ಚುನಾವಣಾ ಆಯುಕ್ತರಾಗಿದ್ದ ಜ್ಞಾನೇಶ್ ಕುಮಾರ್ ಅವರನ್ನು ಮುಂದಿನ ಮುಖ್ಯ ಚುನಾವಣಾ ಆಯುಕ್ತರನ್ನಾಗಿ ಸೋಮವಾರ (ಫೆಬ್ರವರಿ 17, 2025) ನೇಮಿಸಲಾಗಿದೆ ಎಂದು ಕಾನೂನು ಸಚಿವಾಲಯ ತಿಳಿಸಿದೆ.
ಚುನಾವಣಾ ಆಯುಕ್ತರ (ಇಸಿ) ನೇಮಕ ಸಮಿತಿಯಿಂದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನು ಹೊರಗಿಡುವ ಹೊಸ ಕಾನೂನು ಜಾರಿಯಾದ ಬಳಿಕ ನೇಮಕಗೊಂಡ ಮೊದಲ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್.
ಇವರ ಅಧಿಕಾರಾವಧಿ ಜನವರಿ 26, 2029ರವರೆಗೆ ಇರಲಿದೆ. ಅಂದರೆ, ಚುನಾವಣಾ ಆಯೋಗವು ಮುಂದಿನ ಲೋಕಸಭಾ ಚುನಾವಣಾ ವೇಳಾಪಟ್ಟಿ ಘೋಷಿಸುವ ಕೆಲವು ದಿನಗಳ ಮೊದಲು ಅಧಿಕಾರವಧಿ ಕೊನೆಯಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೂವರು ಸದಸ್ಯರ ಸಮಿತಿಯು ನವದೆಹಲಿಯಲ್ಲಿ ಸಭೆ ನಡೆಸಿದ ನಂತರ ಜ್ಞಾನೇಶ್ ಕುಮಾರ್ ಅವರನ್ನು ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.
ಜ್ಞಾನೇಶ್ ಕುಮಾರ್ ಬುಧವಾರ (ಫೆಬ್ರವರಿ 19, 2025) ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅಂದೇ ಅವರ ನೇಮಕ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ.
“ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಚುನಾವಣಾ ಆಯುಕ್ತರ ನೇಮಕ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ನಿರ್ಧರಿಸುವವರೆಗೆ, ಹೊಸ ಆಯುಕ್ತರನ್ನು ನೇಮಿಸದಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು. ಅದನ್ನು ಲೆಕ್ಕಿಸದೆ ತರಾತುರಿಯಲ್ಲಿ ಆಯುಕ್ತರನ್ನು ನೇಮಿಸಲಾಗಿದೆ. ಇದು ಸಂವಿಧಾನದ ಆಶಯಕ್ಕೆ ವಿರುದ್ದ” ಎಂದು ಕಾಂಗ್ರೆಸ್ ಆರೋಪಿಸಿದೆ.
ಜ್ಞಾನೇಶ್ ಕುಮಾರ್ ಗುರುವಾರ (ಫೆ.20) ನಿವೃತ್ತಯಾಗಲಿರುವ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನಂತರ ನೇಮಕಗೊಂಡಿರುವ ಅತ್ಯಂತ ಹಿರಿಯ ಚುನಾವಣಾ ಆಯುಕ್ತರಾಗಿದ್ದಾರೆ.
ಐಎಎಸ್ ಹುದ್ದೆಯಿಂದ ನಿವೃತ್ತರಾದ ಎರಡು ತಿಂಗಳೊಳಗೆ, ಮಾರ್ಚ್ 14, 2024ರಂದು ಜ್ಞಾನೇಶ್ ಕುಮಾರ್ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಯಿತು. ಅವರು ಮಾರ್ಚ್ 15ರಂದು ಅಧಿಕಾರ ವಹಿಸಿಕೊಂಡರು. ಮರುದಿನವೇ, ಭಾರತದ ಚುನಾವಣಾ ಆಯೋಗವು ಲೋಕಸಭಾ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಿತು.
ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಸಹ ಚುನಾವಣಾ ಆಯುಕ್ತ ಡಾ. ಸುಖ್‌ಬೀರ್ ಸಿಂಗ್ ಸಂಧು ಅವರೊಂದಿಗೆ ಕಳೆದ 11 ತಿಂಗಳಿನಿಂದ ಜ್ಞಾನೇಶ್ ಕುಮಾರ್ ಅವರು ಭಾರತೀಯ ಚುನಾವಣಾ ಆಯೋಗದ ಭಾಗವಾಗಿದ್ದಾರೆ. ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಮೊದಲ ವಿಧಾನಸಭಾ ಚುನಾವಣೆ, 2024ರ ಲೋಕಸಭಾ ಚುನಾವಣೆ ಮತ್ತು ಹರಿಯಾಣ, ಜಾರ್ಖಂಡ್, ಮಹಾರಾಷ್ಟ್ರ ಮತ್ತು ದೆಹಲಿಯ ವಿಧಾನಸಭಾ ಚುನಾವಣೆಗಳನ್ನು ಈ ಅವಧಿಯಲ್ಲಿ ಆಯೋಗ ನಡೆಸಿದೆ.
ಹೊಸ ಮುಖ್ಯ ಚುನಾವಣಾಧಿಕಾರಿ ಜ್ಞಾನೇಶ್ ಕುಮಾರ್ ಅವರ ಅಧಿಕಾರಾವಧಿಯು ಜನವರಿ 26, 2029 ರವರೆಗೆ ಇರುತ್ತದೆ. ಈ ಅವಧಿಯಲ್ಲಿ 20 ವಿಧಾನಸಭಾ ಚುನಾವಣೆಗಳು, 2027ರಲ್ಲಿ ರಾಷ್ಟ್ರಪತಿ ಮತ್ತು ಉಪ ರಾಷ್ಟ್ರಪತಿ ಚುನಾವಣೆಗಳು ನಡೆಯಲಿವೆ. 2029ರ ಲೋಕಸಭಾ ಚುನಾವಣೆಗೆ ಆಯೋಗದ ಸಿದ್ದತೆ ಮಾಡಿಕೊಳ್ಳಲಿದೆ.
1988ರ ಬ್ಯಾಚ್‌ನ ಕೇರಳ ಕೇಡರ್‌ನ ಮಾಜಿ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿಯಾಗಿರುವ ಜ್ಞಾನೇಶ್ ಕುಮಾರ್, ಜನವರಿ 31, 2024 ರಂದು ಕೇಂದ್ರ ಸಹಕಾರ ಕಾರ್ಯದರ್ಶಿಯಾಗಿದ್ದಾಗ ನಿವೃತ್ತರಾದರು. ಮಾರ್ಚ್ 14, 2024 ರಂದು ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಯಿತು.
ಕೇಂದ್ರ ಗೃಹ ಸಚಿವಾಲಯದಲ್ಲಿ ಸೇವೆ ಸಲ್ಲಿಸಿದ ಅವಧಿಯಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ನಿರ್ಧಾರಗಳನ್ನು ಅನುಷ್ಠಾನಗೊಳಿಸುವಲ್ಲಿ ಮತ್ತು ಆಯೋಧ್ಯೆಯ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸ್ಥಾಪನೆಯಲ್ಲಿ ಜ್ಞಾನೇಶ್ ಕುಮಾರ್ ಪ್ರಮುಖ ಪಾತ್ರ ವಹಿಸಿದ್ದರು.
ಶಿಕ್ಷಣ ಮತ್ತು ವೃತ್ತಿಜೀವನ
ಕಾನ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಯಿಂದ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಮುಗಿಸಿದ ನಂತರ, ಜ್ಞಾನೇಶ್ ಕುಮಾರ್ ಐಸಿಎಫ್‌ಎಐಯಲ್ಲಿ ವ್ಯವಹಾರ ಹಣಕಾಸು ಮತ್ತು ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದ ಹೆಚ್‌ಐಐಡಿಯಲ್ಲಿ ಭಾರತ ಮತ್ತು ಪರಿಸರ ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದ್ದಾರೆ.
ಕೇರಳ ಸರ್ಕಾರದಲ್ಲಿ ಎರ್ನಾಕುಲಂನ ಸಹಾಯಕ ಕಲೆಕ್ಟರ್, ಅಡೂರ್‌ನ ಉಪ-ಕಲೆಕ್ಟರ್, ಕೇರಳ ರಾಜ್ಯ ಎಸ್‌ಸಿ/ಎಸ್‌ಟಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ, ಕೊಚ್ಚಿನ್ ಕಾರ್ಪೊರೇಶನ್‌ನ ಆಯುಕ್ತರಾಗಿ ಮತ್ತು ಇತರ ಹುದ್ದೆಗಳಲ್ಲಿ ಜ್ಞಾನೇಶ್ ಕುಮಾರ್ ಕೆಲಸ ಮಾಡಿದ್ದಾರೆ.
ಕೇರಳ ಸರ್ಕಾರದ ಕಾರ್ಯದರ್ಶಿಯಾಗಿ, ಜ್ಞಾನೇಶ್ ಕುಮಾರ್ ಹಣಕಾಸು ಸಂಪನ್ಮೂಲಗಳು, ತ್ವರಿತ ಯೋಜನೆಗಳು ಮತ್ತು ಲೋಕೋಪಯೋಗಿ ಇಲಾಖೆಯಂತಹ ವೈವಿಧ್ಯಮಯ ಇಲಾಖೆಗಳನ್ನು ನಿರ್ವಹಿಸಿದ್ದಾರೆ.
ಭಾರತ ಸರ್ಕಾರದಲ್ಲಿ, ಅವರು ರಕ್ಷಣಾ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿ, ಗೃಹ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿ ಮತ್ತು ಹೆಚ್ಚುವರಿ ಕಾರ್ಯದರ್ಶಿ, ಸಂಸದೀಯ ವ್ಯವಹಾರಗಳ ಖಾತೆ ಸಚಿವಾಲಯದಲ್ಲಿ ಕಾರ್ಯದರ್ಶಿ ಮತ್ತು ಸಹಕಾರ ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ.
ಹೊಸ ಕಾನೂನಿನಡಿ ನೇಮಕವಾದ ಮೊದಲ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್


