ಹರಿಪಾದ್ (ಕೇರಳ): ಹರಿಪಾಡ್‌ನ ಅನುದಾನಿತ ಶಾಲೆಯ ಮುಖ್ಯೋಪಾಧ್ಯಾಯಿನಿಯ ವಿರುದ್ಧ ಬುಧವಾರ ಪ್ರಕರಣ ದಾಖಲಾಗಿದೆ. ಕೇರಳದ ಕರಾವಳಿ ಪಟ್ಟಣವಾಗಿರುವ ಹರಿಪಾಡ್‌ನಲ್ಲಿ, ಇಬ್ಬರು ನಾಲ್ಕನೇ ತರಗತಿಯ ವಿದ್ಯಾರ್ಥಿಗಳು ಮತ್ತು ಅವರ ಪೋಷಕರ ವಿರುದ್ಧ ಜಾತಿ ನಿಂದನೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಈ ಪ್ರಕರಣ ದಾಖಲಾಗಿದೆ. ಈ ಘಟನೆಯು ಸ್ಥಳೀಯ ಸಮುದಾಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಮುಖ್ಯೋಪಾಧ್ಯಾಯಿನಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯ ಕೇಳಿಬಂದಿದೆ.
ಪ್ರಕರಣದ ವಿವರಗಳು
ಪೆರ್ಕಾಡ್ MSC LP ಶಾಲೆಯ ಮುಖ್ಯೋಪಾಧ್ಯಾಯಿನಿ ಗ್ರೇಸಿ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಸದ್ಯಕ್ಕೆ, ಕಾಯಂಕುಲಂನ ಡಿವೈಎಸ್‌ಪಿ ಅವರು ಈ ಆರೋಪಗಳ ಕುರಿತು ತನಿಖೆ ನಡೆಸುತ್ತಿದ್ದಾರೆ.
ಶಾಲೆಯ ಪೋಷಕರು ನೀಡಿದ ದೂರಿನ ಪ್ರಕಾರ, ಶಾಲೆಯ ಏಕೈಕ ಖಾಯಂ ಶಿಕ್ಷಕಿಯಾಗಿರುವ ಗ್ರೇಸಿ, ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳನ್ನು ನಿಯಮಿತವಾಗಿ ಜಾತಿ ನಿಂದನೆಗೆ ಒಳಪಡಿಸುತ್ತಿದ್ದರು. ತರಗತಿಯಲ್ಲಿ ಅವರನ್ನು ‘ಕರಿಂಕುರಂಗು’ (ಕಪ್ಪು ಮಂಗ) ಮತ್ತು ‘ಕರಿವೇಡನ್’ (ಬುಡಕಟ್ಟು ಬೇಟೆಗಾರನನ್ನು ನಿಂದಿಸುವ ಪದ) ಎಂದು ಜಾತಿನಿಂದನೆ ಮಾಡುತ್ತಿದ್ದರು ಎಂದು ದೂರಲಾಗಿದೆ. ಶಾಲೆಯಲ್ಲಿ ಒಂಬತ್ತು ವಿದ್ಯಾರ್ಥಿಗಳಿದ್ದು, ಅವರಲ್ಲಿ ಬಹುತೇಕರು ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದವರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ದೂರಿನಲ್ಲಿ, ಮುಖ್ಯೋಪಾಧ್ಯಾಯಿನಿ ತರಗತಿಯ ಬೋರ್ಡ್‌ನಲ್ಲಿ ಬರೆಯುವಾಗ ತಪ್ಪು ಮಾಡಿದ ವಿದ್ಯಾರ್ಥಿಯೊಬ್ಬನನ್ನು ಥಳಿಸಿದ್ದರು. ಪರಿಣಾಮ, ಮಗುವಿನ ದೇಹದ ಮೇಲೆ ಗಾಯದ ಗುರುತುಗಳು ಮೂಡಿದ್ದವು. ಇದನ್ನು ಪ್ರಶ್ನಿಸಲು ಹೋದ ವಿದ್ಯಾರ್ಥಿಯ ತಾಯಿಗೆ ಮುಖ್ಯೋಪಾಧ್ಯಾಯಿನಿ, “ನೀವು ಪುಲಯರ್ ಸಮುದಾಯದವರಲ್ವಾ? ನಿಮ್ಮವರು ಯಾವಾಗಲೂ ಹೀಗೇ ಇರ್ತೀರಾ. ನೀವು ಎಲ್ಲಿ ಬೇಕಾದರೂ ನನ್ನ ವಿರುದ್ಧ ದೂರು ಕೊಡಿ, ನನಗೆ ಏನೂ ಆಗಲ್ಲ,” ಎಂದು ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಪೋಷಕರ ಆರೋಪ ಮತ್ತು ಸಾರ್ವಜನಿಕರ ಆಕ್ರೋಶ
ವಿದ್ಯಾರ್ಥಿಯ ತಾಯಿಯ ಪ್ರಕಾರ, ಈ ಹಿಂದೆಯೂ ಇಂತಹ ವರ್ತನೆಗಳು ನಡೆದಿವೆ. ಆದರೆ, ಇತರ ಶಿಕ್ಷಕರ ಮನವಿಯ ಮೇರೆಗೆ ತಾನು ದೂರು ನೀಡಿರಲಿಲ್ಲ. ಆದರೆ, ನಿರಂತರವಾಗಿ ನಡೆಯುತ್ತಿದ್ದ ನಿಂದನೆ ಮತ್ತು ಹಲ್ಲೆಯಿಂದಾಗಿ, ಈ ಬಾರಿ ದೂರು ನೀಡಲು ನಿರ್ಧರಿಸಿದ್ದಾರೆ.
ಒಂದು ಮಲಯಾಳಂ ಸುದ್ದಿ ವಾಹಿನಿಗೆ ಮಾತನಾಡಿದ ತಾಯಿ, ಆರಂಭದಲ್ಲಿ ಪೊಲೀಸರು ಮುಖ್ಯೋಪಾಧ್ಯಾಯಿನಿ ಪರವಾಗಿದ್ದರು ಮತ್ತು ಪ್ರಕರಣವನ್ನು ಹಿಂಪಡೆಯುವಂತೆ ತಮ್ಮ ಮೇಲೆ ಒತ್ತಡ ಹೇರಿದರು ಎಂದೂ ಆರೋಪಿಸಿದ್ದಾರೆ. ಈ ವಿಷಯ ಬೆಳಕಿಗೆ ಬಂದ ನಂತರ, ಹಲವು ಸ್ಥಳೀಯ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಶಾಲೆಯ ಹೊರಗೆ ಪ್ರತಿಭಟನೆ ನಡೆಸಿದ್ದು, ಶಿಕ್ಷಕಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಶಿಕ್ಷಣ ಇಲಾಖೆಯ ಅಧಿಕಾರಿಗಳು ಈ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದು, ಶಾಲೆಯಲ್ಲಿನ ಇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆಯು ಶಾಲೆಯೊಳಗಿನ ಜಾತಿ ತಾರತಮ್ಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.


