ತೆಲುಗು ಚಿತ್ರನಟ ಪ್ರಭಾಸ್ ಮತ್ತು ಬಾಲಿವುಡ್ ನಟ ಸೈಫ್ ಆಲಿಖಾನ್ ನಟನೆಯ ರಾಮಾಯಣ ಕಥೆ ಆಧಾರಿತ ಆದಿಪುರುಷ ಚಿತ್ರದ ಟೀಸರ್ ಬಿಡುಗಡೆಯಾಗಿ ಗಮನ ಸೆಳೆದಿದೆ. ಆದರೆ ಇದೇ ವೇಳೆ ಚಿತ್ರದಲ್ಲಿ ತೊಗಲು ಬಟ್ಟೆಯಲ್ಲಿ ಹನುಮಂತನನ್ನು ತೋರಿಸಿದ್ದಾರೆ ಎಂದು ಆರೋಪಿಸಿರುವ ಮಧ್ಯಪ್ರದೇಶ ಗೃಹಮಂತ್ರಿ ನರೋತ್ತಮ್ ಮಿಶ್ರಾ ಚಿತ್ರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಚಿತ್ರದ ಟೀಸರ್‌ನಲ್ಲಿ ಆಕ್ಷೇಪಾರ್ಹ ದೃಶ್ಯಗಳಿವೆ. ನಮ್ಮ ಹನುಮಂತನಿಗೆ ತೊಗಲು ಬಟ್ಟೆ ಹಾಕಲಾಗಿದೆ. ಇದು ನಮ್ಮ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತಂದಿದೆ. ಆ ದೃಶ್ಯಗಳನ್ನು ತೆಗೆದುಹಾಕುವಂತೆ ಚಿತ್ರ ನಿರ್ಮಾಪಕರಿಗೆ ಪತ್ರ ಬರೆಯುತ್ತೇನೆ ಎಂದು ಬಿಜೆಪಿ ಮುಖಂಡರೂ ಆದ ನರೋತ್ತಮ್ ಮಿಶ್ರಾ ತಿಳಿಸಿದ್ದಾರೆ.
ಚಿತ್ರದ ನಿರ್ಮಾಪಕ ಓಂ ರಾವುತ್ ಅವರು ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದರೆ ಸರಿ. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಮಿಶ್ರಾ ಎಚ್ಚರಿಕೆ ನೀಡಿದ್ದಾರೆ.
ಅಯೋಧ್ಯೆಯಲ್ಲಿ ಅಕ್ಟೋಬರ್ 02ರಂದು ಆದಿಪುರುಷ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಜೈಶ್ರೀರಾಂ ಜೈಶ್ರೀರಾಂ ಎಂಬ ಘೋಷಣೆಗಳನ್ನು ಒಳಗೊಂಡಿರುವ ಟೀಸರ್ ಅನ್ನು ಈ ಎರಡು ದಿನದಲ್ಲಿ ಯೂಟ್ಯೂಬ್‌ನಲ್ಲಿ ಏಳು ಕೋಟಿಗೂ ಅಧಿಕ ಜನರು ನೋಡಿದ್ದಾರೆ.
ರಾಮನ ಪಾತ್ರದಲ್ಲಿ ಪ್ರಭಾಸ್, ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ಮತ್ತು ಸೀತೆಯ ಪಾತ್ರದಲ್ಲಿ ಕೃತಿ ಸನಾನ್ ಅಭಿನಯಿಸಿದ್ದಾರೆ. ಹಲವು ಭಾಷೆಗಳಲ್ಲಿ 2023ರ ಜನವರಿ 12ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: ಗ್ಯಾಸ್ ಪುರಾಣ: ಗೃಹ ಬಳಕೆಯ ಗ್ಯಾಸ್ ಬೆಲೆ ಹೆಚ್ಚಾಗುತ್ತಿರುವುದಕ್ಕೆ ಕಾರಣಗಳಿವು


