟಿಯಾಗತೊಡಗಿದ್ದು ಪರಸ್ಪರ ಅನುಮಾನಗಳು ಸೃಷ್ಟಿಯಾಗಿವೆ. ಒಟ್ಟಾರೆ ಸಾರ್ವಜನಿಕ ವಲಯಗಳನ್ನೇ ಖಾಸಗೀಕರಣಗೊಳಿಸುತ್ತಿರುವ ಈ ಸಂದರ್ಭದಲ್ಲಿ ಖಾಸಗಿವಲಯದಲ್ಲಿ ಮೀಸಲಾತಿ ಕಲ್ಪಿಸುವ ಯಾವ ಪ್ರಯತ್ನವೂ ಸರ್ಕಾರಗಳಿಂದ ನಡೆಯುತ್ತಿಲ್ಲ ಬದಲಿಗೆ ಆರ್ಥಿಕ ಸವಲತ್ತು ಒದಗಿಸುವ ಕಾರ್ಯಕ್ರಮವಾಗಿ ಮೀಸಲಾತಿಯನ್ನು ಮೇಲ್ವರ್ಗಗಳಿಗೆ ಕಲ್ಪಿಸಲಾಯಿತು. ಈ ಹೊತ್ತಿನಲ್ಲಿ ಒಳಮೀಸಲಾತಿ ಬಗ್ಗೆ ಇಷ್ಟೊಂದು ದೊಡ್ಡ ಕೂಗು ಮೀಸಲಾತಿಯನ್ನು ವಿರೋಧಿಸುತ್ತಿದ್ದವರಿಂದಲೇ ಬರುತ್ತಿರುವುದು ಅನುಮಾನಕ್ಕೆಡೆಮಾಡಿದೆ.

ಸದಾಶಿವ ಆಯೋಗದ ವರದಿ ಜಾರಿ ಮಾಡುವುದರ ಕುರಿತು ನಿಮ್ಮ ಅನಿಸಿಕೆ ಏನು?

ಸದಾಶಿವ ಆಯೋಗ ಏನು ಹೇಳಿದೆ ಎಂಬುದು ಅಧಿಕೃತವಾಗಿ ಯಾರಿಗೂ ಗೊತ್ತಿಲ್ಲ. ಇಂತಹ ಸಂದರ್ಭದಲ್ಲಿ ಆಯೋಗದ ವರದಿ ಬಗ್ಗೆ ಅನೇಕ ಅನುಮಾನಗಳು ಹುಟ್ಟುವುದು ಸಹಜ. ಆದ್ದರಿಂದ ವರದಿಯನ್ನು ಒಂದು ಕಾಲಮಿತಿಯೊಳಿಗೆ ಸಾರ್ವಜನಿಕ ಚರ್ಚೆಗೆ ಒಳಪಡಿಸಿ ಅನುಮಾನಗಳನ್ನು ಪರಿಹರಿಸಿಕೊಳ್ಳುವುದು ಒಳ್ಳೆಯದು.

ಜಾತಿ ಅಸಮಾನತೆ ಮತ್ತು ಸಾಮಾಜಿಕ ತಾರತಮ್ಯವನ್ನು ನಿವಾರಿಸುವ ಮೀಸಲಾತಿಯನ್ನು ಬಡತನ ನಿರ್ಮೂಲನ ಕಾರ್ಯಕ್ರಮದಂತೆ ಪ್ರತಿಯೊಂದು ಜಾತಿಗಳ ಜನಸಂಖ್ಯೆ ಆಧರಿಸಿ ಮೇಲ್ಜಾತಿಗಳಿಗೂ ಹಂಚುವುದಾದರೆ ಸಾಮಾಜಿಕ ನ್ಯಾಯ, ಸಮಾನತೆ ಎಂಬುದು ಮರೀಚಿಕೆಯಾಗಿ ಶ್ರೇಣಿಕೃತ ಜಾತಿವ್ಯವಸ್ಥೆಯನ್ನು ಗಟ್ಟಿಗೊಳಿಸುವ ಸಾಧನವಾಗುವುದರಲ್ಲಿ ಸಂಶಯವಿಲ್ಲ.

  • ಬೆಟ್ಟಯ್ಯ ಕೋಟೆ

(ಬೆಟ್ಟಯ್ಯನವರು ಮೈಸೂರಿನ ದಲಿತ ಸಂಘರ್ಷ ಸಮಿತಿಯ ಮುಂದಾಳುಗಳಲ್ಲಿ ಒಬ್ಬರು. ಎಚ್.ಡಿ.ಕೋಟೆಯ ಬೆಟ್ಟಯ್ಯ, ದಲಿತ ಚಳವಳಿಯಲ್ಲಿ ಸುದೀರ್ಘ ಕಾಲದಿಂದ ಇದ್ದು, ಮೈಸೂರಿನ ದುಡಿಯುವ ಸಮುದಾಯಗಳ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ.)


ಇದನ್ನೂ ಓದಿ: ಬಿಜೆಪಿಯೆಂದರೆ ಬ್ರಾಹ್ಮಣ-ಬನಿಯಾ ಕ್ಲಬ್: ಅವರಿಂದ `ಒಳ’ಮೀಸಲಾತಿ ಸಾಧ್ಯವೇ?

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಬೆಟ್ಟಯ್ಯ ಕೋಟೆ

LEAVE A REPLY

Please enter your comment!
Please enter your name here