ಮಾನವ ಹಕ್ಕುಗಳ ಹೋರಾಟಗಾರ ನದೀಮ್ ಖಾನ್ ಅವರಿಗೆ ದೆಹಲಿ ಹೈಕೋರ್ಟ್ ಬುಧವಾರ ಬಂಧನದಿಂದ ಮಧ್ಯಂತರ ಜಾಮೀನು ನೀಡಿದ್ದು, ಈ ವೇಳೆ ದೆಹಲಿ ಪೊಲೀಸರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಅವರ ಭಾಷಣವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಪೊಲೀಸರು, ‘ದ್ವೇಷಕ್ಕೆ ಉತ್ತೇಜನ ಮತ್ತು ಕ್ರಿಮಿನಲ್ ಪಿತೂರಿ’ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ರಾಷ್ಟ್ರದ ಸೌಹಾರ್ಧತೆ ಅಷ್ಟೊಂದು ದುರ್ಬಲವಾಗಿಲ್ಲ ಎಂದು ಹೇಳಿದೆ.
ನಾಗರಿಕ ಹಕ್ಕುಗಳ ರಕ್ಷಣೆ ಸಂಘಟನೆಯ ರಾಷ್ಟ್ರೀಯ ಕಾರ್ಯದರ್ಶಿಯಾಗಿರುವ ನದೀಂ ಖಾನ್ ಅವರನ್ನು ಶುಕ್ರವಾರದವರೆಗೆ ಬಂಧಿಸದಂತೆ ಮಧ್ಯಂತರ ರಕ್ಷಣೆ ನೀಡಿ ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಆದೇಶ ಹೊರಡಿಸಿದ್ದಾರೆ. ಆದರೆ, ನಾಳೆ ವಿಚಾರಣೆಗೆ ಹಾಜರಾಗುವಂತೆ ಮತ್ತು ತನಿಖೆಗೆ ಸಹಕರಿಸುವಂತೆ ನದೀಂ ಖಾನ್‌ಗೆ ಕೋರ್ಟ್ ಸೂಚಿಸಿದೆ. ಹೋರಾಟಗಾರ ನದೀಮ್ ಖಾನ್
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ತನಿಖಾಧಿಕಾರಿಗಳ ಅನುಮತಿಯಿಲ್ಲದೆ ದೆಹಲಿಯನ್ನು ತೊರೆಯದಂತೆ ಅವರಿಗೆ ನಿರ್ದೇಶನ ನೀಡಲಾಗಿದ್ದು, ಜೊತೆಗೆ ನದೀಂ ಖಾನ್ ಮತ್ತು ಎಪಿಸಿಆರ್ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿ ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ನೋಟಿಸ್ ಜಾರಿ ಮಾಡಿದ್ದಾರೆ. ದೆಹಲಿ ಪೊಲೀಸರು ದಾಖಲಿಸಿರುವ ಎಫ್ಐಆರ್ ರದ್ದುಗೊಳಿಸುವಂತೆ ನದೀಂ ಖಾನ್ ಕೋರಿದ್ದರು.
ದೆಹಲಿ ಪೊಲೀಸರ ಎಫ್ಐಆರ್ ಪ್ರಕಾರ, ನವೆಂಬರ್ 21ರಂದು “ರೆಕಾರ್ಡ್ಸ್ ಆಫ್ ಹಿಂದೂಸ್ತಾನ್ ಇನ್ ಮೋದಿ ಸರ್ಕಾರ್” ಎಂಬ ಶೀರ್ಷಿಕೆಯ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಪೋಸ್ಟ್ ಮಾಡಲಾಗಿತ್ತು. ವಸ್ತು ಪ್ರದರ್ಶನದಲ್ಲಿ ಸ್ಟಾಲ್ ಹಾಕಿದ್ದ ವ್ಯಕ್ತಿಯೊಬ್ಬರು ಬ್ಯಾನರ್‌ನತ್ತ ಸನ್ನೆ ಮಾಡುತ್ತಿದ್ದುದನ್ನು ಈ ವಿಡಿಯೋ ತೋರಿಸಿದೆ.
ಈ ವಿಡಿಯೋದಲ್ಲಿ ನದೀಮ್ ಅವರು, ಅಖ್ಲಾಕ್, ರೋಹಿತ್ ವೇಮುಲಾ, ಪೆಹ್ಲು ಖಾನ್ ಅವರ ಬಗ್ಗೆ ಮಾತನಾಡುತ್ತಿದ್ದರು ಮತ್ತು 2020ರ ಶಾಹೀನ್ ಬಾಗ್ ಪ್ರತಿಭಟನೆಗಳು, ದೆಹಲಿ ಗಲಭೆಗಳನ್ನು ಇಲ್ಲಿ ಉಲ್ಲೇಖಿಸಿದ್ದಾರೆ. ಆ ಮೂಲಕ ನಿರ್ದಿಷ್ಟ ಸಮುದಾಯವನ್ನು ಬಲಿಪಶುಗಳಾಗಿ ಚಿತ್ರಿಸಿ ಜನರನ್ನು ಪ್ರಚೋದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸ್ಟಾಲ್ ಅನ್ನು ಎಪಿಸಿಆರ್ ವತಿಯಿಂದ ಹಾಕಲಾಗಿದ್ದು ವಿಡಿಯೋದಲ್ಲಿ ಮಾತನಾಡುತ್ತಿರುವ ವ್ಯಕ್ತಿ ಖಾನ್ ಎಂದು ಪೊಲೀಸರು ಆರೋಪಿಸಿದ್ದಾರೆ.
ಜಾಮೀನು ನೀಡುವಾಗ ಹೈಕೋರ್ಟ್, “ನಾವು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿದ್ದೇವೆ. ನಮ್ಮ ರಾಷ್ಟ್ರದ ಸೌಹಾರ್ದತೆ ಅಷ್ಟೊಂದು ದುರ್ಬಲವಾಗಿಲ್ಲ. ಇದು ಕೇವಲ ಒಂದು ಪ್ರದರ್ಶನ, ಕೇವಲ ಯಾರಾದರೂ ಕೂಗಿದ ಕೂಡಲೆ ಸೌಹಾರ್ದ ಕೆಡುವುದಿಲ್ಲ. ಜನರನ್ನು ಬುದ್ದಿವಂತರೆಂದು ಪರಿಗಣಿಸಿ… ಸಾಮಾನ್ಯ ಮನುಷ್ಯರು ಅಷ್ಟು ದುರ್ಬಲನಲ್ಲ…” ಎಂದು ಹೇಳಿದೆ.
“ದೇಶವು ನಮ್ಮ ಮೂಲಭೂತ ಹಕ್ಕುಗಳ ಬಗ್ಗೆ ಬಹಳ ಹೆಮ್ಮೆಪಡುತ್ತದೆ. ಆರ್ಟಿಕಲ್ 19 (1) (ಎ) ಅನ್ನು ರಕ್ಷಿಸಬೇಕು. ಇದರಿಂದ ಒಬ್ಬ ಸಾಮಾನ್ಯ ವ್ಯಕ್ತಿ ಪ್ರಚೋದನೆಗೆ ಒಳಗಾಗುತ್ತಾನೆ ಎಂದು ನೀವು ಭಾವಿಸಿದರೆ, ಸಾಮಾನ್ಯ ಮನುಷ್ಯನಿಗೆ ಏನೆಂದು ಅರ್ಥಮಾಡಿಕೊಳ್ಳುವ ಐಕ್ಯೂ ಇಲ್ಲ ಎಂದರ್ಥ. ಅವರಿಗೆ ಇದು ಸರಿ… ನಾವು ಬುದ್ದಿವಂತರು ದಯವಿಟ್ಟು ಸಾಮಾನ್ಯರ ಮೇಲೆ ಸ್ವಲ್ಪ ನಂಬಿಕೆ ಇಡಿ.” ಎಂದು ಕೋರ್ಟ್ ಹೇಳಿದೆ.
ನದೀಂ ಖಾನ್ ಅವರ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್, ವಕೀಲರಾದ ತಾರಾ ನರುಲಾ, ತಮನ್ನಾ ಪಂಕಜ್, ಶಿವಂಗಿ ಶರ್ಮಾ, ಅಹ್ಮದ್ ಇಬ್ರಾಹಿಂ ಮತ್ತು ರೂಪಾಲಿ ಸ್ಯಾಮ್ಯುಯೆಲ್ ಪ್ರತಿನಿಧಿಸಿದರು. ಮುಂದಿನ ಶುಕ್ರವಾರದಂದು ನ್ಯಾಯಾಲಯವು ಈ ಪ್ರಕರಣದ ವಿಚಾರಣೆಗೆ ಸಿದ್ಧವಾಗಿದೆ.


