ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಗುವಾಹಟಿ ರೈಲು ನಿಲ್ದಾಣದಲ್ಲಿ ಹಠಾತ್ ಹೆರಿಗೆ ನೋವು ಕಾಣಿಸಿಕೊಂಡಿದ್ದು, ರೈಲ್ವೆ ವೈದ್ಯರು ಮತ್ತು ಆರ್‌ಪಿಎಫ್ ಮಹಿಳಾ ಸಿಬ್ಬಂದಿಯ ಸಹಾಯದೊಂದಿಗೆ ಹೆರಿಗೆಯಾಗಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಮಹಿಳೆ ಅಗರ್ತಲಾದಿಂದ ಬರೌನಿಗೆ ರಾಣಿ ಕಮಲಪತಿ ಎಕ್ಸ್‌ಪ್ರೆಸ್‌ನಲ್ಲಿ ಹೋಗುತ್ತಿದ್ದಾಗ ಹೆರಿಗೆಯಾಗಿದೆ ಎಂದು ಈಶಾನ್ಯ ಗಡಿನಾಡು ರೈಲ್ವೆ (ಎನ್‌ಎಫ್‌ಆರ್) ವಕ್ತಾರ ಕಪಿಂಜಲ್ ಕಿಶೋರ್ ಶರ್ಮಾ ಹೇಳಿದರು.
“ಪ್ರಯಾಣಿಕರೊಬ್ಬರಿಗೆ ರೈಲಿನೊಳಗೆ ಇದ್ದಕ್ಕಿದ್ದಂತೆ ಹೆರಿಗೆ ನೋವು ಕಾಣಿಸಿಕೊಂಡಿತು. ಮಾಹಿತಿ ಪಡೆದ ನಂತರ, ನಮ್ಮ ಅಧಿಕಾರಿಗಳು ತಕ್ಷಣ ಅಗತ್ಯ ಕ್ರಮಗಳನ್ನು ತೆಗೆದುಕೊಂಡು ಸೋಮವಾರ ಗುವಾಹಟಿ ರೈಲು ನಿಲ್ದಾಣದಲ್ಲಿ ಮಹಿಳೆ ಮತ್ತು ಅವರ ಕುಟುಂಬ ಸದಸ್ಯರೊಂದಿಗೆ ಇಳಿಯುವಂತೆ ಸೂಚಿಸಿದರು” ಎಂದು ಅವರು ಹೇಳಿದರು.
“ರೈಲು ಗುವಾಹಟಿ ರೈಲು ನಿಲ್ದಾಣಕ್ಕೆ ಬಂದ ತಕ್ಷಣ, ರೈಲ್ವೆ ವೈದ್ಯರು ಮತ್ತು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಮಹಿಳಾ ಸಿಬ್ಬಂದಿ ತ್ವರಿತ ಕ್ರಮ ಕೈಗೊಂಡು ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 4 ರಲ್ಲಿ ಮಹಿಳೆಯ ಹೆರಿಗೆಗೆ ಸಹಾಯ ಮಾಡಿದರು” ಎಂದು ಅವರು ಹೇಳಿದರು.
ನಂತರ ಮಹಿಳೆಯನ್ನು ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಆಂಬ್ಯುಲೆನ್ಸ್‌ನಲ್ಲಿ ಗೌಹಾಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಆಕೆಯ ಪತಿ ಮತ್ತು ನವಜಾತ ಶಿಶುವಿನೊಂದಿಗೆ ಸ್ಥಳಾಂತರಿಸಲಾಯಿತು ಎಂದು ಶರ್ಮಾ ಹೇಳಿದರು.
ಇದನ್ನೂ ಓದಿ; ಛತ್ತೀಸ್‌ಗಢ ಎನ್‌ಕೌಂಟರ್: ಕೇಂದ್ರ ಸಮಿತಿ ಸದಸ್ಯ ಜಯರಾಮ್ ಸೇರಿದಂತೆ 16 ಜನ ಮಾವೋವಾದಿಗಳು ಸಾವು


