ಒಂದು ಕಡೆ ಬೆಲೆ ಏರಿಕೆ, ಮತ್ತೊಂದು ಕಡೆ ಸಂವಿಧಾನಿಕ ಚೌಕಟ್ಟು ಮೀರಿದ ರಾಜಕೀಯ ಕೆಸರೆರೆಚಾಟ. ಇದೆಲ್ಲದರ ನಡುವೆ ಹಾವೇರಿ ಜಿಲ್ಲೆಯ ಹಾನಗಲ್, ವಿಜಯಪುರ ಜಿಲ್ಲೆಯ ಸಿಂಧಗಿ ವಿಧಾನಸಭಾ ಕ್ಷೇತ್ರದ ಜನರು ಅಕ್ಟೋಬರ್ 30ರಂದು ನಡೆಯುವ ಉಪಚುನಾವಣೆಯಲ್ಲಿ ತಮ್ಮ ನಿರ್ಧಾರವನ್ನು ಮತಪೆಟ್ಟಿಗೆಯಲ್ಲಿ ದಾಖಲಿಸಲಿದ್ದಾರೆ.
ಉಪಚುನಾವಣೆ ಎಂದಮೇಲೆ ಆಡಳಿತಾರೂಢ ಪಕ್ಷಕ್ಕೆ ಪ್ರತಿಷ್ಟೆಯದ್ದಾಗಿರುತ್ತದೆ. ಹಾವೇರಿ ಜಿಲ್ಲೆಯು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ತವರು ಜಿಲ್ಲೆಯೂ ಆಗಿರುವುದರಿಂದ ಅವರು ಹಾನಗಲ್ ಕ್ಷೇತ್ರದಲ್ಲೇ ಠಿಕಾಣಿ ಹೂಡಿದ್ದಾರೆ. ಅವರು ಮುಖ್ಯಮಂತ್ರಿಯಾದ ಬಳಿಕ ಎದುರಿಸುತ್ತಿರುವ ಮೊದಲ ವಿಧಾನಸಭಾ ಕ್ಷೇತ್ರದ ಚುನಾವಣೆಯೂ ಇದಾಗಿದ್ದು, ಪ್ರತಿಷ್ಠೆಯ ಕಣವಾಗಿರುವುದು ಸುಳ್ಳಲ್ಲ.
ಮಾಜಿ ಸಚಿವ ಸಿ.ಎಂ.ಉದಾಸಿಯವರ ನಿಧನದಿಂದಾಗಿ ತೆರವಾಗಿರುವ ಕ್ಷೇತ್ರದಲ್ಲಿ, ಕಾಂಗ್ರೆಸ್ ಪಕ್ಷವು ಕ್ಷತ್ರಿಯ ಮರಾಠ ಸಮುದಾಯದ ಶ್ರೀನಿವಾಸ ಮಾನೆಯವರಿಗೆ ಟಿಕೆಟ್ ನೀಡಿದೆ. ಬಿಜೆಪಿಯಿಂದ ಗಾಣಿಗ ಸಮುದಾಯದ ಶಿವರಾಜ್ ಸಜ್ಜನರ್ ಕಣಕ್ಕಿಳಿದಿದ್ದಾರೆ. ಸಿ.ಎಂ. ಉದಾಸಿಯವರ ಭದ್ರಕೋಟೆಯಾಗಿದ್ದ ಹಾನಗಲ್‌ನಲ್ಲಿ ಅನೇಕ ಸಲ ಕಾಂಗ್ರೆಸ್ ಅಭ್ಯರ್ಥಿಗಳೂ ಮೇಲುಗೈ ಸಾಧಿಸಿದ್ದಿದೆ. ಈ ಹಿಂದೆ ಉದಾಸಿಯವರ ವರ್ಚಿಸ್ಸಿನಿಂದಾಗಿ ನೆಲೆ ಕಂಡಿದ್ದ ಜೆಡಿಎಸ್, ಮುಸ್ಲಿಂ ವ್ಯಕ್ತಿ ನಿಯಾಜ್ ಶೇಖ್ ಅವರನ್ನು ಈ ಬಾರಿ ಕಣಕ್ಕಿಳಿಸಿದೆ.
1957ರಲ್ಲಿ ಪ್ರಥಮ ಚುನಾವಣೆಯಲ್ಲಿ ಹಾನಗಲ್ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ಬಿ.ಆರ್.ಪಾಟೀಲ ಅವರು ಕಾಂಗ್ರೆಸ್‌ನ ಎಸ್.ಸಿ.ಸಿಂಧೂರ ಅವರನ್ನು ಸೋಲಿಸಿದ್ದರು. 1962ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಎನ್.ದೇಸಾಯಿ, 1967ರಲ್ಲಿ ಪಕ್ಷೇತರ ಅಭ್ಯರ್ಥಿ ಬಿ.ಆರ್.ಪಾಟೀಲ, 1968ರ ಬಿ.ಆರ್.ಪಾಟೀಲರ ನಿಧನದಿಂದಾಗಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಜಿ.ಎನ್. ದೇಸಾಯಿ, 1972ರಲ್ಲಿ ಕಾಂಗ್ರೆಸ್‌ನ ಪಿ.ಸಿ. ಶೆಟ್ಟರ್ ಗೆಲುವು ಸಾಧಿಸಿದ್ದರು.
1978ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆಗಿಳಿದ ಮನೋಹರ ತಹಸೀಲ್ದಾರ್ ಆಯ್ಕೆಯಾದರು. 1983ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸಿ.ಎಂ. ಉದಾಸಿ ಗೆದ್ದು ವಿಧಾನಸಭೆ ಪ್ರವೇಶಿಸಿದರು. 1985ರಲ್ಲಿ ಜನತಾಪಕ್ಷದಿಂದ ಸ್ಪರ್ಧಿಸಿದ ಸಿ.ಎಂ.ಉದಾಸಿ ಮತ್ತೆ ಆಯ್ಕೆಯಾದರು. 1989ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮನೋಹರ ತಹಸೀಲ್ದಾರ್, ಉದಾಸಿ ಅವರನ್ನು ಮಣಿಸಿದರು. 1994ರಲ್ಲಿ ಜನತಾದಳದಿಂದ ಸ್ಪರ್ಧೆಗಿಳಿದ ಸಿ.ಎಂ. ಉದಾಸಿ ಅವರು ಮನೋಹರ ತಹಸೀಲ್ದಾರ್ ಅವರನ್ನು ಸೋಲಿಸಿದರು. 1999ರಲ್ಲಿ ಮತ್ತೆ ಕಾಂಗ್ರೆಸ್ ಅಭ್ಯರ್ಥಿ ಮನೋಹರ ತಹಸೀಲ್ದಾರ್ ಗೆಲುವು ಸಾಧಿಸಿದರು. ಜೆಡಿಯುನಿಂದ ಸ್ಪರ್ಧಿಸಿದ್ದ ಸಿ.ಎಂ. ಉದಾಸಿ ಸೋಲು ಕಂಡರು.
2004ರಲ್ಲಿ ಉದಾಸಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದರು. ಕಾಂಗ್ರೆಸ್‌ನ ಮನೋಹರ ತಹಸೀಲ್ದಾರ್ ಸೋತರು. 2008ರಲ್ಲಿ ಬಿಜೆಪಿಯಿಂದ ಸಿ.ಎಂ. ಉದಾಸಿ ಸತತ ಎರಡನೇ ಬಾರಿಗೆ ದಿಗ್ವಿಜಯ ಸಾಧಿಸಿದರು. 2013ರಲ್ಲಿ ಕಾಂಗ್ರೆಸ್‌ನ ಮನೋಹರ ತಹಸೀಲ್ದಾರ್ ಅವರು, ಕೆಜೆಪಿಯಿಂದ ಸ್ಪರ್ಧಿಸಿದ್ದ ಉದಾಸಿಯವರನ್ನು ಮಣಿಸಿದರು. 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಉದಾಸಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆಗೆ ಸೋಲುಣಿಸಿದರು. 5 ಸಾವಿರ ಮತಗಳ ಅಂತರದಲ್ಲಿ ಮಾನೆ ಸೋತರು.
ಸಿ.ಎಂ. ಉದಾಸಿ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿ ದಾಖಲೆ ನಿರ್ಮಿಸಿದ್ದರೆ, ಕಾಂಗ್ರೆಸ್‌ನ ಮನೋಹರ ತಹಸೀಲ್ದಾರ್ ನಾಲ್ಕು ಬಾರಿ ಶಾಸಕರಾಗಿದ್ದರು. ಸಿ.ಎಂ. ಉದಾಸಿ ಜನತಾಪಕ್ಷ, ಜಾ.ದಳ, ಬಿಜೆಪಿ ಹಾಗೂ ಒಮ್ಮೆ ಪಕ್ಷೇತರರಾಗಿ ಗೆದ್ದಿರುವುದನ್ನು ಕಾಣಬಹುದು. ಹೀಗೆ ಸಿ.ಎಂ. ಉದಾಸಿಯವರು ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ್ದರು. ಬಿಜೆಪಿಯ ಭದ್ರಕೋಟೆಯಾಗಿಯೂ ಉದಾಸಿ ಕ್ಷೇತ್ರವನ್ನು ಬಲಪಡಿಸಿದ್ದರು.
ಒಟ್ಟು 2,04,500 ಮತದಾರರಿರುವ ಈ ಕ್ಷೇತ್ರದಲ್ಲಿ ಅಂದಾಜಿನ ಪ್ರಕಾರ ಬ್ರಾಹ್ಮಣ ಮತದಾರರು 4,500, ಲಿಂಗಾಯತರು 56,500, ಮುಸ್ಲಿಮರು 31,000, ಪರಿಶಿಷ್ಟ ಪಂಗಡ 20,500, ಪರಿಶಿಷ್ಟ ಜಾತಿ 28,500, ಕುರುಬ 11,000, ಗಂಗಮತ- 34,500, ಇತರೆ 18,000 ಮತದಾರರನ್ನು ಕಾಣಬಹುದು. 2011ರ ಜನಗಣತಿಯ ಪ್ರಕಾರ 2,60,455 ಜನಸಂಖ್ಯೆ ಹಾನಗಲ್ ತಾಲ್ಲೂಕಿನಲ್ಲಿ ಇದ್ದಾರೆ. ಗಂಡಸರು 133,171, ಹೆಂಗಸರು 127,284 ಇದ್ದಾರೆ.
ಆಡಳಿತಾರೂಢ ಬಿಜೆಪಿ ಹಾವೇರಿ ಜಿಲ್ಲೆಗೆ 2020-2021ರ ಬಜೆಟ್‌ನಲ್ಲಿ ಆದ್ಯತೆ ನೀಡಿರುವುದನ್ನು ಕಾಣಬಹುದು. 20 ಕೋಟಿ ರೂ. ವೆಚ್ಚದಲ್ಲಿ 20 ಬೆಡ್‌ಗಳ ಆಯುಷ್ ಆಸ್ಪತ್ರೆ, ಶಿಗ್ಗಾವಿಯಲ್ಲಿ ಟೆಕ್ಸ್‌ಟೈಲ್ ಪಾರ್ಕ್ ನಿರ್ಮಾಣಕ್ಕೆ
ಸರ್ಕಾರ ಮುಂದಾಗಿದೆ. ಇದು ಸಾವಿರಾರು ಜನರಿಗೆ ಉದ್ಯೋಗ ದೊರಕಿಸಲಿದೆ ಎನ್ನಲಾಗಿದೆ. ಸಂತ ಶಿಶುನಾಳ ಶರೀಫರ ಶಿಶುನಾಳ ಗ್ರಾಮದ ಅಭಿವೃದ್ಧಿಗೆ ಐದು ಕೋಟಿ ರೂ., ಹಿರೇಕೆರೂರು ತಾಲೂಕಿನಲ್ಲಿ ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರಕ್ಕೆ ಆದ್ಯತೆ ನೀಡಲಾಗಿದೆ. ’ಮಿಷನ್ ಹಾನಗಲ್’ ಯೋಜನೆಯನ್ನು ಬಿಜೆಪಿ ಘೋಷಿಸಿದೆ.
ಬಿಜೆಪಿಯ ಪರವಿರುವ ಲಿಂಗಾಯತ ಸಮುದಾಯದ ಮತಗಳು ಹೆಚ್ಚಿರುವುದು ಬಿಜೆಪಿಗೆ ವರದಾನವಾಗಲಿದೆ ಎನ್ನಲಾಗಿದೆ. ಆದರೆ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಅವರು ಕೋವಿಡ್ ಸಮಯದಲ್ಲಿ ಮಾಡಿರುವ ಕೆಲಸಗಳು ಕಾಂಗ್ರೆಸ್ ಪರ ಮತದಾರರು ವಾಲಲು ಕಾರಣವಾಗಲಿದೆ ಎಂಬುದು ರಾಜಕೀಯ ಪಡೆಸಾಲೆಯ ವಿಶ್ಲೇಷಣೆಯಾಗಿದೆ.
ಶ್ರೀನಿವಾಸ ಮಾನೆ ಹಾಗೂ ಮನೋಹರ ತಹಶಿಲ್ದಾರ್ ಬಣದ ನಡುವಿನ ಕಿತ್ತಾಟಗಳು ಕಾಂಗ್ರೆಸ್‌ಗೆ ಮುಳುವಾಗುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು. ಕಾಂಗ್ರೆಸ್ ಪಕ್ಷದ ’ಬಿ’ ಫಾರ್ಮ್‌ಗಾಗಿ ಮನೋಹರ್ ತಹಸೀಲ್ದಾರ್ ಯತ್ನಿಸಿದ್ದರು.
ತಳಮಟ್ಟದಲ್ಲಿ ಕ್ಷೇತ್ರ ಪರಿಶೀಲನೆ ಮಾಡಿರುವ ನೋಟಾ ಪರವಾಗಿ ಪ್ರಚಾರ ಮಾಡುವ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಮುಚ್ಚಂಡಿಯವರು ’ನ್ಯಾಯಪಥ’ ಪತ್ರಿಕೆಯೊಂದಿಗೆ ಮಾತನಾಡಿ, “ಒಟ್ಟಾರೆಯಾಗಿ ಕಾಂಗ್ರೆಸ್ ಪರವಾದ ಸ್ಥಿತಿಯನ್ನು ಕಾಣಬಹುದು” ಎಂದರು.
“ಎಲ್ಲ ಅಭ್ಯರ್ಥಿಗಳೂ ಹೊರಗಿನವರಾಗಿದ್ದಾರೆ. ದುಡ್ಡು ಹೊರಗಿನದ್ದು, ಪ್ರಚಾರದಲ್ಲಿ ಪಾಲ್ಗೊಂಡ ಬಹುತೇಕ ಕಾರ್ಯಕರ್ತರೂ ಹೊರಗಿನವರು, ವಾಹನಗಳೂ ಹೊರಗಿನವು, ಘೋಷಣೆ ಕೂಗುವವರು ಹೊರಗಿನವರು. 200 ಅಥವಾ 300 ರೂ.ಗಳಿಗೆ ಬರುವ ಕಾರ್ಯಕರ್ತರು ಮಾತ್ರ ಇಲ್ಲಿನವರು” ಎನ್ನುತ್ತಾರೆ ಪ್ರಶಾಂತ್.
ಮಾನೆಯವರು ಕೋವಿಡ್ ಸಂದರ್ಭದಲ್ಲಿ ಮಾಡಿಸಿದ ಕೆಲಸಗಳನ್ನು ಮುನ್ನೆಲೆಗೆ ತಂದು ಪ್ರಚಾರ ಪಡೆಯುತ್ತಿದ್ದಾರೆ. ಶಿವರಾಜ್ ಸಜ್ಜನರ್ ಅವರು ದಿಢೀರನೆ ಕ್ಷೇತ್ರಕ್ಕೆ ಬಂದವರು. ಅವರ ಮೇಲೆ ಸಂಗೂರು ಸಕ್ಕರೆ ಕಾರ್ಖಾನೆ ವಿಚಾರದಲ್ಲಿ ಭ್ರಷ್ಟಾಚಾರದ ಆರೋಪಗಳಿವೆ ಎಂಬುದು ಗಮನಾರ್ಹ.
“ಮುಖ್ಯಮಂತ್ರಿಯಾದಿಯಾಗಿ ಮಂತ್ರಿಮಂಡಲ ಹಾನಗಲ್‌ನಲ್ಲಿ ಕುಳಿತುಕೊಂಡಿದೆ. ಪಂಚಾಯಿತಿ ಮಟ್ಟದ ಚುನಾವಣೆಯಂತೆ ಮನೆಮನೆ ಪ್ರಚಾರಕ್ಕೆ ತೆರಳುತ್ತಿದ್ದಾರೆ. ಕೋಟಿ ಕೋಟಿ ರೂ.ಗಳನ್ನು ತಂದು ಸುರಿಯುತ್ತಿದ್ದಾರೆ. ಗಲಾಟೆ ಮಾಡಿಸಲು ಯತ್ನಿಸುತ್ತಿದ್ದರೂ ಅದು ಸಾಧ್ಯವಾಗುತ್ತಿಲ್ಲ. ನಮ್ಮ ಜನರಿಗೆ ಇದರ ಬಗ್ಗೆ ಎಚ್ಚರಿಕೆ ಇದೆ. ಬೆಂಗಳೂರು, ಚಿಕ್ಕಬಳ್ಳಾಪುರ ರಾಜಕಾರಣ ಇಲ್ಲಿ ನಡೆಯಲ್ಲ. ನಮ್ಮದು ಶಾಂತಿಯುತ ಕ್ಷೇತ್ರ” ಎನ್ನುತ್ತಾರೆ ಪ್ರಶಾಂತ್.
’ಬಿ ಟೀಮ್’ ಬಿಸಿ
ಜಾ.ದಳ ಅಭ್ಯರ್ಥಿಯಾಗಿರುವ ನಿಯಾಜ್ ಅವರು ಈ ಹಿಂದೆ ಆಮ್ ಆದ್ಮಿ ಪಾರ್ಟಿಯಲ್ಲಿದ್ದರು. ಕಾಂಗ್ರೆಸ್ ಸೇರಲು ಇಚ್ಛಿಸಿದ್ದರು. ಆದರೆ ಮನೋಹರ್ ತಹಸೀಲ್ದಾರ್ ಅವರು ನಿಯಾಜ್ ಅವರನ್ನು ಜಾ.ದಳಕ್ಕೆ ಸೇರಿಸಿ ಟಿಕೆಟ್ ಕೊಡಿಸಿದ್ದಾರೆ ಎಂಬ ಊಹಾಪೋಹಗಳಿವೆ. ಹೊರಗಿನಿಂದ ಬಂದ ಕಾಂಗ್ರೆಸ್ ಅಭ್ಯರ್ಥಿ ಮಾನೆಯವರನ್ನು ಸೋಲಿಸಬೇಕೆಂದು ತಹಸೀಲ್ದಾರ್ ಯೋಚಿಸಿದ್ದಾರೆ ಎನ್ನಲಾಗುತ್ತಿದೆ.
ಕಾಂಗ್ರೆಸ್ ಮತ್ತು ಬಿಜೆಪಿ ಎರಡರಲ್ಲೂ ಬಿ ಟೀಮ್‌ಗಳು ಕೆಲಸ ಮಾಡುತ್ತಿವೆ. ಕಾಂಗ್ರೆಸ್ ಬಿ ಟೀಮ್‌ನ ಕೆಲಸಗಳು ಸ್ವಲ್ಪ ಗೌಣವಾಗಿವೆ. ಬಿಜೆಪಿ ಕಾರ್ಯಕರ್ತರೇ ’ಬಿ’ ಟೀಮ್ ಆಗಿ ಪರಿವರ್ತನೆಯಾಗಿದ್ದಾರೆ ಎಂಬ ಗುಲ್ಲಿದೆ. ಶಿವರಾಜ್ ಸಜ್ಜನರ್ ಆರ್‌ಎಸ್‌ಎಸ್ ಕಾರ್ಯಕರ್ತನಲ್ಲ, ಕ್ಷೇತ್ರದ ವ್ಯಕ್ತಿಯಲ್ಲ. ಅವರಿಗೆ ಕ್ಷೇತ್ರದ ಸಂಪರ್ಕದಲ್ಲೇ ಇಲ್ಲ. ಪಕ್ಕದ ತಾಲೂಕಿನವರಾಗಿದ್ದಾರೆ. ಉದಾಸಿಯವರ ಪುತ್ರ ಶಿವಕುಮಾರ್ ಉದಾಸಿಯವರ ಪತ್ನಿ ರೇವತಿಯವರಿಗೆ ಟಿಕೆಟ್ ಸಿಗಬೇಕಿತ್ತು. ಕುಟುಂಬ ರಾಜಕಾರಣ ಮತ್ತು ಶಿವಕುಮಾರ್ ಅವರಿಗೆ
ಜನಸಂಪರ್ಕವನ್ನು ಕಾಪಾಡಿಕೊಳ್ಳುವ ಗುಣವಿಲ್ಲದ ಮುಖ್ಯ ಕಾರಣದಿಂದ ರೇವತಿ ಅವರಿಗೆ ಟಿಕೆಟ್ ಸಿಕ್ಕಿಲ್ಲ ಎನ್ನಲಾಗುತ್ತಿದೆ.
ಆದರೆ ತಾಲ್ಲೂಕಿನಲ್ಲಿ ಬಿಜೆಪಿ ನಾಯಕರಿದ್ದರು. ಅವರಿಗಾದರೂ ಟಿಕೆಟ್ ಕೊಡಬಹುದಿತ್ತು. ಸ್ಥಳೀಯ ನಾಯಕರಿಗೆ ಟಿಕೆಟ್ ಕೊಟ್ಟರೆ ತನ್ನ ಬೆಳವಣಿಗೆಗೆ ಮಾರಕವಾಗುತ್ತದೆ ಎಂದು ಉದಾಸಿಯವರ ಪುತ್ರ, ಶಿವರಾಜ್ ಸಜ್ಜನರ್ ಪರ ನಿಂತಿದ್ದಾರೆ. ಶಿವರಾಜ್ ಸಜ್ಜನರ್ ಉದಾಸಿಯವರ ಮಾನಸ ಪುತ್ರ ಎಂದು ಹೇಳಲಾಗಿದೆ. ರಬ್ಬರ್ ಸ್ಟಾಂಪ್ ಕೂಡ ಆಗಿದ್ದಾರೆ. ನಾಳೆ ಕ್ಷೇತ್ರ ಬಿಡು ಎಂದರೂ ಬಿಡುತ್ತಾರೆ. ದುಡ್ಡು ಕೊಟ್ಟು ಬಿಜೆಪಿಯವರು ಸಮೀಕ್ಷೆ ನಡೆಸಲು ಹೋದಾಗ, ಸಮೀಕ್ಷೆ ಮಾಡಲು ಬಂದವರನ್ನು ಓಡಿಸಿದ ಪ್ರಸಂಗವೂ ನಡೆದಿದೆ. ಅಂದಹಾಗೆ ಮಾನೆಯವರೇನೂ ಶುದ್ಧ ಹಸ್ತರೇನಲ್ಲ. ಆದರೆ ಸದ್ಯಕ್ಕೆ ಉಳಿದವರಿಗಿಂತ ಪರವಾಗಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಲ್ಲೂ ’ಬಿ ಟೀಮ್’ಗಳು ಬಲವಾಗಿರುವುದರಿಂದ ಗೆಲುವು ನಿಶ್ಚಯಿಸುವುದು ಕಷ್ಟ.
ಇದನ್ನೂ ಓದಿ: ಉಪಚುನಾವಣೆ: ಸಿಂಧಗಿಯಲ್ಲಿ ಬಿಜೆಪಿ ಹಣದ ಹೊಳೆ ಹರಿಸುತ್ತಿದೆ ಪ್ರತಿಪಕ್ಷಗಳ ಆರೋಪ


