ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್‌ನಲ್ಲಿ ಮುಸ್ಲಿಮರ ಹತ್ಯಾಕಾಂಡಕ್ಕೆ ಬಹಿರಂಗವಾಗಿ ಕರೆ ನೀಡಿದ ದ್ವೇಷ ಭಾಷಣದ ಪ್ರಕರಣದಲ್ಲಿ ಉತ್ತರಾಖಂಡ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಜ.12) ನೋಟಿಸ್ ಜಾರಿ ಮಾಡಿದೆ. ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡುವಂತೆ ಕೇಳಿದೆ.
ಇನ್ನು ಹತ್ತು ದಿನಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಉತ್ತರಾಖಂಡ ಸರ್ಕಾರಕ್ಕೆ ತಿಳಿಸಿದೆ. ಜೊತೆಗೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ದ್ವೇಷಪೂರಿತ ಭಾಷಣ ಮಾಡಿದವರ ವಿರುದ್ಧ ತೆಗೆದುಕೊಂಡ ಕ್ರಮಗಳ ಬಗ್ಗೆ ತಿಳಿಸುವಂತೆ ಒಕ್ಕೂಟ ಸರ್ಕಾರ ಮತ್ತು ದೆಹಲಿ ಪೊಲೀಸರಿಗೂ ನೋಟಿಸ್ ನೀಡಲಾಗಿದೆ.
ಮಾಜಿ ಹೈಕೋರ್ಟ್ ನ್ಯಾಯಮೂರ್ತಿ ಅಂಜನಾ ಪ್ರಕಾಶ್ ಮತ್ತು ಪತ್ರಕರ್ತ ಕುರ್ಬಾನ್ ಅಲಿ ಸಲ್ಲಿಸಿರುವ ಅರ್ಜಿಯಲ್ಲಿ ಮುಸ್ಲಿಮರನ್ನು ಗುರಿಯಾಗಿಸುವ ದ್ವೇಷ ಭಾಷಣಗಳ ಬಗ್ಗೆ ವಿಶೇಷ ತನಿಖಾ ತಂಡ ಸ್ವತಂತ್ರ, ವಿಶ್ವಾಸಾರ್ಹ ಮತ್ತು ನ್ಯಾಯಯುತ ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.
ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಹಿಮಾ ಕೊಹ್ಲಿ ನೇತೃತ್ವದ ಪೀಠವು ಪ್ರಕರಣಗಳ ವಿಚಾರಣೆ ನಡೆಸುತ್ತಿದೆ.
ಇದನ್ನೂ ಓದಿ: ಹರಿದ್ವಾರ ಧರ್ಮ ಸಂಸದ್‌ನಲ್ಲಿ ಮುಸ್ಲಿಮರ ಹತ್ಯೆಗೆ ಕರೆ: PIL ವಿಚಾರಣೆಗೆ ಸುಪ್ರೀಂ ಒಪ್ಪಿಗೆ
ಉತ್ತರ ಪ್ರದೇಶದ ಅಲಿಗಢದಲ್ಲಿ ಜನವರಿ 23 ರಂದು ನಡೆಯಲಿರುವ ಧರಮ್ ಸಂಸದ್ ಅನ್ನು ನಿಲ್ಲಿಸುವಂತೆ ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಲು ಅರ್ಜಿದಾರರಿಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
“ದೇಶದ ಘೋಷಣೆಗಳು ಸತ್ಯಮೇವ ಜಯತೆಯಿಂದ ಸಶಸ್ತ್ರಮೇವ ಜಯತೇಗೆ ಬದಲಾಗಿವೆ” ಎಂದು ಹಿರಿಯ ವಕೀಲ ಕಪಿಲ್ ಸಿಬಲ್ ಉನ್ನತ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಪ್ರಕರಣದಲ್ಲಿ ಕೇವಲ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಆದರೆ ಯಾರನ್ನು ಬಂಧಿಸಿಲ್ಲ” ಎಂದು ಹೇಳಿದ್ದಾರೆ.
ಡಿಸೆಂಬರ್ 17 ಮತ್ತು 19 ರ ನಡುವೆ ನಡೆದ ಹರಿದ್ವಾರ ಧರ್ಮ ಸಂಸದ್‌ನಲ್ಲಿ ಮುಸ್ಲಿಮರ ಹತ್ಯೆಗೆ ಕರೆ ನೀಡಿದ ವಿಡಿಯೋಗಳು ವೈರಲ್ ಆಗಿ ವ್ಯಾಪಕ ಖಂಡನೆಗೊಳಗಾಗಿದ್ದವು. ಜನರ ಆಕ್ರೋಶದ ನಂತರ, ಉತ್ತರಾಖಂಡ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.
ಧರ್ಮ ಸಂಸದ್ ಪ್ರಮುಖ ಸಂಘಟಕರಲ್ಲಿ ಒಬ್ಬರಾದ ವಿವಾದಿತ ಉಗ್ರ ಹಿಂದುತ್ವ ನಾಯಕ ನರಸಿಂಗಾನಂದ ಗಿರಿ ಅವರು ಉದ್ರೇಕಕಾರಿ ಹೇಳಿಕೆಗಳನ್ನು ನೀಡಿದ್ದರು. ಭಯೋತ್ಪಾದಕ ಸಂಘಟನೆಯಾದ ಎಲ್‌ಟಿಟಿಇ ನಾಯಕ ಪ್ರಭಾಕರನ್ ತರ ಆಗುವಂತೆ ಹಿಂದೂ ಯುವಕರಿಗೆ ಕರೆ ನೀಡಿದ್ದು, ಅವರಿಗೆ 1 ಕೋಟಿ ರೂ.ಗಳನ್ನು ನೀಡುವುದಾಗಿ ಘೋಷಿಸಿದ್ದಾರೆ. ಹಿಂದೂಗಳು ಶಸ್ತ್ರಗಳನ್ನು ಕೈಗಿತ್ತೆಗೊಂಡು ಮುಸ್ಲಿಮರ ವಿರುದ್ಧ ಯುದ್ದ ಮಾಡಬೇಕು ಎಂದು ಅವರು ಕರೆ ನೀಡಿದ್ದರು.
“ನಮ್ಮಲ್ಲಿ 100 ಜನರು 20 ಲಕ್ಷ ಜನರನ್ನು (ಮುಸ್ಲಿಮರು) ಕೊಲ್ಲಲು ಸಿದ್ಧರಿದ್ದರೆ, ನಾವು ಗೆದ್ದು ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುತ್ತೇವೆ. ದೇಶದ ಮುಸ್ಲಿಮರನ್ನು “ಕೊಲ್ಲಲು ಮತ್ತು ಜೈಲಿಗೆ ಹೋಗಲು ಸಿದ್ಧರಾಗಿರಿ” ಎಂದು ಬಲಪಂಥೀಯ ಹಿಂದೂ ಕಾರ್ಯಕರ್ತರಿಗೆ ಹಿಂದೂ ಮಹಾಸಭಾದ ನಾಯಕಿ ಪೂಜಾ ಶಕುನ್ ಪಾಂಡೆ ಕರೆ ನೀಡಿದ್ದರು.


