12 ವರ್ಷದ ದಲಿತ ಬಾಲಕನ ಮೇಲೆ ಕಳ್ಳತನದ ಶಂಕೆಯಿಂದ ಹಲವಾರು ಗಂಟೆಗಳ ಕಾಲ ಚಿತ್ರಹಿಂಸೆ ನೀಡಿ ಅಕ್ರಮ ಬಂಧನದಲ್ಲಿಟ್ಟ ಆರೋಪದ ಮೇಲೆ ಕುಟುಂಬವೊಂದರ 10 ಸದಸ್ಯರ ವಿರುದ್ಧ ಹರಿಯಾಣದ ಪಲ್ವಾಲ್‌ನಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳ ವಿರುದ್ಧ, ಸ್ವಯಂಪ್ರೇರಣೆಯಿಂದ ನೋವುಂಟುಮಾಡುವುದು, ಅಕ್ರಮ ಬಂಧನ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಇತರ ಅಪರಾಧಗಳ ಜೊತೆಗೆ ಆರೋಪ ಹೊರಿಸಲಾಗಿದೆ. ಇಲ್ಲಿಯವರೆಗೆ ಓರ್ವ ಶಂಕಿತನನ್ನು ಮಾತ್ರ ಬಂಧಿಸಲಾಗಿದೆ. ಆದರೆ ಮೂವರು ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಅಪ್ರಾಪ್ತ ವಯಸ್ಕನನ್ನು ಹಿಡಿದಿಟ್ಟುಕೊಂಡಿದ್ದ ಗುಂಪು, ಅವನ ಕೈಕಾಲುಗಳನ್ನು ಕಟ್ಟಿ, ಪದೇ ಪದೇ ವಿದ್ಯುತ್ ಶಾಕ್ ನೀಡಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಬಾಲಕ ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ.
ಪೊಲೀಸರ ಪ್ರಕಾರ, ಡಿಸೆಂಬರ್ 10 ಮತ್ತು 11 ರ ಮಧ್ಯರಾತ್ರಿ ಈ ಘಟನೆ ನಡೆದಿದೆ. ಸಂತ್ರಸ್ತ ಬಾಲಕ, ತನ್ನ ವಿಧವೆ ತಾಯಿಯನ್ನು ಪೋಷಿಸಲು ಮದುವೆ ಮೆರವಣಿಗೆಗಳಲ್ಲಿ ದೀಪಗಳನ್ನು ಹೊರುವ ಕೆಲಸ ಮಾಡುತ್ತಿದ್ದ. ಕೆಲಸ ಮುಗಿಸಿ ಇಬ್ಬರು ಗೆಳೆಯರೊಂದಿಗೆ ಹೊಡಾಲ್‌ನಿಂದ ಬಂಚಾರಿ ಗ್ರಾಮಕ್ಕೆ ಹಿಂತಿರುಗುತ್ತಿದ್ದಾಗ, ರಾತ್ರಿ 11.30 ರ ಸುಮಾರಿಗೆ ಕುಡಿದ ಮತ್ತಿನಲ್ಲಿದ್ದ ನಿವಾಸಿಗಳು ಚಲಾಯಿಸುತ್ತಿದ್ದ ಕಾರು ಅವರನ್ನು ಬೆನ್ನಟ್ಟಲು ಪ್ರಾರಂಭಿಸಿತು.
ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ, ಬಾಲಕ ಮನೆಯ ಆವರಣಕ್ಕೆ ಹಾರಿದ್ದಾನೆ. ಆದರೆ ಉಳಿದ ಇಬ್ಬರು ಹಳ್ಳಿಯ ಕಡೆಗೆ ಓಡಿಹೋದರು ಎಂದು ಬಾಲಕ ಹೇಳಿದ್ದಾನೆ.
“ಅವನು ಕಳ್ಳನೆಂದು ಶಂಕಿಸಿದ ನಿವಾಸಿಗಳು, ಅಪ್ರಾಪ್ತ ವಯಸ್ಕನನ್ನು ಹಿಡಿದರು. ಅವನು ಬಿಟ್ಟುಬಿಡುವಂತೆ ಬೇಡಿಕೊಳ್ಳುತ್ತಲೇ ಇದ್ದಾಗ, ಗುಂಪು ಬಾಲಕನ ಗುರುತು ಕೇಳಿದ ನಂತರ ಅವನ ಮೇಲೆ ಹಲ್ಲೆ ನಡೆಸಿದರು. ಅವರು ಬಾಲಕನನ್ನು ಮನೆಯೊಳಗೆ ಕರೆದೊಯ್ದು, ಅವನ ಕೈಕಾಲುಗಳನ್ನು ಕಟ್ಟಿ, ಮೂರ್ಛೆ ಹೋದ ನಂತರವೂ ಗಂಟೆಗಟ್ಟಲೆ ವಿದ್ಯುತ್ ಶಾಕ್ ನೀಡಿದರು” ಎಂದು ಅಧಿಕಾರಿ ಹೇಳಿದರು.
ಗುಂಪು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದೆ ಎಂದು ಬಲಿಪಶುವಿನ ಹೇಳಿಕೆಯನ್ನು ಉಲ್ಲೇಖಿಸಿ ಅಧಿಕಾರಿ ಹೇಳಿದರು.
ಅವರು ಹುಡುಗನನ್ನು ಬಂಧಿಸಿದ ಕೆಲವೇ ಗಂಟೆಗಳ ನಂತರ, ಅಂತಿಮವಾಗಿ ಪೊಲೀಸರಿಗೆ ಕರೆ ಮಾಡಿ ಬಲಿಪಶುವನ್ನು ವಶಕ್ಕೆ ಪಡೆದರು. 12 ವರ್ಷದ ಬಾಲಕ ಕಳ್ಳತನದ ಪ್ರಕರಣದಲ್ಲಿ ಶಂಕಿತನಾಗಿದ್ದರಿಂದ ಆ ಸಮಯದಲ್ಲಿ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಹಲ್ಲೆಯ ಪರಿಣಾಮವಾಗಿ ಬಲಿಪಶುವಿನ ಎದೆ ಮತ್ತು ಹೊಟ್ಟೆಯ ಮೇಲೆ ಕನಿಷ್ಠ 16 ಸುಟ್ಟ ಗಾಯಗಳಾಗಿವೆ. ಕರೆಂಟ್ ವೈರ್‌ಗಳನ್ನು ಮುಟ್ಟಿದ್ದರಿಂದ ಅವನ ಎದೆ ಮತ್ತು ಹೊಟ್ಟೆಯ ಮೇಲೆ ಕನಿಷ್ಠ 16 ಸುಟ್ಟ ಗಾಯಗಳಾಗಿವೆ ಎಂದು ಅಪರಾಧ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಕೀಲರು ಮತ್ತು ಸಾಮಾಜಿಕ ಕಾರ್ಯಕರ್ತರು ಈ ವಿಷಯದ ಕುರಿತು ಧ್ವನಿ ಎತ್ತಿದ ನಂತರ, ಡಿಸೆಂಬರ್ 13 ರಂದು, ಪೊಲೀಸರು ಹತ್ತು ಜನರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್‌ಗಳು 115 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 127(2) (ಅಕ್ರಮ ಬಂಧನ), 190 (ಕಾನೂನುಬಾಹಿರ ಸಭೆ), 191(2) (ಗಲಭೆ) ಮತ್ತು 351(3) (ಸಾವು ಅಥವಾ ಗಂಭೀರ ಗಾಯವನ್ನುಂಟುಮಾಡುವ ಬೆದರಿಕೆಯಿಂದ ಕ್ರಿಮಿನಲ್ ಬೆದರಿಕೆ) ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ ಕಾಯ್ದೆ) ಮತ್ತು ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯಡಿಯಲ್ಲಿ ಮುಂಡ್ಕಟಿ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದಾರೆ.
ಡಿಸೆಂಬರ್ 11 ರಂದು ಮುಂಡ್ಕಟಿ ಪೊಲೀಸ್ ಠಾಣೆಯಿಂದ ತನಗೆ ಕರೆ ಬಂದಿತ್ತು ಎಂದು ಸಂತ್ರಸ್ತೆಯ ತಾಯಿ ಎಫ್‌ಐಆರ್‌ನಲ್ಲಿ ಆರೋಪಿಸಿದ್ದಾರೆ. “ನಾನು ಅಲ್ಲಿಗೆ ತಲುಪಿದಾಗ ಮಗನನ್ನು ಅರೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡೆ. ಅವನಿಗೆ ನಡೆಯಲು ಸಹ ಸಾಧ್ಯವಾಗಲಿಲ್ಲ” ಎಂದು ಅವರು ಎಫ್‌ಐಆರ್‌ನಲ್ಲಿ ಆರೋಪಿಸಿದ್ದಾರೆ.
“ನಾನು ಮಗನನ್ನು ಹೊಡಾಲ್‌ನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದೆ. ಆದರೆ, ಅವನ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಬೇರೆ ಆಸ್ಪತ್ರೆಗೆ ಕಳುಹಿಸಿದರು. ನಾನು ಅವನನ್ನು ಪಲ್ವಾಲ್‌ನ ಖಾಸಗಿ ಆಸ್ಪತ್ರೆಗೆ ಕರೆದೊಯ್ದೆ, ಅಲ್ಲಿಂದ ಅವನನ್ನು ಫರಿದಾಬಾದ್‌ಗೆ ಸ್ಥಳಾಂತರಿಸಲಾಯಿತು” ಎಂದು ಅವರು ಹೇಳಿದರು.
ಡಿಎಸ್‌ಪಿ (ಹೊಡಾಲ್) ಸುರೇಂದರ್ ಕುಮಾರ್ ಮಾತನಾಡಿ, ಖಂಬಿ ಗ್ರಾಮದ ರಾಮ್ ಕುಮಾರ್ ಎಂದು ಗುರುತಿಸಲಾದ ಓರ್ವ ಆರೋಪಿಯನ್ನು ಮಾತ್ರ ಇಲ್ಲಿಯವರೆಗೆ ಬಂಧಿಸಲಾಗಿದೆ (ಡಿಸೆಂಬರ್ 20 ರಂದು) ಎಂದು ಹೇಳಿದರು. “ಮೂವರು ಪ್ರಮುಖ ಆರೋಪಿಗಳು ಬಂಚರಿಯಿಂದ ಓಡಿಹೋದ ನಂತರ ಈತ ಅವರಿಗೆ ಆಶ್ರಯ ನೀಡಿದ್ದನು” ಎಂದು ಅವರು ಹೇಳಿದರು.
ಡಿಸೆಂಬರ್ 22 ರಂದು ಮೂವರು ಪ್ರಮುಖ ಶಂಕಿತರು ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಸಲ್ಲಿಸಿದರು. ಅಪ್ರಾಪ್ತ ವಯಸ್ಕನಿಗೆ ಆಗಿರುವ ಗಾಯಗಳ ಬಗ್ಗೆ ಯಾವುದೇ ವೈದ್ಯಕೀಯ ವರದಿ ಲಭ್ಯವಿಲ್ಲದ ಕಾರಣ, ಬುಧವಾರ ಪಲ್ವಾಲ್‌ನ ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಯನ್ನು ಮುಂದೂಡಲಾಯಿತು.


