ಹಂಪಿಯ ಕನ್ನಡ ವಿಶ್ವವಿದ್ಯಾನಿಲಯವೀಗ ಅಲ್ಲಿನ ಅಕ್ರಮ ಆಡಳಿತದ ಕಾರಣಕ್ಕಾಗಿ ಭಾರಿ ಸುದ್ದಿಯಲ್ಲಿದೆ. ಅಲ್ಲಿನ ಕುಲಪತಿ, ಕುಲಸಚಿವ ಮತ್ತು ಇತರ ಅಧಿಕಾರಿಗಳ ಲಂಚಗುಳಿತನ ಮತ್ತು ಉಡಾಫೆ ಆಡಳಿತದ ವಿರುದ್ಧ ಆರೋಪಿಸಿ, ಅಲ್ಲಿನ ಬೋಧಕ ಮತ್ತು ಬೋಧಕೇತರ ನೌಕರರು ತಿರುಗಿಬಿದ್ದಿದ್ದಾರೆ. ಇದರ ಪರಿಣಾಮವಾಗಿ ನಿತ್ಯವೂ ಒಂದಿಲ್ಲೊಂದು ಹಗರಣದ ಆರೋಪ ವಿವಿಯ ಒಳಾವರಣದಿಂದ ಹೊರಬರುತ್ತಲೆ ಇವೆ. ನಾಡಿಗೆ ಮಾದರಿಯಂತಿದ್ದ ಕನ್ನಡ ವಿಶ್ವವಿದ್ಯಾನಿಲಯ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ದುರಾಚಾರಗಳ ಕೇಂದ್ರವಾಗಿ ಮಾರ್ಪಟ್ಟಿರುವಂತಿದೆ. ಶೈಕ್ಷಣಿಕ ಚಟುವಟಿಕೆಗಳಿಂದ ಸದಾ ಸುದ್ದಿಯಲ್ಲಿದ್ದ ಕನ್ನಡ ವಿಶ್ವವಿದ್ಯಾನಿಲಯವೀಗ ಗುಮಾನಿ ಮತ್ತು ಹುನ್ನಾರಗಳಿಂದ ಹಾಳುಸುರಿಯುತ್ತಿದೆ.
ಕನ್ನಡ ವಿಶ್ವವಿದ್ಯಾನಿಲಯ ರೂಪುಗೊಂಡಿದ್ದರ ಹಿಂದೆ ಉದಾತ್ತವಾದ ಉದ್ದೇಶವಿತ್ತು. ನಾಡಿಗಷ್ಟೇ ಅಲ್ಲ, ದೇಶದಲ್ಲಿಯೇ ಇದೊಂದು ವಿಶಿಷ್ಟ ವಿಶ್ವವಿದ್ಯಾನಿಲಯವಾಗಬೇಕೆಂಬ ಕನಸು, ನಿರೀಕ್ಷೆಗಳಿದ್ದವು. ಕನ್ನಡ ಪ್ರಜ್ಞೆಯನ್ನು ವಿಸ್ತರಿಸುವ ಸಲುವಾಗಿ ಸಂಶೋಧನಾ ವಿದ್ಯಾರ್ಥಿಗಳೊಡಗೂಡಿ ಅಕಾಡೆಮಿಕ್ ವಿದ್ವಾಂಸರು ಅನೇಕ ಚಟುವಟಿಕೆಗಳನ್ನು ನಡೆಸುತ್ತಾ ಬರುತ್ತಿದ್ದರು. ಮೈಸೂರು ವಿಶ್ವವಿದ್ಯಾನಿಲಯವನ್ನು ಬಿಟ್ಟರೆ ಪ್ರಕಟಣೆಯಲ್ಲಿ ಒಂದು ಕೈ ಹೆಚ್ಚಾಗಿಯೇ ಕನ್ನಡ ವಿಶ್ವವಿದ್ಯಾನಿಲಯವು ಗಮನಾರ್ಹ ಸಾಧನೆ ಮಾಡಿದ್ದು ಸುಳ್ಳಲ್ಲ. ಇದಕ್ಕೆ ಪೂರಕವೆಂಬಂತೆ ಅಲ್ಲಿನ ಪ್ರತಿಭಾ ಸಂಪನ್ನ ಅಧ್ಯಾಪಕ ವರ್ಗ ಮತ್ತು ಇವೆಲ್ಲವನ್ನೂ ಅರ್ಥಮಾಡಿಕೊಂಡಂತೆ ಅಲ್ಲಿಗೆ ನೇಮಕವಾಗುತ್ತಿದ್ದ ಕುಲಪತಿಗಳ ಆಡಳಿತ ಶ್ರದ್ಧೆಗಳಿಂದಾಗಿ ಮಹತ್ತರ ಸಾಧನೆಗಳಿಗೆ ವಿವಿ ಕಾರಣವಾಗಿತ್ತು.

ಮೊದಲು ಕುಲಪತಿಗಳಾದ ಚಂದ್ರಶೇಖರ್ ಕಂಬಾರರಿಂದ ಶುರುವಾದ ಯಶಸ್ವಿ ಅಭಿಯಾನ ದಿ|| ಎಂಎಂ ಕಲ್ಬುರ್ಗಿಯವರ ಕಾಲಕ್ಕೆ ಉಚ್ಚಾಯ ಸ್ಥಿತಿಯನ್ನುಕಂಡಿದ್ದು ಗಮನಾರ್ಹ. ನಂತರ ಲಕ್ಕಪ್ಪಗೌಡ ಮತ್ತು ವಿವೇಕ ರೈ ಅವರ ಕಾಲದಲ್ಲಿ ಕುಂಟುತ್ತಾ ಸಾಗಿದ ವಿಶ್ವವಿದ್ಯಾನಿಲಯವು
ಮುರಿಗೆಪ್ಪನವರ ಕಾಲಕ್ಕಾಗಲೇ ಅವನತಿಯತ್ತ ಸಾಗಲಾರಂಭಿಸಿತ್ತು. ಬೋರಲಿಂಗಯ್ಯ ಮತ್ತು ಮಲ್ಲಿಕಾ ಘಂಟಿಯವರು ಕುಲಪತಿಗಳಾಗಿದ್ದ ಅವಧಿಯಲ್ಲಿ ವಿಶ್ವವಿದ್ಯಾನಿಲಯ ಮತ್ತೆ ಚೇತರಿಸಿಕೊಳ್ಳಬಹುದೆಂಬ ಬಲವಾದ ನಿರೀಕ್ಷೆಗಳು ಠುಸ್ ಆದವು. ಯಾವಾಗ ಸ.ಚಿ ರಮೇಶ್ ಅವರು ಕನ್ನಡ ವಿಶ್ವವಿದ್ಯಾನಿಲಯಕ್ಕೆ ಉಪಕುಲಪತಿಯಾಗಿ ನೇಮಕವಾದರೋ ಅಲ್ಲಿಂದ ಒಂದೊಂದೆ ಅಪಸವ್ಯಗಳು ಶುರುವಿಟ್ಟುಕೊಂಡವು. ಅದೇ ವಿವಿಯಲ್ಲಿ ಡಾಕ್ಟರೇಟ್ ಪಡೆದುಕೊಂಡಿದ್ದ ಸ ಚಿ ರಮೇಶ್‌ರವರಾದರೂ ವಿಶ್ವವಿದ್ಯಾನಿಲಯವನ್ನು ಸರಿಯಾದ ದಾರಿಯತ್ತ ಕೊಂಡೊಯ್ಯಬಹುದೆಂಬ ಸಣ್ಣದೊಂದು ನಿರೀಕ್ಷೆ ಇತ್ತು. ಆದರೆ ಅಲ್ಪಕಾಲದಲ್ಲೇ ಆ ನಿರೀಕ್ಷೆ ಮಣ್ಣುಪಾಲಾಯಿತು. ಇದು ಮಾತ್ರವಲ್ಲದೆ ಸ.ಚಿ. ರಮೇಶ್‌ರವರ ಕಾಲದಲ್ಲಿ ವಿಶ್ವವಿದ್ಯಾನಿಲಯವು ನೈತಿಕವಾಗಿ ಕುಸಿದು ರಸಾತಳವನ್ನು ತಲುಪಿದೆ. ಸ.ಚಿ. ರಮೇಶ್ ಅವರು ವಿವಿಯ ಪ್ರತಿಭಾವಂತರನ್ನು ನಿರ್ಲಕ್ಷಿಸಿ ಕೆಲ ಅಪ್ರಯೋಜಕರ ಜೊತೆಗೂಡಿಸಿ ಒಂದು ಅಸಡ್ಡಾಳ ಸಿಂಡಿಕೇಟನ್ನು ಸೃಷ್ಟಿಮಾಡಿಕೊಂಡರು. ಸೃಷ್ಟಿಸಿಕೊಂಡ ಸಿಂಡಿಕೇಟನ್ನು ಚಾಣಾಕ್ಷತನದಿಂದ ಬಳಸುತ್ತಾ ಈಗ ಭ್ರಷ್ಟಾಚಾರಕ್ಕಿಳಿದಿದ್ದಾರೆ ಎಂಬ ಆರೋಪ ಎದ್ದಿದೆ. ಪ್ರಶ್ನಿಸುವವರ, ಪ್ರತಿಭಟಿಸುವವರ ವಿರುದ್ಧ ಸೇಡಿನ, ವರ್ಗಾವಣೆಯಂತ ಶಿಕ್ಷೆಯ ಕ್ರಮಕ್ಕೆ ಮುಂದಾಗಿದ್ದಾರೆ ಎಂಬ ಅಳಲು ಎಲ್ಲೆಡೆಯಿದೆ. ಕಳೆದ ಎರಡು ಅವಧಿಯಲ್ಲಿ ನ್ಯಾಕ್ ಸಮಿತಿಯಿಂದ ‘o’ ಶ್ರೇಯಾಂಕ ಪಡೆದುಕೊಂಡಿದ್ದ ವಿಶ್ವವಿಶ್ವವಿದ್ಯಾನಿಲಯವು ಈ ಶೈಕ್ಷಣಿಕ ಸಾಲಿನಲ್ಲಿ ‘:’ ಶ್ರೇಯಾಂಕ ಪಡೆದುಕೊಂಡಿದೆ. ವಿಶ್ವವಿದ್ಯಾನಿಲಯದ ಈ ಅವನತಿಗೆ ಕಾರಣಗಳೇನು? ಕೇವಲ ಆರ್ಥಿಕ ಭ್ರಷ್ಟಾಚಾರವೇ? ಅಥವಾ ಬೋಧಕ ಸಿಬ್ಬಂದಿಯ ಮೈಗಳ್ಳತನವೇ? ಕುಲಪತಿಯಾದವರ ಅದಕ್ಷತೆಯೇ? ಕುಲಪತಿಗಳ ಆಯ್ಕೆಯ ಸಂದರ್ಭದಲ್ಲಿ ಕೆಲಸ ಮಾಡುವ ಹಣದ ಒಳ ಹರಿವೆ ಅಥವಾ ಜಾತಿಪ್ರೇಮವೇ? ಎಂಬ ಪ್ರಶ್ನೆಗಳು ಎದುರಾಗುತ್ತವೆ. ಈ ಸಂಬಂಧ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ವಿಶ್ವವಿದ್ಯಾನಿಲಯದ ಹಲವು ವ್ಯಕ್ತಿಗಳನ್ನು ಖುದ್ಧಾಗಿ ಭೇಟಿ ಮಾಡಿ ಮಾಹಿತಿ ಸಂಗ್ರಹಿಸಲಾಯಿತು.
ಅವಸರದ ನೇಮಕಾತಿಗಳ ಹಿಂದಿನ ಗುಟ್ಟುಗಳೇನು?
ಚಂದ್ರಶೇಖರ್ ಕಂಬಾರ ಮತ್ತು ಕಲ್ಬುರ್ಗಿಯವರ ಅವಧಿಯಲ್ಲಿ ನಡೆದ ಶೈಕ್ಷಣಿಕ ಯೋಜನೆಗಳು ಮತ್ತು ಪ್ರಕಟಣೆಗಳು ಗುಣಮಟ್ಟದಲ್ಲಿ ಯೋಗ್ಯವಾಗಿದ್ದವು. ಈ ಇಬ್ಬರು ಮಹನೀಯರು ವೈಯಕ್ತಿಕವಾಗಿ ಮಾಡಿದ್ದ ಸಾಧನೆಗಳಿಂದಾಗಿ ಅಲ್ಲಿನ ಅಧ್ಯಾಪಕರ ಮೇಲೆ ಸಕಾರಾತ್ಮಕ ಹಿಡಿತ ಸಾಧಿಸಿದ್ದ ಕಾರಣಕ್ಕಾಗಿ ಅಲ್ಲಿ ಅನೇಕ ಮಹತ್ವದ ಕೃತಿಗಳು ಪ್ರಕಟಗೊಂಡವು. ಮುಖ್ಯವಾಗಿ ಶೈಕ್ಷಣಿಕ ವಲಯಕ್ಕೆ ಬೇಕಾದ ಆಕರ ಗ್ರಂಥಗಳು ಪ್ರಕಟವಾದವು. ವಿವಿಯಲ್ಲಿ ಆರ್ಥಿಕ ಶಿಸ್ತು ಇತ್ತಲ್ಲದೆ, ಅಧ್ಯಾಪಕರು ಅರ್ಪಣಾ ಮನೋಭಾವದಿಂದ ಕೆಲಸ ನಿರ್ವಹಿಸುತ್ತಿದ್ದರು. ಈ ಪರಂಪರೆ ಸ್ವಲ್ಪ ಹೆಚ್ಚೂ ಕಡಿಮೆ ವಿವೇಕ ರೈ ಮತ್ತು ಲಕ್ಕಪ್ಪಗೌಡರು ಕುಲಪತಿಗಳಾಗಿದ್ದ ಅವಧಿಯಲ್ಲಿಯೂ ಮುಂದುವರೆಯಿತು. ಆದರೆ ಮುರಿಗೆಪ್ಪನವರು ಕುಲಪತಿಗಳಾಗಿ ಬಂದ ಮೇಲೆ ಇಲ್ಲಿ ಒಂದು ಬಗೆಯ ಉದಾಸೀನ ಮತ್ತು ಆಲಸ್ಯಗಳು ಎಲ್ಲರಲ್ಲೂ ಮೈಗೂಡಲಾರಂಭಿಸಿದವು. ಮೃದು ಸ್ವಭಾವದ ಮುರಿಗೆಪ್ಪನವರು ಎಲ್ಲರಿಗೂ ಒಳ್ಳೆಯವರಾಗಿದ್ದುಕೊಂಡೇ ತಮ್ಮ ಅವಧಿ ಮುಗಿಸಿ ಹೊರಟುಹೋದರು. ಮುರಿಗೆಪ್ಪನವರ ಸಂಪನ್ನತೆ, ಅದಕ್ಷತೆಗಳು ಹೇಗಿದ್ದವೆಂದರೆ, ಅವರ ಅವಧಿಯಲ್ಲಿ ಹೆಚ್ಚುಕಡಿಮೆ ಅಧ್ಯಾಪಕರ ಯೋಜನೆಗಳು ನಿಂತೇಹೋದವು. ಅವರಿಗೆ ಕನ್ನಡ ವಿವಿಯ ಪ್ರತಿಭಾವಂತ ಅಧ್ಯಾಪಕರ ಮೇಲಾಗಲಿ, ಬೋಧಕೇತರ ಸಿಬ್ಬಂದಿಯವರ ಮೇಲಾಗಲಿ ಹಿಡಿತ ಸಾಧ್ಯವಾಗಲೇ ಇಲ್ಲ. ಆನಂತರ ಬಂದ, ಅಲ್ಲಿಯೇ ಪ್ರಾಧ್ಯಾಪಕರಾಗಿದ್ದ ಬೋರಲಿಂಗಯ್ಯನವರು ಕಂಬಾರರ ಕಾಲದ ವೈಭವವನ್ನು ಮರಳಿ ಸ್ಥಾಪಿಸುತ್ತಾರೆ ಎಂಬ ಭರವಸೆಗಳಿದ್ದವು. ಆದರೆ ಅವರೂ ಮೂರು ವರ್ಷಗಳ ಕಾಲ ಅದೇ ಉದಾಸೀನ ರೋಗದಿಂದ ಗುಣಮುಖರಾಗದೇ ಇಲ್ಲಿಂದ ಹೊರಟು ಹೋಗಿದ್ದು ಇತಿಹಾಸ. ನಂತರ ಬಂದವರು ಎಡಪಂಥೀಯ ಹಿನ್ನೆಲೆಯ ಲೇಖಕಿ ಮಲ್ಲಿಕಾಘಂಟಿಯವರು. ಇವರು ಕುಲಪತಿಯಾಗಿ ಅಧಿಕಾರ ವಹಿಸಿಕೊಂಡಾಗ ಕಳೆದುಹೋಗಿದ್ದ ಆಡಳಿತದ ಬಿಗಿ ಮರುಸ್ಥಾಪನೆಯಾಗಬಹುದೆಂಬ ಭರವಸೆಯಿತ್ತು. ಅಲ್ಲದೆ ಕಲ್ಬುರ್ಗಿಯವರ ಕಾಲದ ಪರಂಪರೆಯನ್ನು ಮುಂದುವರೆಸುತ್ತಾರೆಂದು ನಂಬಲಾಗಿತ್ತು.
ಆದರೆ, ಪತನದ ಹಾದಿಯಲ್ಲಿದ್ದ ವಿಶ್ವವಿದ್ಯಾನಿಲಯವನ್ನು ಮೇಲೆತ್ತಲು ಅವರಿಗೆ ಸಾಧ್ಯವಾಗಲಿಲ್ಲ. ಸೋಜಿಗವೆಂದರೆ ಮಲ್ಲಿಕಾ ಘಂಟಿಯವರ ಅವಧಿಯಲ್ಲಿಯೇ ಇಂದಿನ ಬ್ರಹ್ಮಾಂಡ ಭ್ರಷ್ಟಾಚಾರದ ಬೀಜವು ಅಡಗಿದ್ದವು ಎಂದು ಅಲ್ಲಿನ ಸಿಬ್ಬಂದಿ ಯಾವ ಮುಜುಗರಗಳಿಲ್ಲದೆ ಮಾತನಾಡಿಕೊಳ್ಳುವಂತಾಗಿದೆ. ಬೀದಿ ಹೋರಾಟಗಳಿಂದ ಶುರುವಾಗಿ ಕನ್ನಡ ವಿವಿಯ ಕುಲಪತಿಯ ಹುದ್ದೆಗೇರಿದ ಮಲ್ಲಿಕಾ ಘಂಟಿಯವರು ಒಬ್ಬ ಕುಲಪತಿಯಾಗಿ ತಮ್ಮ ಕೆಲಸವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಗಟ್ಟಿಗಿತ್ತಿಯಂತಿದ್ದ ಮೇಡಮ್ ಮಲ್ಲಿಕಾ ಘಂಟಿಯವರು ಪ್ರಾಧ್ಯಾಪಕರ ಅಥವಾ ಸಿಬ್ಬಂದಿ ನೇಮಕಾತಿಯಂತ ವಿಷಯಗಳಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವಲ್ಲಿ ವಿಫಲರಾದರು ಎಂದು ವಿವಿಯಲ್ಲಿರುವ ಅವರ ವಿರೋಧಿಗಳ ಮತ್ತು ಸ.ಚಿ.ರಮೇಶ್ ಪರವಾಗಿರುವ ಗುಂಪೊಂದು ಮಾತಾಡಿಕೊಳ್ಳುತ್ತಿದೆ. ಮಲ್ಲಿಕಾ ಘಂಟಿಯವರು ತಮಗೆ ಬೇಕಾದವರನ್ನು ನೇಮಿಸಿಕೊಳ್ಳುವ ಸಲುವಾಗಿ ಪಕ್ಷಪಾತಿಯಾಗಿದ್ದರು. ತನ್ನ ಸುತ್ತ ಭ್ರಷ್ಟ ನೌಕರವರ್ಗವನ್ನು ಕಟ್ಟಿಕೊಂಡು ಅವರೂ ವಿಶ್ವವಿದ್ಯಾನಿಲಯದ ಅಧೋಗತಿಗೆ ಕಾರಣರಾಗಿದ್ದಾರೆ ಎಂದು ಇವರು ಆರೋಪಿಸುತ್ತಾರೆ.
ಕಣ್ಣುಮುಚ್ಚಿಕೊಂಡು ಹಾಲು ಕುಡಿಯುತ್ತಿರುವ ಬೆಕ್ಕುಗಳು
ಮಲ್ಲಿಕಾ ಘಂಟಿಯವರು ನಿವೃತ್ತರಾಗುವ ಸಂದರ್ಭದಲ್ಲಿ ಸುಮಾರು ಎಂಟು ಜನ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವಾಗ ಯು.ಜಿ.ಸಿ ನಿಯಮಗಳನ್ನು ಮೀರಿದರಾ? ನೇಮಕಾತಿಯ ನೋಟಿಫಿಕೇಷನ್ ನೀಡುವಲ್ಲಿ ಎಡವಿದರಾ? ಮಲ್ಲಿಕಾ ಘಂಟಿಯವರು ಮಾಡಿದ ನೇಮಕಾತಿಯಲ್ಲಿ ಆಗಿದೆ ಎನ್ನಲಾದ ತಪ್ಪುಗಳ ಕಾರಣಕ್ಕಾಗಿ ಅಂದು ನೇಮಕಗೊಂಡ ಅಧ್ಯಾಪಕರ ಸೇವಾಪೂರ್ವ ಅವಧಿ ಘೋಷಣೆ ಇನ್ನು ನಡೆದಿಲ್ಲ ಎನ್ನಲಾಗುತ್ತದೆ. ಆದರೆ ಅಂದು ನೇಮಕವಾದ ಎಂಟು ಜನ ಅಧ್ಯಾಪಕರು, ತಮ್ಮ ಸೇವಾಪೂರ್ವ ಅವಧಿಯನ್ನು ಘೋಷಿಸಲು ಇಂದಿನ ಕುಲಪತಿ ರಮೇಶ್ ಲಂಚದ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಆದರೆ, ಕುಲಪತಿ ಸ.ಚಿ. ರಮೇಶ್ ಅವರು, ಆಗಿನ ಕುಲಸಚಿವರು ಈ ಎಂಟೂ ಜನರಿಗೆ ನೇಮಕಾತಿ ಆದೇಶ ನೀಡುವಾಗ ನೇಮಕಾತಿ ಪತ್ರದಲ್ಲಿ ‘ರಾಜ್ಯಪಾಲರ ಅನುಮತಿಯನ್ನು ನಿರೀಕ್ಷಿಸಿ’ ಎಂಬ ವಾಕ್ಯವನ್ನು ಸೇರಿಸಿದ್ದಾರೆ ಎನ್ನುವ ಕಾರಣ ನೀಡುತ್ತಿದ್ದಾರೆ. ಈ ಕ್ಷಣದವರೆಗೂ ಮಲ್ಲಿಕಾ ಘಂಟಿಯವರ ತರಾತುರಿಯ ನೇಮಕಾತಿಗಳಿಗೆ ರಾಜ್ಯಪಾಲರಿಂದ ಅನುಮತಿ ಸಿಕ್ಕಿಲ್ಲವೆಂಬುದರ ಸತ್ಯಾಸತ್ಯತೆಯು ಗೊತ್ತಾಗಬೇಕಾಗಿದೆ. ಅಕಸ್ಮಾತ್ ನಿಯಮಬಾಹಿರವಾದ ನೇಮಕಾತಿಗಳು ಅಂತ ಗೊತ್ತಾದ ಪಕ್ಷದಲ್ಲಿ ಆ ಎಂಟು ಜನರ ನೇಮಕಾತಿಗಳು ಅನೂರ್ಜಿತಗೊಳ್ಳುವ ಸಾಧ್ಯತೆಗಳಿವೆ. ಇದು ಅಕ್ರಮವೋ ಸಕ್ರಮವೋ ಎಂದು ಸರಿಯಾದ ತನಿಖೆಯಿಂದ ಮಾತ್ರ ತಿಳಿಯಬಲ್ಲದೇನೊ?
ಮಲ್ಲಿಕಾ ಘಂಟಿಯವರು ಕುಲಪತಿಗಳಾಗಿದ್ದಷ್ಟು ದಿನ ವಿವಿಯಲ್ಲಿನ ಪ್ರತಿಭಾವಂತ ಅಧ್ಯಾಪಕರನ್ನು ಸಂಪೂರ್ಣವಾಗಿ ಅಲಕ್ಷಿಸಿ ದಶಮಾನೋತ್ಸವ ಜಾತ್ರೆ ಮಾಡಿ ಹೊರಟುಹೋದರು. ವಂದಿಮಾಗಧರನ್ನು ಅಕ್ಕಪಕ್ಕವಿಟ್ಟುಕೊಂಡು ಮೇಜುವಾನಿ ಮಾಡಿದ್ದು ಬಿಟ್ಟರೆ ಅವರ ಕಾಲದಲ್ಲಿ ವಿಶ್ವವಿದ್ಯಾನಿಲಯದ ಶೈಕ್ಷಣಿಕ ಕಾರ್ಯಕ್ರಮಗಳು ನಿಂತೇಹೋದವು. ಜೊತೆಗೆ ಮಹತ್ವದ ಪ್ರಕಟಣೆಗಳೂ ಆಗದೇ ಇದ್ದುದು ಅತ್ಯಂತ ನೋವಿನ ಸಂಗತಿ.
ಮಲ್ಲಿಕಾ ಘಂಟಿಯವರ ನೇಮಕಾತಿ ಅವಘಡಗಳು, ಅಪರಾವತಾರಗಳ ಪರ್ವ ಮುಗಿಯುತ್ತಿದ್ದಂತೆಯೇ ಕುಲಪತಿಗಳ ಸ್ಥಾನಕ್ಕೆ ಬಂದವರು ಸ ಚಿ ರಮೇಶ್! ಮೂಲತಃ ತೀರ್ಥಹಳ್ಳಿಯವರಾದ ಇವರು ಹಂಪಿ ಕನ್ನಡ ವಿವಿಯ ಜಾನಪದ ವಿಭಾಗದ ಮುಖ್ಯಸ್ಥರೂ, ಸಮಾಜ ವಿಜ್ಞಾನದ ನಿಕಾಯದ ಡೀನ್ ಆಗಿಯು ಕಾರ್ಯನಿರ್ವಹಿಸಿದ್ದಾರೆ. ಅದೇಕೋ ಗೊತ್ತಿಲ್ಲ, ಮೊದಮೊದಲು ಸಂಭಾವಿತರಂತಿದ್ದ ಸ.ಚಿ. ರಮೇಶ್, ಕುಲುಪತಿಗಳೆಂದು ನೇಮಕವಾದಾಗಿನಿಂದ ಅವರ ಖದರ್ರೇ ಬದಲಾಗಿ ಹೋಯ್ತು ಎಂದು ಅಲ್ಲಿನ ಸಿಬ್ಬಂದಿಗಳು ಆಶ್ಚರ್ಯ ವ್ಯಕ್ತಪಡಿಸುತ್ತಾರೆ.

ಪತ್ರಿಕೆಯ ವರದಿಗಾರ ‘ವಿಶ್ವವಿದ್ಯಾನಿಲಯದ ಚಟುವಟಿಕೆಗಳಿಗೆ ಯಾಕೆ ಹಿನ್ನಡೆಯಾಗಿದೆ’ ಎಂದು ಕೆಲ ಅಧ್ಯಾಪಕರನ್ನು ಮಾತನಾಡಿಸಿದಾಗ ಹಲವರು ಒಂದೇ ರೀತಿಯಲ್ಲಿ ಉತ್ತರಿಸಿದ್ದಾರೆ. ಮುಖ್ಯವಾಗಿ ಯೋಜನೆಗಳ ನಿರ್ವಹಣೆಗೆ ವಿವಿಯಿಂದ ಹೆಚ್ಚಿನ ಧನಸಹಾಯ ಸಿಗದೇ ಇರುವುದು. ಮೂರು ವರ್ಷಕ್ಕೊಮ್ಮೆ ಒಬ್ಬರಾದಂತೆ ಒಬ್ಬರು ಬದಲಾಗುವ ವಿಸಿಗಳು ಇಲ್ಲಿನ ಅಧ್ಯಾಪಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅಧಿಕಾರದ ಮದ ನೆತ್ತಿಗೇರಿಸಿಕೊಂಡವರಂತೆ ದರ್ಪ ಪ್ರದರ್ಶಿಸುತ್ತಲೇ ಶೈಕ್ಷಣಿಕ ಚಟುವಟಿಕೆಗಳನ್ನು ಅಲಕ್ಷಿಸುವುದು, ಕಟ್ಟಡ ಕಾಮಗಾರಿ, ಸಾಮಗ್ರಿ ಖರೀದಿ ಮುಂತಾದ ವ್ಯವಹಾರಗಳಲ್ಲೇ ಮುಳುಗಿ ಮುಖ್ಯ ಉದ್ದೇಶಗಳನ್ನೇ ಮರೆಯುವುದು, ಅಧ್ಯಾಪಕರ ಶೈಕ್ಷಣಿಕ ಕಾರ್ಯ ಯೋಜನೆಗಳಿಗೆ ಆದ್ಯತೆ ನೀಡದಿರುವುದು ಇತ್ಯಾದಿ. ಇನ್ನು ಸೃಜನಶೀಲ ಆಯಾಮಕ್ಕೆ ಬಂದರೆ ವಿದ್ವತ್ತು ಮತ್ತು ದೂರದರ್ಶಿತ್ವದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ ಸ ಚಿ ರಮೇಶ್ ಮೂರು ವರ್ಷದಲ್ಲಿ ಒಂದೇ ಒಂದು ಅಧ್ಯಾಪಕರ ಸಭೆಯನ್ನು ನಡೆಸಲು ಉತ್ಸಾಹ ತೋರಿಲ್ಲವೆಂಬುದು ಏನು ತಿಳಿಸುತ್ತದೆ ಎನ್ನುತ್ತಾರೆ ಹಲವು ಪ್ರಾಧ್ಯಾಪಕರು. ಇವೆಲ್ಲಾ ಪರಿಣಾಮವಾಗಿ ವಿಶ್ವವಿದ್ಯಾಲಯದ ಶೈಕ್ಷಣಿಕೆ ಯೋಜನೆಗಳು ನಿಂತೇಹೋಗಿವೆ.
ಕುಲಪತಿ v/s ಮಲ್ಲಿಕಾರ್ಜುನಗೌಡ
ಕನ್ನಡ ವಿಶ್ವವಿದ್ಯಾನಿಲಯದ ಸಾಹಿತ್ಯ ಅಧ್ಯಯನ ವಿಭಾಗದ ಸಹಪ್ರಾಧ್ಯಾಪಕರಾದ ಮಲ್ಲಿಕಾರ್ಜುನ ಗೌಡರಿಗೆ ಸಹಜವಾಗಿ ನೀಡಬೇಕಿದ್ದ ಮುಂಬಡ್ತಿಯನ್ನು ಕುಲಪತಿಗಳು ತಡೆಹಿಡಿದು, ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು ಎಂದು ಮಲ್ಲಿಕಾರ್ಜುನಗೌಡ ಅವರು ಲಿಖಿತ ಪತ್ರದ ಮೂಲಕ ಆರೋಪಿಸಿದ್ದಾರೆ.
ಇನ್ನೊಂದು ಮುಖ್ಯವಾದ ಸಂಗತಿ ಏನೆಂದರೆ, ಇದೇ ಮಲ್ಲಿಕಾರ್ಜುನಗೌಡರು ಇತ್ತೀಚೆಗೆ ಅಸ್ತಿತ್ವಕ್ಕೆ ಬಂದ ನೇಮಕಾತಿ ಪ್ರಕ್ರಿಯೆಯಲ್ಲಿ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥನಾಗಿ ನೇಮಕಾತಿಗಾಗಿ ಸಲ್ಲಿಸಲ್ಪಟ್ಟ ಅರ್ಜಿಗಳನ್ನು ಪರಿಶೀಲಿಸುವ ಸಮಿತಿಯ ಸದಸ್ಯರಲ್ಲಿ ಒಬ್ಬರು. ಮುಂದೆ ಅವರು ಅಧ್ಯಾಪಕರಿಗೆ ನಡೆಯುವ ಮೌಖಿಕ ಸಂದರ್ಶನದಲ್ಲೂ ಮುಖ್ಯ ಪಾತ್ರವಹಿಸುತ್ತಾರೆ. ಈ ಪ್ರಕ್ರಿಯೆಯಲ್ಲಿ ಮಲ್ಲಿಕಾರ್ಜುನಗೌಡರು ನೇಮಕಾತಿ ಬಯಸಿ ಸಲ್ಲಿಸಲ್ಪಟ್ಟ ಅರ್ಜಿಗಳನ್ನು ಪರಿಶೀಲಿಸುವ ಸಭೆಗೆ ಹಾಜರಾಗಿ ನಿಯಮಾನುಸಾರ ರಾಜ್ಯಪಾಲರ ಒಪ್ಪಿಗೆ ಮತ್ತು ಅರ್ಜಿಗಳನ್ನು ಪರಿಶೀಲಿಸಲು ಬೇಕಾದ ಮಾರ್ಗದರ್ಶಿ ಸೂತ್ರಗಳನ್ನು (Guidelines) ಕೇಳಿದ್ದಾರೆ. ಹೀಗೆ ಕೇಳಿದಾಕ್ಷಣ ಅವರಿಗೆ ಕುಲಸಚಿವರು ಶೋಕಾಸ್ ನೋಟಿಸನ್ನು ಜಾರಿ ಮಾಡಿದ್ದಾರೆ. ಇದಲ್ಲದೆ, ಶೋಕಾಸ್ ನೋಟಿಸ್‌ಗೆ ಮಲ್ಲಿಕಾರ್ಜುನಗೌಡ ಉತ್ತರ ನೀಡುವ ಮೊದಲೇ ಅವರನ್ನು ಏಕಾಏಕಿ ಕೂಡಲಸಂಗಮದಲ್ಲಿರುವ ವಿವಿಯ ಕೇಂದ್ರಕ್ಕೆ ವರ್ಗ ಮಾಡಲಾಗಿದೆ. ಈ ಸಂಬಂಧ ಮಲ್ಲಿಕಾರ್ಜುನಗೌಡರವರು ಸೆಡ್ಡು ಹೊಡೆದು ಧಾರವಾಡ ಹೈಕೋರ್ಟ್‌ನಿಂದ ತಮ್ಮ ವರ್ಗಾವಣೆಗೆ ತಡೆಯಾಜ್ಞೆ ತಂದು ವಿಸಿಯವರಿಗೆ
ಕಾನೂನಾತ್ಮಕವಾಗಿಯೇ ಹೋರಾಟ ನಡೆಸುತ್ತಿದ್ದಾರೆ. ತಾವು ಮಲ್ಲಿಕಾರ್ಜುನಗೌಡರಿಂದ ಲಂಚ ಸ್ವೀಕರಿಸಿಲ್ಲ ಎಂದು ವಿಸಿಯವರು ಹೇಳಿದರೂ, ನಿಷ್ಪಕ್ಷಪಾತ ತನಿಖೆಗೆ ಸುಗಮ ದಾರಿಯನ್ನಂತೂ ಸೃಷ್ಟಿಸುತ್ತಿಲ್ಲ.
ನಿವೃತ್ತ ಪ್ರಾಧ್ಯಾಪಕರ ಪೆನ್ಷನ್ ಗೋಳು
ರಮೇಶ್ ಅವರು ವಿಶ್ರಾಂತ ಹಿರಿಯ ಪ್ರಾಧ್ಯಾಪಕರ ನಿವೃತ್ತಿ ವೇತನ ಬಿಡುಗಡೆ ಮಾಡದೇ ಸತಾಯಿಸುತ್ತಿದ್ದಾರೆ ಎಂಬುದು ಮತ್ತೊಂದು ಗಂಭೀರ ಆರೋಪ. ಇವರು ಕುಲಪತಿಯಾಗಿ ವಿವಿಗೆ ಬಂದ ಮೇಲೆ ಚಂದ್ರಪೂಜಾರಿ, ರಹಮತ್ ತರೀಕೆರೆ, ಅಮರೇಶ್ ನುಗಡೋಣಿ, ಸಿ. ಮಹಾದೇವ, ಕೇಶವನ್ ಪ್ರಸಾದ್ ಮುಂತಾದ ಹಿರಿಯ ಪ್ರಾಧ್ಯಾಪಕರು ನಿವೃತ್ತಿ ಹೊಂದಿದ್ದಾರೆ. ವಿಷಾದದ ಸಂಗತಿ ಏನೆಂದರೆ ಇಂದಿಗೂ ಈ ವಿಶ್ರಾಂತ ಬೋಧಕ ಸಿಬ್ಬಂದಿಗೆ ನಿವೃತ್ತಿ ವೇತನದ ಜೊತೆಗೆ, ಅವರಿಗೆ ದೊರೆಯಬೇಕಾದ ಇತರೆ ಯಾವುದೇ ಸೌಲಭ್ಯಗಳು ಸಿಕ್ಕಿಲ್ಲ. ಚಂದ್ರಪೂಜಾರಿ ಅವರಿಗೆ ಪೆನ್‌ಷನ್ ಸಂದಾಯವಾಗುತ್ತಿದ್ದರು, ಇತರೆ ಸೌಲಭ್ಯಗಳನ್ನು ಮಂಜೂರು ಮಾಡುವಂತೆ ಒತ್ತಾಯಿಸಿ ಅವರು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಅಮರೇಶ್ ನುಗಡೋಣಿಯವರಿಗೆ ಪೆನ್‌ಷನ್ ಸಹ ನಿಗದಿ ಮಾಡದೇ ತೊಂದರೆ ಮಾಡಲಾಗುತ್ತಿದೆಯಂತೆ. ನುಗಡೋಣಿಯವರು ನೇಮಕಗೊಳ್ಳುವಾಗ ರಾಷ್ಟ್ರೀಯ ಅರ್ಹತಾ ಪರೀಕ್ಷೆಯನ್ನು ಪಾಸು ಮಾಡಿಲ್ಲ ಎಂದು ಓಬೀರಾಯನ ಕಾಲದ ನೆಪಹೇಳಿಕೊಂಡು ಕಾಲಹರಣ ಮಾಡುತ್ತಿದ್ದಾರೆ ಎನ್ನುತ್ತಿದ್ದಾರೆ ಸಂಕಷ್ಟಕ್ಕೆ ಒಳಗಾಗಿರುವವರು. ಅಮರೇಶ್‌ರವರನ್ನು ಒಳಗೊಂಡಂತೆ ರಾಷ್ಟ್ರೀಯ ಅರ್ಹತಾ ಪರೀಕ್ಷೆ ಪಾಸು ಮಾಡದ ಎಂಟು ಜನರ ನೇಮಕಾತಿಯು ಅಸಿಂಧುವಲ್ಲವೆಂದು ಸರ್ಕಾರದವರು ದಿನಾಂಕ 06.12.2003ರಲ್ಲಿ ವಿವಿಗೆ ಪತ್ರ ಬರೆಯುವ (ಕ್ರ.ಸಂ: ಇಡಿ:10ಕೆವಿವಿ:2002) ಮುಖೇನ ಸ್ಪಷ್ಟಪಡಿಸಿದೆ. ಈ ಸಂಬಂಧದಲ್ಲಿ ಆಡಿಟ್ ಇಲಾಖೆಯವರು ಮಾಡಿದ ಅಕ್ಷೇಪಣೆಯನ್ನು ಸಹ ಸರ್ಕಾರ ಪತ್ರ ಬರೆದು (ಪತ್ರ ಸಂ:ಇಡಿ17ಕೆವಿವಿ:2018/ದಿ:28.10.2020) ಕೈ ಬಿಡಲು ಸೂಚಿಸಿದೆ. ಹೀಗಿದ್ದರೂ ಅಮರೇಶ್ ನುಗಡೋಣಿಗೆ ಐದು ತಿಂಗಳಾದರೂ ನಿವೃತ್ತಿ ವೇತನವನ್ನು ನೀಡದೆ ಎ ಜಿ ಕಚೇರಿಯಿಂದ ಇನ್ನೂ ಅಕ್ಷೇಪಣೆ ಇದೆ ಎಂದು ಕುಂಟು ನೆಪ ಹೇಳುತ್ತಿದ್ದಾರೆ.
ಲಂಚ ಕೊಡಲು ಮಾಂಗಲ್ಯ ಸರ ಒತ್ತೆ ಇಟ್ಟ ಎಂದು ಆರೋಪಿಸಿದ ಮಹಿಳೆ
ಕೊರೊನಾ ಸಾಂಕ್ರಾಮಿಕ ಕಾರಣದಿಂದ ತೀರಿಹೋದ ಸಿಬ್ಬಂದಿಯ ಮನೆಯವರಿಗೆ ಅನುಕಂಪದ ಆಧಾರದ ಮೇಲೆ ದೊರೆಯುವ ನೇಮಕಾತಿಯನ್ನು ಇಲ್ಲಿಯವರೆಗೂ ನೀಡಿರುವುದಿಲ್ಲ. ಜವಾನ ನೌಕರಿಯಲ್ಲಿದ್ದ, ಒಂದು ವರ್ಷದ ಹಿಂದೆ ತೀರಿಕೊಂಡ ಇಲ್ಲಿಗೆ ಸಮೀಪದ ಕಮಲಾಪುರದ ಹನುಮಂತರಾಯರ ಹೆಂಡತಿಯನ್ನು ಇಲ್ಲಿಯವರೆಗೂ ಅನುಕಂಪದ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಕುಲಪತಿಗಳು ಮನಸ್ಸು ಮಾಡದಿರುವುದರ ಹಿಂದೆಯೂ ಲಾಭದ ಹುನ್ನಾರವಿದೆ ಎಂದು ಸಿಬ್ಬಂದಿಗಳೇ ಹೇಳುತ್ತಿದ್ದಾರೆ.
’ಲಂಚ ಕೊಡಲು ನನ್ನ ಬಳಿ ಬಿಡಿಗಾಸು ಇರಲಿಲ್ಲ, ಅದಕ್ಕಾಗಿ ನನ್ನ ಕೊರಳಲ್ಲಿದ್ದ ಮಾಂಗಲ್ಯ ಸರವನ್ನು ಅಡವಿಟ್ಟು ಮೂವತೈದು ಸಾವಿರ ರೂ ಹಣವನ್ನು ತಂದು ಕೊಟ್ಟಿದ್ದೇನೆ. ಆದರೂ ಇಲ್ಲಿಯವರೆಗೂ ನನಗೆ ನೇಮಕಾತಿಯ ಆದೇಶವನ್ನು ನೀಡಿರುವುದಿಲ್ಲ’ ಎಂದು ಕಣ್ಣೀರು ಹಾಕಿದ್ದನ್ನು ವಿವಿಯ ನೌಕರರು ಪತ್ರಿಕೆಗೆ ತಿಳಿಸುತ್ತಾರೆ. ಈ ಆರೋಪದ ಬಗ್ಗೆ ತನಿಖೆಗೆ ಆದೇಶಿಸಲು ಮೀನಾಮೇಶ ಎಣಿಸುತ್ತಿರುವುದೇಕೆ ಎಂಬುದು ನೌಕರರ ಪ್ರಶ್ನೆಯಾಗಿದೆ. ಕೊರೊನಾದಿಂದ ಮೃತಪಟ್ಟ ನದಾಫ್ ಎಂಬ ನೌಕರನ ಹೆಂಡತಿಗೂ ಸಹ ಇದೇ ಗತಿಯಾಗಿದೆ.
ವಿದ್ಯಾರ್ಥಿಗಳ ನಿಲ್ಲದ ಗೋಳು
ಇವರ ಹೆಸರು ದೊಡ್ಡ ಬಸವರಾಜ. ‘ಸರ್ ನಾನು ಮೂರು ವರ್ಷಗಳಿಂದಲೂ ಇಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದೇನೆ. ಹಿ. ಚಿ. ಬೋರಲಿಂಗಯ್ಯನವರು ಇದ್ದಾಗಿನಿಂದಲೂ ಕನ್ನಡ ವಿವಿಯೊಂದಿಗೆ ನಿಕಟ ಸಂಬಂಧವಿರಿಸಿಕೊಂಡವನು. ಮಲ್ಲಿಕಾಘಂಟಿ ಮೇಡಮ್ ಇದ್ದಾಗ ಕೆಲವು ವಿಶೇಷ ಕಾರ್ಯಕ್ರಮಗಳನ್ನು ಮಾಡುತ್ತಿದ್ದರು. ನಾವು ಅವುಗಳಲ್ಲಿ ಭಾಗವಹಿಸುತ್ತಿದ್ದೆವು. ಆದರೆ ಇತ್ತಿಚಿನ ದಿನಗಳಲ್ಲಿ ಸ.ಚಿ. ರಮೇಶ್‌ರವರು ವಿವಿಗೆ ಕುಲಪತಿಗಳಾಗಿ ಬಂದಾಗಿನಿಂದ ಯಾವುದೇ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಸಂಶೋಧನೆಗೆ ಸಂಬಂಧಿಸಿದಂತೆ, ಬೌದ್ಧಿಕ ವಿಕಾಸಕ್ಕೆ ಪೂರಕವಾದ ವಿಚಾರಗಳನ್ನು ತಿಳಿದುಕೊಳ್ಳಬೇಕೆಂಬ ಸಂಶೋಧಾನಾರ್ಥಿಗಳಿಗೆ ಅನುಗುಣವಾದ ಯಾವುದೇ ಚಟುವಟಿಕೆಗಳು ಇಲ್ಲಿ ನಡೆಯುತ್ತಿಲ್ಲ. ಇದರಿಂದ ನಮ್ಮ ಸಂಶೋಧನಾ ಕೆಲಸಗಳಿಗೆ ಎಲ್ಲ ರೀತಿಯಲ್ಲಿ ಹಿನ್ನೆಡೆಯಾಗಿದೆ. ನಮಗೆ ಕ್ಷೇತ್ರಕಾರ್ಯ ಮಾಡಲು, ಆರು ತಿಂಗಳಿಗೊಮ್ಮೆ ಶುಲ್ಕ ಪಾವತಿ ಮಾಡಲು ಹಣ ಇಲ್ಲ. ಇದಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇಲ್ಲಿ ನಮಗಾಗಿ ನಡೆಯುತ್ತಿದ್ದ ತರಬೇತಿ ಶಿಬಿರಗಳನ್ನು ನಡೆಸುತ್ತಿಲ್ಲ. ಇದನ್ನೆಲ್ಲ ಮಾಡಿ ಎಂದು ಕುಲಪತಿಯವರನ್ನು ನಾವು ಒತ್ತಾಯಿಸಿದರೆ ಸರ್ಕಾರದಿಂದ ದುಡ್ಡು ಬಂದಿಲ್ಲ ಅಂತಾರೆ. ಅಸಲಿಗೆ ವಿದ್ಯಾರ್ಥಿಗಳಿಗೆ ಇವರು ಸಹಾಯಧನವನ್ನೇ ಕೊಟ್ಟಿಲ್ಲ. ಸಹಾಯಧನವೆಂದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಹಾಗೂ ದೇವರಾಜು ಅರಸು ಇಲಾಖೆಯಿಂದ ಒ.ಬಿ.ಸಿ ವಿದ್ಯಾರ್ಥಿಗಳಿಗೆ ಸಂಶೋಧನೆಗೆ ಬೇಕಾದಂತಹ ಸಾಮಗ್ರಿಗಳನ್ನು ಪಡೆದುಕೊಳ್ಳಲಿಕ್ಕೆ ವಿದ್ಯಾರ್ಥಿಗಳಿಗೆ ಕೊಡಮಾಡುವ ಹಣವಿದು. ಕ್ಷೇತ್ರಕಾರ್ಯಕ್ಕೆ ಹೋದಾಗ ಆಗುವಂತ ಖರ್ಚುಗಳನ್ನು ನಿಭಾಯಿಸಿಕೊಳ್ಳಲಿಕ್ಕೆ ಮತ್ತು ಮಹಾಪ್ರಬಂಧವನ್ನು ಮುದ್ರಿಸಿ ವಿವಿಗೆ ಸಲ್ಲಿಸಲು ಸರಕಾರವೇ ಸಂಶೋಧನಾ ವಿದ್ಯಾರ್ಥಿಗಳಿಗೆ ಧನಸಹಾಯ ನೀಡುತ್ತದೆ. ವಿಚಿತ್ರವೆಂದರೆ ಲ್ಯಾಪ್‌ಟಾಪ್ ಮತ್ತು ಇನ್ನಿತರೆ ಸಾಮಗ್ರಿಗಳನ್ನು ಕೊಳ್ಳಲು ಟೆಂಡರ್ ಕರೆಯಲಾಗುತ್ತದೆ. ಇದರಲ್ಲೂ ಕೂಡ ವಿವಿಯ ಕಾಣದ ಕೈಗಳು ದುಡ್ಡು ಹೊಡೆಯುತ್ತವೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. 2018-19ನೇ ಸಾಲಿನಲ್ಲಿ ಎಸ್.ಸಿ ಮತ್ತು ಎಸ್ ಟಿ ವಿದ್ಯಾರ್ಥಿಗಳಿಗೆ ಸರಕಾರ ಫೆಲೋಷಿಪ್ ನೀಡಲು ಹಣ ಬಿಡುಗಡೆ ಮಾಡಿತು. ಆ ಹಣದಲ್ಲಿ ವಿದ್ಯಾರ್ಥಿಗಳಿಗೆ ಫೆಲೋಷಿಪ್ ಕೊಟ್ಟುಬಿಟ್ಟಿದ್ದೇವೆ ಅಂತ ವಿಸಿಯವರು ಹೇಳುತ್ತಿದ್ದಾರೆ. ನನಗೆ ತಿಳಿದಿರುವ ಮಾಹಿತಿಯ ಪ್ರಕಾರ ಇದುವರೆಗೂ ಅಂತ ದುಡ್ಡು ವಿದ್ಯಾರ್ಥಿಗಳ ಕೈಸೇರಿಲ್ಲ. ನನ್ನ ಬಳಿ ಈ ಬಗ್ಗೆ ದಾಖಲೆಗಳಿವೆ. ಎಸ್.ಸಿ ಮತ್ತು ಎಸ್.ಟಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರ ಕೊರತೆಯಂತೂ ಇದ್ದೇ ಇದೆ. ಪರ್ಮನೆಂಟ್ ಗೈಡಗಳೇ ಸಿಗುತ್ತಿಲ್ಲವೆಂದು ವಿದ್ಯಾರ್ಥಿಗಳು ಪರದಾಡುತ್ತಿದ್ದರೂ ಈವರೆಗೂ ಕುಲಪತಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ’ ಎಂದು ಹಗರಿಬೊಮ್ಮನಹಳ್ಳಿ ಮೂಲದ ಸಂಶೋಧನಾ ವಿದ್ಯಾರ್ಥಿ ದೊಡ್ಡಬಸವರಾಜ್ ಒಂದೇ ಉಸಿರಿನಲ್ಲಿ ತಮ್ಮ ಅಳಲನ್ನು ತೋಡಿಕೊಂಡರು.
ವಿವಿಯ ಈ ಸ್ಥಿತಿಗೆ ಕಾರಣವಾಗಿರುವ ಕುಲಪತಿ ಮತ್ತು ಅವರ ಬೆಂಬಲಕ್ಕಿರುವ ಆಡಳಿತ ವರ್ಗವನ್ನು ಕೂಡಲೇ ಸಸ್ಪೆಂಡ್ ಮಾಡಿ ವಿಚಾರಣೆಗೆ ಒಳಪಡಿಸಬೇಕು ಎಂಬುದು ಸಂಕಷ್ಟಕ್ಕೆ ಗುರಿಯಾಗಿರುವ ಪ್ರಾಧ್ಯಾಪಕ-ವಿದ್ಯಾರ್ಥಿ ವರ್ಗದ ಕೂಗಾಗಿದೆ.

ವಿ ಬಿ ಮಲ್ಲಪ್ಪ, ಬಳ್ಳಾರಿ
ಜನಪರ ಚಳವಳಿಗಳಲ್ಲಿ ಇದ್ದವರು. ಪ್ರಸ್ತುತ ಬಳ್ಳಾರಿ ನಗರದ ನಿವಾಸಿ. ಇಬ್ಬನಿ ಪತ್ರಿಕೆಯ ಸಂಪಾದಕರು. ಹಲವು ತನಿಖಾ ವರದಿಗಳನ್ನು ಪ್ರಕಟಿಸಿರುವ ಇವರು ಸದ್ಯಕ್ಕೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು.
ಇದನ್ನೂ ಓದಿ: ಭ್ರಷ್ಟಾಚಾರ, ಅವ್ಯವಸ್ಥೆಗಳ ಗೂಡಾಗಿರುವ ಹಂಪಿ ವಿಶ್ವವಿದ್ಯಾಲಯ: ವಿದ್ಯಾರ್ಥಿ, ಪ್ರಾಧ್ಯಾಪಕರ ಆರೋಪ



ಹೇಳೋಕ್ಕೆ ಏನೂ ಇಲ್ಲ, ವ್ಯವಸ್ಥೆ ಗಬ್ಬು ಎದ್ದು ಹೋಗಿದೆ