ಕಳೆದ ತಿಂಗಳಿನಿಂದ ನನ್ನ ಮಗಳು ನಾಪತ್ತೆಯಾಗಿದ್ದು, ಆಕೆಯನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿ ಡಾ. ಹಾದಿಯಾ (ಅಖಿಲಾ) ಅವರ ತಂದೆ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಕೇರಳ ಹೈಕೋರ್ಟ್ ಇಂದು(ಡಿ.15) ವಜಾಗೊಳಿಸಿದೆ ಎಂದು ಲೈವ್ ಲಾ ವರದಿ ಮಾಡಿದೆ.
ನ್ಯಾಯಮೂರ್ತಿ ಅನು ಶಿವರಾಮನ್ ಮತ್ತು ನ್ಯಾಯಮೂರ್ತಿ ಸಿ.ಪ್ರದೀಪ್ ಕುಮಾರ್ ಅವರನ್ನೊಳಗೊಂಡ ಕೇರಳ ಹೈಕೋರ್ಟ್ ವಿಭಾಗೀಯ ಪೀಠವು, ಹಾದಿಯಾ ಯಾವುದೇ ಅಕ್ರಮ ಬಂಧನದಲ್ಲಿಲ್ಲ. ಆಕೆ ತನ್ನ ಜೀವನವನ್ನು ಮುಕ್ತವಾಗಿ ನಡೆಸುತ್ತಿದ್ದಾರೆ ಎಂದು ಹೇಳಿದ್ದು, ಹೀಗಾಗಿ ಆಕೆಯ ತಂದೆಯ ಹೇಬಿಯಸ್ ಕಾರ್ಪಸ್ ಅರ್ಜಿ ಮುಂದುವರಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.
'Hadiya Living Freely, Not Under Illegal Detention' : Kerala High Court Dismisses Hadiya's Father's Habeas Corpus Petition#Kerala https://t.co/uAL7SwBWLY
— Live Law (@LiveLawIndia) December 15, 2023
ಹಾದಿಯಾ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಹೇಳಿಕೆಯನ್ನು ಆಧರಿಸಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. “ತಾನು ಗಂಡನಿಂದ ವಿಚ್ಛೇದನ ಪಡೆದು ಮತ್ತೆ ಮದುವೆಯಾಗಿದ್ದೇನೆ. ಪ್ರಸ್ತುತ ತಿರುವನಂತಪುರದಲ್ಲಿ ವಾಸಿಸುತ್ತಿದ್ದೇನೆ ಎಂದು ಹಾದಿಯಾ ತಿಳಿಸಿದ್ದಾಗಿ ನ್ಯಾಯಾಲಯ ಹೇಳಿದೆ. ತಾನು ಪೋಷಕರೊಂದಿಗೆ ಸಂಪರ್ಕದಲ್ಲಿದ್ದೇನೆ ಎಂದು ತೋರಿಸಲು ಕರೆ ದಾಖಲೆಗಳ ಪುರಾವೆಯನ್ನು ಹಾದಿಯಾ ಸಲ್ಲಿಸಿದ್ದಾರೆ. ಇದಲ್ಲದೆ, ಆಕೆ ತನ್ನ ಪ್ರಸ್ತುತ ವಿಳಾಸದ ವಿವರ ಮತ್ತು ಸಂಪರ್ಕ ವಿವರಗಳನ್ನು ಕೂಡ ನೀಡಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ.
“ನನ್ನ ಮಗಳು ಹಾದಿಯಾಳನ್ನು ಆಕೆಯ ಪತಿ ಶಫಿನ್ ಜಹಾನ್ ಮತ್ತು ಇತರರು ಅಕ್ರಮವಾಗಿ ಬಂಧಿಸಿಟ್ಟಿದ್ದಾರೆ” ಎಂದು ಆರೋಪಿಸಿ ಹಾದಿಯಾ ತಂದೆ ಅಶೋಕನ್ ದೂರು ನೀಡಿದ್ದರು.
“ಕಳೆದ ಒಂದು ತಿಂಗಳಿನಿಂದ ನನ್ನ ಮಗಳು ಸಂಪರ್ಕಕ್ಕೆ ಸಿಗುತ್ತಿಲ್ಲ. ಆಕೆ ಮಲಪ್ಪುರಂನಲ್ಲಿ ನಡೆಸುತ್ತಿದ್ದ ಹೊಮಿಯೋ ಕ್ಲೀನಿಕ್ ಕೂಡ ಬಾಗಿಲು ಮುಚ್ಚಿದೆ”. ಹಾಗಾಗಿ ಆಕೆಯನ್ನು ಕೋರ್ಟ್ ಮುಂದೆ ಹಾಜರುಪಡಿಸುವಂತೆ ಹೇಬಿಯಸ್ ಕಾರ್ಪಸ್ ರಿಟ್ ಹೊರಡಿಸಲು ಅಶೋಕನ್ ಕೋರಿದ್ದರು.
ಅಶೋಕನ್ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಪ್ರಕರಣ ಸಂಬಂಧ ಪೊಲೀಸರು ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಕೇಳಿತ್ತು.
ಯಾರು ಈ ಹಾದಿಯಾ?
2016ರಲ್ಲಿ ಹೋಮಿಯೋಪಥಿ ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದ ಹಿಂದೂ ಹುಡುಗಿ ಹಾದಿಯಾ(ಅಖಿಲಾ ಅಶೋಕ್), ಶಫೀನ್ ಜಹಾನ್ ಎಂಬಾತನ್ನು ಪ್ರೀತಿಸಿ, ಇಸ್ಲಾಮ್‌ಗೆ ಮತಾಂತರಗೊಂಡು ಮದುವೆಯಾಗಿದ್ದರು. ಹಾದಿಯಾಳ ಪೋಷಕರು ಇದೊಂದು ‘ಲವ್ ಜಿಹಾದ್ ಕೇಸ್’ ಎಂದು ಆರೋಪಿಸಿ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಹಾದಿಯಾಳ ವಿವಾಹವನ್ನು ಅಮಾನ್ಯಗೊಳಿಸಿ ಆಕೆಯನ್ನು ಪೋಷಕರ ಸುಪರ್ದಿಗೆ ಒಪ್ಪಿಸಿತ್ತು.
ಹೈಕೋರ್ಟ್ ಆದೇಶ ಪ್ರಶ್ನಿಸಿ ಹಾದಿಯಾ ಪತಿ ಶಫೀನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ಮೂಲಕ ಈ ಪ್ರಕರಣ ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಹಾದಿಯಾ ಮತ್ತು ಆಕೆಯ ಪತಿಯ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಅವರ ಮದುವೆಯನ್ನು ಊರ್ಜಿತಗೊಳಿಸಿತ್ತು. ಹಾದಿಯಾಗೆ ಆಕೆಯ ಇಚ್ಚೆಯಂತೆ ಬಾಳಬಹುದು ಎಂದಿತ್ತು.
ಪತಿಗೆ ವಿಚ್ಚೇದನ ಕೊಟ್ಟು ಎರಡನೇ ಮದುವೆಯಾದ ಹಾದಿಯಾ
ಕಳೆದ ಕೆಲ ದಿನಗಳ ಹಿಂದೆ ತನ್ನ ಪತಿ ಶಫೀನ್ ಜಹಾನ್‌ಗೆ ವಿಚ್ಚೇದನ ಕೊಟ್ಟು ಹಾದಿಯಾ ಮುಸ್ಲಿಂ ವ್ಯಕ್ತಿಯನ್ನೇ ಎರಡನೇ ಮದುವೆಯಾಗಿದ್ದಾರೆ ಎಂದು ವರದಿಯಾಗಿತ್ತು. ಈ ಬೆನ್ನಲ್ಲೇ ಮಗಳು ನಾಪತ್ತೆಯಾಗಿದ್ದಾಳೆ. ಆಕೆಯನ್ನು ಪತಿ ಶಫೀನ್ ಜಹಾನ್ ಮತ್ತು ಇತರರು ಬಂಧಿಸಿಟ್ಟಿದ್ದಾರೆ ಎಂದು ತಂದೆ ಅಶೋಕನ್ ದೂರು ನೀಡಿದ್ದರು. ಇದೀಗ ನ್ಯಾಯಾಲಯಕ್ಕೆ ಹಾದಿಯಾ ಕೊಟ್ಟ ಹೇಳಿಕೆಯಲ್ಲಿ ಆಕೆ ಮೊದಲ ಪತಿಗೆ ವಿಚ್ಚೇದನ ಕೊಟ್ಟು ಎರಡನೇ ಮದುವೆಯಾಗಿರುವುದು ಖಚಿತಪಡಿಸಿದ್ದಾರೆ.
ಇದನ್ನೂ ಓದಿ: 24 ಗಂಟೆಯೊಳಗೆ ರೋಹಿಣಿ ಸಿಂಧೂರಿ ವಿರುದ್ಧದ ಪೋಸ್ಟ್ ಡಿಲೀಟ್ ಮಾಡುವಂತೆ ಡಿ. ರೂಪಾಗೆ ಸುಪ್ರೀಂ ಸೂಚನೆ


