ಹೈಟಿ ದೇಶದ ಸಿಟಿ ಸೋಲೈಲ್ ಪ್ರದೇಶದ ಗ್ಯಾಂಗ್‌ಸ್ಟರ್ ಒಬ್ಬ ತನ್ನ ಮಗು ಅಸ್ವಸ್ಥನಾಗಲು ಕೊಳಗೇರಿ ಪ್ರದೇಶದ ಜನರು ವಾಮಾಚಾರ ಮಾಡಿದ್ದಾರೆ ಎಂದು ಆರೋಪಿಸಿ ನಡೆಸಿದ ಹತ್ಯಾಕಾಂಡದಲ್ಲಿ ಸುಮಾರು 200 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ವಾರ್ಫ್ ಜೆರೆಮಿ ಗ್ಯಾಂಗ್‌ನ ನಾಯಕ ಮೊನೆಲ್ ಮಿಕಾನೊ ಫೆಲಿಕ್ಸ್ ತನ್ನ ಮಗು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಂತೆ ಕೊಳಗೇರಿ ಪ್ರದೇಶದ ಜನ ವಾಮಾಚಾರದ ಮೂಲಕ ಮಗುವಿಗೆ ಹಾನಿ ಮಾಡಲು ಯತ್ನಿಸಿದ್ದಾರೆ ಎಂದು ಹತ್ಯಾಕಾಂಡಕ್ಕೆ ಆದೇಶಿಸಿದ್ದಾನೆ. ಆ ಬಳಿಕ ಆತನ ತಂಡ ಸುಮಾರು 110 ಜನರನ್ನು ಹತ್ಯೆ ಮಾಡಿದೆ ಎಂದು ನಾಗರಿಕ ಸಂಘಟನೆ ಶಾಂತಿ ಮತ್ತು ಅಭಿವೃದ್ಧಿ ಸಮಿತಿ (ಸಿಪಿಡಿ) ತಿಳಿಸಿದೆ.
ಕಳೆದ ಶುಕ್ರವಾರ ಮತ್ತು ಶನಿವಾರ ಗ್ಯಾಂಗ್‌ಸ್ಟರ್ ಗುಂಪು ನಡೆಸಿದ ಹತ್ಯಾಕಾಂಡದಲ್ಲಿ ಬಲಿಯಾದ ಹೆಚ್ಚಿನವರು 60 ವರ್ಷಕ್ಕಿಂತ ಮೇಲ್ಪಟ್ಟವರು. ಇತರರನ್ನು ರಕ್ಷಿಸಲು ಪ್ರಯತ್ನಿಸಿದ ಕೆಲವು ಯುವಕರು ಕೂಡ ಸಂಘರ್ಷದಲ್ಲಿ ಗಾಯಗೊಂಡಿದ್ದಾರೆ ಎಂದು ಸಿಪಿಡಿ ಹೇಳಿದೆ.
ಗ್ಯಾಂಗ್‌ಸ್ಟರ್ ಗುಂಪು 184 ಜನರನ್ನು ಹತ್ಯೆ ಮಾಡಿದೆ ಎಂದು ಯುಎನ್ ಹಕ್ಕುಗಳ ಆಯುಕ್ತ ವೋಲ್ಕರ್ ಟರ್ಕ್ ಹೇಳಿದ್ದಾರೆ. ಈ ಘಟನೆ ಈ ವರ್ಷದಲ್ಲಿ ಹತ್ಯೆಯಾದವರ ಸಂಖ್ಯೆಯನ್ನು 5 ಸಾವಿರಕ್ಕೆ ಏರಿಸಿದೆ ಎಂದು ತಿಳಿಸಿದ್ದಾರೆ.
ಗ್ಯಾಂಗ್‌ಸ್ಟರ್ ಗುಂಪು ನೂರಕ್ಕೂ ಹೆಚ್ಚು ಜನರನ್ನು ಕಗ್ಗೊಲೆ ಮಾಡಿದೆ. ಅವರ ದೇಹಗಳನ್ನು ವಿರೂಪಗೊಳಿಸಿ ಬೀದಿಯಲ್ಲಿ ಸುಟ್ಟು ಹಾಕಿದೆ ಎಂದು ವಿಶ್ವಾಸಾರ್ಹ ಮೂಲಗಳನ್ನು ಉಲ್ಲೇಖಿಸಿ ದಿ ಗಾರ್ಡಿಯನ್ ವರದಿ ಮಾಡಿದೆ.
ಹೈಟಿಯು ದಶಕಗಳ ಅಸ್ಥಿರತೆಯಿಂದ ಬಳಲುತ್ತಿದೆ. ಕಳೆದ ಫೆಬ್ರವರಿಯಲ್ಲಿ ಸಶಸ್ತ್ರ ಗುಂಪುಗಳು ಪ್ರಧಾನಿ ಏರಿಯಲ್ ಹೆನ್ರಿಯನ್ನು ಪದಚ್ಯುತಗೊಳಿಸಲು ರಾಜಧಾನಿ ಪೋರ್ಟ್-ಔ-ಪ್ರಿನ್ಸ್‌ನಲ್ಲಿ ಸಂಘಟಿತ ದಾಳಿಗಳನ್ನು ಪ್ರಾರಂಭಿಸಿದಾಗ ಪರಿಸ್ಥಿತಿಯು ಉಲ್ಬಣಗೊಂಡಿತ್ತು.
ಪೋರ್ಟ್-ಔ-ಪ್ರಿನ್ಸ್‌ನಲ್ಲಿ ಯುಎಸ್ ಮತ್ತು ಯುಎನ್ ಬೆಂಬಲಿತ ಕೀನ್ಯಾ ನೇತೃತ್ವದ ಪೊಲೀಸ್ ಪಡೆ ಕಾರ್ಯಾಚರಣೆ ನಡೆಸುತ್ತಿದ್ದರೂ, ಸಶಸ್ತ್ರ ಗುಂಪು ನಗರದ ಶೇ.80ರಷ್ಟು ನಿಯಂತ್ರಣ ಹೊಂದಿದೆ. ಇದರಿಂದ ಸಂಘರ್ಷ, ಹಿಂಸಾಚಾರ ನಡೆಯುತ್ತಲೇ ಇರುತ್ತದೆ.
ವಿಶ್ವಸಂಸ್ಥೆಯ ಇಂಟರ್ನ್ಯಾಷನಲ್ ಆರ್ಗನೈಸೇಶನ್ ಫಾರ್ ಮೈಗ್ರೇಷನ್ ಅಕ್ಟೋಬರ್‌ನಲ್ಲಿ ನೀಡಿದ ಅಂಕಿ ಅಂಶಗಳ ಪ್ರಕಾರ, ಹೈಟಿಯಲ್ಲಿ 700,000 ಕ್ಕಿಂತ ಹೆಚ್ಚು ಜನರು ಆಂತರಿಕವಾಗಿ ಸ್ಥಳಾಂತರಗೊಂಡಿದ್ದಾರೆ. ಅವರಲ್ಲಿ ಅರ್ಧದಷ್ಟು ಮಕ್ಕಳು ಇದ್ದಾರೆ.
ಇದನ್ನೂ ಓದಿ : ಸಿರಿಯಾ | ಮಧ್ಯಂತರ ಸರ್ಕಾರ ರಚನೆಗೆ ಕಸರತ್ತು : ಮಾಸ್ಕೋದಲ್ಲಿ ಆಶ್ರಯ ಪಡೆದ ಪದಚ್ಯುತ ಅಧ್ಯಕ್ಷ ಅಸದ್


